ಶುಕ್ರವಾರ, ಜನವರಿ 24, 2020
17 °C
ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆಯಲ್ಲಿಯೇ ಸಮರ್ಪಕವಾದ ನಿರ್ವಹಣೆಯ ಕೊರತೆ, ಅಧಿಕಾರಿಗಳ ಅಸಡ್ಡೆ ವಿರುದ್ಧ ಜನರ ಆಕ್ರೋಶ

ಚಿಕ್ಕಬಳ್ಳಾಪುರ: ಕಿರಿಕಿರಿಗೆ ಬೇಸತ್ತ ಬಿಎಸ್‌ಎನ್‌ಎಲ್ ಗ್ರಾಹಕರು

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ ಬಿಎಸ್‌ಎನ್‌ಎಲ್‌ ಮೊಬೈಲ್‌ ಹಾಗೂ ಸ್ಥಿರ ದೂರವಾಣಿಗಳ ಗ್ರಾಹಕರಿಗೆ ಇಂಟರ್‌ನೆಟ್‌ ಆಗಾಗ ಸ್ಥಗಿತಗೊಳ್ಳುವುದು ಮತ್ತು ಮೊಬೈಲ್‌ ಕರೆಗಳು ಅರ್ಧಕ್ಕೆ ಸ್ತಬ್ಧವಾಗುತ್ತಿರುವುದು ತೀವ್ರ ಕಿರಿಕಿರಿ ಉಂಟು ಮಾಡುತ್ತಿದೆ.

ಜಿಲ್ಲೆಯಲ್ಲಿ ಹಲವು ತಿಂಗಳುಗಳಿಂದ ಬಿಎಸ್‌ಎನ್‌ಎಲ್ ಸಂಪರ್ಕದಲ್ಲಿ ಆಗಾಗ್ಗೆ ಸಮಸ್ಯೆ ತಲೆದೋರುತ್ತಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಉತ್ತಮ ಸೇವೆ ನೀಡಲು ಮುಂದಾಗುತ್ತಿಲ್ಲ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬಿಎಸ್‌ಎನ್‌ಎಲ್ ಸ್ಥಿರ ದೂರವಾಣಿಗಳಿಂದ ಮೊಬೈಲ್ ಫೋನ್‌ಗಳಿಗೆ ಸರಿಯಾಗಿ ಕರೆಗಳು ಹೋಗುತ್ತಿಲ್ಲ. ಕರೆ ಮಾಡುತ್ತಲೇ ನಿಶಬ್ದವಾಗುತ್ತಿದೆ. ಒಂದೊಮ್ಮೆ ಆ ಕಡೆಯಿಂದ ಯಾವ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿಲ್ಲ. ಆ ಕಡೆಯವರ ಧ್ವನಿ ನಮಗೆ ಕೇಳಿಸಿದರೂ ನಮ್ಮ ಧ್ವನಿ ಆ ಕಡೆಯವರಿಗೆ ಕೇಳಿಸುವುದಿಲ್ಲ. ಹೀಗಾಗಿ ಗ್ರಾಹಕರು ನಿರಂತರವಾಗಿ ವೇದನೆ ಅನುಭವಿಸುತ್ತಿದ್ದಾರೆ. ಇನ್ನೊಂದೆಡೆ ಮೊಬೈಲ್‌ ಕರೆಗಳು ಮಾತಿನ ನಡುವೆಯೇ ಕಡಿತಗೊಳ್ಳುವುದು, ಮಾತುಗಳು ಅಸ್ಪಷ್ಟವಾಗಿ ಕೇಳುವ ಸಮಸ್ಯೆ ಬಹುಪಾಲು ಗ್ರಾಹಕರಿಗೆ ತಲೆನೋವನ್ನೇ ತಂದಿಟ್ಟಿದೆ.

ಸರ್ಕಾರಿ ಸ್ವಾಮ್ಯದ ಸಂಸ್ಥೆಯಲ್ಲಿಯೇ ಸಮರ್ಪಕವಾದ ನಿರ್ವಹಣೆಯ ಕೊರತೆಯಿಂದಾಗಿ ಜನ ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಹಲವಾರು ಬಾರಿ ದೂರವಾಣಿ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜವಾಗುತ್ತಿಲ್ಲ. ಸ್ಥಳೀಯವಾಗಿ ದೂರು ಹೇಳಿಕೊಂಡರೆ ಅಧಿಕಾರಿಗಳು ಪ್ರತಿಯೊಂದಕ್ಕೂ ಕೋಲಾರದತ್ತ ಬೊಟ್ಟು ತೋರಿಸುತ್ತಾರೆ. ಹೀಗಾಗಿ ಬೇಸತ್ತು ಹೋಗಿದ್ದೇವೆ ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಜಿಲ್ಲೆಯ ಗ್ರಾಹಕರಿಗೆ ಮೊಬೈಲ್‌ ಸೇವೆಯೂ ಸರಿಯಾಗಿ ದೊರಕುತ್ತಿಲ್ಲ. 2ಜಿಯಿಂದ 3ಜಿಗೆ ಪರಿವರ್ತನೆಯಾದ ಮೇಲೆ ಕೆಲವರು ಹೊಸ ಮೊಬೈಲ್‌ಫೋನ್‌ಗಳನ್ನು ಖರೀದಿಸಿದ್ದಾರೆ. 4ಜಿ ಬಂದ ಮೇಲೆ ಒಳ ಬರುವ ಹಾಗೂ ಹೊರ ಹೋಗುವ ಕರೆಗಳು ತನ್ನಿಂದ ತಾನೆ ಸ್ಥಗಿತಗೊಳ್ಳುತ್ತಿವೆ. 4ಜಿ ಸೌಲಭ್ಯದ ಮೊಬೈಲ್‌ ಫೋನ್‌ ಖರೀದಿಸಿದವರೂ ತೊಂದರೆ ಅನುಭವಿಸುತ್ತಿದ್ದಾರೆ.

ತಾಂತ್ರಿಕ ಕಾರಣದಿಂದ 4ಜಿ ಆಟೊಮೆಟಿಕ್‌ ಆಗಿ 2ಜಿ ಆಗುತ್ತಿದೆ. ಹೀಗಾಗಿ 4ಜಿ ಮೊಬೈಲ್‌ಫೋನ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಬಿಎಸ್‌ಎನ್‌ಎಲ್‌ ಅಧಿಕಾರಿಗಳು 4ಜಿ ಸಿಮ್‌ ಪಡೆದುಕೊಳ್ಳುವಂತೆ ಗ್ರಾಹಕರಿಗೆ ಸೂಚಿಸಿದ್ದರು. ಗ್ರಾಹಕರು 4ಜಿ ಸಿಮ್‌ ಖರೀದಿಸಿದರೂ ಒಳ ಬರುವ ಕರೆಗಳಲ್ಲಿ ಅಸ್ಪಷ್ಟತೆ ಮುಂದುವರಿದಿದೆ.

ಅಧಿಕಾರಿಗಳು ಉತ್ತಮ ಸೇವೆ ಒದಗಿಸುವಲ್ಲಿ ವಿಫಲವಾಗುತ್ತಿರುವ ಕಾರಣ ಗ್ರಾಹಕರು ಬಿಎಸ್‌ಎನ್‌ಎಲ್‌ ಬಿಟ್ಟು ಬೇರೆ ಟೆಲಿಕಾಂ ಕಂಪನಿಗೆ ಪೋರ್ಟ್‌ ಆಗುತ್ತಿದ್ದಾರೆ. ಇದೇ ಕಾರಣಕ್ಕೆ ಬಿಎಸ್‌ಎನ್‌ಎಲ್‌ ಗ್ರಾಹಕರ ಸಂಖ್ಯೆ ಕೂಡ ಇಳಿಮುಖವಾಗುತ್ತಿದೆ ಎನ್ನಲಾಗಿದೆ.

ಜಿಲ್ಲಾ ಕೇಂದ್ರದಲ್ಲೇ ಗ್ರಾಹಕರಿಗೆ ಮೊಬೈಲ್‌ ಸೇವೆ ಸರಿಯಾಗಿ ದೊರಕುತ್ತಿಲ್ಲ. ಬಿಎಸ್‌ಎನ್‌ಎಲ್ ಸ್ಥಿರ ದೂರವಾಣಿಗಳಿಂದಲೂ ಮೊಬೈಲ್‌ಗಳಿಗೆ ಸರಳವಾಗಿ ಕರೆಗಳು ಹೋಗುತ್ತಿಲ್ಲ. ಬೇರೆ ಮೊಬೈಲ್‌ಗಳಿಗೆ ಕರೆ ಮಾಡಿದರೂ ಸಂಭಾಷಣೆಗಳು ಸ್ಪಷ್ಟವಾಗಿ ಕೇಳಿ ಬರುತ್ತಿಲ್ಲ. ಸಮಸ್ಯೆ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಹೇಳಿಕೊಂಡರೆ ತಾಸಿಗೊಂಡು, ಗಳಿಗೆಗೊಂದು ನೆಪ ಹೇಳಿ ಕಾಲಹರಣ ಮಾಡುತ್ತಿದ್ದಾರೆ ವಿನಾ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಮುಂದಾಗುತ್ತಿಲ್ಲ ಎನ್ನುವ ಅಳಲು ಗ್ರಾಹಕರದು. ಟವರ್‌ಗಳ ನಿರ್ವಹಣೆ ಹದಗೆಟ್ಟ ಕಾರಣಕ್ಕೆ ಗ್ರಾಮೀಣ ಪ್ರದೇಶಗಳಲ್ಲಂತೂ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಿದೆ ಎನ್ನುವುದು ಬಹುತೇಕರ ಆರೋಪ.

ಕಳೆದ ಲೋಕಸಭೆ ಚುನಾವಣೆ ಬಳಿಕ ಬಿಎಸ್‌ಎನ್‌ಎಲ್‌ ಸಲಹಾ ಸಮಿತಿಗೆ ಸದಸ್ಯರ ನಾಮನಿರ್ದೇಶನ ಮಾಡಬೇಕಿತ್ತು. ಸಂಸದ ಬಿ.ಎನ್.ಬಚ್ಚೇಗೌಡ ಅವರು ಈವರೆಗೆ ಆ ವಿಚಾರದತ್ತ ಗಮನ ಹರಿಸಿಲ್ಲ. ಹೀಗಾಗಿ, ಗ್ರಾಹಕರ ಸಮಸ್ಯೆಗಳ ಗಂಭೀರತೆಯನ್ನು ಅಧಿಕಾರಿಗಳ ಗಮನಕ್ಕೆ ತರುವ ಕೆಲಸಕ್ಕೂ ಹಿನ್ನಡೆಯಾಗುತ್ತಿದೆ ಎನ್ನಲಾಗಿದೆ.

ಈ ಬಗ್ಗೆ ಬಿಎಸ್‌ಎನ್‌ಎಲ್‌ ಕೋಲಾರ ದೂರಸಂಪರ್ಕ ಜಿಲ್ಲೆಯ ವ್ಯವಸ್ಥಾಪಕ ನಿರ್ದೇಶಕ ಪಾರ್ಥಸಾರಥಿ ಅವರನ್ನು ಪ್ರಶ್ನಿಸಿದರೆ, ‘ಬೆಂಗಳೂರಿನಲ್ಲಿ 2ಜಿ ಸೇವೆಯಲ್ಲಿ ಸ್ವಲ್ಪ ಸಮಸ್ಯೆ ಇತ್ತು. ಅದನ್ನು ಸರಿಪಡಿಸಲಾಗಿದೆ. ಸದ್ಯ ಯಾವುದೇ ಸಮಸ್ಯೆ ಇಲ್ಲ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು