ಶನಿವಾರ, ಜುಲೈ 2, 2022
25 °C
ತಾತ್ಕಾಲಿಕ ಮಾರುಕಟ್ಟೆಯಲ್ಲಿಯೇ ವಹಿವಾಟಿಗೆ ಕೋರಿ ಅರ್ಜಿ

ಚಿಕ್ಕಬಳ್ಳಾಪುರ ಹೂ ಮಾರುಕಟ್ಟೆ: ಮತ್ತೆ ಹೈಕೋರ್ಟ್ ಅಂಗಳಕ್ಕೆ ವಿವಾದ

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಹೂ ಮಾರುಕಟ್ಟೆ ವಿವಾದ ಈಗ ಮತ್ತೆ ಹೈಕೋರ್ಟ್ ಅಂಗಳಕ್ಕೆ ತಲುಪಿದೆ.

ರೈತರ ಹಿತದೃಷ್ಟಿಯಿಂದ ತಾತ್ಕಾಲಿಕ ಹೂ ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತೇವೆ. ಎಪಿಎಂಸಿಯಲ್ಲಿರುವ ಮಳಿಗೆಗಳನ್ನು ಹೂ ಸಂಗ್ರಹ, ರವಾನೆ ಕಾರ್ಯಗಳಿಗೆ ಬಳಸಿಕೊಳ್ಳುತ್ತೇವೆ. ತೆರಿಗೆ ಸಹ ಪಾವತಿಸುತ್ತೇವೆ. ನಮ್ಮ ಮನವಿ ಪುರಸ್ಕರಿಸಿ ಎಂದು ಚಿಕ್ಕಬಳ್ಳಾಪುರ ಹೂ ವರ್ತಕರ ಸಂಘದ ಅಧ್ಯಕ್ಷ ಕೆ.ರವೀಂದ್ರ ಮತ್ತಿತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯು ನ್ಯಾಯಮೂರ್ತಿಗಳ ವಿಚಾರಣೆಗೆ ಬಾಕಿ ಇದೆ. 

ವರ್ತಕರು ಮತ್ತು ರೈತರು ಎಪಿಎಂಸಿಯ ಹೊರಭಾಗದಲ್ಲಿಯೂ ವಹಿವಾಟು ನಡೆಸಬಹುದು ಎನ್ನುವ ಎಪಿಎಂಸಿ ತಿದ್ದುಪಡಿ ಕಾಯ್ದೆಯು ವರ್ತಕರು ಹೈಕೋರ್ಟ್ ಮೊರೆ ಹೋಗಲು ಬಲ ನೀಡಿದೆ. 

ಹೂ ಮಾರುಕಟ್ಟೆಗೆ ಸಂಬಂಧಿಸಿದಂತೆ ಹೈಕೋರ್ಟ್‌ಗೆ ಸಲ್ಲಿಕೆ ಆಗುತ್ತಿರುವ ಎರಡನೇ ಅರ್ಜಿ ಇದಾಗಿದೆ. ವರ್ತಕರು ಮತ್ತು ರೈತರ ದೃಷ್ಟಿ ಈಗ ಮತ್ತೆ ಹೈಕೋರ್ಟ್‌ನತ್ತ ನೆಟ್ಟಿದೆ. 

ಏನಿದು ವಿವಾದ: ನಗರದ ಎಪಿಎಂಸಿ ಆವರಣದಲ್ಲಿ ಈ ಹಿಂದಿನಿಂದ ಹೂವಿನ ವಹಿವಾಟು ನಡೆಯುತ್ತಿತ್ತು. ಕೋವಿಡ್ ಸಮಯದಲ್ಲಿ ಎಪಿಎಂಸಿಯಲ್ಲಿ ಜನದಟ್ಟಣೆ ಹೆಚ್ಚುತ್ತದೆ. ಕೋವಿಡ್ ಹರಡಲು ಕಾರಣ ಆಗುತ್ತದೆ ಎಂದು ಜಿಲ್ಲಾಡಳಿತ ನಗರದ ಹೊರವಲಯದ ಕೆ.ವಿ.ಕ್ಯಾಂಪಸ್‌ ಬಳಿಯ ಖಾಸಗಿ ಜಾಗದಲ್ಲಿ ತಾತ್ಕಾಲಿಕ ಮಾರುಕಟ್ಟೆಗೆ ಸ್ಥಳ ನೀಡಿತ್ತು.

ಕೋವಿಡ್ ಪೂರ್ಣವಾದ ತರುವಾಯ ರೈತರು ಮತ್ತು ವರ್ತಕರು ಎಪಿಎಂಸಿಯಲ್ಲಿ ವಹಿವಾಟಿಗೆ ಮುಂದಾದರು. ಆದರೆ ಇದಕ್ಕೆ ಜಿಲ್ಲಾಡಳಿತ ಅವಕಾಶ ನೀಡಲಿಲ್ಲ. ಎಪಿಎಂಸಿಯಲ್ಲಿ ಸ್ಥಳಾವಕಾಶ ಕಡಿಮೆ ಇದೆ. ಬೇರೆ ಕಡೆ ಸ್ಥಳ ಗುರುತಿಸಿ ಅಲ್ಲಿ ಹೂ ಮಾರುಕಟ್ಟೆ ನಿರ್ಮಿಸಲಾಗುವುದು ಎಂದು ಪ್ರಕಟಿಸಿತು. ವಹಿವಾಟು ನಡೆಸಲು ಬಂದ ವರ್ತಕರಿಗೆ ನೋಟಿಸ್ ನೀಡಿ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಲಾಯಿತು. 

ಜಿಲ್ಲಾಡಳಿತದ ಈ ನಿಲುವಿಗೆ ಕೆಲವು ವರ್ತಕರು ಆಕ್ರೋಶ ವ್ಯಕ್ತಪಡಿಸಿದರು. ಎಪಿಎಂಸಿಯಲ್ಲಿಯೇ ಹೂ ವಹಿವಾಟಿಗೆ ಅವಕಾಶ ನೀಡಬೇಕು ಎಂದು ಪಟ್ಟುಹಿಡಿದರು. ಎಪಿಎಂಸಿಯಲ್ಲಿ ವಹಿವಾಟಿಗೆ ಅವಕಾಶಕೋರಿ ವರ್ತಕರಾದ ಎಸ್.ಕ್ಯಾತಪ್ಪಣ್ಣ, ಶ್ರೀಧರ್, ರಮೇಶ್ ರೆಡ್ಡಿ ಮತ್ತಿತರರು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದರು.. 

ಅರ್ಜಿ ಸಂಬಂಧ ಜಿಲ್ಲಾಧಿಕಾರಿ, ಎಪಿಎಂಸಿ ಕಾರ್ಯದರ್ಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹೈಕೋರ್ಟ್ ನೋಟಿಸ್ ಸಹ ಜಾರಿಗೊಳಿಸಿತ್ತು. ನಂತರ ಎಪಿಎಂಸಿಯಲ್ಲಿಯೇ ಹೂ ಮಾರಾಟ ಮುಂದುವರಿಸಬಹುದು ಎಂದು ಎಪಿಎಂಸಿಯು ಹೈಕೋರ್ಟ್‌ಗೆ ಜ್ಞಾಪನಾ ಪತ್ರ ಸಲ್ಲಿಸಿತ್ತು. ಈ ಜ್ಞಾಪನಾ ಪತ್ರವನ್ನು ಹೈಕೋರ್ಟ್ ಮಾನ್ಯ ಮಾಡಿತ್ತು. ಈ ಹಿನ್ನೆಲೆಯಲ್ಲಿ ಎಪಿಎಂಸಿಯಲ್ಲಿ ಹೂ ವಹಿವಾಟು ನಡೆಸಲು ಇದ್ದ ಅಡೆತಡೆಗಳು ನಿವಾರಣೆ ಆಗಿದ್ದವು. ಹೈಕೋರ್ಟ್‌ ಆದೇಶದ ಅನುಸಾರ ಕೆಲವು ವರ್ತಕರು ಎಪಿಎಂಸಿಯಲ್ಲಿ ವಹಿವಾಟು ಸಹ ನಡೆಸುತ್ತಿದ್ದಾರೆ. ಎಲ್ಲ ವರ್ತಕರು ವಹಿವಾಟು ನಡೆಸುತ್ತಿಲ್ಲ.

ಈಗ ಎಪಿಎಂಸಿಯಲ್ಲಿ ವಹಿವಾಟು ಬೇಡ. ತಾತ್ಕಾಲಿಕ ಮಾರುಕಟ್ಟೆಯಲ್ಲಿಯೇ ವಹಿವಾಟು ನಡೆಯಲಿ. ಇಲ್ಲಿ ವಹಿವಾಟು ನಡೆದರೆ ರೈತರಿಗೆ ಅನುಕೂಲವಾಗಲಿದೆ ಎಂದು ಚಿಕ್ಕಬಳ್ಳಾಪುರ ಹೂ ಮಾರುಕಟ್ಟೆ ವರ್ತಕರ ಸಂಘದ ನೇತೃತ್ವದಲ್ಲಿ ಕೆಲವರು ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ. ಈಗ ಹೂ ಮಾರುಕಟ್ಟೆ ವಿಚಾರವಾಗಿ ಮತ್ತೊಂದು ಕಾನೂನು ಹೋರಾಟ ನಡೆಯಲು ವೇದಿಕೆ ಸಿದ್ಧವಾಗಿದೆ.

ಕೆಲವರಷ್ಟೇ ವಹಿವಾಟು: ವರ್ತಕರ ನಡುವೆ ಹೂ ಮಾರುಕಟ್ಟೆ ವಿವಾದ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ. ಪರವಾನಗಿ ಪಡೆದ 65ಕ್ಕೂ ಹೆಚ್ಚು ವರ್ತಕರು ಎಪಿಎಂಸಿಯಲ್ಲಿ ಮಳಿಗೆ ಹೊಂದಿದ್ದು ಇವರಲ್ಲಿ ಎಂಟತ್ತು ಮಂದಿ ವರ್ತಕರು ಮಾತ್ರ ವಹಿವಾಟು ನಡೆಸುತ್ತಿದ್ದಾರೆ. ಬಹಳಷ್ಟು ರೈತರು ಮತ್ತು ವರ್ತಕರು ತಾತ್ಕಾಲಿಕ ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಿದ್ದಾರೆ.

***

ಶೀಘ್ರ ನ್ಯಾಯಮೂರ್ತಿ ಎದುರು ಅರ್ಜಿ

ನ್ಯಾಯಾಲಯವು ಈಗ ನೀಡಿರುವ ತೀರ್ಪು ಗೌರವಿಸುತ್ತೇವೆ. ಒಂದು ವೇಳೆ ನೀವು ಕಡ್ಡಾಯವಾಗಿ ಎಪಿಎಂಸಿಯಲ್ಲಿಯೇ ವಹಿವಾಟು ನಡೆಸಬೇಕು ಎಂದು ಹೇಳಿದರೆ ಆ ಪ್ರಕಾರ ನಡೆದುಕೊಳ್ಳುತ್ತೇವೆ. ಆದರೆ ರೈತರ ಹಿತದೃಷ್ಟಿ ಮತ್ತು ವಹಿವಾಟು ಚೆನ್ನಾಗಿ ನಡೆಯಬೇಕು ಎನ್ನುವ ದೃಷ್ಟಿಯಿಂದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೇವೆ. ಶೀಘ್ರದಲ್ಲಿಯೇ ನಮ್ಮ ಅರ್ಜಿ ನ್ಯಾಯಮೂರ್ತಿಗಳ ಎದುರು ಬರಲಿದೆ ಎಂದು ಚಿಕ್ಕಬಳ್ಳಾಪುರ ಹೂ ವರ್ತಕರ ಸಂಘದ ಅಧ್ಯಕ್ಷ ಕೆ.ರವೀಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು. 

***

ಎಪಿಎಂಸಿಯಲ್ಲಿ ಮುಕ್ತ ಅವಕಾಶ

ಎಪಿಎಂಸಿ ಪ್ರಾಂಗಣದಲ್ಲಿ ಪರವಾನಗಿ ಪಡೆದ ವರ್ತಕರು ವಹಿವಾಟು ನಡೆಸಲು ಯಾವುದೇ ಅಡೆತಡೆ ಇಲ್ಲ. ಮುಕ್ತವಾಗಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ವರ್ತಕರಿಗೆ ತಿಳಿವಳಿಕೆಯ ನೋಟಿಸ್ ನೀಡಲಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ವೆಂಕಟೇಶ್ ತಿಳಿಸಿದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು