ಭಾನುವಾರ, ಜೂನ್ 26, 2022
29 °C
ಕೋಚಿಮುಲ್ ವತಿಯಿಂದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಚೆಕ್ ವಿತರಣಾ ಕಾರ್ಯಕ್ರಮ

ಹಾಲಿನ ದರ ಹೆಚ್ಚಳಕ್ಕೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಒಂದೆಡೆ ಮೇವಿಗೆ ಬರ, ದುಬಾರಿಯಾಗುತ್ತಿರುವ ಪಶು ಆಹಾರ, ಇನ್ನೊಂದೆಡೆ ಹಾಲಿಗೆ ಬೆಲೆ ಕಡಿಮೆ ಇರುವುದರಿಂದ ಹೈನುಗಾರರು ನಷ್ಟ ಅನುಭವಿಸುವಂತಾಗುತ್ತಿದೆ. ಆದ್ದರಿಂದ ಹಾಲಿನ ದರದಲ್ಲಿ ₹5 ಏರಿಕೆ ಮಾಡಬೇಕು ಎಂದು ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ. ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಕೋಲಾರ–ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ(ಕೋಚಿಮುಲ್‌) ನಿರ್ದೇಶಕ ಎನ್.ಸಿ.ವೆಂಕಟೇಶ್‌ ಹೇಳಿದರು.

ನಗರದಲ್ಲಿ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ಶುಕ್ರವಾರ ನಡೆದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಮಳೆಯ ಜೂಜಾಟದಿಂದಾಗಿ ಇವತ್ತು ಕೃಷಿಯಲ್ಲಿ ರೈತರಿಗೆ ನಿಶ್ಚಿತ ಆದಾಯ ಸಿಗುತ್ತಿಲ್ಲ. ನೀರು, ವಿದ್ಯುತ್ ಸಮಸ್ಯೆ, ಕೃಷಿ ಉತ್ಪನ್ನಗಳ ದರಗಳ ಏರಿಳಿತದಿಂದಾಗಿ ಬೇಸಾಯ ಲಾಭದಾಯಕ ಕಸುಬಾಗಿ ಉಳಿದಿಲ್ಲ. ಕೃಷಿಯೊಂದಿಗೆ ಹೈನುಗಾರಿಕೆ ಅಳವಡಿಸಿಕೊಂಡರೆ ರೈತರು ಉತ್ತಮ ಆದಾಯದ ಜತೆಗೆ ನೆಮ್ಮದಿಯ ಜೀವನ ಕಂಡುಕೊಳ್ಳಬಹುದು’ ಎಂದು ತಿಳಿಸಿದರು.

‘ಕೋಚಿಮುಲ್‌ನಿಂದ ಸಿಗುವ ರಾಸು ವಿಮೆ, ಮೇವಿನ ಬೀಜಗಳು, ಜೀವ ವಿಮೆ ಸಲವತ್ತುಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು. ಹೈನೋಧ್ಯಮ ಅಭಿವೃದ್ಧಿಗೆ ಸರ್ಕಾರ ವಿಶೇಷ ಕಾಳಜಿ ವಹಿಸಬೇಕು. ಹಾಲಿನ ದರ ಮತ್ತು ಪ್ರೋತ್ಸಾಹ ಧನ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಂಡರೆ ಹೈನುಗಾರರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ’ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಫಲಾನುಭವಿಗಳಿಗೆ ₹80 ಲಕ್ಷ ಮೊತ್ತದ ಚೆಕ್‌ಗಳನ್ನು ವಿತರಿಸಲಾಯಿತು. ನಾಯನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ, ಚಿಕ್ಕಬಳ್ಳಾಪುರ ಶಿಬಿರ ಕಚೇರಿಯ ಉಪವ್ಯವಸ್ಥಾಪಕ ಪಾಪೇಗೌಡ, ಒಕ್ಕೂಟದ ವಿಸ್ತರಣಾಕಾರಿಗಳಾದ ರಮೇಶ್ ಬಾಬು, ಸದಾಶಿವ, ಪಾಪಣ್ಣ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು