ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಪ್ರದೀಪ್ ಈಶ್ವರ್‌ ನಡೆಗೆ ಅಸಮಾಧಾನಗೊಂಡರೇ ಮುಖಂಡರು?

Published 8 ಜೂನ್ 2023, 6:04 IST
Last Updated 8 ಜೂನ್ 2023, 6:04 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಶಾಸಕರಾಗಿ ಪ್ರದೀಪ್ ಈಶ್ವರ್ ಆಯ್ಕೆಯಾಗಿ ಒಂದು ತಿಂಗಳಾಗಿಲ್ಲ. ಆಗಲೇ ಅವರ ನಡೆಯ ಬಗ್ಗೆ ಕಾಂಗ್ರೆಸ್ ಪಕ್ಷದ ಕೆಲವು ಪ್ರಮುಖ ಮುಖಂಡರಲ್ಲಿ ಅಸಮಾಧಾನ ಮೂಡಿದೆ.

ಶಾಸಕರ ‘ನಮಸ್ತೆ ಚಿಕ್ಕಬಳ್ಳಾಪುರ’ ಕಾರ್ಯಕ್ರಮದಿಂದ ಹಿಡಿದು ಇತ್ತೀಚೆಗೆ ನಡೆದ ‘ಕಾರ್ಯಕರ್ತರಿಗೆ ಕೃತಜ್ಞತಾ ಸಭೆ’ಯವರೆಗೂ ಈ ಅಸಮಾಧಾನ ಆಂತರಿಕವಾಗಿ ಮುಂದುವರಿದಿದೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು. 

ಫೋನ್‌ ಕರೆಗಳನ್ನು ಸ್ವೀಕರಿಸುವುದಿಲ್ಲ, ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಳ್ಳುವರು, ಮುಖಂಡರನ್ನು ವಿಶ್ವಾಸಕ್ಕೆ ಪಡೆಯುತ್ತಿಲ್ಲ. ‘ನಮಸ್ತೆ ಚಿಕ್ಕಬಳ್ಳಾಪುರ’ ಕಾರ್ಯಕ್ರಮದಲ್ಲಿ ವಿರೋಧ ಪಕ್ಷಗಳ ಮನೆಗಳಿಗೂ ಭೇಟಿ ನೀಡುತ್ತಿದ್ದಾರೆ. ತಾವು ಗ್ರಾಮಕ್ಕೆ ಅಥವಾ ವಾರ್ಡ್‌ಗಳಿಗೆ ಭೇಟಿ ನೀಡುವುದನ್ನು ಸ್ಥಳೀಯ ಮುಖಂಡರಿಗೂ ತಿಳಿಸುವುದಿಲ್ಲ...ಹೀಗೆ ಶಾಸಕರ ಮೇಲೆ ಆರೋಪಗಳ ಮಳೆಗರೆಯುತ್ತಿದ್ದಾರೆ. 

ಇತ್ತೀಚಿನವರೆಗೂ ಈ ಅಸಮಾಧಾನ ಸಣ್ಣದಾಗಿತ್ತು. ಈಗ ಹಂತ ಹಂತವಾಗಿ ಹೆಚ್ಚುತ್ತಿದೆ. ಸಚಿವರಾದ ಡಾ.ಎಂ.ಸಿ.ಸುಧಾಕರ್, ಪಕ್ಷದ ನಾಯಕರಾದ ಎಂ.ಆರ್.ಸೀತಾರಾಂ, ಎಂ.ವೀರಪ್ಪ ಮೊಯಿಲಿ ಅವರ ಬಳಿಯೂ ಕೆಲವು ಮುಖಂಡರು ಶಾಸಕರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸುತ್ತವೆ.

ಪ್ರದೀಪ್ ಶಾಸಕರಾಗಿ ಆಯ್ಕೆಯಾದ ನಂತರ ಜನರನ್ನು ತಲುಪಲು ‘ನಮಸ್ತೆ ಚಿಕ್ಕಬಳ್ಳಾಪುರ’ ಕಾರ್ಯಕ್ರಮ ರೂಪಿಸಿದರು. ಬೆಳಿಗ್ಗೆ 6ರಿಂದ 9 ಮತ್ತು ಸಂಜೆ 6ರಿಂದ 9ರವರೆಗೆ ಖುದ್ದು ಗ್ರಾಮಗಳಿಗೆ, ಮನೆಗಳಿಗೆ ಭೇಟಿ ನೀಡಿ ಜನರ ಕಷ್ಟಗಳನ್ನು ಆಲಿಸುವುದು ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸುವುದು ಈ ಕಾರ್ಯಕ್ರಮದ ಉದ್ದೇಶ. ಆದರೆ ಈ ಕಾರ್ಯಕ್ರಮದ ವೇಳೆ ಸ್ಥಳೀಯ ಮುಖಂಡರನ್ನು ಕರೆದೊಯ್ಯುತ್ತಿಲ್ಲ ಎನ್ನುವ ಮಾತುಗಳು ಪಕ್ಷದ ನಾಯಕರಿಂದಲೇ ಕೇಳಿ ಬರುತ್ತಿದೆ.

‘ಶಾಸಕರು ಗ್ರಾಮಗಳಿಗೆ ಭೇಟಿ ನೀಡುವಾಗ ಸ್ಥಳೀಯವಾಗಿ ಯಾರನ್ನೂ ಸಂಪರ್ಕಿಸುವುದಿಲ್ಲ. ನಾವು ಬಹಳಷ್ಟು ವಿರೋಧಗಳನ್ನು ಕಟ್ಟಿಕೊಂಡು ಇವರ ಪರವಾಗಿ ಕೆಲಸ ಮಾಡಿದ್ದೇವೆ. ನಾವು ವಿರೋಧ ಮಾಡಿದವರ ಮನೆಗಳಿಗೆ ಹೋಗಿ ಇವರು ಕುಳಿತರೆ ಹೇಗೆ’ ಎಂದು ಹೆಸರು ಬರೆಯಬೇಡಿ ಎನ್ನುವ ಕಾಂಗ್ರೆಸ್ ಮುಖಂಡರೊಬ್ಬರು ಪ್ರಶ್ನಿಸುವರು. 

ಛಾಯಾ ಶಾಸಕರು

ಪ್ರದೀಪ್ ಗೆಲುವಿಗೆ ತಾವೇ ಕಾರಣ ಎನ್ನುವಂತೆ ಕೆಲವು ಮುಖಂಡರು ನಡೆದುಕೊಳ್ಳುತ್ತಿದ್ದಾರೆ. ಈ ಮುಖಂಡರು ಛಾಯಾ ಶಾಸಕರ (ಶ್ಯಾಡೊ ಎಂಎಲ್‌ಎ) ರೀತಿ ವರ್ತಿಸುತ್ತಿದ್ದಾರೆ. ಕೆಲವು ಮುಖಂಡರು ಅಧಿಕಾರಿಗಳಿಗೆ ಕರೆ ಮಾಡಿ ಈ ಕೆಲಸ ಮಾಡಿ ಆ ಕೆಲಸ ಮಾಡಿ ಎಂದು ತಾಕೀತು ಸಹ ಮಾಡಿದ್ದಾರೆ. ಈ ವಿಚಾರಗಳು ಶಾಸಕರಿಗೆ ಸಹ ತಿಳಿದಿವೆ ಎನ್ನುತ್ತಾರೆ ಶಾಸಕರ ಆಪ್ತರು. 

ಶಾಸಕರಾಗಿ ಇನ್ನೂ ತಿಂಗಳಾಗಿಲ್ಲ. ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಆ ಕೆಲಸ ಮಾಡಬೇಕು ಈ ಕೆಲಸ ಮಾಡಿಕೊಡಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಕೆಲವು ಮುಖಂಡರು ಮಾತ್ರ ಶಾಸಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಜನರನ್ನು ತಲುಪಬೇಕು ಎನ್ನುವುದಷ್ಟೇ ಅವರ ಉದ್ದೇಶ.  ಕಾನೂನು ಮೀರಿ ಯಾವುದೇ ಕೆಲಸ ಮಾಡದಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಇದು ಕೆಲಸವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಆಪ್ತರು ನುಡಿಯುವರು. 

‘ನಾನು ನ್ಯಾಯವನ್ನು ಬಿಟ್ಟು ನಡೆಯುವುದಿಲ್ಲ. ನನ್ನ ಕಡೆಯವರೇ ಆಗಿರಲಿ, ಯಾರೇ ಆಗಿರಲಿ ಕಾನೂನು ಬದ್ಧವಾಗಿಯೇ ನಡೆಯುವೆ’ ಎಂದು ಶಾಸಕರು ಇತ್ತೀಚೆಗೆ ನಡೆದ ಅಧಿಕಾರಿಗಳ ಸಭೆಯಲ್ಲಿ ತಿಳಿಸಿದ್ದರು.

ಸೀತಾರಾಮ್, ಸುಧಾಕರ್‌, ಮೊಯಿಲಿಗೆ ದೂರು

ಶಾಸಕ ಪ್ರದೀಪ್ ಈಶ್ವರ್ ನಡೆಯ ಬಗ್ಗೆ ಬೇಸರಗೊಂಡಿರುವ ಕೆಲವು ಮುಖಂಡರು ಸಚಿವ ಡಾ.ಎಂ.ಸಿ.ಸುಧಾಕರ್ ಹಾಗೂ ಕಾಂಗ್ರೆಸ್ ಮುಖಂಡ ಎಂ.ಆರ್.ಸೀತಾರಾಮ್ ಅವರಿಗೆ ದೂರು ಸಹ ನೀಡಿದ್ದಾರೆ ಎನ್ನಲಾಗುತ್ತಿದೆ. ಬುಧವಾರ ಕಾಂಗ್ರೆಸ್‌ನ ಕೆಲವು ಮುಖಂಡರು ಮಾಜಿ ಸಂಸದ ಎಂ. ವೀರಪ್ಪ ಮೊಯಿಲಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದ್ದಾರೆ. ಇದನ್ನು ಕಾಂಗ್ರೆಸ್‌ನ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ.  ‘ಮೂರು ತಿಂಗಳು ಸುಮ್ಮನಿರಿ. ಅಧಿಕಾರಿಗಳ ವರ್ಗಾವಣೆ ಗ್ಯಾರೆಂಟಿ ಯೋಜನೆಯ ಜಾರಿ ವಿಚಾರದಲ್ಲಿ ಹೆಚ್ಚು ಗಮನವಹಿಸಿದ್ದೇವೆ. ಆ ನಂತರ ಪ್ರದೀಪ್ ಅವರನ್ನು ಕೂರಿಸಿಕೊಂಡು ಮಾತನಾಡುತ್ತೇವೆ’ ಎಂದು ಡಾ.ಎಂ.ಸಿ.ಸುಧಾಕರ್ ಮತ್ತು ಸೀತಾರಾಂ ತಿಳಿಸಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಅಧಿಕಾರಿಗಳ ಬದಲಾವಣೆ

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಂಚಾಯಿತಿ ಹಂತದಿಂದಲೂ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಯನ್ನು ಶಾಸಕರು ಬದಲಾಯಿಸಲು ಮುಂದಾಗಿದ್ದಾರೆ. ಅಧಿಕಾರಿಗಳ ಬದಲಾವಣೆಯ ಬಗ್ಗೆ ಈಗ ಹೆಚ್ಚು ಗಮನವಹಿಸಿದ್ದಾರೆ. ಆ ನಂತರ ಎಲ್ಲರೂ ಕುಳಿತು ಮಾತನಾಡೋಣ. ಏನೇ ಸಮಸ್ಯೆಗಳಿದ್ದರೂ ಪರಿಹರಿಸೋಣ ಎಂದು ವರಿಷ್ಠರು ತಿಳಿಸಿದ್ದಾರೆ ಎನ್ನುತ್ತಾರೆ ಕಾಂಗ್ರೆಸ್‌ನ ಮತ್ತೊಬ್ಬ ಮುಖಂಡ.

ಇಂದು ಬೀದಿ ಬದಿ ವ್ಯಾಪಾರಿಗಳ ಭೇಟಿ

‘ನಮಸ್ತೆ ಚಿಕ್ಕಬಳ್ಳಾಪುರ’ ಕಾರ್ಯಕ್ರಮ ಭಾಗವಾಗಿ ಜೂ.8ರಂದು ಪ್ರದೀಪ್ ಈಶ್ವರ್ ಚಿಕ್ಕಬಳ್ಳಾಪುರ ನಗರದ ಬೀದಿ ಬದಿ ವ್ಯಾಪಾರಿಗಳನ್ನು ಭೇಟಿ ಮಾಡಲಿದ್ದಾರೆ. ಬೆಳಿಗ್ಗೆ 6ಕ್ಕೆ ಎಪಿಎಂಸಿ ಬಿಎಚ್‌ ರಸ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಲಿರುವ ಅವರು ಬೀದಿ ಬದಿ ವ್ಯಾಪಾರಿಗಳ ಸಮಸ್ಯೆ ಆಲಿಸುವರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT