ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಂದ ಟ್ರ್ಯಾಕ್ಟರ್ ಎಂಜಿನ್‌ ಬಾಡಿಗೆ ಪಡೆದು ಮಾರಾಟ: ಅಂತರರಾಜ್ಯ ವಂಚಕರ ಬಂಧನ

Published 23 ಮಾರ್ಚ್ 2024, 15:20 IST
Last Updated 23 ಮಾರ್ಚ್ 2024, 15:20 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ರೈತರಿಂದ ಟ್ರ್ಯಾಕ್ಟರ್ ಎಂಜಿನ್‌ಗಳನ್ನು ಮಾಸಿಕ ಬಾಡಿಗೆ ಆಧಾರದಲ್ಲಿ ಪಡೆದು ನಂತರ ಎಂಜಿನ್‌ಗಳನ್ನು ಮಾರಾಟ ಮಾಡುತ್ತಿದ್ದ ಅಂತರರಾಜ್ಯ ವಂಚಕರ ತಂಡವನ್ನು ದಿಬ್ಬೂರಹಳ್ಳಿ ಪೊಲೀಸರು ಬಂಧಿಸಿ ಅವರಿಂದ ಸುಮಾರು ಒಂದು ಕೋಟಿ ಬೆಲೆ ಬಾಳುವ 9 ಟ್ರ್ಯಾಕ್ಟರ್ ಇಂಜಿನ್‌ ವಶಕ್ಕೆ ಪಡೆದಿದ್ದಾರೆ.

ಚೇಳೂರು ತಾಲ್ಲೂಕಿನ ಚಾಕವೇಲು ಗ್ರಾಮದ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಜಯಚಂದ್ರರೆಡ್ಡಿ (43), ಆಂಧ್ರದ ನಂದ್ಯಾಲ ಮಂಡಲದ ಶ್ರೀನಿವಾಸಪುರದ ಚಾಲಕ ತಲಾರಿ ರಾಮಲಿಂಗೇಶ್ವರ ರಾವ್ (39) ಅವರನ್ನು ಬಂಧಿಸಲಾಗಿದೆ. ಇವರಿಂದ ವಿವಿಧ ಕಂಪನಿಗಳ ಸುಮಾರು ₹97 ಲಕ್ಷ ಮೌಲ್ಯದ 9 ಟ್ರ್ಯಾಕ್ಟರ್ ಎಂಜಿನ್‌ ವಶಕ್ಕೆ ಪಡೆಯಲಾಗಿದೆ.

ಅಂತರರಾಜ್ಯ ವಂಚಕರ ತಂಡದ ಇನ್ನಿತರೆ ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರ ಪತ್ತೆಗೆ ದಿಬ್ಬೂರಹಳ್ಳಿ ಪೊಲೀಸರು ಬಲೆ ಬೀಸಿದ್ದಾರೆ.

ವಂಚಕರ ತಂಡವು ಟ್ರ್ಯಾಕ್ಟರ್ ಇಟ್ಟುಕೊಂಡಿರುವ ರೈತರನ್ನು ಸಂಪರ್ಕಿಸಿ ಟ್ರ್ಯಾಕ್ಟರ್ ಎಂಜಿನ್‌ ಬಾಡಿಗೆ ಆಧಾರದಲ್ಲಿ ಪಡೆಯುತ್ತಾರೆ. ಒಂದೊಮ್ಮೆ ಟ್ರ್ಯಾಕ್ಟರ್ ಮೇಲೆ ಬ್ಯಾಂಕ್ ಸಾಲ ಇದ್ದರೆ ಅದರ ಕಂತುಗಳನ್ನು ನಾವೇ ಕಟ್ಟಿಕೊಂಡು ಇನ್ನುಳಿದಂತೆ ಪ್ರತಿ ತಿಂಗಳು ಇಂತಿಷ್ಟು ಹಣ ಕೊಡುತ್ತೇವೆಂದು ನಂಬಿಸಿ ಎಂಜಿನ್‌ನ್ನು ಮಾತ್ರ ತೆಗೆದುಕೊಂಡು ಹೋಗುತ್ತಾರೆ.

ಒಂದೆರಡು ತಿಂಗಳು ಮಾಸಿಕ ಕಂತನ್ನು ಕೊಟ್ಟು ವಿಶ್ವಾಸಗಳಿಸಿ ಅಕ್ಕ ಪಕ್ಕದ ಇನ್ನಿತರೆ ರೈತರಿಂದಲೂ ಇದೇ ರೀತಿ ಎಂಜಿನ್‌ ಪಡೆದುಕೊಂಡು ನಂತರ ಎಂಜಿನ್‌ಗಳನ್ನು ಮಾರಾಟ ಮಾಡಿ ವಂಚಿಸುತ್ತಿದ್ದರು.

ತಾಲ್ಲೂಕಿನ ಮಲ್ಲಶೆಟ್ಟಹಳ್ಳಿ ಶ್ರೀನಿವಾಸ್ ಅವರು, ‘ತನ್ನ ಟ್ರ್ಯಾಕ್ಟರ್ ಎಂಜಿನ್‌ ಬಾಡಿಗೆ ಆಧಾರದಲ್ಲಿ ಪಡೆದು ಬಾಡಿಗೆ ಹಣ ಕೊಡದೆ ಎಂಜಿನನ್ನು ಮಾರಾಟ ಮಾಡಿ ವಂಚಿಸುತ್ತಿದ್ದಾರೆ’ ಎಂದು ದಿಬ್ಬೂರಹಳ್ಳಿ ಠಾಣೆಗೆ ದೂರು ನೀಡಿದಾಗಲೆ ವಂಚಕರ ಬಣ್ಣ ಬಯಲಾಗಿದೆ.

ಮಲ್ಲಶೆಟ್ಟಹಳ್ಳಿ ಶ್ರೀನಿವಾಸ್ ದೂರನ್ನು ದಾಖಲಿಸಿಕೊಂಡ ದಿಬ್ಬೂರಹಳ್ಳಿ ಠಾಣೆ ಪೊಲೀಸರು ಸರ್ಕಲ್ ಇನ್‌ಸ್ಪೆಕ್ಟರ್ ಎಂ.ಶ್ರೀನಿವಾಸ್ ಮಾರ್ಗದರ್ಶನದಲ್ಲಿ ಪ್ರತ್ಯೇಕ ಮೂರು ತಂಡಗಳನ್ನು ರಚಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಕಾರ್ಯಾಚರಣೆಯಲ್ಲಿ ಎಸ್‌.ಐ ಶ್ಯಾಮಲ, ಎಂ.ನಾಗರಾಜ್, ನರಸಿಂಹಯ್ಯ, ನಂದಕುಮಾರ್, ಮುರಳಿಕೃಷ್ಣ, ಕೃಷ್ಣಪ್ಪ, ಚಂದ್ರಶೇಖರ್ ಭಾಗವಹಿಸಿದ್ದರು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT