ಶನಿವಾರ, ಜುಲೈ 24, 2021
27 °C
ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಶಾಸಕರ ಸೂಚನೆ

ಅಟಲ್ ಭೂಜಲ ಯೋಜನೆಯು ರೈತರಿಗೆ ವರದಾನ: ಶಾಸಕ ಎಂ. ಕೃಷ್ಣಾರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ರೈತರು ನೀರಿನ ಕೊರತೆಯಿಂದ ತತ್ತರಿಸುತ್ತಿರುವ ರೈತರಿಗೆ ಕೇಂದ್ರ ಸರ್ಕಾರದ ಅಟಲ್ ಭೂಜಲ ಯೋಜನೆಯು ವರದಾನವಾಗಿದೆ. ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯತೆ ಹಾಗೂ ಇಚ್ಛಾಶಕ್ತಿಯಿಂದ ಯೋಜನೆಯ ಅನುಷ್ಠಾನಕ್ಕೆ ಶ್ರಮಿಸಬೇಕು ಎಂದು ಶಾಸಕ ಎಂ. ಕೃಷ್ಣಾರೆಡ್ಡಿ ಸಲಹೆ ನೀಡಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಟಲ್ ಭೂಜಲ ಯೋಜನೆ 2021-22 ಅನುಷ್ಠಾನ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಅವಿಭಜಿತ ಕೋಲಾರ ಜಿಲ್ಲೆಯ ಜನರು ನೀರಿನ ಕೊರತೆ, ಅಂತರ್ಜಲ ಕೊರತೆ ಸಮಸ್ಯೆ ನಿವಾರಣೆಗಾಗಿ ಕೃಷಿ ಇಲಾಖೆ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನೆ ಇಲಾಖೆಗಳಿಂದ ಈಗಾಗಲೇ ಕೃಷಿ ಹೊಂಡಗಳು, ಇಂಗು ಗುಂಡಿ, ಚೆಕ್ ಡ್ಯಾಂ, ಬದುಗಳ ನಿರ್ಮಾಣ ಮುಂತಾದ ಹಲವಾರು ಯೋಜನೆಗಳು ಜಾರಿಯಲ್ಲಿವೆ. ಅಟಲ್ ಭೂಜಲ ಯೋಜನೆಯಿಂದ ಮತ್ತಷ್ಟು ಬಲ ಬರುತ್ತದೆ. ಯೋಜನೆಯನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಯೋಜನೆಯಿಂದ ಪ್ರತಿ ಗ್ರಾಮ ಪಂಚಾಯಿತಿಗೂ ಸುಮಾರು ₹ 1 ಕೋಟಿ ಅನುದಾನ ದೊರೆಯುತ್ತದೆ. ಯೋಜನೆಯ ಅನುಷ್ಠಾನದ ಹೊಣೆ ಸಣ್ಣ ನೀರಾವರಿ ಇಲಾಖೆಯ ಜವಾಬ್ದಾರಿ ಎನ್ನಬಾರದು. ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತಿಗಳನ್ನು ಒಳಗೊಂಡು ಸಮನ್ವಯತೆಯಿಂದ ಕೆಲಸ ಮಾಡಿದರೆ ಮಾತ್ರ ಯೋಜನೆಯ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಸಂತೇಕಲ್ಲಹಳ್ಳಿಯಲ್ಲಿ ಮುಂದಿನ ಗುರುವಾರ ಚಾಲನೆ ನೀಡಲಾಗುತ್ತದೆ. ಎಲ್ಲ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು. ಆಯಾ ಭಾಗದ ಪ್ರಗತಿಪರ ರೈತರು, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅಧಿಕಾರಿಗಳು ತಮ್ಮ ಇಲಾಖೆಯ ಕ್ರಿಯಾಯೋಜನೆ ತಯಾರಿಸಿಕೊಡು ಯೋಜನೆಯ ಅಧಿಕಾರಿಗಳ ಜತೆ ಚರ್ಚೆ ಮಾಡಬೇಕು. ನೀರಾವರಿ ಮೂಲಗಳ ಅಭಿವೃದ್ಧಿಗೆ ಮುಂದಾಗಬೇಕು. ಜಿಲ್ಲೆಯಲ್ಲಿ ತಾಲ್ಲೂಕು ಪ್ರಥಮವಾಗಬೇಕು ಎಂದು ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಜಿ.ಆರ್. ಮಂಜುನಾಥ್, ಉಪ ನಿರ್ದೇಶಕಿ ಕವಿತಾ, ಕಾರ್ಯ ನಿರ್ವಾಹಕ ನಿರ್ದೇಶಕ ವೆಂಕಟರಮಣಸ್ವಾಮಿ, ಉಪ ತಹಶೀಲ್ದಾರ್ ಶೋಭಾ, ಭೂಜಲ ಯೋಜನೆಯ ಜಿಲ್ಲಾಧಿಕಾರಿ ಹರೀಶ್ ಕುಮಾರ್, ಕಾರ್ಯ ನಿರ್ವಾಹಕ ನಿರ್ದೇಶಕ ವೆಂಕಟರಮಣಸ್ವಾಮಿ, ಕೃಷಿ ತಜ್ಞ ರಾಧಾಕೃಷ್ಣ, ಸಾಮಾಜಿಕ ತಜ್ಞ ಶ್ರೀರಾಮರೆಡ್ಡಿ, ರೇಷ್ಮೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು