ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಬೇಕಾಬಿಟ್ಟಿ ನಿಲುಗಡೆ, ಮಿತಿಮೀರಿದ ಅಡೆತಡೆ

ವಾಣಿಜ್ಯ ನಗರ ಚಿಂತಾಮಣಿಯಲ್ಲಿ ಅಯೋಮಯವಾದ ಪಾರ್ಕಿಂಗ್ ವ್ಯವಸ್ಥೆ, ಅಧಿಕಾರಿಗಳ ಅಸಡ್ಡೆಗೆ ಪಾದಚಾರಿಗಳ ಪರದಾಟ
Last Updated 9 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಚಿಂತಾಮಣಿ: ಅವಳಿ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಚಿಂತಾಮಣಿ ನಗರದಲ್ಲಿ ವಾಹನಗಳ ನಿಲುಗಡೆ ಚಾಲಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ನಗರದಾದ್ಯಂತ ಎಲ್ಲೂ ವ್ಯವಸ್ಥಿತ ಪಾರ್ಕಿಂಗ್ ಇಲ್ಲ. ವಾಹನ ಸವಾರರು ಎಲ್ಲಿ ಬೇಕೆಂದರಲ್ಲಿ ವಾಹನಗಳ ನಿಲುಗಡೆ ಮಾಡುತ್ತಿರುವುದು ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ವಾಹನಗಳಿಗೆ ಸೂಕ್ತ ಭದ್ರತೆಯೂ ಇಲ್ಲವಾಗಿದೆ.

ಜಿಲ್ಲೆಯಲ್ಲಿ ಚಿಂತಾಮಣಿ ವಾಣಿಜ್ಯ ನಗರಿ ಎಂದು ಪ್ರಸಿದ್ಧವಾಗಿದೆ. ಎಪಿಎಂಸಿ ಮಾರುಕಟ್ಟೆ, ರೇಷ್ಮೆಗೂಡಿನ ಮಾರುಕಟ್ಟೆ ಹಾಗೂ ಇತರೆ ವಾಣಿಜ್ಯ ವ್ಯವಹಾರಗಳಿಗೆ ಬೇರೆ ಬೇರೆ ಜಿಲ್ಲೆಗಳಿಂದ ನಗರಕ್ಕೆ ಜನರು, ವಾಹನಗಳು ಬರುತ್ತವೆ. ಹೀಗಾಗಿ, ಸದಾ ನಗರ ಗಜಿಬಿಜಿಯಿಂದ ಕೂಡಿರುತ್ತದೆ. ನಗರದಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. ವಾಹನಗಳ ಸಂಖ್ಯೆಯೂ ಅಧಿಕವಾಗಿದೆ.

ಆದರೆ, ಜನ ಮತ್ತು ವಾಹನಗಳ ಸಂಖ್ಯೆಗೆ ಅನುಗುಣವಾಗಿ ಸ್ಥಳಾವಕಾಶ ಇಲ್ಲ. ನಗರದ ಯಾವ ರಸ್ತೆಗಳಲ್ಲೂ ಅಧಿಕೃತ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ವಾಹನಗಳನ್ನು ರಸ್ತೆಗಳಲ್ಲಿ ಕೆಲವು ಕಡೆ ಪಾದಾಚಾರಿ ಮಾರ್ಗದ ಮೇಲೆಯೂ ನಿಲುಗಡೆ ಮಾಡುತ್ತಾರೆ.

ರಸ್ತೆಗಳ ಒತ್ತುವರಿ, ನಗರಸಭೆ ಮತ್ತು ಪೊಲೀಸರ ನಡುವೆ ಸಮನ್ವಯತೆಯ ಕೊರತೆ, ಜನರಲ್ಲಿ ಸಂಚಾರಿ ನಿಯಮಗಳ ಅರಿವಿನ ಕೊರತೆ, ವಾಹನಗಳ ನಿಲುಗಡೆ ವಿಚಾರದಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ತೆರೆದುಕೊಳ್ಳದಿರುವುದು ಸಂಚಾರ ದಟ್ಟಣೆಗೆ ಕಾರಣವಾಗುತ್ತಿದೆ.

ಬೀದಿ ಬದಿಯ ವ್ಯಾಪಾರಿಗಳು, ತಳ್ಳುವ ಗಾಡಿಗಳ ಕಾಟವಂತೂ ಹೇಳತೀರದಾಗಿದೆ. ನಗರದಲ್ಲಿ ಸಂಚಾರ ವ್ಯವಸ್ಥೆಯನ್ನು ಕೇಳುವವರೇ ಇಲ್ಲ ಎನ್ನುವಂತಾಗಿದೆ. ಎಲ್ಲೆಂದರಲ್ಲಿ ವಾಹನಗಳ ನಿಲುಗಡೆ, ತಳ್ಳುವ ಗಾಡಿಗಳಿಂದಾಗಿ ನಗರದ ರಸ್ತೆಗಳಲ್ಲಿ ಸದಾ ವಾಹನದಟ್ಟಣೆ ಸಮಸ್ಯೆ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಮುದುಕರು, ಮಹಿಳೆಯರು, ಮಕ್ಕಳು ರಸ್ತೆಗಳಲ್ಲಿ ನಡೆದಾಡಲು, ಒಂದು ಕಡೆಯಿಂದ ಮತ್ತೊಂದು ಕಡೆ ದಾಟಲು ಕಿರಿಕಿರಿಯಾಗುತ್ತಿದೆ. ಅನೇಕರು ಸಣ್ಣ-ಪುಟ್ಟ ಅಪಘಾತಗಳಿಗೆ ಈಡಾಗಿ ಗಾಯಗೊಂಡಿರುವ ಪ್ರಕರಣಗಳು ಸಾಕಷ್ಟಿವೆ.

ಇತ್ತೀಚೆಗೆ ನಗರದಲ್ಲಿ ಬೆಂಗಳೂರಿನ ಮಾದರಿಯಲ್ಲಿ ದೊಡ್ಡ ದೊಡ್ಡ ಮಾರುಕಟ್ಟೆ ಸಂಕೀರ್ಣ, ವಾಣಿಜ್ಯ ಮಳಿಗೆಗಳು ತಲೆ ಎತ್ತಿವೆ. ಆದರೆ ಅಲ್ಲೆಲ್ಲ ವಾಹನಗಳ ನಿಲುಗಡೆ ಅವಕಾಶವಿಲ್ಲ. ಪಾರ್ಕಿಂಗ್‌ಗೆ ಸ್ಥಳಾವಕಾಶ ಮೀಸಲಿಡದೆ ಇಂತಹ ದೊಡ್ಡ ದೊಡ್ಡ ಕಟ್ಟಡಗಳಿಗೆ ಹೇಗೆ ಪರವಾನಗಿ ನೀಡುತ್ತಾರೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ.

ರಸ್ತೆ ಬದಿಯವಗೆಗೂ ಪಾದಚರಿ ಮಾರ್ಗವನ್ನು ಸೇರಿಸಿಕೊಂಡು ಮಳಿಗೆಗಳನ್ನು ನಿರ್ಮಿಸಿಕೊಳ್ಳಲಾಗಿದೆ. ಹೀಗಾಗಿ ನಗರದಲ್ಲಿ ವಾಹನಗಳನ್ನು ನಿಲ್ಲಿಸುವುದು ಎಲ್ಲಿ? ವಿಧಿ ಇಲ್ಲದೆ ವಾಹನ ಸವಾರರು ರಸ್ತೆಯಲ್ಲಿ ನಿಲ್ಲಿಸುತ್ತಾರೆ. ಕಟ್ಟಡ ಮಾಲೀಕರ ಪ್ರಭಾವಕ್ಕೆ ಒಳಗಾಗಿ ನಗರಸಭೆ ಅಧಿಕಾರಿಗಳು, ಪೊಲೀಸರು ಪಾರ್ಕಿಂಗ್‌ಗೆ ಜಾಗ ಕಲ್ಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿದೆ. ಕ್ರಮಕೈಗೊಳ್ಳಲು ಹೋದರೆ ಜನಪ್ರತಿನಿಧಿಗಳು ನಮ್ಮ ಕೈಕಟ್ಟಿಹಾಕುತ್ತಾರೆ ಎಂದು ಅಧಿಕಾರಿಗಳು ದೂರುತ್ತಾರೆ.

ನಗರದ ಜೋಡಿ ರಸ್ತೆಯಲ್ಲಿ ಬೆಂಗಳೂರು ವೃತ್ತದಿಂದ ಪಿಸಿಆರ್ ಕಾಂಪ್ಲೆಕ್ಸ್ ವರೆಗೆ, ಬೆಂಗಳೂರು ವೃತ್ತದಿಂದ ಮಾರುತಿ ಸ್ಟುಡಿಯೊ ವೃತ್ತದವರೆಗೆ, ಎಂ.ಜಿ ರಸ್ತೆಯಲ್ಲಿ ಗಜಾನನ ವೃತ್ತದಿಂದ ಕೆ.ಎಂ.ಡಿ ಕಲ್ಯಾಣ ಮಂಟಪದವರೆಗೆ, ಚೇಳೂರು ವೃತ್ತದಿಂದ ಎಪಿಎಂಸಿ ಮಾರುಕಟ್ಟೆಯವರೆಗೆ ತಹಶೀಲ್ದಾರ್ ಕಚೇರಿ, ಅಂಚೆ ಕಚೇರಿ ಮುಂತಾದ ಕಡೆ ವಾಹನಗಳ ನಿಲುಗಡೆ ಸಮಸ್ಯೆ ಮಿತಿ ಮೀರಿ ನಾಗರಿಕರನ್ನು ಸಂಕಷ್ಟಕ್ಕೆ ದೂಡುತ್ತಿದೆ.

‘ಪೊಲೀಸರು ಕೆಲವೆಡೆ ವಾಹನಗಳ ನಿಲುಗಡೆಗೆ ನಿಷೇಧ ಹೇರಿದ್ದರೂ ಅದು ತಾತ್ಕಾಲಿಕವಾಗಿರುತ್ತದೆ. ಅಲ್ಲಿ ಸರಿಯಾಗಿ ಸೂಚನಾ ಫಲಕ ಇರುವುದಿಲ್ಲ. ಕೆಲವು ಕಡೆ ನಾಮಫಲಕ ಇದ್ದರೂ ಮುರಿದು ಬಿದ್ದಿರುತ್ತವೆ. ಅಸಮರ್ಪವಾಗಿ ನಿಲುಗಡೆ ಮಾಡಲಾದ ಮತ್ತು ಸುಗಮ ಸಂಚಾರಕ್ಕೆ ಅಡ್ಡಿಪಡಿಸುವ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡು ತಪ್ಪಿತಸ್ಥರಿಗೆ ದಂಡ ವಿಧಿಸಬೇಕು. ಆದರೆ, ಪೊಲೀಸರು ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ’ ಎಂದು ಶ್ರೀರಾಮನಗರದ ನಿವಾಸಿ ರಮೇಶ್ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT