ಭಾನುವಾರ, ಜೂನ್ 13, 2021
25 °C
ಕೋವಿಡ್‌ ಕಾರಣಕ್ಕೆ ಈದ್ಗಾ ಮೈದಾನದಲ್ಲಿ ಪ್ರಾರ್ಥನೆಗೆ ಅವಕಾಶ ನಿರಾಕರಣೆ

ಬಕ್ರೀದ್‌: ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಜಿಲ್ಲೆಯಾದ್ಯಂತ ಮುಸ್ಲಿಮರು ಶನಿವಾರ ಶ್ರದ್ಧಾಭಕ್ತಿಯಿಂದ ಆಚರಿಸಿದರು. ಈ ಬಾರಿ ಕೋವಿಡ್‌ ಕಾರಣಕ್ಕೆ ಈದ್ಗಾ ಮೈದಾನದಲ್ಲಿ ಹಬ್ಬದ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಅವಕಾಶ ನಿರಾಕರಿಸಿದ ಕಾರಣಕ್ಕೆ ಮಸೀದಿಗಳಲ್ಲಿ ಹಬ್ಬದ ಪ್ರಾರ್ಥನೆ ನಡೆಯಿತು.

ಬೆಳಿಗ್ಗೆಯಿಂದಲೇ ಶ್ವೇತವಸ್ತ್ರಧಾರಿಗಳಾಗಿ ತಮ್ಮ ಸ್ಥಳೀಯ ಪ್ರದೇಶದ ಮಸೀದಿಗೆ ತೆರಳಿದ ಜನರು ಕೋವಿಡ್‌ ಮಾರ್ಗಸೂಚಿ ಅನುಸಾರ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ, ವಿವಿಧ ಸಮಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಪ್ರತಿ ಬಕ್ರೀದ್‌ನಲ್ಲಿ ಮುಸ್ಲಿಮರು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮೆರವಣಿಗೆಯ ಮೂಲಕ ಪ್ರಶಾಂತ್‌ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಕೊರೊನಾ ವೈರಸ್‌ ಸೋಂಕಿನ ಕಾರಣಕ್ಕೆ ಪೊಲೀಸ್‌ ಇಲಾಖೆ ಈ ಬಾರಿ ಈದ್ಗಾ ಮೈದಾನದಲ್ಲಿ ಪ್ರಾರ್ಥನೆಗೆ ಅವಕಾಶ ನೀಡಲಿಲ್ಲ.

ಹೀಗಾಗಿ, ಭುವನೇಶ್ವರಿ ವೃತ್ತದಲ್ಲಿರುವ ಜಾಮಿಯಾ ಮಸೀದಿ, ಬಿ.ಬಿ.ರಸ್ತೆಯಲ್ಲಿರುವ ಖುರ್ದ್ ಮತ್ತು ಹುಸೇನಿಯಾ ಮಸೀದಿಗಳು ಸೇರಿದಂತೆ ನಗರದಾದ್ಯಂತ ಇರುವ 11 ಮಸೀದಿಗಳಲ್ಲಿ ಬೆಳಿಗ್ಗೆ 6.45 ರಿಂದ 10.30ರ ವರೆಗೆ ವಿವಿಧ ಸಮಯದಲ್ಲಿ ಪ್ರಾರ್ಥನಾ ಕೂಟಗಳು ನೆರವೇರಿದವು.

ತಮ್ಮ ಮನೆಗಳಲ್ಲಿಯೇ ವಜೂ ಮಾಡಿಕೊಂಡು ಬಂದವರು ಮಸೀದಿಗಳ ಗಾತ್ರಕ್ಕೆ ಅನುಗುಣವಾಗಿ ಜನರು ಸೇರಿ ತಂಡಗಳಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸೋಂಕಿನ ಕಾರಣಕ್ಕೆ ಮಸೀದಿಯಲ್ಲಿ ಇದ್ದ ಚಾಪೆ ಹಾಗೂ ಜಮಾಖಾನೆಗಳನ್ನು ಬಳಸದೆ ಪ್ರತಿಯೊಬ್ಬರೂ ತಮ್ಮ ಮನೆಗಳಿಂದಲೇ ಚಾಪೆ ಅಥವಾ ಜಾನಿ ಮಾಜ್ ತಂದು ನಮಾಜ್‌ ಸಲ್ಲಿಸಿದರು.

ಮಸೀದಿ ಪ್ರವೇಶಿಸುವ ಮೊದಲು ಥರ್ಮಲ್ ಸ್ಕ್ಯಾನರ್‌ನಿಂದ ಪ್ರತಿಯೊಬ್ಬರ ದೇಹದ ಉಷ್ಣತೆ ತಪಾಸಣೆ ನಡೆಸಲಾಯಿತು. ಕೈಗಳನ್ನು ಶುಚಿಗೊಳಿಸಿಕೊಳ್ಳಲು ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿತ್ತು. ಪ್ರಾರ್ಥನೆ ಸಲ್ಲಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚಿಸುತ್ತಿದದ್ದು ಕಂಡುಬಂತು.

60 ವರ್ಷ ದಾಟಿದವರು ಮತ್ತು 10 ವರ್ಷ ಒಳಗಿನ ಮಕ್ಕಳು ಕೋವಿಡ್‌ ಮಾರ್ಗಸೂಚಿ ಕಾರಣಕ್ಕೆ ಮಸೀದಿಗಳಿಗೆ ಹೋಗದೆ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಿದರು. ಸೋಂಕಿನ ಕಾರಣಕ್ಕೆ ಈ ಬಾರಿ ನಮಾಜು ಮುಗಿದ ಬಳಿಕ ಪರಸ್ಪರ ಅಪ್ಪಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ನಿಷೇಧಿಸಲಾಗಿತ್ತು.

ನಮಾಜ್ ನಂತರ ಜನರು ಬಡವರಿಗೆ ಮತ್ತು ನಿರ್ಗತಿಕರಿಗೆ ನೆರವು ನೀಡಿದರು. ನಗರದಲ್ಲಿ ಮುಸ್ಲಿಮರ ಮನೆಗಳಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿತ್ತು. ಮನೆ ಮಂದಿ ಎಲ್ಲರೂ ಹೊಸ ಬಟ್ಟೆ ಧರಿಸಿ ಸಂಭ್ರಮಿಸುತ್ತ ಹಬ್ಬದ ಸಂತಸವನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಮನೆಗಳಲ್ಲಿ ಹಬ್ಬದ ವಿಶೇಷ ಮಾಂಸಾಹಾರ ಅಡುಗೆ ಘಮಲು ಮನೆ ಮಾಡಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು