ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ವೇಗದ ಇ.ವಿ ಚಾರ್ಜಿಂಗ್ ಘಟಕ ಶೀಘ್ರ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆಸ್ಕಾಂನಿಂದ 15 ಇ.ವಿ ಚಾರ್ಜಿಂಗ್ ಸ್ಟೇಷನ್
Published 21 ಮೇ 2024, 6:28 IST
Last Updated 21 ಮೇ 2024, 6:28 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಎಲೆಕ್ಟ್ರಿಕ್‌ ವಾಹನಗಳ ಬಳಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೆಸ್ಕಾಂ ತನ್ನ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಇವಿ ಚಾರ್ಜಿಂಗ್‌ ಘಟಕಗಳನ್ನು ಅಳವಡಿಸಿದೆ. ಗ್ರಾಹಕರು ಉತ್ಸಾಹದಿಂದ ಇವುಗಳನ್ನು ಬಳಸುತ್ತಿದ್ದಾರೆ.  

2022ರಲ್ಲಿ ಬೆಂಗಳೂರಿನ ಅರಮನೆ ಮೈದಾನದ ‘ಚಾಮರ ವಜ್ರ’ದಲ್ಲಿ ಬೆಸ್ಕಾಂ ಒಂದು ವಾರಗಳ ಕಾಲ ‘ಇವಿ’ ಎಕ್ಸ್‌ಪೋ ಸಹ ಹಮ್ಮಿಕೊಂಡಿತ್ತು. ಹಸಿರು ಇಂಧನ ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸಲು ‘ಇವಿ’ ರ‍್ಯಾಲಿ ಸಹ ಆಯೋಜಿಸಿತ್ತು. ಬೆಸ್ಕಾಂನ ಈ ‘ಇವಿ’ ಎಕ್ಸ್‌ಪೋಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ನಂತರದ ದಿನಗಳಲ್ಲಿ ತನ್ನ ವ್ಯಾಪ್ತಿಯ ಜಿಲ್ಲೆಗಳಲ್ಲಿ ಇ.ವಿ ಚಾರ್ಜಿಂಗ್ ಘಟಕಗಳ ನಿರ್ಮಾಣಕ್ಕೆ ಬೆಸ್ಕಾಂ ಮುತುವರ್ಜಿವಹಿಸಿತು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆಸ್ಕಾಂನ 15 ಇ.ವಿ ಚಾರ್ಜಿಂಗ್ ಘಟಕಗಳು ಈಗಾಗಲೇ ಇವೆ.  

ಈಗ ಘಟಕಗಳನ್ನು ಮೇಲ್ದರ್ಜೆಗೇರಿಸಲು ಬೆಸ್ಕಾಂ ನಿರ್ಧರಿಸಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೂ ಒಂದೇ ಗಂಟೆಯಲ್ಲಿ ಕಾರುಗಳು ಚಾರ್ಜ್ ಆಗುವ ಘಟಕಗಳು ಇಲ್ಲ. ಆದರೆ ಮುಂದಿನ ಮೂರು ತಿಂಗಳಲ್ಲಿ ಜಿಲ್ಲೆಯ ನಾಲ್ಕು ಕಡೆಗಳಲ್ಲಿ ಈ ವೇಗದ ಇ.ವಿ ಚಾರ್ಜಿಂಗ್ ಘಟಕಗಳು ಬಳಕೆಗೆ ದೊರೆಯಲಿವೆ. 

ಗ್ರಾಹಕರ ಬೇಡಿಕೆಗಳನ್ನು ಮನಗಂಡಿರುವ ಬೆಸ್ಕಾಂ ಈಗಾಗಲೇ ಜಿಲ್ಲೆಯಲ್ಲಿ ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರದ ವಾಹನಗಳ 15 ಇ.ವಿ ಚಾರ್ಜಿಂಗ್ ಘಟಕಗಳನ್ನು ಸ್ಥಾಪಿಸಿದೆ. ಈಗ ಮತ್ತಷ್ಟು ಘಟಕಗಳನ್ನು ಆರಂಭಿಸಲು ಮತ್ತು ನಿರ್ಮಾಣವಾಗಿರುವ ಘಟಕಗಳಲ್ಲಿ ವೇಗವಾಗಿ ಚಾರ್ಜಿಂಗ್ ಮಾಡುವ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದೆ. 

ಎಲ್ಲೆಲ್ಲಿ ಇವೆ ಘಟಕಗಳು: ಬಾಗೇಪಲ್ಲಿ, ಗೌರಿಬಿದನೂರು, ಗುಡಿಬಂಡೆ ಬೆಸ್ಕಾಂ ಉಪವಿಭಾಗ ಕಚೇರಿ, ಚಿಕ್ಕಬಳ್ಳಾಪುರದ ಗ್ರಾಮಾಂತರ ಉಪವಿಭಾಗ, ಚಿಕ್ಕಬಳ್ಳಾಪುರದ ವಿಭಾಗ ಕಚೇರಿ, ನಂದಿ ಗೆಸ್ಟ್‌ಹೌಸ್, ಚಿಂತಾಮಣಿಯ ಗ್ರಾಮೀಣ ಮತ್ತು ನಗರದ ಉಪವಿಭಾಗ ಕಚೇರಿ, ಕೈವಾರದ ಉಪವಿಭಾಗ ಕಚೇರಿ, ಶಿಡ್ಲಘಟ್ಟದ ಕಚೇರಿ, ಶಿಡ್ಲಘಟ್ಟ ಗ್ರಾಮಾಂತರ ವಿಭಾಗದ ಜಂಗಮಕೋಟೆ ವಿಭಾಗ ಕಚೇರಿಯಲ್ಲಿ ಈಗಾಗಲೇ ದ್ವಿಚಕ್ರ ವಾಹನಗಳ ಚಾರ್ಜಿಂಗ್ ಪಾಯಿಂಟ್‌ಗಳ ಕಾಮಗಾರಿ ಪೂರ್ಣವಾಗಿ ಸಾರ್ವಜನಿಕರ ಬಳಕೆಗೆ ಇವೆ.  

ಚಿಕ್ಕಬಳ್ಳಾಪುರದ ಹೊಸ ವಿಭಾಗೀಯ ಕಚೇರಿ, ಗೌರಿಬಿದನೂರಿನ ಎನ್‌ಇಸಿ ಕಾಲೊನಿಯ ಉಪವಿಭಾಗ ಕಚೇರಿ, ನಂದಿಯ ಬೆಸ್ಕಾಂ ಕಚೇರಿ, ಚಿಂತಾಮಣಿ ವಿಭಾಗೀಯ ಕಚೇರಿಯಲ್ಲಿ ಕಾರುಗಳ ಇ.ವಿ ಚಾರ್ಜಿಂಗ್ ಘಟಕಗಳ ನಿರ್ಮಾಣ ಪ್ರಕ್ರಿಯೆ ನಡೆದಿದೆ. ಈ ಘಟಕಗಳಲ್ಲಿ ಕೆಲವು ಘಟಕಗಳು ಈಗಾಗಲೇ ಬಳಕೆಗೂ ಮುಕ್ತವಾಗಿವೆ. ಸಾರ್ವಜನಿಕರ ಬಳಕೆಯ ಅಗತ್ಯತೆಗಳನ್ನು ನೋಡಿಕೊಂಡು ಬೆಸ್ಕಾಂ ಜಿಲ್ಲೆಯಲ್ಲಿ ಮತ್ತಷ್ಟು ಘಟಕಗಳ ನಿರ್ಮಾಣಕ್ಕೆ ಚಿಂತಿಸುತ್ತಿದೆ. 

ಎಲೆಕ್ಟ್ರಿಕ್‌ ವಾಹನದ ಚಾರ್ಜಿಂಗ್‌ಗೆ ಒಂದು ಯುನಿಟ್‌ಗೆ ಸರಾಸರಿ ₹8 ಖರ್ಚಾಗುತ್ತದೆ. 15 ಯುನಿಟ್ ಇದ್ದರೆ, 100 ಕಿ.ಮೀ.ವರೆಗೆ ವಾಹನ ಓಡುತ್ತದೆ. ₹120 ಖರ್ಚು ಮಾಡಿದರೆ, 100 ಕಿ.ಮೀ. ಓಡಿಸಬಹುದು. ಅಂದರೆ, ಒಂದು ಕಿ.ಮೀ.ಗೆ ಸರಾಸರಿ ₹1.20 ಪೈಸೆ ಮಾತ್ರ ವೆಚ್ಚವಾಗುತ್ತದೆ. ಪೆಟ್ರೋಲ್‌, ಡೀಸೆಲ್‌ಗಿಂತ ಇದು
ಮಿತವ್ಯಯಕಾರಿ.

ಬೆಸ್ಕಾಂ ದರ ಪ್ರತಿ ಯುನಿಟ್‌ ವೇಗದ ಚಾರ್ಜಿಂಗ್‌ ₹7.38, ನೇರ ಚಾರ್ಜಿಂಗ್‌ (ಡಿಸಿ), ₹6.71 ಮತ್ತು ಸಾಮಾನ್ಯ ಚಾರ್ಜಿಂಗ್‌ (ಎಸಿ) ₹6.57 ನಿಗದಿಗೊಳಿಸಿದೆ. ಚಿಕ್ಕಬಳ್ಳಾ ಪುರ ಜಿಲ್ಲೆಯಲ್ಲಿ ವೇಗದ ಚಾರ್ಜಿಂಗ್ ಘಟಕಗಳು ಇನ್ನೂ ನಿರ್ಮಾಣ ವಾಗಿಲ್ಲ. ಮುಂದಿನ ಮೂರು ತಿಂಗಳಲ್ಲಿ ಘಟಕಗಳು ನಿರ್ಮಾಣವಾಗುವ ಸಾಧ್ಯತೆ ಇದೆ.

ಖಾಸಗಿಯವರಿಂದಲೂ ಘಟಕ: ಬೆಂಗಳೂರು ಮತ್ತು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಜಿಲ್ಲೆಯಲ್ಲಿ ಹಾದು ಹೋಗಿರುವ ಹೆದ್ದಾರಿಯ ಪೆಟ್ರೋಲ್ ಬಂಕ್‌ಗಳು, ಕೆಲವು ಹೋಟೆಲ್‌ಗಳ ಬಳಿ ಇವಿ ಚಾರ್ಜಿಂಗ್ ಪಾಯಿಂಟ್‌ಗಳು, ಸ್ಟೇಷನ್‌ಗಳು ತಲೆ ಎತ್ತಿವೆ. 

ಜಿಲ್ಲೆಯಲ್ಲಿ ಹಾದು ಹೋಗಿರುವ ಬೆಂಗಳೂರು ಮತ್ತು ಹೈದರಾಬಾದ್ ಹೆದ್ದಾರಿಯಲ್ಲಿ ಸರಾಸರಿ 20ರಿಂದ 25 ಚಾರ್ಜಿಂಗ್ ಘಟಕಗಳು ಇವೆ.

ಬೆಸ್ಕಾಂ
ಬೆಸ್ಕಾಂ

‘ಬೆಸ್ಕಾಂನಿಂದ ಸೌಲಭ್ಯ; ದೂರ ಪ್ರಯಾಣಕ್ಕೆ ಅನುಕೂಲ’

‘ಇವಿ ವಾಹನಗಳನ್ನು ಉತ್ತೇಜಿಸಲು ಬೆಸ್ಕಾಂ ಚಾರ್ಜಿಂಗ್ ಘಟಕ ಸ್ಥಾಪಿಸುತ್ತಿದೆ. ಎಲೆಕ್ಟ್ರಿಕ್ ಕಾರುಗಳನ್ನು ಹೊಂದುವವರು ಯಾರೂ ಸ್ವಂತವಾಗಿ ಘಟಕಗಳನ್ನು ಅಳವಡಿಸಿಕೊಳ್ಳುವುದಿಲ್ಲ’ ಎಂದು ಚಿಕ್ಕಬಳ್ಳಾಪುರ ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಆನಂದ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು. ಎಲ್ಲ ತಾಲ್ಲೂಕುಗಳಲ್ಲಿ ಬೆಸ್ಕಾಂ ಕಚೇರಿ ಇರುತ್ತದೆ. ಅಂತಹ ಕಡೆಗಳಲ್ಲಿ ಇವಿ ಚಾರ್ಜರ್ ಸಿಗುತ್ತದೆ ಎನ್ನುವ ವಿಶ್ವಾಸ ಜನರಲ್ಲಿ ಇರುತ್ತದೆ. ಆದ ಕಾರಣ ಬೆಸ್ಕಾಂನ ಸ್ವಂತ ಸ್ಥಳಗಳಲ್ಲಿ ಇವಿ ಘಟಕಗಳನ್ನು ಅಳವಡಿಸುತ್ತಿದ್ದೇವೆ ಎಂದರು. ನಂದಿಬೆಟ್ಟದಲ್ಲಿ ಇವಿ ಚಾರ್ಜರ್ ಮತ್ತು ಸ್ಟೇಷನ್ ಇದೆ. ಆದರೆ ಇಲ್ಲಿ ಬಳಕೆ ಕಡಿಮೆ. ಕೆಲವರು ಮನೆಯಲ್ಲಿಯೇ ಚಾರ್ಜಿಂಗ್ ಮಾಡಿಕೊಳ್ಳುವರು. ಆದರೆ ತುರ್ತಾಗಿ ಹೊರ ಹೋಗಬೇಕಾದ ವೇಳೆ ಒಂದು ಗಂಟೆ ಒಳಗೆ ಚಾರ್ಜ್ ಮಾಡಿಕೊಳ್ಳಬೇಕಾಗಿರುತ್ತದೆ. ಆಗ ಬೆಸ್ಕಾಂನ ಘಟಕಗಳು ಅನುಕೂಲ. ಜಿಲ್ಲೆಯಲ್ಲಿ ಒಂದು ಗಂಟೆಯಲ್ಲಿಯೇ ಚಾರ್ಜ್ ಆಗುವ ಘಟಕಗಳು ಶೀಘ್ರದಲ್ಲಿಯೇ ನಿರ್ಮಾಣವಾಗಲಿದೆ ಎಂದರು. ಬೆಂಗಳೂರಿನಿಂದ ಹೈದರಾಬಾದ್ ಮೈಸೂರಿನಿಂದ ಹೈದರಾಬಾದ್ ಹೀಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ದೂರ ಪ್ರಯಾಣಿಸುವವರಿಗೆ ಬೆಸ್ಕಾಂನ ತಾಲ್ಲೂಕು ಮಟ್ಟದ ಕಚೇರಿಗಳಲ್ಲಿ ಇವಿ ಚಾರ್ಜರ್ ದೊರೆಯುತ್ತದೆ. ನಾವು ನಿಶ್ಚಿಂತೆಯಿಂದ ಪ್ರಯಾಣಿಸಬಹುದು ಎನ್ನುವ ಭಾವನೆ ಬೆಳೆಯುತ್ತದೆ ಎಂದು ಹೇಳಿದರು.  ಚಿಕ್ಕಬಳ್ಳಾಪುರದಲ್ಲಿ ಕೆಎಸ್‌ಆರ್‌ಟಿಸಿ ಪಕ್ಕದ ಬೆಸ್ಕಾಂ ಕಚೇರಿಯಲ್ಲಿ ವೇಗದ ಚಾರ್ಜಿಂಗ್ ಘಟಕಗಳನ್ನು ಅಳವಡಿಸಲಾಗುತ್ತದೆ ಎಂದರು.

ಭವಿಷ್ಯದಲ್ಲಿ ಬಾಗೇಪಲ್ಲಿ ‘ಇವಿ’ ಹಬ್

ಭವಿಷ್ಯದಲ್ಲಿ ಬಾಗೇಪಲ್ಲಿಯು ‘ಇವಿ’ ಹಬ್ ಆಗಲಿದೆ ಎಂದು ಬೆಸ್ಕಾಂ ಮೂಲಗಳು ತಿಳಿಸುತ್ತವೆ.  ಬೆಂಗಳೂರಿನಿಂದ ಬಾಗೇಪಲ್ಲಿ 100 ಕಿ.ಮೀ ಅಂತರದಲ್ಲಿ ಇದೆ. ಹೈದರಾಬಾದ್ ಮಾರ್ಗದಲ್ಲಿ ತೆರಳುವವರು ಸಾಮಾನ್ಯವಾಗಿ 100 ಕಿ.ಮೀ ಸಂಚರಿಸಿದ ನಂತರ ವಾಹನಗಳನ್ನು ಚಾರ್ಜಿಂಗ್ ಮಾಡಿಕೊಳ್ಳುವರು. ಅದೇ ರೀತಿ ಹೈದರಾಬಾದ್ ಕಡೆಯಿಂದ ಬರುವವರು ಇನ್ನೂ ಬೆಂಗಳೂರು 100 ಕಿ.ಮೀ ದೂರವಿದೆ ಎನ್ನುವ ಕಾರಣದಿಂದ  ಬಾಗೇಪಲ್ಲಿಯಲ್ಲಿ ವಾಹನಗಳನ್ನು ಚಾರ್ಜ್ ಮಾಡಿಕೊಳ್ಳುವ ಸಾಧ್ಯತೆ ಇದೆ. ಈ ಎಲ್ಲ ಕಾರಣ ಭವಿಷ್ಯದಲ್ಲಿ ಬಾಗೇಪಲ್ಲಿಯು ಇವಿ ಚಾರ್ಜಿಂಗ್ ಹಬ್ ಆಗುವ ಸಾಧ್ಯತೆ ದಟ್ಟವಾಗಿದೆ ಎನ್ನವರು ಬೆಸ್ಕಾಂ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT