ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಭಾರತ್ ಬಂದ್; ಜನ ಜೀವನದ ಮೇಲೆ ಪರಿಣಾಮವಿಲ್ಲ, ಎಂದಿನ ರೀತಿಯಲ್ಲಿ ಚಟುವಟಿಕೆಗಳು
Last Updated 27 ಸೆಪ್ಟೆಂಬರ್ 2021, 14:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ದೇಶದಾದ್ಯಂತ ಸೋಮವಾರ ಕರೆ ನೀಡಿದ್ದ ಭಾರತ್ ಬಂದ್‌ ಅಂಗವಾಗಿ ವಿವಿಧ ಸಂಘಟನೆಗಳು ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿದವು.

ಬಸ್ ಸಂಚಾರ, ಅಂಗಡಿಗಳು, ವ್ಯಾಪಾರ ವಹಿವಾಟು, ಜನಜೀವನ ಎಂದಿನ ರೀತಿಯಲ್ಲಿಯೇ ಇತ್ತು. ಬೆಳಿಗ್ಗೆ 5ರ ವೇಳೆಗೆ ಜಿಲ್ಲೆಯಲ್ಲಿ ಪ್ರತಿಭಟನೆಗಳು ಆರಂಭವಾದವು. ನಗರದ ಶಿಡ್ಲಘಟ್ಟ ವೃತ್ತದಲ್ಲಿ ರೈತ ಸಂಘ, ಕರವೇ ಯುವ ಸೇವೆ ಹಾಗೂ ಪ್ರಗತಿಪರ ಒಕ್ಕೂಟದ ಸದಸ್ಯರು ಬೆಳಿಗ್ಗೆ ಪಂಜಿನ ಮೆರವಣಿಗೆ ನಡೆಸಿದರು. ಈ ಮೂಲಕ ಜಿಲ್ಲೆಯಲ್ಲಿ ಹೋರಾಟಕ್ಕೆ ಚಾಲನೆ ನೀಡಿದರು. ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು. ಶಿಡ್ಲಘಟ್ಟ ವೃತ್ತದಲ್ಲಿ ಹೂ ಸುರಿದರು.

ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ಕೇಂದ್ರ ಸರ್ಕಾರದ ಈ ಕಾಯ್ದೆಗಳು ಇಡೀ ರೈತ ಕುಲವನ್ನೇ ನಾಶ ಮಾಡಲಿವೆ. ಕೊರೊನಾದ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಈ ಕಾಯ್ದೆ ಜಾರಿಗೊಳಿಸಿದೆ ಎಂದು ಕಿಡಿಕಾರಿದರು.

ರೈತರ ಪಾಲಿಗೆ ಕರಾಳ ಎನಿಸಿರುವ ಈ ಕಾಯ್ದೆಗಳನ್ನು ವಾಪಸ್ ಪಡೆಯುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.

ಪ್ರಗತಿಪರ ಒಕ್ಕೂಟದ ಮುಖಂಡರಾದ ಸುಷ್ಮಾ ಶ್ರೀನಿವಾಸ್, ಯಾರಿಗೂ ತಿಳಿಯದ ರೀತಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಕಾಯ್ದೆಗಳನ್ನು ಜಾರಿಗೊಳಿಸಿದೆ. ಅಚ್ಚೇ ದಿನ್ ಅಚ್ಚೇ ದಿನ್ ಎಂದು ರೈತರನ್ನು ಬೀದಿಗೆ ನಿಲ್ಲಿಸಿದ್ದಾರೆ. ರೈತ ಮುಖಂಡರ ಜತೆ ಚರ್ಚೆ ಸಹ ನಡೆಸಿಲ್ಲ. ಈ ಕಾಯ್ದೆಗಳು ರೈತರನ್ನು ಕುಗ್ಗಿಸಲಿವೆ. ಅನ್ನ ಕೊಡುವ ರೈತರಿಗೆ ನರೇಂದ್ರ ಮೋದಿ ವಿಷ ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.

ಬೈಕ್ ರ‍್ಯಾಲಿ: ಕರ್ನಾಟಕ ಪ್ರಾಂತ ರೈತ ಸಂಘ, ರಾಜ್ಯ ಹಳ್ಳಿ ಮಕ್ಕಳ ಸಂಘ, ಅಂಗನವಾಡಿ ನೌಕರರ ಸಂಘ, ರೈತ ಸಂಘ (ಸಾಮೂಹಿಕ ನಾಯಕತ್ವ) ಕಾರ್ಯಕರ್ತರು ಶಿಡ್ಲಘಟ್ಟ ವೃತ್ತದಿಂದ ಬೈಕ್ ರ‍್ಯಾಲಿ ಆರಂಭಿಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ರ‍್ಯಾಲಿ ನಡೆಸಿದರು. ರೈತರ ಅನ್ನ ಕಸಿಯುತ್ತಿರುವ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಿದರು. ಅಂಗಡಿಗಳ ಬಳಿ ತೆರಳಿ ಕೈ ಮುಗಿದು ಬಂದ್‌ ಬೆಂಬಲಿಸುವಂತೆ ಕೋರುತ್ತಿದ್ದರು. ರ‍್ಯಾಲಿಯ ನಂತರ ಶಿಡ್ಲಘಟ್ಟ ವೃತ್ತದಲ್ಲಿ ಜಮಾಯಿಸಿದರು.

ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಪೊರೇಟ್ ಕಂಪನಿಗಳ ಹಿತವನ್ನು ಕಾಯುತ್ತಿದೆ. ರೈತರನ್ನು ಗುಲಾಮಗಿರಿಗೆ ತಳ್ಳುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಸದಸ್ಯರಾದ ಪ್ರತೀಶ್, ವೆಂಕಟರಾಯಪ್ಪ, ನರಸಿಂಹಪ್ಪ, ಹಳ್ಳಿ ಮಕ್ಕಳ ಸಂಘದ ವೆಂಕಟರಮಣಪ್ಪ, ಬಿಸಿಯೂಟ ಸಂಘಟನೆಯ ಮಂಜುಳಾ, ಮಮತಾ, ಭಾಗ್ಯಮ್ಮ, ಮುನಿರತ್ನ, ಅಂಗನವಾಡಿ ಸಂಘಟನೆಯ ಗಾಯತ್ರಿ ಇತರರು ಇದ್ದರು.

ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಮೆರವಣಿಗೆ ನಡೆಸಿದರು. ದಲಿತರು, ರೈತರು ಮತ್ತು ಕಾರ್ಮಿಕರ ವಿರುದ್ಧದ ನಿಲುವನ್ನು ಕೇಂದ್ರ ಸರ್ಕಾರ ಹೊಂದಿದೆ. ದೆಹಲಿಯಲ್ಲಿ ರೈತರು ಪ್ರತಿಭಟಿಸಿದರೂ ಕೇಂದ್ರ ಸರ್ಕಾರ ಅವರ ಅಹವಾಲು ಕೇಳುತ್ತಿಲ್ಲ ಎಂದು ದೂರಿದರು. ದಲಿತ ಸಂಘರ್ಷ ಸಮಿತಿ ಮುಖಂಡರಾದ ಬಿ.ವಿ.ಆನಂದ್, ಪಿಳ್ಳಪ್ಪ, ಶ್ರೀನಿವಾಸ್, ಎಂ.ವೇಣುಗೋಪಾಲ್, ಗಂಗಾಧರಪ್ಪ, ಅಂದರಲಹಳ್ಳಿ ವೆಂಕಟೇಶ್ ಇತರರು ಇದ್ದರು.

ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಮಟಮಪ್ಪ, ಮುಖಂಡ ಕೆ.ಸಿ.ರಾಜಾಕಾಂತ್ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಸಹ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT