ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ: ಬದುಕಿಗೆ ಜೊತೆಯಾದ ಸೈಕಲ್

50 ವರ್ಷದಿಂದ ಪಿಗ್ಮಿ ಸಂಗ್ರಹಕಾರನ ಜೊತೆಗಾರ; ಕಾರ್ಯರೂಪದಲ್ಲಿ ಪರಿಸರ ಪ್ರಜ್ಞೆ
Last Updated 28 ಅಕ್ಟೋಬರ್ 2020, 4:06 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಪರಿಸರ ಮಾಲಿನ್ಯ ತಡೆಯುವ ದೃಷ್ಟಿಯಿಂದ ಪ್ರಮುಖ ನಗರಗಳಲ್ಲಿ ಮೋಟರ್ ವಾಹನಗಳಿಗೆ ಬದಲಾಗಿ ಸೈಕಲ್ ಬಳಕೆಗೆ ಹೆಚ್ಚಿನ ಆದ್ಯತೆ ನೀಡುವ ಕುರಿತು ಅರಿವು ಮೂಡಿಸಲಾಗುತ್ತಿದೆ. ಕೆಲವೆಡೆಯಂತೂ ಸೈಕಲ್ ಸವಾರರ ಸಂಘಟನೆಗಳಿವೆ. ಆಗಾಗ್ಗೆ ಸೈಕಲ್ ಜಾಥಾ ನಡೆಸಲಾಗುತ್ತಿದೆ.

‘ಒಬ್ಬರಿಂದೇನಾಗುತ್ತದೆ?’ ಎಂದು ಯಾರು ಮೂಗು ಮುರಿದರೂ, ‘ಪರಿಸರ ಉಳಿಸಲು ನನ್ನದೂ ಇರಲಿ ಅಳಿಲು ಸೇವೆ’ ಎನ್ನುತ್ತಾ ಕೆಲವರಂತೂ ಸದ್ದಿಲ್ಲದೆ ಎಲೆಮರೆಯ ಕಾಯಿಯಂತೆ ಪರಿಸರ ಪ್ರಜ್ಞೆಯನ್ನು ಅಳವಡಿಸಿಕೊಂಡು ಬದುಕುತ್ತಾರೆ. ಈ ರೀತಿಯ ವಿರಳರಲ್ಲಿ ಒಬ್ಬರು ಶಿಡ್ಲಘಟ್ಟದ ಹಳೆ ಅಂಚೆ ಕಚೇರಿ ರಸ್ತೆಯ ನಿವಾಸಿ ಬಿ.ಎಸ್.ಕುಮಾರ್. ಇವರನ್ನು ಎಲ್ಲರೂ ‘ಪಿಗ್ಮಿ ಕುಮಾರ್’ ಎಂದೇ ಕರೆಯುತ್ತಾರೆ.

ಸುಮಾರು 40 ವರ್ಷಗಳಿಂದ ಬ್ಯಾಂಕಿನ ಪಿಗ್ಮಿ ಸಂಗ್ರಹಕಾರರಾಗಿದ್ದಾರೆ. ಪಿಗ್ಮಿ ಸಂಗ್ರಹಣೆಯ ಅವರ ನಿತ್ಯ ಸಂಗಾತಿಯಾದ ಸೈಕಲ್ ಅವರ ಬಳಿ 40 ವರ್ಷಗಳಿಂದಲೂ ಇದೆ. ಅವರ ಜತೆಗಾರರೆಲ್ಲ ಸೈಕಲ್ ಬಿಟ್ಟು ಮೋಟರ್ ವಾಹನ ಖರೀದಿಸಿದರೂ ಅವರು ಮಾತ್ರ ತಮ್ಮ ಸೈಕಲ್ ಬಿಟ್ಟಿಲ್ಲ. ಮುಂದೆಯೂ ಬಿಡುವುದಿಲ್ಲ ಎನ್ನುತ್ತಾರೆ.

‘ಪರಿಸರ ಮಾಲಿನ್ಯವನ್ನು ನನ್ನ ಮಟ್ಟಿಗೆ ಮಾಡದಿರುವುದು ನನ್ನ ಸಂಕಲ್ಪ. 1978ರಲ್ಲಿ ಡಿ.ಸಿ.ಸಿ ಬ್ಯಾಂಕ್ ಗೆ ಪಿಗ್ಮಿ ಸಂಗ್ರಹಕಾರನಾಗಿ ಸೇರಿದೆ. ಆಗ ನನಗೆ ಸೈಕಲ್ ಕೊಳ್ಳುವ ಶಕ್ತಿ ಇರಲಿಲ್ಲ. ನನ್ನ ದೊಡ್ಡಪ್ಪ ದಿಬ್ಬೂರಿನ ಗೋವಿಂದಸ್ವಾಮಿ ಅವರ ಮನೆಯ ಅಟ್ಟದ ಮೇಲೆ ಅವರು ಸಾಕಷ್ಟು ಉಪಯೋಗಿಸಿದ್ದ ಸೈಕಲ್ ಇತ್ತು. ನಾನು ಅದನ್ನು ಕೊಡುವಂತೆ ಕೇಳಿದೆ. ನನ್ನ ದೊಡ್ಡಪ್ಪನ ಮಗ ನನ್ನಿಂದ ₹100 ಪಡೆದು ಅದನ್ನು ರಿಪೇರಿ ಮಾಡಿಸಿಕೊಟ್ಟ. ಆಗ ಅದನ್ನು ತುಳಿದುಕೊಂಡು ಬರುತ್ತಿದ್ದರೆ ಹೆಲಿಕಾಪ್ಟರಿನಲ್ಲಿ ಬರುತ್ತಿರುವಂತೆ ನನಗೆ ಭಾಸವಾಗಿತ್ತು. ಅಂದಿನಿಂದ ಈ ಸೈಕಲ್ ನನಗೆ ಅನ್ನ ನೀಡಿದೆ, ಬದುಕನ್ನು ಕಟ್ಟಿಕೊಳ್ಳಲು ನೆರವಾಗಿದೆ. ಸೈಕಲ್ ನನ್ನ ಬಹು ದೊಡ್ಡ ಆಸ್ತಿ. ಹಾಗಾಗಿ ನನ್ನ ಜೀವನ ಪರ್ಯಂತ ಇದನ್ನು ಬಿಡುವುದಿಲ್ಲ’ ಎಂದು ಸೈಕಲ್‌ ಬಗೆಗಿನ ಭಾವನಾತ್ಮಕ ಸಂಬಂಧವನ್ನು ಕುಮಾರ್ ವಿವರಿಸಿದರು.

‘ಈ ಸೈಕಲ್ ಕಾಲದ ಹೊಡೆತಕ್ಕೆ ಸಿಲುಕಿ ತನ್ನ ಬಹುತೇಕ ಭಾಗಗಳನ್ನು ಬದಲಿಸಿಕೊಂಡಿದೆ. ಹ್ಯಾಂಡಲ್ ಮತ್ತು ಅದರ ಹಬ್ ಬಿಟ್ಟು ಉಳಿದೆಲ್ಲ ಬದಲಿಸಲಾಗಿದೆ. ಹಿಂಬದಿಯ ಚಕ್ರದ ನಡುವಿನ ಹಬ್ ಮೇಲೆ ‘ಮೇಡ್ ಇನ್ ಇಂಗ್ಲೆಂಡ್’ ಎಂದು ಬರೆದಿದೆ. ಹ್ಯಾಂಡಲ್ ಮೇಲೆ ನನ್ನ ದೊಡ್ಡಪ್ಪ ಸುಮಾರು 50 ವರ್ಷಗಳ ಹಿಂದೆ ಬರೆಸಿದ್ದ ಅವರ ಹೆಸರು ‘ಡಿ.ಎಲ್.ಗೋವಿಂದರಾಜು’ ಇನ್ನೂ ಹಾಗೆಯೇ ಇದೆ. 35 ವರ್ಷಗಳ ಹಿಂದೆ ತೋಟಪ್ಪ ಎನ್ನುವವರು ಸೈಕಲ್ ರಿಪೇರಿ ಮಾಡುತ್ತಿದ್ದರು. ಅವರು ₹100ಗೆ ಸೈಕಲ್ ಮಾರಲು ಕೇಳಿದ್ದರು. ನನ್ನ ತಾಯಿ, ‘ಇದು ನಮ್ಮ ಮನೆಯ ಲಕ್ಷ್ಮಿ ಮಾರಬೇಡ’ ಅಂದರು.

ಅಂದಿನಿಂದ ಪ್ರತಿದಿನ ಕೆಲಸ ಮುಗಿಸಿ ಬರುತ್ತಿದ್ದಂತೆ ಸೈಕಲ್‌ಗೆ ನಮಸ್ಕರಿಸುತ್ತೇನೆ. ಈ ಸೈಕಲ್ ತುಳಿಯುತ್ತಾ ಸ್ನೇಹಿತರೊಂದಿಗೆ 16 ಕಿ.ಮೀ ದೂರದ ವಿಜಯಪುರಕ್ಕೆ ಮತ್ತು 18 ಕಿ.ಮೀ ದೂರದ ಚಿಕ್ಕಬಳ್ಳಾಪುರಕ್ಕೆ ಹೋಗಿ ರಾತ್ರಿ ಎರಡನೇ ಆಟದ ಚಲನಚಿತ್ರ ನೋಡಿಕೊಂಡು ಮಧ್ಯರಾತ್ರಿ ಹಿಂದಿರುಗುತ್ತಿದ್ದ ಮಧುರ ನೆನಪುಗಳಿವೆ’ ಎಂದರು.

‘ನನ್ನ ತಾಯಿಯ ಚಿಕ್ಕಮ್ಮ ಶಿಕ್ಷಕಿಯಾಗಿದ್ದರು. ಅವರಿಗೆ 1963ರಲ್ಲಿ ಕೇವಲ 50 ಪೈಸೆಗೆ ಲಾಟರಿಯಲ್ಲಿ ಈ ಸೈಕಲ್ ಲಭಿಸಿತು. ಅವರು ಅದನ್ನು ನನ್ನ ದೊಡ್ಡಪ್ಪನಿಗೆ ಕೊಟ್ಟರು. ಆಗ ಸೈಕಲ್‌ನ ಮೂಲ ಬೆಲೆ ₹50 ಆಗಿತ್ತು. ಈಗ ನನಗಿದು ಬೆಲೆ ಕಟ್ಟಲಾಗದ ಅಮೂಲ್ಯ ವಸ್ತುವಾಗಿ, ನನ್ನ ಬದುಕಿನ ಭಾಗವಾಗಿದೆ’ ಎಂದು ಅವರು ಹೇಳಿದರು.

‘ನನಗೆ ಹಲವಾರು ವರ್ಷಗಳಿಂದ ಪಿಗ್ಮಿ ಕುಮಾರ್ ಪರಿಚಯ. ಬಹುತೇಕರು ಪರಿಸರದ ಬಗ್ಗೆ ಕಾಳಜಿ ಮಾತುಗಳನ್ನು ಆಡುತ್ತಾರೆ. ಆದರೆ, ಇಂಧನ ಸುಡುವ ವಾಹನವನ್ನು ಓಡಿಸುತ್ತಾರೆ. ಈತ ಹಾಗಲ್ಲ ಸೈಕಲ್ ತುಳಿಯುತ್ತಾ ಇತರರಿಗೆ ಮಾದರಿಯಾಗುವ ಪರಿಸರ ಪ್ರೇಮಿಯಾಗಿದ್ದಾರೆ. ಇಷ್ಟೊಂದು ಹಳೆಯದಾದ ಸೈಕಲ್ ನಾನು ನೋಡಿಲ್ಲ. ಅದನ್ನು ತನ್ನ ಅಂತರಂಗದ, ಕುಟುಂಬದ ಸದಸ್ಯನಂತೆ ಭಾವಿಸುವ ಕುಮಾರನಂಥ ಇನ್ನೊಬ್ಬರನ್ನು ಕಂಡಿಲ್ಲ’ ಎನ್ನುತ್ತಾರೆ ನಿವೃತ್ತ ಬ್ಯಾಂಕ್ ಉದ್ಯೋಗಿ ಮಂಜುನಾಥ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT