ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಕಲ್‌ನಲ್ಲಿ 3,500 ಕಿ.ಮೀ ಜಾಗೃತಿ ಜಾಥಾ

ಅತ್ಯಾಚಾರ, ದೌರ್ಜನ್ಯ ತಡೆ; ರಾಜ್ಯದಾದ್ಯಂತ ಸೈಕಲ್ ಜಾಥಾ ಹೊರಟ ಕಿರಣ್
Last Updated 25 ಆಗಸ್ಟ್ 2021, 9:31 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‌‘ಹೆಣ್ಣು ಮಕ್ಕಳಿಗೆ ಹೆಚ್ಚು ಗೌರವ ಕೊಡುವ ದೇಶ ಮತ್ತು ಹೆಣ್ಣನ್ನು ಪೂಜಿಸುವ ದೇಶ ಭಾರತ. ಆದರೆ ಯಾವ ದೇಶ ಹೆಣ್ಣು ಮಕ್ಕಳಿಗೆ ಸುರಕ್ಷಿತವಲ್ಲ ಎಂದು ಗೂಗಲ್‌ನಲ್ಲಿ ಹುಡುಕಿದರೆ ಭಾರತದ ಹೆಸರು ಬರುತ್ತದೆ. ಇದು ತಲೆತಗ್ಗಿಸುವ ವಿಷಯ. ಹೆಣ್ಣು ಮಕ್ಕಳಿಗೆ ಗೌರವ ಕೊಡಿ ಎಂದು ನಾನು ಜಾಗೃತಿ ಮೂಡಿಸುತ್ತಿದ್ದೇನೆ’–ಹೀಗೆ ಹೇಳುವಾಗ ಕಿರಣ್ ಅವರ ಮಾತುಗಳಲ್ಲಿ ಸಾಮಾಜಿಕ ಕಳಕಳಿ ಇಣುಕುತ್ತದೆ.

ಬೆಂಗಳೂರಿನ ಬನ್ನೇರುಘಟ್ಟದ ಕಿರಣ್, ಅಲ್ಲಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿ.ಎ ಓದುತ್ತಿದ್ದಾರೆ. ‘ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಮತ್ತು ಕಿರುಕುಳ ನಿಲ್ಲಬೇಕು’ ಎಂದು ಕಿರಣ್ ರಾಜ್ಯದಾದ್ಯಂತ ಬೈಸಿಕಲ್‌ನಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಬೆಂಗಳೂರು ಮತ್ತು ಕೋಲಾರ ಜಿಲ್ಲೆಯಲ್ಲಿ ಸೈಕಲ್ ಜಾಥಾ ಪೂರ್ಣಗೊಳಿಸಿ ಸೋಮವಾರ ಚಿಕ್ಕಬಳ್ಳಾಪುರಕ್ಕೆ ಜಾಥಾ ಬಂದಿತು. ಚಿಕ್ಕಬಳ್ಳಾಪುರದಿಂದ ಅವರು ತುಮಕೂರಿನತ್ತ ಪ್ರಯಾಣ ಬೆಳೆಸಿದರು.

ರಾಷ್ಟ್ರೀಯ ಹೆದ್ದಾರಿ 7ರ ಬೈಪಾಸ್‌ಗೆ ಬಂದ ಕಿರಣ್ ಅವರನ್ನು ಪರಿಸರವಾದಿ ಚೊಕ್ಕಳ್ಳಿ ಕಲ್ಯಾಣ್ ಹಾಗೂ ಗ್ರೀನ್ ಥಾಟ್ಸ್ ಸಂಸ್ಥೆಯ ಸದಸ್ಯರು ಆತ್ಮೀಯವಾಗಿ ಸ್ವಾಗತಿಸಿದರು. ನಾಗೇಶ ಹೆಗಡೆ ಅವರ ‘ಮನುಕುಲದ ರಕ್ಷಣೆಗೆ ಮಹತ್ವದ ದಿನಗಳು’ ಪುಸ್ತಕವನ್ನು ನೀಡಿದರು.

‘ಅತ್ಯಾಚಾರ ನಿರ್ಮೂಲನೆ, ಅಖಂಡ ಕರ್ನಾಟಕ ಸೈಕ್ಲಿಂಗ್’ 3,500+, 31 ಜಿಲ್ಲೆಗಳು ಎಂದು ಸೈಕಲ್‌ನ ಮುಂಬದಿಯಲ್ಲಿ ಭಿತ್ತಿಚಿತ್ರವಿದೆ. ಸೈಕಲ್‌ನ ಕ್ಯಾರಿಯರ್‌ನಲ್ಲಿ ಕರ್ನಾಟಕ ಭಾವುಟ ಕಟ್ಟಿದ್ದಾರೆ. ಈ ಭಿತ್ತಿಚಿತ್ರ ಮತ್ತು ಭಾವುಟವನ್ನು ನೋಡಿದ ಬಹಳಷ್ಟು ಜನರು ಹಾಗೂ ಯುವ ಸಮುದಾಯ ಅವರ ಜತೆ ಸೆಲ್ಫಿ ತೆಗೆದುಕೊಂಡು ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಕಿರಣ್ ಅವರು im_born_to_run ಎನ್ನುವ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಪಯಣದ ವಿವರಗಳನ್ನು ದಾಖಲಿಸುತ್ತಿದ್ದಾರೆ. ಇದನ್ನು ನೋಡಿದ ದೇವನಹಳ್ಳಿ ತಾಲ್ಲೂಕಿನ ವಿಜಯಪುರದ ಮಹೇಶ್ ಎಂಬುವವರು ಸಹ ಕಿರಣ್ ಅವರನ್ನು ಸ್ವಾಗತಿಸಲು ಬಂದಿದ್ದರು. ಕಿರಣ್ ಅವರ ಸೈಕಲ್ ಜಾಥಾದ ಬಗ್ಗೆ ಮಾಹಿತಿ ಪಡೆಯಲು ಮತ್ತು ಅವರನ್ನು ಬೆಂಬಲಿಸುವವರು im_born_to_run ಎನ್ನುವ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಿಂಬಾಲಿಸಬಹುದು.

ಕಿರಣ್ ಈ ಒಟ್ಟು ಪ್ರಯಾಣಿಯಲ್ಲಿ 31 ಜಿಲ್ಲೆಗಳಲ್ಲಿ ಒಟ್ಟು 3,493 ಕಿಲೋ ಮೀಟರ್ ಸೈಕಲ್ ಜಾಥಾ ನಡೆಸುವರು. ಈ ಸೈಕಲ್ ಜಾಥಾವು ಅಂತಿಮವಾಗಿ ರಾಮನಗರ ಮೂಲಕ ಬೆಂಗಳೂರು ಪ್ರವೇಶಲಿದೆ. ನಿತ್ಯ ಎಷ್ಟು ಕಿಲೋಮೀಟರ್ ಸೈಕಲ್ ತುಳಿಯಬೇಕು ಎನ್ನುವ ಬಗ್ಗೆಯೂ ಗುರಿ ನಿಗದಿ ಮಾಡಿಕೊಂಡಿದ್ದಾರೆ. 45 ದಿನಗಳಲ್ಲಿ ಈ ಪ್ರಯಾಣ
ಪೂರ್ಣಗೊಳ್ಳಲಿದೆಯಂತೆ.

ಆರಂಭದ ಒಂದು ವಾರದಲ್ಲಿ ನಿತ್ಯ 70 ಕಿಲೋಮೀಟರ್ ಜಾಥಾ ನಡೆಸುತ್ತೇನೆ. ನಂತರ ಮತ್ತಷ್ಟು ವೇಗ ಹೆಚ್ಚಲಿದೆ. ಮೂರನೇ ದಿನದಲ್ಲಿ ಮೂರನೇ ಜಿಲ್ಲೆ ಚಿಕ್ಕಬಳ್ಳಾಪುರಕ್ಕೆ ಕಾಲಿಟ್ಟಿದ್ದೇನೆ. ಹೆಣ್ಣು ಮಕ್ಕಳ ಮೇಲೆ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಈ ಬಗ್ಗೆ ಜನಜಾಗೃತಿ ಮೂಡಿಸಬೇಕಿದೆ ಎಂದು ಕಿರಣ್ ನುಡಿಯುವರು.

ಕರ್ನಾಟಕ ನನ್ನ ತಾಯ್ನೆಲ. ಆದ ಕಾರಣ ನಾನು ರಾಜ್ಯದಲ್ಲಿಯೇ ಜಾಗೃತಿ ಮೂಡಿಸಲು ಮುಂದಾಗಿದ್ದೇನೆ. ನಾನು ಒಬ್ಬನೇ ಈ ಜಾಥಾ ನಡೆಸುತ್ತಿದ್ದೇನೆ. ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕು. ಅದರಲ್ಲಿಯೂ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಯಬೇಕು. ಅವರ ಬಗ್ಗೆ ಗೌರವದ ಭಾವನೆ ಬೆಳೆಸಬೇಕು ಎನ್ನುವುದೇ ಈ ಜಾಥಾದ ಉದ್ದೇಶ. ನನ್ನ ಇನ್‌ಸ್ಟಾಗ್ರಾಂನಲ್ಲಿ ಜಾಥಾ ಬಗ್ಗೆ ಮಾಹಿತಿ ನೀಡುತ್ತಿರುವೆ. ಆಯಾ ಜಿಲ್ಲೆಯ ಯುವಕ ಸಂಘಗಳು, ಸ್ವಯಂ ಸೇವಾ ಸಂಸ್ಥೆಗಳು ಅಲ್ಲಿಗೆ ಭೇಟಿ ನೀಡಿದಾಗ ಕೈಜೋಡಿಸಬಹುದು
ಎಂದರು.

ಶಾಲಾ, ಕಾಲೇಜುಗಳಲ್ಲಿ ಜಾಗೃತಿ

ಶಾಲೆ, ಕಾಲೇಜುಗಳಿಗೆ ಭೇಟಿ ನೀಡಿ ಹೆಣ್ಣು ಮಕ್ಕಳು ತಮ್ಮನ್ನು ಯಾವ ರೀತಿ ರಕ್ಷಣೆ ಮಾಡಿಕೊಳ್ಳಬೇಕು, ಅತ್ಯಾಚಾರ ಅಥವಾ ತಮ್ಮ ವಿರುದ್ಧದ ದೌರ್ಜನ್ಯಗಳ ವಿರುದ್ಧ ಯಾವ ರೀತಿಯಲ್ಲಿ ರಕ್ಷಣೆಯ ಪಡೆಯಬೇಕು ಎನ್ನುವ ಬಗ್ಗೆ ತಿಳಿವಳಿಕೆ ಮೂಡಿಸುತ್ತೇನೆ ಎಂದು ಕಿರಣ್ ಹೇಳಿದರು.

ಪ್ರತಿ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡುತ್ತೇನೆ. ಸಮಯ ಮತ್ತು ಅವಕಾಶ ಸಿಕ್ಕರೆ ಅಲ್ಲಿನ ‌ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಜಿಲ್ಲಾಧಿಕಾರಿ ಅವರ ಜತೆ ಮಾಹಿತಿ ಹಂಚಿಕೊಳ್ಳುವೆ. ಅವರಿಂದ ಸಹಕಾರ, ಸಲಹೆಗಳನ್ನು ಪಡೆಯುವೆ ಎಂದು ಹೇಳಿದರು.

ಒಳ್ಳೆಯ ಕೆಲಸಕ್ಕೆ ಕೈಜೋಡಿಸೋಣ

ಕಿರಣ್ ಅವರು ನಡೆಸುತ್ತಿರುವ ಈ ಜಾಥಾ ಪ್ರಶಂಸೆಗೆ ಅರ್ಹವಾದುದು. ಗ್ರೀನ್ ಥಾಟ್ಸ್ ಸಂಸ್ಥೆ ಸದಸ್ಯರು ಅವರಿಗೆ ಬೆಂಬಲ ಸೂಚಿಸಿದ್ದೇವೆ. ಜಾಥಾ ಆಯಾ ಜಿಲ್ಲೆಗಳಿಗೆ ಬಂದಾಗ ಬೆಂಬಲಿಸಬೇಕು ಎಂದು ಮನವಿ ಮಾಡುತ್ತೇನೆ. ಅತ್ಯಾಚಾರದ ವಿರುದ್ಧದ ಅವರು ನಡೆಸುತ್ತಿರುವ ಈ ಜಾಥಾ ಸಣ್ಣಮಟ್ಟದಲ್ಲಿ ಆದರೂ ಬದಲಾವಣೆಗೆ ಕಾರಣವಾಗಲಿ ಎಂದು ಆಶಿಸುತ್ತೇವೆ ಎಂದು ಗ್ರೀನ್ ಥಾಟ್ಸ್ ಸಂಸ್ಥೆಯ ಚೊಕ್ಕಳ್ಳಿ ಕಲ್ಯಾಣ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT