ಸೋಮವಾರ, ಮಾರ್ಚ್ 27, 2023
30 °C

ಚಿಂತಾಮಣಿ: ಚಿಂತಾಮಣಿ ವಿಧಾನಸಭಾ ಕಣದಲ್ಲಿ ಬಿಜೆಪಿಗೆ ಇಲ್ಲ ಉತ್ತಮ ಬಲ

ಎಂ.ರಾಮಕೃಷ್ಣಪ್ಪ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಎನಿಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮತ್ತೊಮ್ಮೆ ಹಣಾಹಣಿ ನಡೆಯುವ ಲಕ್ಷಣಗಳು ಸ್ಪಷ್ಟವಾಗಿವೆ.  ಜೆಡಿಎಸ್ ನ ಹಾಲಿ ಶಾಸಕ ಎಂ.ಕೃಷ್ಣಾರೆಡ್ಡಿ ಮತ್ತು ಕಾಂಗ್ರೆಸ್ ನ ಮಾಜಿ ಶಾಸಕ ಡಾ.ಎಂ.ಸಿ. ಸುಧಾಕರ್ ರಾಜಕೀಯ ಕಾಳಗಕ್ಕೆ ಸಿದ್ಧತೆ ನಡೆಸಿದ್ದಾರೆ.

ಕ್ಷೇತ್ರದ ಇತಿಹಾಸವನ್ನು ಮೆಲುಕು ಹಾಕಿದರೆ ಹಿಂದಿನಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಇಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆದಿದೆ. ಪಕ್ಷಕ್ಕಿಂತ ವ್ಯಕ್ತಿಗತ ಹೋರಾಟ ಪ್ರಾಬಲ್ಯ ಪಡೆದಿದೆ. ಎಂ.ಸಿ.ಆಂಜನೇಯರೆಡ್ಡಿ ಮತ್ತು ಟಿ.ಕೆ.ಗಂಗಿರೆಡ್ಡಿ ಇಲ್ಲಿ ಪರಸ್ಪರ ವ್ಯಕ್ತಿಗತ ಪ್ರತಿಷ್ಠೆಯ ರಾಜಕಾರಣಕ್ಕೆ ಮುನ್ನುಡಿ ಬರೆದರು. ನಂತರ ಆಂಜನೇಯ ರೆಡ್ಡಿ ಅವರ ಮಗ ಚೌಡರೆಡ್ಡಿ ಮತ್ತು ಗಂಗಿರೆಡ್ಡಿ ಅವರ ಸಂಬಂಧಿ ಕೆ.ಎಂ. ಕೃಷ್ಣಾರೆಡ್ಡಿ ನಡುವೆ ಹೋರಾಟ ನಡೆಯಿತು. ನಂತರ ಚೌಡರೆಡ್ಡಿ ರಾಜಕೀಯ ಸನ್ಯಾಸ ಸ್ವೀಕರಿಸಿ ಮಗ ಡಾ.ಎಂ.ಸಿ. ಸುಧಾಕರ್‌ಗೆ ಪಟ್ಟ ಕಟ್ಟಿದರು. ಕೆ.ಎಂ.ಕೃಷ್ಣಾರೆಡ್ಡಿ ನಿಧನರಾದರು. 

2013ರಲ್ಲಿ ಸಮಾಜಸೇವೆಯ ಹೆಸರಿನಲ್ಲಿ ಬೆಂಗಳೂರಿನಿಂದ ಬಂದ ಎಂ.ಕೃಷ್ಣಾರೆಡ್ಡಿ ಗೆಲುವು ಸಾಧಿಸುವ ಮೂಲದ ಕ್ಷೇತ್ರದ ಇತಿಹಾಸ ಬದಲಾಯಿಸಿದರು. ಎಂ.ಕೃಷ್ಣಾರೆಡ್ಡಿ 2018ರ ಚುನಾವಣೆಯಲ್ಲಿ ಮತಗಳ ಅಂತರವನ್ನು ಮತ್ತಷ್ಟು ಹೆಚ್ಚಿಸಿಕೊಂಡರು.

ಡಾ.ಎಂ.ಸಿ. ಸುಧಾಕರ್ ಕಾಂಗ್ರೆಸ್‌ನಿಂದ ಹೊರಬಂದು ಪಕ್ಷೇತರರಾಗಿ ಸ್ಪರ್ಧಿಸಿ ಎರಡರು ಬಾರಿ ಸೋಲುಂಡರು. ಈಗ ಎಂ.ಕೃಷ್ಣಾರೆಡ್ಡಿ ಹ್ಯಾಟ್ರಿಕ್ ಸಾಧನೆಗೆ ಸಜ್ಜಾಗಿದ್ದರೆ ಡಾ.ಎಂ.ಸಿ.ಸುಧಾಕರ್ ಮರಳಿ ಕಾಂಗ್ರೆಸ್ ಗೂಡಿಗೆ ಸೇರಿಕೊಂಡು ಸೋಲಿನ ಸೇಡು ತೀರಿಸಿಕೊಳ್ಳಲು ತವಕಿಸುತ್ತಿದ್ದಾರೆ.

ಒಕ್ಕಲಿಗ ಸಮುದಾಯದ ಹಿಡಿತದಲ್ಲಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಾಮಾನ್ಯವಾಗಿ ಒಕ್ಕಲಿಗರನ್ನೇ ಕಣಕ್ಕಿಳಿಸುತ್ತವೆ. ಮುಸ್ಲಿಂ, ಪರಿಶಿಷ್ಟಜಾತಿ, ಪಂಗಡ, ಹಿಂದುಳಿದ ವರ್ಗಗಳ ಮತದಾರರು ಸೋಲು-ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಅಭ್ಯರ್ಥಿಗಳು ಘೋಷಣೆ ಆಗಿದ್ದು ಹೋರಾಟಕ್ಕೆ ಅಣಿ ಆಗುತ್ತಿದ್ದಾರೆ. ಬಿಜೆಪಿ ಇನ್ನೂ ಅಭ್ಯರ್ಥಿಯ ಘೋಷಣೆಯಾಗಿಲ್ಲ. ಕ್ಷೇತ್ರದಲ್ಲಿ ಬಿಜೆಪಿ ಪಾತ್ರ ಗೌಣ. ಕಳೆದ ಮೂರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ ಗಳಿಕೆ ಇಳಿಮುಖವಾಗುತ್ತಿದೆ. 2008 ರಲ್ಲಿ ಶೇ 6.36, 2013 ರಲ್ಲಿ ಶೇ 1.21, 2018ರಲ್ಲಿ ಶೇ 1.08 ಮತಗಳಿಕೆಯಷ್ಟೇ ಬಿಜೆಪಿ ಸಾಧನೆ. ಈ ಕಾರಣದಿಂದ ಇಲ್ಲಿ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕೆ ಇಲ್ಲ.

ಸಚಿವ ಡಾ.ಕೆ.ಸುಧಾಕರ್ ಬಾಮೈದ ಕೋನಪ್ಪಲ್ಲಿಯ ಸತೀಶ್ ರೆಡ್ಡಿ, ತಾಲ್ಲೂಕು ಮೂಲದ ಬೆಂಗಳೂರಿನ ಉದ್ಯಮಿ ಎಂ.ಆರ್.ಬಾಬು, ಸ್ಥಳೀಯರಾದ ಅರುಣಬಾಬು, ಕೆ.ಎಂ.ಕೆ ಟ್ರಸ್ಟ್‌ನ ಜಿ.ಎನ್. ವೇಣುಗೋಪಾಲ್ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಈ ಬಾರಿ ಹೆಚ್ಚಿನ ಆಸಕ್ತಿ ವಹಿಸಿರುವುದರಿಂದ ಬಿಜೆಪಿ ಬಗ್ಗೆಯೂ ಕುತೂಹಲವಿದೆ.

ಕ್ಷೇತ್ರದ ರಾಜಕೀಯ ಇತಿಹಾಸ ಅವಲೋಕಿಸಿದರೆ ಇಲ್ಲಿ ಪಕ್ಷಗಳಿಗೆ ಪ್ರಾಮುಖ್ಯ ಗೌಣ. ರಹಸ್ಯ ಒಪ್ಪಂದಗಳಿಂದ ಎಲ್ಲ ಪಕ್ಷಗಳು ಒಂದಾಗಿ ಎಂ.ಸಿ.ಆಂಜನೇಯರೆಡ್ಡಿ ಕುಟುಂಬದ ವಿರುದ್ಧ ಹೋರಾಡುವುದು ರೂಢಿಯಾಗಿದೆ. 2013 ಮತ್ತು 2018ರಲ್ಲಿ ಡಾ.ಎಂ.ಸಿ.ಸುಧಾಕರ್ ಪಕ್ಷೇತರರಾಗಿ ಸ್ಪರ್ಧಿಸಿದ್ದಾಗ ಕಾಂಗ್ರೆಸ್ ಅಭ್ಯರ್ಥಿ ಠೇವಣಿ ಕಳೆದುಕೊಂಡಿದ್ದರು. 

ಹೀಗೆ ವ್ಯಕ್ತಿಗತ ರಾಜಕಾರಣದ ಕಣವಾಗಿರುವ ಚಿಂತಾಮಣಿ ಕ್ಷೇತ್ರದಲ್ಲಿ ಡಾ.ಎಂ.ಸಿ.ಸುಧಾಕರ್ ಸೋಲಿಸಲು ಸಚಿವ ಡಾ.ಕೆ.ಸುಧಾಕರ್ ಸಹ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಈ ಎಲ್ಲ ಕಾರಣದಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೇ ಚಿಂತಾಮಣಿ ಕ್ಷೇತ್ರ ರಾಜಕೀಯವಾಗಿ ಬಿಸಿಯಾದ ಕ್ಷೇತ್ರ ಎನಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು