ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ವಲಯಕ್ಕೆ ಆದ್ಯತೆ ನೀಡದ ಕಾಂಗ್ರೆಸ್: ಈರಣ್ಣ ಕಡಾಡಿ ಟೀಕೆ

ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿಣಿಯಲ್ಲಿ ಈರಣ್ಣ ಕಡಾಡಿ ಟೀಕೆ
Last Updated 11 ಜನವರಿ 2022, 15:23 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಕೃಷಿ ವಲಯಕ್ಕೆ ಆದ್ಯತೆಯನ್ನು ನೀಡಲಿಲ್ಲ. ಆದರೆ ನರೇಂದ್ರ ಮೋದಿ ಅವರ ಆಡಳಿತದಲ್ಲಿ ರೈತರ ಅಭಿವೃದ್ಧಿಗೆ ಮತ್ತು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಬಿಜೆಪಿ ರೈತ ಮೋರ್ಚಾ ಹಮ್ಮಿಕೊಂಡಿದ್ದ ರಾಜ್ಯ ಕಾರ್ಯಕಾರಿಣಿಯಲ್ಲಿ ಅವರು ಮಾತನಾಡಿದರು.

₹ 1.34 ಲಕ್ಷ ಕೋಟಿಯನ್ನು ಕೃಷಿ ವಲಯಕ್ಕೆ ಮೀಸಲಿಡಲಾಗಿದೆ. ಡಿಎಪಿ, ಯೂರಿಯಾ ಸೇರಿದಂತೆ ರಸಗೊಬ್ಬರಕ್ಕೆ ಶೇ 50ರಷ್ಟು ರಿಯಾಯಿತಿ ನೀಡಿದರು. ಕಿಸಾನ್ ಮಾನ್ ಧನ‌ ಯೋಜನೆ ಜಾರಿಗೊಳಿಸಿದ್ದಾರೆ. ರೈತರು ಕೃಷಿ ಮುಂದುವರಿಸಬೇಕಾದರೆ ಮಣ್ಣು, ನೀರಿನ ಆರೋಗ್ಯ ಚೆನ್ನಾಗಿರಬೇಕು. ಮಣ್ಣಿನ ಆರೋಗ್ಯ ಪರೀಕ್ಷೆ ಯೋಜನೆ ಜಾರಿಯಲ್ಲಿ ಎಂದು ಹೇಳಿದರು.

ರೈತರ ಆದಾಯ ದ್ವಿಗುಣ ಮಾಡಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಚಿಂತನೆ. ಆ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದ್ದಾರೆ.‌ ರಾಜ್ಯಕ್ಕೆ ₹ 75 ಸಾವಿರ ಕೋಟಿ ಕಿಸಾನ್ ಸಮ್ಮಾನ್ ಯೋಜನೆಯಡಿ ಬಿಡುಗಡೆ ಆಗಿದೆ. ‌ಕೃಷಿ ವೆಚ್ಚ ತಗ್ಗಿಸಬೇಕು. ಬೆಳೆ ಪ್ರಮಾಣ ಹೆಚ್ಚಿಸಬೇಕು. ಸ್ಪರ್ಧಾತ್ಮಕ ಬೆಲೆ ನೀಡಬೇಕು ಎಂದು ಪ್ರಯತ್ನಿಸುತ್ತಿದ್ದಾರೆ. ದೇಶದ ವಿವಿಧ ಭಾಗಗಳಿಗೆ ರೈತರು ತಮ್ಮ ಉತ್ಪನ್ನಗಳನ್ನು ಕೊಂಡೊಯ್ಯಲು ಕಿಸಾನ್ ರೈಲಿಗೆ ಚಾಲನೆ ನೀಡಿದ್ದಾರೆ ಎಂದು ಹೇಳಿದರು.

ರಾಜ್ಯ ಸರ್ಕಾರಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ರೈತರ ಬದುಕಿನಲ್ಲಿ ಅಮೂಲಾಗ್ರ ಬದಲಾವಣೆ ಮಾಡಲು ಪ್ರಯತ್ನ ನಡೆಯುತ್ತಿದೆ.‌ ಕೃಷಿ ಜತೆ ಉಪಕಸುಬುಗಳ ಮೂಲಕ ರೈತರ ಆರ್ಥಿಕ ಸ್ಥಿತಿ ಉತ್ತಮಗೊಳ್ಳಬೇಕು ಎನ್ನುವ ದಿಕ್ಕಿನಲ್ಲಿ ಪಕ್ಷವು ಹೆಜ್ಜೆ ಇಟ್ಟಿದೆ ಎಂದು ಹೇಳಿದರು.

ಪಕ್ಷ ಸಂಘಟನೆ ಕೇವಲ ಬೆಂಗಳೂರು ಕೇಂದ್ರಿತವಲ್ಲ. ಎಲ್ಲ ಜಿಲ್ಲೆಗಳಲ್ಲಿ ಕಾರ್ಯಕಾರಿಣಿ ಮಾಡುತ್ತೇವೆ. ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಸವಾಲು ಎದುರಿಸಿ ಗೆದ್ದಿರುವವರು. ಕಡಿಮೆ ನೀರಿನಲ್ಲಿ ಹೆಚ್ಚು ಉತ್ಪಾದನೆ ತೆಗೆಯುತ್ತಿದ್ದಾರೆ. ಇದು‌ ಮೆಚ್ಚುವ ಕೆಲಸ ಎಂದು ಹೇಳಿದರು.

ಐದು ವರ್ಷಕ್ಕೆ ಒಂದು ಕುಟುಂಬಕ್ಕೆ ಕಿಸಾನ್ ಸಮ್ಮಾನ್ ಯೋಜನೆಯಡಿ ₹ 50 ಸಾವಿರ ದೊರೆಯುತ್ತದೆ. ಇಷ್ಟು ಹಣವನ್ನು ಕಾಂಗ್ರೆಸ್ ಎಂದಾದರೂ ರೈತರಿಗೆ ನೀಡಿದೆಯೇ ಎಂದು ಪ್ರಶ್ನಿಸಿದರು.

ರಾಮನಗರ ಜಿಲ್ಲೆಯಲ್ಲಿ ನಮ್ಮ ಒಬ್ಬ ಶಾಸಕರು ಇಲ್ಲ. ಹೀಗಿದ್ದರೂ ಆ ಜಿಲ್ಲೆ‌ಯ ರೈತಗೆ ₹ 180 ಕೋಟಿ ನೀಡಲಾಗಿದೆ. ಎಲ್ಲ ಜಿಲ್ಲೆಗಳನ್ನೂ ಬಿಜೆಪಿ ಸಮಾನವಾಗಿ ಕಾಣುತ್ತಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ಮೇಕೆದಾಟು ಹೆಸರಿನಲ್ಲಿ ಕಾಂಗ್ರೆಸ್ ನಡೆಸುತ್ತಿರುವುದು ಪ್ರಾಯಶ್ಚಿತ, ಪಾಪ ವಿಮೋಚನೆಯ ಪಾದಯಾತ್ರೆ ಎಂದು ಟೀಕಿಸಿದರು.

ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮನೆ ಎದುರು ಕಾಂಗ್ರೆಸ್ ಪ್ರತಿಭಟನೆ ಮಾಡಬೇಕಾಗಿತ್ತು. ಆದರೆ ಅಲ್ಲಿ ಸ್ಟಾಲಿನ್‌ಗೆ ಕಾಂಗ್ರೆಸ್ ಬೆಂಬಲ ನೀಡಿದೆ. ಇಲ್ಲಿ ಪ್ರತಿಭಟನೆ ಮಾಡುತ್ತಿದೆ. ಇದು ಕಾಂಗ್ರೆಸ್‌ನ ದ್ವಿಮುಖ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.

ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಹಾಗೂರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಮಾತನಾಡಿದರು. ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ರಾಜಶೇಖರ್, ರಾಜ್ಯ ಉಪಾಧ್ಯಕ್ಷ ಲೋಕೇಶ್ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT