ಸೋಮವಾರ, ಜನವರಿ 27, 2020
26 °C

ಡಿ.28 ರಿಂದ ಬ್ರಾಹ್ಮಣ ಮಹಾ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ‘ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಡಿ. 28, 29 ರಂದು ಕುಂದಾಪುರ ತಾಲ್ಲೂಕಿನ ಕೋಟೇಶ್ವರದಲ್ಲಿ 10ನೇ ರಾಜ್ಯ ಮಟ್ಟದ ಬ್ರಾಹ್ಮಣ ಮಹಾ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ’ ಎಂದು ಮಹಾಸಭಾ ಸಂಘಟನಾ ಕಾರ್ಯದರ್ಶಿ ಕೆ.ಪಿ.ಮೋಹನ್ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಸಮ್ಮೇಳನವನ್ನು ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಪೀಠದ ವಿಧುಶೇಖರ ಭಾರತೀ ಸ್ವಾಮೀಜಿ ಚಾಲನೆ ನೀಡಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಮೊದಲ ದಿನ ಬ್ರಾಹಣ್ಯ ಆಚರಣೆ, ರಕ್ಷಣೆ, ಸಂಘಟನೆ, ಸವಾಲುಗಳು, ಮಾಧ್ಯಮ, ಸಂಘ-ಸಂಸ್ಥೆಗಳ ಪಾತ್ರ ಕುರಿತು ಎರಡು ವಿಚಾರಗೋಷ್ಠಿಗಳು ನಡೆಯಲಿವೆ. ಸಂಜೆ ಯುವ ಜನರಿಗೆ ಸಂದೇಶ, ಚಿಂತನ-ಮಂಥನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದು ತಿಳಿಸಿದರು.

‘ಡಿ.29 ರಂದು ಬೆಳಿಗ್ಗೆ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಶೋಭಾಯಾತ್ರೆ ನಡೆಯಲಿದೆ. ಮಂತ್ರಾಲಯದ ಸುಭುದೇಂದ್ರತೀರ್ಥ ಸ್ವಾಮೀಜಿ, ರಾಘವೇಶ್ವರ ಭಾರತೀ ಸ್ವಾಮೀಜಿ, ಯತಿರಾಜ ಮಠದ ಯದುಗಿರಿ ಯತಿರಾಜ ನಾರಾಯಣ ಜೀಯರ್, ಉಡುಪಿಯ ಅಷ್ಟ ಮಠಗಳ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ನಂತರ ವಿಚಾರ ಸಂಕಿರಣ ಹಾಗೂ ಸಾಧಕರಿಗೆ ‘ವಿಪ್ರ ಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತದೆ’ ಎಂದರು.

‘ಸಮ್ಮೇಳನದಲ್ಲಿ ಬ್ರಾಹ್ಮಣರ ಅಭಿವೃದ್ಧಿ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಬಗ್ಗೆ ಚರ್ಚಿಸಿಸಲಾಗುವುದು. ಕೇಂದ್ರ ಸರ್ಕಾರ ಜಾರಿ ಮಾಡಿರುವ ಶೇ10 ರ ಮೀಸಲಾತಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಬೇಕು. ಸಮುದಾಯದ ಹೆಸರಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ನೀಡುವುದು ಸೇರಿದಂತೆ ಹಲವು ಹಕ್ಕೊತ್ತಾಯಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗುವುದು’ ಎಂದು ಹೇಳಿದರು.

ಬೆಂಗಳೂರು ನಗರ ಮಹಾಸಭಾ ಸಂಘಟನಾ ಕಾರ್ಯದರ್ಶಿ ಜಾಶಿ ವಿಶ್ವನಾಥ್, ಟಿ.ಎಸ್.ವಿಜಯಕುಮಾರ್, ಸಮ್ಮೇಳನ ನಿರ್ವಾಹಕ ಮಂಡಳಿ ಸಹಾಯಕ ಸಂಯೋಜಕಿ ಬಿ.ಶಶಿಕಲಾ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು