ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಚುರುಕಾದ ‘ಕಲ್ಲಂಗಡಿ’ ವ್ಯಾಪಾರ

ಉದರ ತಂಪಾಗಿಸುವ ಕಲ್ಲಂಗಡಿ | ಹೊರ ರಾಜ್ಯದಿಂದ ಹಣ್ಣು ಖರೀದಿಸುತ್ತಿರುವ ವ್ಯಾಪಾರಿಗಳು
Last Updated 19 ಫೆಬ್ರುವರಿ 2020, 20:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಶಿವರಾತ್ರಿಯ ಹೊಸ್ತಿಲಲ್ಲಿ ತಲೆ ಸುಡುವ ಬಿಸಿಲು ಹೆಚ್ಚುತ್ತಿರುವಾಗಲೇ ನಗರದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ದಾಹ ನೀಗಿಸಿ, ಉದರ ತಂಪಾಗಿಸುವ ಕಲ್ಲಂಗಡಿ ವ್ಯಾಪಾರ ದಿನೇ ದಿನೇ ಹೆಚ್ಚಾಗಲು ಆರಂಭಿಸಿದೆ.

ನಗರದ ಪ್ರಮುಖ ಬೀದಿಗಳಲ್ಲಿ ರಾಶಿ ರಾಶಿ ಕಲ್ಲಂಗಡಿ ಹಣ್ಣುಗಳು ದಾರಿಹೋಕರ ದಾಹ ತಣಿಸಲು ಕೈಬೀಸಿ ಕರೆಯುತ್ತಿವೆ. ನಗರದ ಬಿ.ಬಿ.ರಸ್ತೆ, ಬಜಾರ್‌ ರಸ್ತೆ, ಎಂ.ಜಿ ರಸ್ತೆ, ಶಿಡ್ಲಘಟ್ಟ ರಸ್ತೆ, ಬಾಗೇಪಲ್ಲಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನಡೆಯುತ್ತಿರುವ ಟನ್‌ಗಟ್ಟಲೇ ಕಲ್ಲಂಗಡಿ ಮಾರಾಟ ಕಡು ಬೆಸಿಗೆ ದೃಶ್ಯಗಳನ್ನು ನೆನಪಿಸುತ್ತಿವೆ.

ಸದ್ಯ ನಗರಕ್ಕೆ ಸ್ಥಳೀಯ ಕಲ್ಲಂಗಡಿಗಿಂತಲೂ ನೆರೆಯ ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ಆವಕವಾಗುತ್ತಿರುವ ಹಣ್ಣು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಸ್ಥಳೀಯ ನಾಲ್ಕಾರು ಕಲ್ಲಂಗಡಿ ವ್ಯಾಪಾರಿಗಳು ವಾರಕ್ಕೊಮ್ಮೆ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಪುಲಿವೆಂದಲು, ಮಲ್ಕರ್‌ ಚೆರವು ಹಾಗೂ ತಮಿಳುನಾಡಿನ ವಿವಿಧ ಭಾಗಗಳಲ್ಲಿರುವ ತೋಟಗಳಿಂದ ಟನ್‌ಗಟ್ಟಲೇ ಹಣ್ಣು ಖರೀದಿಸಿ ತಂದು ನಗರದಲ್ಲಿ ಹಂಚಿಕೊಂಡು ಮಾರಾಟ ಮಾಡುತ್ತಿದ್ದಾರೆ.

ತೋಟದಲ್ಲಿ ಪ್ರತಿ ಕೆ.ಜಿ ಹಣ್ಣಿಗೆ ₹10 ರಿಂದ ₹15ರ ವರೆಗೆ ಖರೀದಿಸುವ ವರ್ತಕರು ಗ್ರಾಹಕರಿಗೆ ಕೆ.ಜಿಗೆ ₹20 ರಿಂದ ₹25ರ ವರೆಗೆ ಮಾರಾಟ ಮಾಡುತ್ತಿದ್ದಾರೆ. ನಗರದಲ್ಲಿ ಸುಮಾರು ಒಂದು ತಿಂಗಳಿಂದ ಈಚೆಗೆ ಕಲ್ಲಂಗಡಿ ಹಣ್ಣಿನ ವ್ಯಾಪಾರ ಚುರುಕು ಪಡೆದುಕೊಂಡಿದ್ದು, ಸದ್ಯ ದಿನಕ್ಕೆ ಒಂದರಿಂದ ಎರಡು ಟನ್‌ಗೂ ಹೆಚ್ಚು ಕಲ್ಲಂಗಡಿ ಹಣ್ಣುಗಳು ಮಾರಾಟವಾಗುತ್ತಿವೆ. ಬೇಸಿಗೆಯಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಲಿದೆ.

‘ಸದ್ಯ ವಾಪ್ಯಾರ ಚೆನ್ನಾಗಿ ನಡೆಯುತ್ತಿದೆ. ನಿತ್ಯ ಸುಮಾರು 400 ಕೆ.ಜಿ ಕಲ್ಲಂಗಡಿ ಮಾರುತ್ತೇನೆ. ಸ್ಥಳೀಯವಾಗಿ ಕಲ್ಲಂಗಡಿ ಬೆಳೆಯುವವರು ಇಲ್ಲದ ಕಾರಣ ತಮಿಳುನಾಡಿನಿಂದ ಹಣ್ಣು ತರಿಸುತ್ತಿದ್ದೇವೆ. ಕೆ.ಜಿ ₹25 ರಂತೆ, ಪೀಸ್‌ ಒಂದಕ್ಕೆ ₹10 ರಂತೆ ಮಾರಾಟ ಮಾಡುತ್ತಿರುವೆ. ಮಾರ್ಚ್‌ ಹೊತ್ತಿಗೆ ವ್ಯಾಪಾರ ಇನ್ನೂ ಚೆನ್ನಾಗಿರುತ್ತದೆ. ಬಿಸಿಲು ಹೆಚ್ಚಿದಷ್ಟು ನಮ್ಮ ವ್ಯಾಪಾರ ಹೆಚ್ಚುತ್ತದೆ’ ಎಂದು ನಗರದ ಎಂ.ಜಿ.ರಸ್ತೆಯಲ್ಲಿ ಕಲ್ಲಂಗಡಿ ಮಾರುತ್ತಿದ್ದ ಜಿಲಾನ್ ತಿಳಿಸಿದರು.

‘ನಮ್ಮ ಬಳಿ 3 ಕೆ.ಜಿ ಯಿಂದ 10 ಕೆ.ಜಿ ತೂಗುವ ಹಣ್ಣುಗಳು ದೊರೆಯುತ್ತವೆ. ಹಣ್ಣನ್ನು ಹೋಳುಗಳನ್ನಾಗಿ ಮಾಡಿ ಒಂದಕ್ಕೆ ₹10ರಂತೆ ಮಾರುತ್ತೇವೆ. ಕೆ.ಜಿಗಟ್ಟಲೆ ತೆಗೆದುಕೊಂಡರೆ ಒಂದು ಕೆ.ಜಿ ₹ 20ರಂತೆ ಮಾರಾಟ ಮಾಡುತ್ತೇವೆ. ಈ ಬಾರಿ ವ್ಯಾಪಾರ ಹಿಂದಿನ ವರ್ಷಕ್ಕಿಂತ ಚೆನ್ನಾಗಿ ನಡೆಯುತ್ತಿದೆ. ದಿನಾಲೂ ಕನಿಷ್ಠ ₹1,000 ವ್ಯಾಪಾರಕ್ಕೆ ಮೋಸವಿಲ್ಲ. ದಿನೇ ದಿನೇ ಬಿಸಿಲು ಹೆಚ್ಚಾದಂತೆ ಮುಂದಿನ ದಿನಗಳಲ್ಲಿ ಕೊಳ್ಳುವವರ ಸಂಖ್ಯೆ ಕೂಡ ಹೆಚ್ಚಾಗಲಿದೆ’ ಎಂದು ಗಂಗಮ್ಮಗುಡಿ ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಹಮ್ಮದ್ ಅಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT