ಭಾನುವಾರ, ಸೆಪ್ಟೆಂಬರ್ 27, 2020
21 °C
ಸಮ್ಮಿಶ್ರ ಸರ್ಕಾರದ ಪತನದ ಬಳಿಕ ಬಿಜೆಪಿ ಜಿಲ್ಲಾ ಘಟಕದಲ್ಲಿ ಸಂಚಲನ, ಸುಧಾಕರ್ ಬಿಜೆಪಿ ಸೇರುವ ವದಂತಿಗೆ ಕೇಸರಿ ಪಾಳೆಯದ ನಾಯಕರ ತಳಮಳ

ಬಿಜೆಪಿ ಪಾಳೆಯದಲ್ಲಿ ಮರೆಯಾದ ಸಡಗರ!

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಸಮ್ಮಿಶ್ರ ಸರ್ಕಾರದ ಪತನದ ಬಳಿಕ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರ ಶತ ದಿನಗಳನ್ನು ಪೂರೈಸುವ ಸಂದರ್ಭದಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇದೇ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಆದರೆ, ಬಿಜೆಪಿ ಪಾಳೆಯದಲ್ಲಿ ತಮ್ಮ ನಾಯಕನ ಆಗಮನದ ಉತ್ಸಾಹ, ಸಡಗರ ಮಾತ್ರ ಸಹಜತೆಯಿಂದ ಕಾಣುತ್ತಿಲ್ಲ. ಇದು ಸ್ಥಳೀಯ ಬಿಜೆಪಿ ಪಾಳೆಯ ಮೊದಲಿನಂತಿಲ್ಲ ಎಂಬ ವಿಶ್ಲೇಷಣೆಗೆ ಎಡೆ ಮಾಡಿದೆ.

ಭಾನುವಾರ ಯಡಿಯೂರಪ್ಪ ಅವರು ಭಾಗವಹಿಸಲಿರುವ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಮತ್ತು ಭೋವಿ ಸಮುದಾಯದ ಸಮಾವೇಶಕ್ಕಾಗಿ ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಭರದ ಸಿದ್ಧತೆ ನಡೆದಿದೆ. ಸಮಾವೇಶದ ಹೊಣೆ ಹೊತ್ತಿರುವ ಹೊಳಲ್ಕೆರೆ ಕ್ಷೇತ್ರದ ಶಾಸಕ ಎಂ.ಚಂದ್ರಪ್ಪ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರ ತೆರದಿ ಓಡಾಡುತ್ತಿದ್ದಾರೆ. ಆದರೆ ಒಬ್ಬ ಸ್ಥಳೀಯ ಬಿಜೆಪಿ ನಾಯಕರು ಸೌಜನ್ಯಕ್ಕೂ ಮೈದಾನದತ್ತ ಸುಳಿದಿಲ್ಲ.

’ನಾಡದೊರೆ’ಯ ಸ್ವಾಗತ ಕೋರಲು ಅನೇಕ ಶಾಸಕರು, ಮುಖಂಡರು ಚಿಕ್ಕಬಳ್ಳಾಪುರದಿಂದ ದೇವನಹಳ್ಳಿವರೆಗೂ ರಸ್ತೆ, ಹೆದ್ದಾರಿಯುದ್ದಕ್ಕೂ ಅಳವಡಿಸಿರುವ ಸ್ವಾಗತ ಕೋರುವ ಫ್ಲೆಕ್ಸ್, ಬ್ಯಾನರ್‌ಗಳು ರಾರಾಜಿಸುತ್ತಿವೆ. ಆದರೆ, ಸ್ಥಳೀಯ ಕೇಸರಿ ಪಾಳೆಯದ ಒಬ್ಬರೂ ತಮ್ಮ ನಾಯಕನ ಆಗಮನಕ್ಕೆ ಸ್ವಾಗತ ಕೋರಲು ಮುಂದಾದ ಕುರುಹು ಕಾಣುತ್ತಿಲ್ಲ.

ಸಮ್ಮಿಶ್ರ ಸರ್ಕಾರ ಪತನಗೊಳ್ಳುವವರೆಗೂ ಬಿಜೆಪಿ ಜಿಲ್ಲಾ ಘಟಕದಲ್ಲಿ ಇದ್ದ ಸಡಗರ, ಸಂಭ್ರಮ ತಮ್ಮದೇ ಸರ್ಕಾರ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ಹಿಡಿದಾಗ ನೂರ್ಮಡಿಗೊಳ್ಳಬೇಕಿತ್ತು. ಆದರೆ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರಾಗಿದ್ದ ಡಾ.ಕೆ.ಸುಧಾಕರ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಬಗ್ಗೆ ಬಹಿರಂಗವಾಗಿ ಮೃದು ಧೋರಣೆ ವ್ಯಕ್ತಪಡಿಸುತ್ತಿದ್ದಂತೆ ಸ್ಥಳೀಯ ಬಿಜೆಪಿ ಪಾಳೆಯದಲ್ಲಿ ಹಿಂದೆ ಇದ್ದ ಸಂಭ್ರಮ ಕ್ರಮೇಣವಾಗಿ ಕಡಿಮೆಗೊಳ್ಳುತ್ತಿದೆ ಎನ್ನುತ್ತವೆ ಆ ಪಕ್ಷದ ಮೂಲಗಳು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸುಧಾಕರ್ ಅವರನ್ನು ವಾಚಾಮಗೋಚರವಾಗಿ ತೆಗಳಿ, ಟೀಕಿಸಿ, ಧಿಕ್ಕಾರ ಕೂಗಿದ ಅನೇಕ ಬಿಜೆಪಿ ಮುಖಂಡರು ಇವತ್ತು ಅದೇ ಸುಧಾಕರ್ ಅವರಿಗೆ ಜೈಕಾರ ಕೂಗುತ್ತ ಬೆಂಬಲ ವ್ಯಕ್ತಪಡಿಸುತ್ತಿರುವುದು ಬದಲಾದ ರಾಜಕೀಯ ಸನ್ನಿವೇಶಕ್ಕೆ ಸಾಕ್ಷಿಯಂತೆ ಗೋಚರಿಸುತ್ತಿದೆ.

ಆದರೆ, ಕಳೆದ ಚುನಾವಣೆಯಲ್ಲಿ ಸುಧಾಕರ್ ಅವರ ವಿರುದ್ಧ ಸ್ಪರ್ಧಿಸಿ, ಸೋಲು ಅನುಭವಿಸಿದ್ದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್ ಅವರು ಮಾತ್ರ ಈವರೆಗೆ ಸುಧಾಕರ್ ಅವರಿಂದ ಮೊದಲಿನ ಅಂತರವನ್ನೇ ಕಾಯ್ದುಕೊಂಡು ಬಂದಿದ್ದಾರೆ. ಹೀಗಾಗಿ, ಸ್ಥಳೀಯ ಕಮಲ ಪಾಳೆಯದ ಸಾರಥಿಯ ಮುನಿಸಿನಿಂದಾಗಿ ಬಿಜೆಪಿಯಲ್ಲಿ ಈ ಹಿಂದಿನ ಸಂಭ್ರಮ ದಿನೇ ದಿನೇ ಕಳೆಗುಂದುತ್ತಿದೆ ಎನ್ನುತ್ತಾರೆ ಆ ಪಕ್ಷದ ಕೆಲ ಮುಖಂಡರು.

ರಾಜ್ಯದಲ್ಲಿ ಶತಾಯಗತಾಯ ಅಧಿಕಾರ ಹಿಡಿಯಬೇಕು ಎಂಬ ಏಕೈಕ ಕಾರಣಕ್ಕೆ ಬಿಜೆಪಿ ಹೈಕಮಾಂಡ್‌ ತೆಗೆದುಕೊಂಡ ನಿರ್ಧಾರ ಕ್ಷೇತ್ರದಲ್ಲಿ ಕೆಲ ಬಿಜೆಪಿ ನಾಯಕರಿಗೆ ನುಂಗಲಾರದ ಬಿಸಿತುಪ್ಪದಂತಾಗಿದೆ. ಹೊಟ್ಟೆಯಲ್ಲಿ ಆಕ್ರೋಶವಿದ್ದರೂ ಬಾಯಿ ಬಿಚ್ಚಿ ಅದನ್ನು ಹೊರಹಾಕಲಾಗದ ಅಸಹಾಯಕತೆ ಅವರ ಸಂತಸ ಕಸಿದು, ಮೌನಕ್ಕೆ ಜಾರಿಸಿದೆ ಎಂದು ಸ್ಥಳೀಯ ರಾಜಕೀಯ ಬಲ್ಲವರು ಹೇಳುತ್ತಾರೆ.

ಇನ್ನೊಂದೆಡೆ ಸುಧಾಕರ್ ಅವರು ಕಾಂಗ್ರೆಸ್‌ ತೊರೆಯುತ್ತಿದ್ದಂತೆ, ಈ ಹಿಂದೆ ಅವರ ನಡೆಗೆ ಬೇಸತ್ತು ಕಾಂಗ್ರೆಸ್‌ನಿಂದ ದೂರವಾಗಿದ್ದ ಅನೇಕ ನಾಯಕರು ಖುಷಿಯಿಂದಲೇ ‘ಕೈ’ ಪಾಳೆಯದತ್ತ ದೌಡಾಯಿಸಿ ಸಂಘಟಿತರಾಗಿ ಮೊದಲಿಗಿಂತಲೂ ಹೆಚ್ಚು ಸಂತಸದಿಂದ ಓಡಾಡುತ್ತಿದ್ದಾರೆ. ಆದರೆ ಇನ್ನೊಂದೆಡೆ, ಕೆಲ ತಿಂಗಳಿಂದ ಸುಧಾಕರ್‌ ಅವರು ಬಿಜೆಪಿ ಸೇರುತ್ತಾರೆ ಎಂಬ ವದಂತಿ ಹೆಚ್ಚಿದ ಬಳಿಕ ಬಿಜೆಪಿ ಪಾಳೆಯ ಮೊದಲಿನಂತೆ ಉಳಿದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಈವರೆಗೆ ಸುಧಾಕರ್ ಅವರ ವಿರುದ್ಧ ಪ್ರತಿಭಟಿಸುತ್ತ ಬಂದ ಬಿಜೆಪಿಯ ನಾಯಕರ ಪೈಕಿ ಕೆಲವರು ಇತ್ತೀಚೆಗೆ ನಗರದಲ್ಲಿ ಸುಧಾಕರ್ ಅವರ ಬೆಂಬಲಿಗರು ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿ ನಿಂತು ಜೈಕಾರ ಕೂಗಿದ್ದು, ಜಿಲ್ಲಾ ಘಟಕದ ಅಧ್ಯಕ್ಷರಿಗೆ ಮತ್ತಷ್ಟು ತಳಮಳ ಉಂಟು ಮಾಡಿದ್ದು, ಆದರೆ ವರಿಷ್ಠರ ಭಯಕ್ಕೆ ತುಟಿ ಬಿಚ್ಚಲಾರದ ಸಂದಿಗ್ಧತೆ ಕಾರಣಕ್ಕೆ ಮೌನವಾಗಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಡಾ.ಜಿ.ವಿ.ಮಂಜುನಾಥ್ ಅವರನ್ನು ಕೆಲ ಬಾರಿ ಸಂಪರ್ಕಿಸಲಾಯಿತು. ಆದರೆ ಅವರು, ‘ಬಳಿಕ ಮಾತನಾಡುವೆ’ ಎಂದು ಕರೆ ಕಡಿತಗೊಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು