ಶನಿವಾರ, ಫೆಬ್ರವರಿ 27, 2021
20 °C

ಜಾತಿ ನಿಂದನೆ: ಜೀವಾವಧಿ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂತಾಮಣಿ: ಪರಿಶಿಷ್ಟ ಜಾತಿಯ ವ್ಯಕ್ತಿಯನ್ನು ಜಾತಿಯ ಹೆಸರಿನಿಂದ ನಿಂದಿಸಿ, ಹಲ್ಲೆ ನಡೆಸಿದ್ದ ಆರೋಪಿಗೆ ಚಿಕ್ಕಬಳ್ಳಾಪುರ 1 ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ನಾಯಿಂದ್ರಹಳ್ಳಿ ಗ್ರಾಮದ ಮುನಿರಾಜು ಮತ್ತು ರತ್ನಪ್ಪ ಎಂಬುವರು ತಮ್ಮ ಜಾತಿ ಹಿಡಿದು ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು ಅದೇ ಗ್ರಾಮದ ಲಕ್ಷ್ಮೀನಾರಾಯಣ 2016ರಲ್ಲಿ  ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ರಾತ್ರಿ ಗ್ರಾಮದಲ್ಲಿ ದೇವರ ಉತ್ಸವದ ಸಮಯದಲ್ಲಿ ಘಟನೆ ನಡೆದಿತ್ತು. ಅಂದಿನ ಡಿವೈಎಸ್ಪಿ ಕೃಷ್ಣಮೂರ್ತಿ ಮೊಕದ್ದಮೆ ದಾಖಲಿಸಿದ್ದರು.

ಆರೋಪಿಗಳು ಗ್ರಾಮದಲ್ಲಿ ಚಿಲ್ಲರೆ ಅಂಗಡಿ ನಡೆಸುತ್ತಿದ್ದರು. ರಾತ್ರಿ ಬಾಗಿಲು ಮುಚ್ಚಿದ್ದ ಸಮಯದಲ್ಲಿ ದೂರುದಾರ ಲಕ್ಷ್ಮೀನಾರಾಯಣ ಅಂಗಡಿ ತೆಗೆದು ಬೀಡಿ, ಬೆಂಕಿ ಪೊಟ್ಟಣ ನೀಡುವಂತೆ ಒತ್ತಾಯಿಸಿದ್ದನು. ಬಾಗಿಲು ತೆಗೆಯುವುದಿಲ್ಲ ಎಂದು ಗಲಾಟೆಯಾಗಿ ಆರೋಪಿಗಳು ಲಕ್ಷ್ಮೀನಾರಾಯಣ ಅವರನ್ನು ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಲಕ್ಷ್ಮೀನಾರಾಯಣ ಚಿಂತಾಮಣಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಚಿಕ್ಕಬಳ್ಳಾಪುರದ 1 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಮೂರ್ತಿ ನಟರಾಜ್, ಆರೋಪಿ ಮುನಿರಾಜು ಮೇಲಿನ ಆರೋಪ ದೃಢಪಟ್ಟಿರುವುದರಿಂದ 14 ವರ್ಷ ಜೀವಾವದಿ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ಕಟ್ಟಲು ವಿಫಲವಾದರೆ ಮತ್ತೆ 6 ಜೈಲು ಶಿಕ್ಷೆ. ಜತೆಗೆ ಐಪಿಸಿ ಸೆಕ್ಷನ್ 504 ಪ್ರಕಾರ 5 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ದಂಡ ನೀಡಲು ವಿಫಲವಾದರೆ ಮತ್ತೆ 3 ತಿಂಗಳು ಜೈಲುವಾಸದ ಶಿಕ್ಷೆಯನ್ನು ಫೆ.20ರಂದು ಪ್ರಕಟಿಸಿದ್ದಾರೆ. ರತ್ನಪ್ಪ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ವಿರುದ್ಧದ ಪ್ರಕರಣವನ್ನು ಕೈಬಿಡಲಾಗಿದೆ. ಅರುಣಾಕ್ಷಿ ಸರ್ಕಾರಿ ವಿಶೇಷ ಅಭಿಯೋಜಕಿಯಾಗಿ ವಾದ ಮಂಡಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.