ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಗ್ಯಾರಂಟಿ ನೆಪದಲ್ಲಿ ಜನರಿಗೆ ಮೋಸ: ಎಂ.ಕೃಷ್ಣಾರೆಡ್ಡಿ ವಾಗ್ದಾಳಿ

Published 23 ಏಪ್ರಿಲ್ 2024, 15:59 IST
Last Updated 23 ಏಪ್ರಿಲ್ 2024, 15:59 IST
ಅಕ್ಷರ ಗಾತ್ರ

ಚಿಂತಾಮಣಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ನೆಪದಲ್ಲಿ ವಿವಿಧ ಶುಲ್ಕ ಹೆಚ್ಚಿಸುವ ಮೂಲಕ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಮಾಜಿ ಶಾಸಕ ಎಂ.ಕೃಷ್ಣಾರೆಡ್ಡಿ ಆರೋಪಿಸಿದರು.

ಚಿನ್ನಸಂದ್ರ ಗ್ರಾಮದಲ್ಲಿ ಸೋಮವಾರ ಬಿಜೆಪಿ-ಜೆಡಿಎಸ್ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮೈತ್ರಿ ಅಭ್ಯರ್ಥಿ ಮಲ್ಲೇಶಬಾಬು ಪರ ಮತಯಾಚನೆ ಮಾಡಿ ಮಾತನಾಡಿದರು.

ಬರಗಾಲದಲ್ಲಿ ರೈತ ಕೊಳವೆ ಬಾವಿ ಕೊರೆದು ವಿದ್ಯುತ್ ಸಂಪರ್ಕ ಪಡೆಯಲು ₹3ಲಕ್ಷ ಕಟ್ಟಬೇಕು. ಯಾವುದೇ ನೀರಾವರಿ ಸೌಲಭ್ಯಗಳಿಲ್ಲದ ಬರಪೀಡಿತ ಪ್ರದೇಶದಲ್ಲಿ ಕೊಳವೆ ಬಾವಿಗಳಿಂದ ಮಾತ್ರ ಕೃಷಿ ಮಾಡಲು ಸಾಧ್ಯ. ಇದು ರೈತರಿಗೆ ಅನುಕೂಲ ಮಾಡಿದ ಸರ್ಕಾರವೇ? ರೈತರ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಸರ್ಕಾರ ರೈತರ ಜಮೀನು ನೋಂದಣಿ, ಪಹಣಿ, ಮ್ಯುಟೇಷನ್, ಛಾಪ ಕಾಗದ, ಸಬ್ ರಿಜಿಸ್ಟರ್ ಕಚೇರಿ ಮತ್ತು ಭೂದಾಖಲೆ ಕಚೇರಿಯಿಂದ ಪಡೆದುಕೊಳ್ಳುವ ಎಲ್ಲ ದಾಖಲೆಗಳ ಶುಲ್ಕ ಹೆಚ್ಚಿಸಿದೆ. ಮದ್ಯದ ಬೆಲೆ ಸಿಕ್ಕಾಪಟ್ಟೆ ಏರಿಸಲಾಗಿದೆ. ಗ್ಯಾರಂಟಿಗಳಿಗೆ ಹಣ ಒದಗಿಸಲು ಜನಸಾಮಾನ್ಯರ ಕಿಸೆಯಿಂದಲೇ ಹಣ ಕೀಳಲಾಗುತ್ತಿದೆ. ಕೇಂದ್ರ ಸರ್ಕಾರ ನೀಡುತ್ತಿರುವ 5ಕೆ.ಜಿ.ಅಕ್ಕಿ ತಾನು ನೀಡಿದ್ದು ಎಂದು ಮೋಸ ಮಾಡುತ್ತಿದೆ ಎಂದು ದೂರಿದರು.

ಬಸ್ ಪ್ರಯಾಣ ದರ ಏರಿಸಿ ಮಹಿಳೆಯರಿಗೆ ಉಚಿತ ಪ್ರಯಾಣ, ಮತ್ತೊಂದೆಡೆ ವಿದ್ಯುತ್ ದರ ಏರಿಸಿ, ಉಚಿತ ವಿದ್ಯುತ್ ಎನ್ನುತ್ತಿದೆ. ಒಂದು ಕೈಯಿಂದ ಕಿತ್ತುಕೊಂಡು ಮತ್ತೊಂದು ಕೈಗೆ ಕೊಡುವ ಕೆಲಸ ಮಾಡಿ ಮುಗ್ಧ ಜನರ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ತಾತ್ಕಾಲಿಕ. ಹೆಚ್ಚು ದಿನಗಳು ಮುಂದುವರಿಯುವುದಿಲ್ಲ. ಸುಳ್ಳು ಗ್ಯಾರಂಟಿಗಳನ್ನು ನೀಡಿ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದರು.

ಬಿಜೆಪಿ ಮುಖಂಡ ಜಿ.ಎನ್.ವೇಣುಗೋಪಾಲ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಮನೆ ಒಡತಿಗೆ ₹2 ಸಾವಿರ ಕೊಡುವ ನೆಪದಲ್ಲಿ ಕುಟುಂಬಗಳಲ್ಲಿ ಒಡಕು ಮೂಡಿಸುತ್ತಿದೆ ಎಂದರು.

ದೊಡ್ಡಹಳ್ಳಿ ಗೋಪಾಲಕೃಷ್ಣ, ಸಿ.ವಿ.ಆಂಜನಪ್ಪ, ಶ್ರೀನಿವಾಸ, ನಾರಾಯಣಸ್ವಾಮಿ, ಶಿವಪ್ಪ, ಚಂದ್ರಪ್ಪ, ಸಿ.ಎಂ.ಮುನೇಶ್, ಹನುಮಂತಪ್ಪ, ನಾಗರಾಜ್, ಮುನಿವೆಂಕಟಪ್ಪ, ಎನ್.ವೆಂಕಟರವಣಪ್ಪ, ಶೇಕ್ ಜಮೀಲ್, ನಿಶಾದ್ ಬೇಗ್, ಹಬೀಬ್ ಖಾನ್, ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT