ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: 571 ಸರ್ಕಾರಿ ಶಾಲೆಗಳ ಆಸ್ತಿಗೆ ಖಾತೆಯೇ ಇಲ್ಲ!

ಜಿಲ್ಲೆಯಲ್ಲಿ 1,545 ಪ್ರಾಥಮಿಕ, ಪ್ರೌಢಶಾಲೆ
Published 10 ಜನವರಿ 2024, 20:22 IST
Last Updated 10 ಜನವರಿ 2024, 20:22 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಸರ್ಕಾರಿ ಶಾಲೆಗಳಿಗೆ ದಾನಿಗಳು ನೀಡಿದ ಮತ್ತು ಸರ್ಕಾರದಿಂದ ಮಂಜೂರಾದ ನಿವೇಶನ, ಜಮೀನುಗಳು ಆಯಾ ಶಾಲೆಗಳ ಹೆಸರಿಗೆ ಖಾತೆ ಆಗಬೇಕು. ಖಾತೆಯಿಂದ ಮಾತ್ರ ಇದು ಈ ಶಾಲೆಯ ಅಧಿಕೃತ ಆಸ್ತಿ ಎನ್ನುವುದು ದೃಢವಾಗುತ್ತದೆ. ಆದರೆ ಜಿಲ್ಲೆಯಲ್ಲಿ ಇಂದಿಗೂ 571 ಶಾಲೆಗಳ ಆಸ್ತಿಗಳಿಗೆ ಖಾತೆಯೇ ಆಗಿಲ್ಲ.

ಸರ್ಕಾರಿ ಶಾಲೆಗಳ ಆಸ್ತಿ ಸಂರಕ್ಷಣೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಅಭಿಯಾನ ನಡೆಸಿದ ಹೊರತಾಗಿಯೂ ಜಿಲ್ಲೆಯಲ್ಲಿ ಇನ್ನೂ 532 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ 39 ಸರ್ಕಾರಿ ಪ್ರೌಢಶಾಲೆಗಳ ಆಸ್ತಿ ಖಾತೆ ಆಗಿಲ್ಲ.

ದಾನಿಗಳು, ಶಿಕ್ಷಣ ಪ್ರೇಮಿಗಳು ದಾನ ನೀಡಿರುವ ಜಾಗಗಳು ಸರ್ಕಾರಿ ಶಾಲೆಗಳ ಹೆಸರಿಗೆ ಖಾತೆ ಆಗದ ಪರಿಣಾಮ ಕೆಲವು ಕಡೆ ಬೆಲೆ ಬಾಳುವ ಜಾಗದ ಮೇಲೆ ಭೂಗಳ್ಳರ ಕಣ್ಣು ಬಿದ್ದಿದೆ. ಹಲವೆಡೆ ಒತ್ತುವರಿ ಆಗಿವೆ. ದಾನಿಗಳ ಸಂಬಂಧಿಕರು ಮತ್ತೆ ಜಾಗ ವಶಕ್ಕೆ ಪಡೆಯಲು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದರಿಂದಾಗಿ ಕೆಲವು ಶಾಲೆಗಳ ಆಸ್ತಿಗಳ ಖಾತೆಗೆ ತಡೆ ಸಹ ಬಿದ್ದಿದೆ.

39 ಪ್ರೌಢಶಾಲೆ ಖಾತೆ ಬಾಕಿ: ಜಿಲ್ಲೆಯಲ್ಲಿ 111 ಸರ್ಕಾರಿ ಪ್ರೌಢಶಾಲೆಗಳಿವೆ. ಈ ಪ್ರೌಢಶಾಲೆಗಳ ಪೈಕಿ 2022ರಲ್ಲಿ 35 ಶಾಲೆಗಳ ಮತ್ತು 2023ರಲ್ಲಿ ಒಂದು ಶಾಲೆಯ ಆಸ್ತಿ ಖಾತೆ ಆಗಿದೆ. ಇಲ್ಲಿಯವರೆಗೂ ಒಟ್ಟು 72 ಶಾಲೆ ಆಸ್ತಿ ಖಾತೆ ಆಗಿದೆ. ಇನ್ನೂ 39 ಶಾಲೆಗಳ ಆಸ್ತಿ ಖಾತೆ ಬಾಕಿ ಇದೆ.

ಹೀಗೆ ಬಾಕಿ ಇರುವ ಶಾಲೆಗಳ ಪೈಕಿ ಎರಡು ಶಾಲೆಗಳಿಗೆ ದಾನಿಗಳು ಜಾಗ ನೀಡಿದ್ದಾರೆ. ಒಂದು ಕಡೆ ಖಾಸಗಿ ಜಾಗದಲ್ಲಿ ಶಾಲೆ ನಡೆಯುತ್ತಿದೆ. ಉಳಿದ 33 ಕಡೆಗಳಲ್ಲಿ ಸರ್ಕಾರಿ ಜಾಗದಲ್ಲಿಯೇ ಶಾಲೆ ಇದೆ. ಇವುಗಳಿಗೆಲ್ಲವೂ ಖಾತೆ ಆಗಬೇಕಿದೆ.

1,434 ಪ್ರಾಥಮಿಕ ಶಾಲೆ: ಜಿಲ್ಲೆಯಲ್ಲಿ 1,434 ಸರ್ಕಾರಿ ಪ್ರಾಥಮಿಕ ಶಾಲೆಗಳು ಇವೆ. 2022ರಲ್ಲಿ 236 ಮತ್ತು 2023ರಲ್ಲಿ 81 ಶಾಲೆ ಸೇರಿದಂತೆ ಒಟ್ಟು 902 ಪ್ರಾಥಮಿಕ ಶಾಲೆ ಆಸ್ತಿ ಖಾತೆ ಆಗಿದೆ. ಇನ್ನೂ 532 ಶಾಲೆ ಆಸ್ತಿಗೆ ಖಾತೆ ಆಗಿಲ್ಲ. 1,434 ಶಾಲೆ ಪೈಕಿ 111 ಶಾಲೆಗಳಿಗೆ ದಾನಿಗಳು ಜಾಗ ಕೊಟ್ಟಿದ್ದಾರೆ. 38 ಶಾಲೆಗಳು ಖಾಸಗಿ ಸ್ವತ್ತುಗಳಲ್ಲಿ ಇವೆ. 366 ಕಡೆ ಸರ್ಕಾರಿ ಜಾಗದಲ್ಲಿ ಶಾಲೆಗಳು ಇವೆ. 17 ಶಾಲೆಗಳು ಇತರೆ ಕಡೆಗಳಲ್ಲಿ ಇದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಈ ಹಿಂದಿನ ಬಿಜೆಪಿ ಸರ್ಕಾರ ಆಗಸ್ಟ್ 1ರಿಂದ ಅಕ್ಟೋಬರ್‌ 31ರವರೆಗೆ ಸರ್ಕಾರಿ ಶಾಲೆ ಮತ್ತು ಕಾಲೇಜುಗಳ ಆಸ್ತಿ ಸಂರಕ್ಷಣಾ ಅಭಿಯಾನ ನಡೆಸಿತ್ತು. ನಿಗದಿತ ಅವಧಿಯ ಒಳಗೆ ಅಭಿಯಾನ ಪೂರ್ಣಗೊಳಿಸಲು ಆಯಾ ಶಾಲೆಯ ಮುಖ್ಯ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪ ನಿರ್ದೇಶಕರು ಕ್ರಮ ವಹಿಸಬೇಕು. ಅಭಿಯಾನದ ನಂತರ ಸಂಪೂರ್ಣ ವರದಿಯನ್ನು ಆಯಾ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಇಲಾಖೆ ಸೂಚಿಸಿತ್ತು. ಆದರೆ ಆ ಕಾಲಮಿತಿಯಲ್ಲಿ ಅಭಿಯಾನ ಪೂರ್ಣವಾಗಲೇ ಇಲ್ಲ. ಎಲ್ಲ ಶಾಲೆಗಳ ಆಸ್ತಿಗಳಿಗೆ ಖಾತೆಗಳು ಆಗಲಿಲ್ಲ.

‘ಫೆಬ್ರುವರಿಯೊಳಗೆ ಪೂರ್ಣ’

ಸರ್ಕಾರಿ ಶಾಲೆಗಳ ಆಸ್ತಿ ಸಂರಕ್ಷಣಾ ಅಭಿಯಾನದಡಿ ಫೆಬ್ರುವರಿ ಅಂತ್ಯದ ಒಳಗೆ ಎಲ್ಲ ಸರ್ಕಾರಿ ಶಾಲೆಗಳ ಆಸ್ತಿಗಳಿಗೆ ಖಾತೆ ಮಾಡಿಸಬೇಕಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಈಗಾಗಲೇ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಫೆಬ್ರುವರಿ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪನಿರ್ದೇಶಕ ಪಿ.ಬೈಲಾಂಜನಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.  ನೋಡಲ್ ಅಧಿಕಾರಿ: ಖಾತೆ ಮಾಡಿಕೊಳ್ಳುವ ಪ್ರಕ್ರಿಯೆಗೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ದೈಹಿಕ ಶಿಕ್ಷಣ ಅಧಿಕಾರಿಗಳನ್ನು ಶಿಕ್ಷಣ ಇಲಾಖೆ ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT