ಚಿಕ್ಕಬಳ್ಳಾಪುರ: ಜಿಲ್ಲೆಯ ಕುಡಿಯುವ ನೀರಿನಲ್ಲಿ ಯುರೇನಿಯಂ ಸೇರಿದಂತೆ ಅಪಾಯಕಾರಿ ಧಾತುಗಳು ಹೆಚ್ಚಿವೆ. ಪ್ಲೊರೈಸ್ ಅಂಶ ಸಹ ಬಹಳಷ್ಟು ಕಡೆಗಳಲ್ಲಿ ಇವೆ. ಈ ಹಿಂದಿನಿಂದಲೂ ಚಿಕ್ಕಬಳ್ಳಾಪುರ ಎಂದರೆ ಹೊರ ಜಿಲ್ಲೆಯ ಜನರಿಗೆ ಶುದ್ದ ನೀರಿಲ್ಲ ಎನ್ನುವ ಭಾವನೆ ಇತ್ತು.
ಇಂತಹ ಜಿಲ್ಲೆಯಲ್ಲಿಯೇ 900ಕ್ಕೂ ಹೆಚ್ಚು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ಮಾಣವಾಗಿಲ್ಲ. ಇದು ಶುದ್ಧ ನೀರಿನ ವಿಚಾರವಾಗಿ ಆಡಳಿತಗಳು ಜಿಲ್ಲೆಯ ಬಗ್ಗೆ ತೋರಿರುವ ತಾತ್ಸಾರವನ್ನು ತೋರುತ್ತಿದೆ.
ಜಿಲ್ಲೆಯಲ್ಲಿ 1,800 ಕ್ಕೂ ಹೆಚ್ಚು ಗ್ರಾಮಗಳಿವೆ. ಸರ್ಕಾರ ಕೇವಲ ಅರ್ಧದಷ್ಟು ಗ್ರಾಮಗಳಿಗೆ ಮಾತ್ರ ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಾಪಿಸಿದೆ. ಉಳಿದಂತೆ ಅರ್ಧದಷ್ಟು ಅಂದರೆ ಸುಮಾರು 900 ಕ್ಕೂ ಹೆಚ್ಚು ಗ್ರಾಮಗಳಿಗೆ ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಕಾರ್ಯ ನನಗುದಿಗೆ ಬಿದ್ದಿವೆ.
ಚಿಕ್ಕಬಳ್ಳಾಪುರ ದಶಕಗಳ ಮಳೆ, ಬೆಳೆ ಕೊರತೆಯಿಂದ ನೀರಿಗೆ ಪರದಾಟ ನಡೆಸಿದ ಜಿಲ್ಲೆ. ಇಂದಿಗೂ ಶಾಶ್ವತ ನೀರಾವರಿ ಯೋಜನೆಗಳು ಇಲ್ಲ. ಕುಡಿಯುವ ನೀರಿಗೆ ಅಂತರ್ಜಲ ಅಶ್ರಯಿಸಿದೆ. ಬರಗಾಲ ಬಂದರೆ ಅಂತರ್ಜಲ ಕ್ಷೀಣಿಸುತ್ತದೆ. ಆದರೆ ಜಿಲ್ಲೆಯಲ್ಲಿ ಮಾತ್ರ ಜನರಿಗೆ ದಶಕಗಳಿಂದಲೂ ಕುಡಿಯುವ ನೀರು ಶುದ್ದೀಕರಣ ವಿಚಾರದಲ್ಲಿ ಆನ್ಯಾಯವಾಗುತ್ತಲೇ ಇದೆ.
920 ಶುದ್ಧ ನೀರಿನ ಘಟಕಗಳು: ಜಿಲ್ಲೆಯಲ್ಲಿ ಒಟ್ಟು 920 ಶುದ್ದ ಕುಡಿಯುವ ನೀರಿನ ಘಟಕಗಳು ಇವೆ. ಅವುಗಳ ಪೈಕಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆ ವ್ಯಾಪ್ತಿಯಲ್ಲಿ 758 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಉಳಿದಂತೆ 162 ಘಟಕಗಳು ಕೋಚಿಮುಲ್, ಟಿಎಪಿಸಿಎಂಎಸ್, ವಿವಿಎಸ್‌ಎನ್ ಸೇರಿದಂತೆ ಹಲವು ಸಹಕಾರ ಸಂಘ ಸಂಸ್ಥೆಗಳು ಮುಂದೆ ಬಂದು ಶುದ್ದ ನೀರಿನ ಘಟಕಗಳು ಸ್ಥಾಪಿಸಿವೆ.
ಆದರೆ ಬಹುತೇಕ ಶುದ್ಧ ನೀರಿನ ಘಟಕಗಳು ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿವೆ. ಕೆಲವೊಂದು ದುರಸ್ತಿಗೆ ಬಂದು ತಿಂಗಳಗಳೇ ಕಳೆದರೂ ನಿರ್ವಹಣೆ ಹೊಣೆ ಹೊತ್ತ ಸಂಸ್ಥೆಗಳು ಕಾಳಜಿ ವಹಿಸಿ ರಿಪೇರಿ ಮಾಡಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಗ್ರಾಮ ಪಂಚಾಯಿತಿಗಳಿಗೂ ಈ ಬಗ್ಗೆ ಸರ್ಕಾರದಿಂದ ಸೂಕ್ತ ನಿರ್ದೇಶನ ಇಲ್ಲದ ಕಾರಣ ಗ್ರಾಪಂಗಳ ಅಧಿಕಾರಿಗಳು ಕೂಡ ಶುದ್ದ ನೀರಿನ ಘಟಕಗಳಿಗೆ ನೀರು ಸರಬರಾಜು ಮಾಡುವುದು ಬಿಟ್ಟರೆ ರಿಪೇರಿ ಬಂದಾಗ ಅವುಗಳ ಕಡೆ ತಲೆ ಹಾಕುತ್ತಿಲ್ಲ.
ಹೀಗಾಗಿ ಜಿಲ್ಲೆಯಲ್ಲಿ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನಲ್ಲಿ ಪ್ಲೋರೈಡ್ ಸೇರಿದಂತೆ ಆರೋಗ್ಯಕ್ಕೆ ಅಪಾಯ ಎನ್ನುವ ಧಾತುಗಳು ಇರುವ ಕಡೆ ಸ್ಥಾಪಿಸಿರುವ ಶುದ್ಧ ನೀರಿನ ಘಟಕಗಳು ಕೇವಲ ಹೆಸರಿಗಷ್ಟೇ ಎನ್ನುವಂತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.