ಶನಿವಾರ, ಮಾರ್ಚ್ 6, 2021
30 °C

ಚಿಕ್ಕಬಳ್ಳಾಪುರ | ತುಂಬು ಗರ್ಭಿಣಿ ಕೊಲೆ: ಭಾವನ ಮೇಲೆ ಶಂಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲ್ಲೂಕಿನ ಆನೆಮಡುಗು ಗ್ರಾಮದಲ್ಲಿ ಮಂಗಳವಾರ ತುಂಬು ಗರ್ಭಿಣಿಯೊಬ್ಬರನ್ನು ಕೊಚ್ಚಿ ಕೊಲೆ ಮಾಡಿದ್ದು, ಮೃತಳ ಪೋಷಕರು ಆಕೆಯ ಭಾವನ ವಿರುದ್ಧ ಕೊಲೆಯ ಆರೋಪದಡಿ ದೂರು ದಾಖಲಿಸಿದ್ದಾರೆ.

ಆನೆಮಡುಗು ಗ್ರಾಮದ ಜ್ಯೋತಿ (28) ಕೊಲೆಯಾದ ಗರ್ಭಿಣಿ. ಮನೆಯಲ್ಲಿ ಯಾರು ಇಲ್ಲದ ವೇಳೆ ಈ ಘಟನೆ ನಡೆದಿದ್ದು, ರಕ್ತಸಿಕ್ತ ಸ್ಥಿತಿಯಲ್ಲಿ ಬಿದ್ದು ನರಳುತ್ತಿದ್ದ ಜ್ಯೋತಿ ಅವರು, ಚಿಕ್ಕಬಳ್ಳಾಪುರದ ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯ ಮೃತಪಟ್ಟರು ಎಂದು ಪೊಲೀಸರು ತಿಳಿಸಿದರು.

ಈ ಬಗ್ಗೆ ದಿಬ್ಬೂರಹಳ್ಳಿ ಪೊಲೀಸ್‌ ಠಾಣೆಯಲ್ಲಿ ಮೃತಳ ತಂದೆ ನಾಗರಾಜಪ್ಪ ಅವರು, ‘ನನ್ನ ಅಳಿಯ ನವೀನ್ ಚಂದ್ರ ಅವರ ಅಣ್ಣ ಹರೀಶ್ ಬಾಬು ಸಂಸಾರದ ವಿಚಾರದಲ್ಲಿ ಗಲಾಟೆ ಮಾಡಿಕೊಂಡು ಮಗಳ ತಲೆಗೆ ಮಚ್ಚಿನಿಂದ ಹೊಡೆದು ಪರಾರಿಯಾಗಿದ್ದಾನೆ’ ಎಂದು ದೂರು ನೀಡಿದ್ದಾರೆ.

‘ಆನೆಮಡುಗು ನಿವಾಸಿ, ರೈಲ್ವೆ ಇಲಾಖೆ ನೌಕರ ನವೀನ್‌ ಚಂದ್ರ ಎಂಬುವರೊಂದಿಗೆ ಏಳು ವರ್ಷಗಳ ಹಿಂದೆ ಮಗಳ ಮದುವೆಯಾಗಿತ್ತು. ಅನೇಕ ವರ್ಷಗಳ ನಂತರ ಮಗಳು ಗರ್ಭಿಣಿಯಾಗಿದ್ದಳು. ಮಂಗಳವಾರ ಅಳಿಯ ಕೆಲಸ ಹೋದ ವೇಳೆ ನನ್ನ ಪತ್ನಿ ಮುನಿರತ್ನಮ್ಮ ಮಗಳಿಗೆ ಮಾತ್ರೆ ನೀಡಲು ಹೋದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ವಿವಾಹಿತನಾಗಿರುವ ಹರೀಶ್ ಬಾಬು ಹೆಂಡತಿಯನ್ನು ಬಿಟ್ಟಿದ್ದು, ತಮ್ಮನ ಕುಟುಂಬದೊಂದಿಗೆ ವಾಸವಿದ್ದ. ಆತನೇ ಈ ಕೃತ್ಯ ಎಸಗಿದ್ದು, ಕೊಲೆಯ ಬಳಿಕ ಮನೆಯಲ್ಲಿ ಚೆಲ್ಲಿದ್ದ ರಕ್ತದ ಕಲೆಗಳನ್ನು ತೊಳೆದು ಸಾಕ್ಷ್ಯನಾಶ ಪಡಿಸಿ ಪರಾರಿಯಾಗಿದ್ದಾನೆ’ ಎಂದು ದೂರಿದ್ದಾರೆ.

ಸದ್ಯ ಮೃತದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಐಪಿಸಿ 302 (ಉದ್ದೇಶಪೂರ್ವಕ ಕೊಲೆ), 201 (ಸಾಕ್ಷಿ ನಾಶ) ಆರೋಪದಡಿ ಪ್ರಕರಣ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು