ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ | ಪ್ರಾಥಮಿಕ ಶಾಲಾ ಶಿಕ್ಷಕರ ಮುಂಬಡ್ತಿ ಕಗ್ಗಂಟು

ಸೆಪ್ಟೆಂಬರ್ 5ರೊಳಗೆ ಬೇಡಿಕೆ ಈಡೇರದಿದ್ದರೆ ಶಿಕ್ಷಕರ ದಿನಾಚರಣೆ ಬಹಿಷ್ಕಾರ ಎಚ್ಚರಿಕೆ
Published : 30 ಆಗಸ್ಟ್ 2024, 5:46 IST
Last Updated : 30 ಆಗಸ್ಟ್ 2024, 5:46 IST
ಫಾಲೋ ಮಾಡಿ
Comments

ಚಿಂತಾಮಣಿ: ಪ್ರಾಥಮಿಕ ಶಾಲಾ ಶಿಕ್ಷಕರ ಮುಂಬಡ್ತಿ ಕಗ್ಗಂಟ್ಟು ಸೆಪೆಂಬರ್ 5ರೊಳಗೆ ಪರಿಹರಿಸದಿದ್ದರೆ ಶಿಕ್ಷಕರ ದಿನಾಚರಣೆ ಬಹಿಷ್ಕರಿಸಿ ಮತ್ತೆ ಪ್ರತಿಭಟನೆಗೆ ಇಳಿಯಲು ಶಿಕ್ಷಕರು ಚಿಂತನೆ ನಡೆಸಿದೆ ಎಂದು ಶಿಕ್ಷಕರ ಸಂಘದ ಮೂಲಗಳು ತಿಳಿಸಿವೆ.

ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಕ್ಕೆ 2017ರಲ್ಲಿ ಮಾಡಿರುವ ತಿದ್ದುಪಡಿ 2016ಕ್ಕಿಂತ ಮುಂಚೆ ನೇಮಕವಾದ ಶಿಕ್ಷಕರಿಗೆ ಪೂರ್ವನ್ವಯಗೊಳಿಸಬಾರದು. 2016ಕ್ಕಿಂತ ಮೊದಲು ಇದ್ದಂತೆ ಉನ್ನತ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರನ್ನು ಪ್ರೌಢಶಾಲೆಗೆ ಬಡ್ತಿ ಹಾಗೂ ಸೇವಾ ಹಿರಿತನದ ಮೇರೆಗೆ ಮುಖ್ಯ ಶಿಕ್ಷಕರು ಮತ್ತು ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಬೇಕು. ಪದವಿ ಮತ್ತು ತರಬೇತಿ ಪಡೆದಿರುವ ಸೇವಾನಿರತ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಸೇವಾ ಜೇಷ್ಠತೆಯೊಂದಿಗೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಕೇಡರ್ ನಲ್ಲಿ ವಿಲೀನಗೊಳಿಸಬೇಕು ಎಂದು ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ಆಗಸ್ಟ್ 12ರಂದು ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದ್ದರು.

ಮುಖ್ಯಮಂತ್ರಿ ಸೂಚನೆಯಂತೆ ಸಚಿವ ಮಧು ಬಂಗಾರಪ್ಪ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ, ಶೀಘ್ರದಲ್ಲೇ ಸಂಘದ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಸುಮಾರು 20 ದಿನಗಳಾದರೂ ಯಾವುದೇ ಸಭೆ ಕರೆದಿಲ್ಲ. ಸಂಘದಿಂದ ಆಗಸ್ಟ್ 26ರಂದು ಮುಖ್ಯಮಂತ್ರಿಗೆ ಪತ್ರ ಬರೆದು ಕೂಡಲೇ ಸಭೆ ಕರೆಯುವಂತೆ ಒತ್ತಾಯಿಸಿದೆ.

2017ರ ವೃಂದ ಮತ್ತು ನೇಮಕ ನಿಯಮಗಳಿಗೆ ತಂದು ತಿದ್ದುಪಡಿಯಿಂದ 6 ರಿಂದ 8ನೇ ತರಗತಿಯವರೆಗೆ ಪದವೀಧರ ಪ್ರಾಥಮಿಕ ಶಾಲೆ ಶಿಕ್ಷಕರು ಎಂಬ ಹೊಸ ಹುದ್ದೆ ಸೃಷ್ಟಿ ಮಾಡಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದು 2016ಕ್ಕೆ ಮುಂಚೆ ನೇಮಕವಾಗಿದ್ದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕಂಟಕವಾಗಿ ಪರಿಣಮಿಸಿದೆ. ಪ್ರೌಢಶಾಲೆ ಸಹ ಶಿಕ್ಷಕ ಮತ್ತು ಮುಖ್ಯಶಿಕ್ಷಕ ಬಡ್ತಿ ಕನಸು ಕಮರಿ ಹೋಗಿದೆ ಎನ್ನುತ್ತಾರೆ ನೊಂದ ಶಿಕ್ಷಕರು.

ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದು 2017ರಲ್ಲಿ ಪದವೀಧರ ಪ್ರಾಥಮಿಕ ಶಾಲೆ ಶಿಕ್ಷಕರು(ಜಿಪಿಟಿ)ನೇಮಕ ಮಾಡಿಕೊಳ್ಳಲಾಗಿದೆ. 2017ಕ್ಕಿಂತ ಮೊದಲು ನೇಮಕಗೊಂಡಿರುವ ಶಿಕ್ಷಕರನ್ನು ಪ್ರಾಥಮಿಕ ಶಾಲೆ ಶಿಕ್ಷಕ (ಪಿ.ಎಸ್.ಟಿ) ಹುದ್ದೆಯಲ್ಲೇ ಮುಂದುವರಿಸಲಾಗಿದೆ. ಪ್ರಾಥಮಿಕ ಶಾಲೆಗಳಲ್ಲಿ ಕೇಡರ್ ಬದಲಾವಣೆ ಮಾಡಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಎಂದು ವೃಂದ ಮತ್ತು ನೇಮಕಾತಿಗೆ ತಿದ್ದುಪಡಿ ತಂದಿರುವುದರಿಂದ ಮುಖ್ಯ ಶಿಕ್ಷಕರು ಮತ್ತು ಪ್ರೌಢಶಾಲೆ ಬಡ್ತಿಗೆ ಮಾತ್ರ ಪರಿಗಣಿಸಬೇಕು ಎಂದು ಪದವೀಧರ ಪ್ರಾಧಮಿಕ ಶಾಲಾ ಶಿಕ್ಷಕರು ಕೆ.ಎಸ್.ಎ.ಟಿ ಗೆ ಮೊರೆ ಹೋಗಿದ್ದರು.

6ರಿಂದ 8ನೇ ತರಗತಿ ಬೋಧನೆಗೆ ಆಯ್ಕೆಯಾಗಿರುವ ಪದವೀಧರ ಶಿಕ್ಷಕರು (ಜಿ.ಪಿ.ಟಿ) ಮಾತ್ರ ಪ್ರೌಢಶಾಲಾ ಸಹಶಿಕ್ಷಕರ ಹುದ್ದೆಗೆ ಅರ್ಹರು. 1ರಿಂದ 5ನೇ ತರಗತಿಗೆ ಬೋಧನೆ ಮಾಡುತ್ತಿದ್ದು ಪ್ರೌಢಶಾಲೆಗೆ ಬಡ್ತಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ (ಪಿ.ಎಸ್.ಟಿ) ಹಿಂಬಡ್ತಿ ನೀಡಬೇಕು ಎಂದು ಕೆ.ಎಸ್.ಎ.ಟಿ ತೀರ್ಪು ನೀಡಿದೆ. ತೀರ್ಪಿನ ವಿರುದ್ಧ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.

ರಾಜ್ಯದಲ್ಲಿ ಸುಮಾರು 1.30 ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ 80 ಸಾವಿರ ಪದವೀಧರ ಶಿಕ್ಷಕರಿದ್ದಾರೆ. ಅವರನ್ನು 1ರಿಂದ 5ನೇ ತರಗತಿ ಶಿಕ್ಷಕರು ಎಂದು ಪರಿಗಣಿಸಲಾಗುತ್ತಿದೆ. ಮೊದಲಿನಿಂದಲೂ ಪದವಿ, ಬಿ.ಇಡಿ, ಸ್ನಾತಕೋತ್ತರ ಪದವಿ ಸೇರಿದಂತೆ ಉನ್ನತ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರಿಗೆ ಮುಖ್ಯ ಶಿಕ್ಷಕರು ಮತ್ತು ಪ್ರೌಢಶಾಲಾ ಸಹ ಶಿಕ್ಷಕರಾಗಿ ಬಡ್ತಿ ಪಡೆಯುತ್ತಿದ್ದರು. ಹೊಸ ನಿಯಮದಿಂದ 30 ವರ್ಷ ಸೇವೆ ಸಲ್ಲಿಸಿರುವ ಶಿಕ್ಷಕರು ಪ್ರಾಥಮಿಕ ಶಾಲಾ ಶಿಕ್ಷಕರಾಗಿಯೇ ನಿವೃತ್ತಿ ಹೊಂದುತ್ತಿದ್ದಾರೆ.

ಕಳೆದ 7 ವರ್ಷಗಳಿಂದ ಬಡ್ತಿಯನ್ನೇ ನೀಡದ ಕಾರಣ ರಾಜ್ಯದಾದ್ಯಂತ ಸಾವಿರಾರು ಶಿಕ್ಷಕರು ಪ್ರಾಥಮಿಕ ಶಾಲಾ ಶಿಕ್ಷಕರಾಗಿಯೇ ನಿವೃತ್ತರಾಗಿದ್ದಾರೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಆರ್.ಅಶೋಕಕುಮಾರ್ ತಿಳಿಸಿದರು.

ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದ ನಂತರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಜಿಪಿಟಿ ಕೇಡರ್ ಶಿಕ್ಷಕರನ್ನು ಓವರ್ ಟೇಕ್ ಮಾಡಿ ಮುಂಬಡ್ತಿ ನೀಡಲು ತಾಂತ್ರಿಕವಾಗಿ ಅಡಚಣೆ ಎದುರಾಗುತ್ತಿದೆ. ಜಿಪಿಟಿಗೆ ಬಡ್ತಿ ನೀಡಿದರೆ 30 ವರ್ಷ ಸೇವೆ ಸಲ್ಲಿಸಿದ ಪಿ.ಎಸ್.ಟಿ ಶಿಕ್ಷಕರು 4-5 ವರ್ಷಗಳ ಹಿಂದೆ ನೇಮಕವಾದವರಿಂದ ಕೆಳಹಂತದಲ್ಲಿರುತ್ತಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಬಡ್ತಿಗೆ ಅರ್ಹತೆ ಹೊಂದಿರುವ ಸೇವಾನಿರತ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಸೇವಾ ಜೇಷ್ಠತೆಯೊಂದಿಗೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಕೇಡರ್ ನಲ್ಲಿ ವಿಲೀನಗೊಳಿಸಿದರೆ ಸಮಸ್ಯೆ ಸುಲಭವಾಗಿ ಬಗೆಹರಿಯುತ್ತದೆ. ಇದಕ್ಕಾಗಿ ಸೂಕ್ತ ನಿಯಮ ರೂಪಿಸಬೇಕು ಎಂಬುದು ಶಿಕ್ಷಕರ ಸಂಘದ ಆಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT