ಬುಧವಾರ, ಡಿಸೆಂಬರ್ 7, 2022
23 °C
ಗದ್ದೆಯಂತಿದ್ದ ರಸ್ತೆಯಲ್ಲೇ ಹೊರಟು ಹೋದ ಡಾ.ಕೆ. ಸುಧಾಕರ್‌

ಸಚಿವರ ಕಣ್ಣಿಗೆ ಕಾಣದ ಕೆಸರಿನ ರಸ್ತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಈಗಾಗಲೇ ಗುಂಡಿಬಿದ್ದ ರಸ್ತೆಗಳು ಮಳೆಯಿಂದ ಕೆಸರು ಗದ್ದೆಯಂತಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಜನರು ಅವರೆಲ್ಲ ಈ ರಸ್ತೆ ಓಡಾಡಿದರೆ ಬುದ್ಧಿ ಬರುತ್ತೆ ಎಂದು ಶಾಪ ಹಾಕುತ್ತಿದ್ದಾರೆ. ಆದರೆ ಸಚಿವ ಡಾ.ಕೆ.ಸುಧಾಕರ್‌ ಇಂಥ ಹದಗೆಟ್ಟ ರಸ್ತೆಯಲ್ಲಿ ಸಂಚರಿಸಿ, ರಸ್ತೆ ದುಸ್ಥಿತಿ ಕಂಡರೂ ಕ್ಯಾರೆ ಎನ್ನದೆ ಹೋಗಿರುವುದು ಜನ ಆಕ್ರೋಶಕ್ಕೆ ಕಾರಣವಾಗಿದೆ.

ಬಿಜೆಪಿ ಬುಧವಾರ ನಗರದಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಸುಧಾಕರ್ ಹದಗೆಟ್ಟ ರಸ್ತೆಯಲ್ಲೇ ಸಂಚರಿಸಿದರು. ಆದರೂ ರಸ್ತೆ ದುರಸ್ತಿ ಬಗ್ಗೆ ಮಾತನಾಡದೇ ಹೋಗಿದ್ದಾರೆ ಎಂದು ದೂರಿ ಸ್ಥಳೀಯರು
ಕಿಡಿಕಾರಿದ್ದಾರೆ.

ನಗರದ ಎಪಿಎಂಸಿ ಮೂಲಕ ಊಲವಾಡಿ ಕಡೆಗೆ ಹೋಗುವ ಮುಖ್ಯ ರಸ್ತೆ ಮತ್ತು ಎಪಿಎಂಸಿ ಟೊಮೆಟೊ ಮಾರುಕಟ್ಟೆ ಕೆಸರುಗದ್ದೆಯಾಗಿದೆ. ಗುಂಡಿಗಳ ನಡುವೆ ರಸ್ತೆ ಯಾವುದು ಎಂದು ಹುಡುಕಬೇಕಾಗಿದೆ. ಮಳೆ ಬಂದರಂತೂ ಈ ರಸ್ತೆಯಲ್ಲಿ ಸಂಚರಿಸಲು ದುಸ್ಸಾಹಸ ಮಾಡಬೇಕಾಗಿತ್ತದೆ. ಇದೇ ರಸ್ತೆಯ ಮೂಲಕವೇ ಟೊಮೆಟೊ ಮಾರುಕಟ್ಟೆಗೆ ವಾಹನಗಳು ಸಂಚರಿಸುವುದರಿಂದ ಸಿಮೆಂಟ್ ರಸ್ತೆಗಳು ಸಹ ಮಣ್ಣಿನಿಂದ ಹಾಳಾಗಿವೆ. ಸಚಿವರು ಇದೇ ರಸ್ತೆಯಲ್ಲಿ ಸಂಚರಿಸಿದರೂ ರಸ್ತೆಯ ದುಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಚರ್ಚೆಯನ್ನು ಮಾಡಲಿಲ್ಲ ಎಂದು ನಾಗರಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ರಸ್ತೆಯು ಊಲವಾಡಿ ಕಡೆಯ ಗ್ರಾಮಗಳಿಗೆ, ಗಾಂಧಿನಗರ, ಕರಿಯಪ್ಪಲ್ಲಿ, ಟಿಪ್ಪುನಗರ ಮತ್ತಿತರ ಕಡೆ ಸಂಪರ್ಕ ಕಲ್ಪಿಸುತ್ತದೆ. ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. 4-5 ವರ್ಷಗಳಿಂದ ರಸ್ತೆ ಹಾಳಾಗಿದ್ದರೂ ಶಾಸಕರು, ಸಂಸದರು ಸದಸ್ಯರು, ಸಚಿವರು ಸೇರಿದಂತೆ ಯಾರು ಗಮನಹರಿಸುತ್ತಿಲ್ಲ. ಬಿಜೆಪಿ ಸಭೆಯಲ್ಲಿ ಭಾಗವಹಿಸಲು ಸಚಿವರು ಅದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ರಸ್ತೆಯ ದುಸ್ಥಿತಿಯನ್ನು ಕಂಡು ಅಧಿಕಾರಿಗಳನ್ನು ತರಾಟೆ ತೆಗದುಕೊಳ್ಳುತ್ತಾಋಎ ಎಂದು ನಿರೀಕ್ಷೆ ಮಾಡಿದ್ದೇವು. ಸಚಿವರು ಈ ಬಗ್ಗೆ ಮಾತನಾಡದಿರುವುದು ನಾಗರಿಕರಲ್ಲಿ ತೀವ್ರ ಅಸಮದಾನ ಉಂಟಾಗಿದೆ.

ನಗರದ ಅನೇಕ ಜನನಿಬಿಡ ರಸ್ತೆಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಅವರವರ ಚುನಾವಣೆಯ ಮತಬೇಟೆಯಲ್ಲಿ ನಿರತರಾಗಿದ್ದಾರೆ. ಸಭೆ, ಸಮಾರಂಭ, ಜಾಥಾ, ರಥಯಾತ್ರೆ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಿ ಜನರ ಗಮನವನ್ನು ಸೆಳೆಯುವುದರಲ್ಲಿ ನಿರತರಾಗಿದ್ದಾರೆ. ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಗಮನಹರಿಸಲು ಅವರಿಗೆ ಪುರಸೊತ್ತಿಲ್ಲ ಎಂದು ಟೀಕಿಸುತ್ತಾರೆ ಸ್ಥಳೀಯರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು