ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಯಲ್ಲಿ ಗುಂಡಿಗಳದ್ದೇ ಕಾರುಬಾರು

ಶಿಡ್ಲಘಟ್ಟದ ಬೈಪಾಸ್ ಸೇರಿದಂತೆ ನಗರದ ಬಹಳಷ್ಟು ರಸ್ತೆಗಳು ಅಧ್ವಾನ
Last Updated 8 ನವೆಂಬರ್ 2022, 5:12 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ನಗರದ ಬೈಪಾಸ್ ರಸ್ತೆಗಳು ಸೇರಿದಂತೆ ನಗರದೊಳಗೆ ಇರುವ ಬಹುತೇಕ ರಸ್ತೆಗಳು ಹಾಳಾಗಿ, ಗುಂಡಿಗಳಿಂದ ತುಂಬಿಹೋಗಿದ್ದು, ವಾಹನ ಸವಾರರು ಗುಂಡಿಗಳು ಮತ್ತು ಹೊಂಡಗಳನ್ನು ತಪ್ಪಿಸಲು ಹೋಗಿ ಅಪಘಾತಕ್ಕೀಡಾಗುತ್ತಿದ್ದಾರೆ. ರಸ್ತೆಗಳು ಸಂಚಾರಕ್ಕೆ ದುಸ್ತರವಾಗಿ ಪರಿಣಮಿಸಿವೆ.

ನಗರದ ಕೆಲವು ವಾರ್ಡುಗಳಲ್ಲಿ ರಸ್ತೆಗಳ ಡಾಂಬರೀಕರಣವೇ ನಡೆದಿಲ್ಲ. ಮಳೆ ಬಂದಾಗಲಂತೂ ಜನರಿಗೆ ನರಕಯಾತನೆ. ಪ್ರತಿಯೊಂದು ವಾರ್ಡುಗಳಲ್ಲಿಯೂ ಸಂಪರ್ಕ ರಸ್ತೆಗಳು, ಸಣ್ಣ ರಸ್ತೆಗಳು, ಗಲ್ಲಿಗಳು ಎಲ್ಲವೂ ಹದಗೆಟ್ಟು ಹೋಗಿವೆ. ನಗರಸಭೆ ಚುನಾವಣೆ ನಡೆದು ವರ್ಷಗಳು ಮುಗಿದು, ಸದಸ್ಯರು ಮೂಲಭೂತ ಸೌಕರ್ಯವಾದ ರಸ್ತೆ ಸರಿಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಜನರು
ದೂರುತ್ತಿದ್ದಾರೆ.

ನಗರದ ಹೊರವಲಯದ ಪೂಜಮ್ಮ ದೇವಾಲಯದ ಬಳಿಯ ಬೈಪಾಸ್ ರಸ್ತೆಯ ಸ್ಥಿತಿ ಶೋಚನೀಯವಾಗಿದ್ದು, ವಾಹನ ಸಂಚಾರವಿರಲಿ, ಜನರು ಸಹ ನಡೆದು ಹೋಗಲೂ ಯೋಗ್ಯವಿಲ್ಲದಂತಾಗಿದೆ. ಮಳೆಗಾಲದಲ್ಲಿ ಈ ರಸ್ತೆಯು ಮಿನಿಕುಂಟೆಗಳಾಗಿ
ಪರಿವರ್ತನೆಗೊಳ್ಳುತ್ತದೆ. ಹದಗೆಟ್ಟಿರುವ ರಸ್ತೆಯಲ್ಲಿ ಈಗಾಗಲೇ ಹಲವರು ಅಪಘಾತಕ್ಕೀಡಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ
ಪಡೆದುಕೊಂಡಿದ್ದಾರೆ.

ಶಿಡ್ಲಘಟ್ಟದಿಂದ ದಿಬ್ಬೂರಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ರಸ್ತೆಯಲ್ಲಿ ಹೊಂಡಗಳು ತುಂಬಿಕೊಂಡಿದೆ. ವಾಹನ ಸವಾರರು ಗುಂಡಿಗಳು ಮತ್ತು ಹೊಂಡಗಳನ್ನು ತಪ್ಪಿಸಲು ಹೋಗಿ ಅಪಘಾತಕ್ಕೀಡಾಗಿದ್ದಾರೆ. ಕ್ಷೇತ್ರದ ಶಾಸಕರು, ಮಾಜಿ ಶಾಸಕರು,ಜಿಲ್ಲಾ ಮಟ್ಟದ ಹಾಗೂ ತಾಲೂಲ್ಲೂಕು ಮಟ್ಟದ ಅಧಿಕಾರಿಗಳು ನಗರಸಭಾ ಸದಸ್ಯರು ಸಹಿತ ಅನೇಕ ಮಂದಿ ಇದೇ ಮಾರ್ಗದಲ್ಲಿಯೇ
ಸಂಚರಿಸುತ್ತಾರೆ. ಆದರೆ ಈ ರಸ್ತೆಯನ್ನು ಅಭಿವೃದ್ಧಿಗೊಳಿಸುವ ಗೋಜಿಗೆ ಹೋಗಿಲ್ಲ ಎಂಬುದು ಸ್ಥಳೀಯರು ಆಕ್ರೋಶ
ವ್ಯಕ್ತಪಡಿಸಿದ್ದಾರೆ.

ಶೀಘ್ರ ರಸ್ತೆ ಕಾಮಗಾರಿ ಆರಂಭ

‘ಜಿಲ್ಲೆಯಾದ್ಯಂತ ನಗರೋತ್ಥಾನ ಕಾಮಗಾರಿಗಳ ಟೆಂಡರ್ ಕರೆಯಲಾಗಿದೆ. ಈ ಪ್ರಕ್ರಿಯೆಯು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮುಗಿದು ಪೌರಾಡಳಿತ ನಿರ್ದೇಶನಾಲಯಕ್ಕೆ ಹೋಗಿದೆ. ಅಲ್ಲಿಂದ ಫೈಲ್ ಜಿಲ್ಲಾಧಿಕಾರಿ ಅವರ ಕ್ಚೇರಿಗೆ ಇನ್ನೊಂದು ವಾರದಲ್ಲಿ ಬರಲಿದೆ. ಅಲ್ಲಿ ಕಾಮಗಾರಿಗೆ ಅನುಮೋದನೆ ನೀಡುವರು. ಅತಿ ಶೀಘ್ರದಲ್ಲಿ ನಗರದ ರಸ್ತೆ ಕಾಮಗಾರಿಗಳು ಪ್ರಾರಂಭವಾಗಲಿವೆ. ನಗರಸಭಾ ಸದಸ್ಯರು ಹಾಗೂ ಅಧಿಕಾರಿಗಳು ಗುಣಮಟ್ಟವನ್ನು ಪರಿಶೀಲಿಸಿ ಉತ್ತಮ ರಸ್ತೆಗಳನ್ನು ಮಾಡಿಸಲು ಬದ್ಧರಾಗಿದ್ದೇವೆ’ ಎಂದು ನಗರಸಭೆ ಪೌರಾಯುಕ್ತ ಶ್ರೀಕಾಂತ್ ತಿಳಿಸಿದ್ದಾರೆ.

ಕಾಮಗಾರಿ ಆರಂಭಿಸಲು ನಿರಾಸಕ್ತಿ

‘ನಗರದ ಬೈಪಾಸ್ ರಸ್ತೆಯ ಅಭಿವೃದ್ಧಿಗೆ ಟೆಂಡರ್ ಆಗಿ ಐದು ತಿಂಗಳಾದರೂ ಸಹ ಕಾಮಗಾರಿಯನ್ನು ಆರಂಭಿಸದೆ ಗುತ್ತಿಗೆದಾರ ನಿರ್ಲಕ್ಷ ವಹಿಸಿದ್ದಾರೆ. ಜೊತೆಗೆ ಅಧಿಕಾರಿಗಳು ಆಸಕ್ತಿ ವಹಿಸಿಲ್ಲ. ಇದರಿಂದ ಶಿಡ್ಲಘಟ್ಟದಲ್ಲಿ ನಾಗರಿಕರು ಹದಗೆಟ್ಟ ರಸ್ತೆಯಲ್ಲಿ ಅಂಗೈಯಲ್ಲಿ ಜೀವ ಇಟ್ಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ನಿರ್ಲಕ್ಷ ವಹಿಸಿರುವ ಗುತ್ತಿಗೆದಾರ ಮತ್ತು ಅಧಿಕಾರಿಗಳ ಮೇಲೆ ಕ್ರಮ ಜರುಗಿಸಿ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಬೇಕು’ ಸ್ಥಳೀಯ ನಿವಾಸಿ ಎಸ್.ರಹಮತ್ತುಲ್ಲಾ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT