ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಫಲಶ್ರುತಿ: ತಪ್ಪಿದ ಕಂಟಕ; ನಿಟ್ಟುಸಿರಿಟ್ಟ ನಾಗರಿಕರು

ಕೆಳಗಿನತೋಟ ಪ್ರದೇಶದ ವಿನಾಯಕ ಬಡಾವಣೆಯ ನಡುವೆಯೇ ಕಾಲುವೆ ತೋಡುವ ನಿರ್ಧಾರ ಕೈಬಿಟ್ಟ ಅಧಿಕಾರಿಗಳು
Last Updated 12 ಜೂನ್ 2020, 11:37 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಹೆಬ್ಬಾಳ ನಾಗವಾರ ಕೆರೆಗಳ ಸಂಸ್ಕರಿಸಿದ ತ್ಯಾಜ್ಯ ನೀರಿನಿಂದ ಜಿಲ್ಲೆಯ ಕೆರೆಗಳ ತುಂಬುವ ಯೋಜನೆ ಅಡಿ ನಗರದಲ್ಲಿ ಕೈಗೆತ್ತಿಕೊಂಡಿರುವ ಕೆರೆ ಸಂಪರ್ಕ ಕಾಲುವೆಗಳ ಪುನಶ್ಚೇತನಗೊಳಿಸುವ ಕಾಮಗಾರಿಯಿಂದ ತೊಂದರೆ ಅನುಭವಿಸುವ ಆತಂಕಕ್ಕೆ ಒಳಗಾಗಿದ್ದ ಕೆಳಗಿನತೋಟ ಪ್ರದೇಶದ ವಿನಾಯಕ ಬಡಾವಣೆ ಜನರು ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಎಚ್‌.ಎನ್ ವ್ಯಾಲಿ ಯೋಜನೆ ಅಡಿ ನೀರು ತುಂಬುತ್ತಿರುವ ಕಂದವಾರ ಕೆರೆಯಿಂದ ಅಮಾನಿಗೋಪಾಲಕೃಷ್ಣ ಕೆರೆಗೆ ಸಂಪರ್ಕಿಸುವ ಕಾಲುವೆಯನ್ನು ಸುಸಜ್ಜಿತಗೊಳಿಸುವ ಕಾಮಗಾರಿಗೆ ಒಂದು ತಿಂಗಳ ಹಿಂದೆ ಕಂದಾಯ ಇಲಾಖೆ ಅಧಿಕಾರಿಗಳು ವಿನಾಯಕ ಬಡಾವಣೆಯ ನಡುವೆಯೇ ಕಾಲುವೆ ತೋಡಲು ಗುರುತು ಮಾಡಿದ್ದರು.

ಇದು, ಆ ಬಡಾವಣೆಯಲ್ಲಿ ಸಾಲ ಮಾಡಿ ಮನೆ ಕಟ್ಟಿದವರು, ಕಷ್ಟಪಟ್ಟು ನಿವೇಶನ ಖರೀದಿಸಿದವರು ಚಿಂತೆಗೀಡು ಮಾಡಿತ್ತು. ಈ ಬಗ್ಗೆ ‘ಪ್ರಜಾವಾಣಿ’ ಮೇ 9 ರಂದುಗೂಗಲ್‌ ನಕ್ಷೆಯ ಚಿತ್ರಗಳ ಸಹಾಯದ ಮೂಲಕ ಕಂದಾಯ ಇಲಾಖೆ ಅಧಿಕಾರಿಗಳು ಚರಂಡಿ ಇಲ್ಲದ ಜಾಗದಲ್ಲಿ ಗುರುತು ಮಾಡಿರುವ ಬಗ್ಗೆ ‘ಕಳವಳ ಹುಟ್ಟಿಸಿದ ಕಾಲುವೆ ಗುರುತು’ ಎಂಬ ಶೀರ್ಷಿಕೆ ಅಡಿ ವಿಶೇಷ ವರದಿ ಪ್ರಕಟಿಸಿತ್ತು.

ಸರ್ವೇ ನಂಬರ್ 227 ರಲ್ಲಿ ಸುಮಾರು ನಾಲ್ಕು ಎಕರೆ ಜಾಗದಲ್ಲಿ ಬೆಂಗಳೂರು ಮೂಲದ ರಿಯಲ್‌ ಎಸ್ಟೆಟ್‌ ಉದ್ಯಮಿಯೊಬ್ಬ ಕೆಲ ವರ್ಷಗಳ ಹಿಂದೆ ವಿನಾಯಕ ಬಡಾವಣೆ ನಿರ್ಮಿಸಿ ಎಲ್ಲ ನಿವೇಶನಗಳನ್ನು ಮಾರಾಟ ಮಾಡಿದ್ದಾರೆ.

ನಗರಾಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆ ಪಡೆದಿರುವ ‘ಮಾಸ್ಟರ್‌ ಫ್ಲ್ಯಾನ್‌’ನಲ್ಲಿ ವಿನಾಯಕ ಬಡಾವಣೆಯ ಎರಡು ಅಂಚಿನಲ್ಲಿ ಕಾಲುವೆಗಳು ಇರುವುದು ಸಷ್ಟವಾಗಿ ಗೋಚರಿಸುತ್ತವೆ. ಆದರೆ, ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮ ನಕ್ಷೆ ತೋರಿಸಿ ಬಡಾವಣೆಯ ನಡುವೆ ಕಾಲುವು ತೋಡಲು ಗುರುತು ಮಾಡಿ ಜನರ ನಿದ್ದೆಗೆಡಿಸಿದ್ದರು.

ವರದಿ ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತುಕೊಂಡು ಕಂದಾಯ ಇಲಾಖೆ ಮತ್ತು ಯೋಜನೆಯ ಅನುಷ್ಠಾನದ ಹೊಣೆ ಹೊತ್ತಿರುವ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಚರ್ಚೆ ನಡೆಸಿ, ಬಡಾವಣೆಯ ನಡುವೆ ಕಾಲುವೆ ನಿರ್ಮಿಸುವ ತೀರ್ಮಾನ ಕೈಬಿಟ್ಟು, ನಗರಾಭಿವೃದ್ಧಿ ಪ್ರಾಧಿಕಾರದ ‘ಮಾಸ್ಟರ್‌ ಫ್ಲ್ಯಾನ್‌’ನಲ್ಲಿರುವಂತೆ ಬಡಾವಣೆಯ ಅಂಚಿನಲ್ಲಿ ಕಾಲುವೆ ತೋಡಲು ನಿರ್ಧರಿಸಿದ್ದಾರೆ.

ಪ್ರಸ್ತುತ, ವಿನಾಯಕ ಬಡಾವಣೆಯ ಉತ್ತರ ಭಾಗದಲ್ಲಿ ಕಾಲುವೆ ತೋಡುವ ಕಾಮಗಾರಿ ಆರಂಭಗೊಂಡಿದ್ದು ಚಿಂತೆಗೆ ಒಳಗಾಗಿದ್ದ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

‘ವಿನಾಯಕ ಬಡಾವಣೆಯಲ್ಲಿ ತಲೆದೋರಿದ್ದ ಕಾಲುವೆ ಸಮಸ್ಯೆ ಇದೀಗ ಸರಿ ಹೋಗಿದೆ. ಈ ಹಿಂದೆ ಬಡಾವಣೆಯ ಅಂಚಿನಲ್ಲಿದ್ದ ಕಾಲುವೆಯನ್ನೇ ಆಗ, ಅಗಲ ಮಾಡಿ ತೋಡುತ್ತಿದ್ದೇವೆ. ಮುಂದಿನ ವಾರದಲ್ಲಿ ಕಾಲುವೆಯಲ್ಲಿ ಕಂದವಾರ ಕೆರೆಯಿಂದ ಅಮಾನಿಗೋಪಾಲಕೃಷ್ಣ ಕೆರೆಗೆ ಪ್ರಾಯೋಗಿಕವಾಗಿ ನೀರು ಹರಿಸುತ್ತೇವೆ’ ಎಂದು ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರವೀಂದ್ರನಾಥ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT