ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಂದರಹಳ್ಳಿ ಅಭಿವೃದ್ಧಿ; 4ಕ್ಕೆ ವಿಧಾನಸೌಧ ಚಲೋ

ಹೈ ಕೋರ್ಟ್‌ ಆದೇಶಕ್ಕೂ ಕಿಮತ್ತು ನೀಡಿದ ಜಿಲ್ಲಾಡಳಿತ ಜನಪ್ರತಿನಿಧಿಗಳು
Published 1 ಮೇ 2024, 15:44 IST
Last Updated 1 ಮೇ 2024, 15:44 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ದಲಿತರು ವಾಸವಿರುವ ಕುಗ್ರಾಮ ಬಂದರಹಳ್ಳಿಯನ್ನು ಅಭಿವೃದ್ಧಿಪಡಿಸಲು ಹೈಕೋರ್ಟ್ ಆದೇಶ ನೀಡಿ ನಾಲ್ಕು ವರ್ಷಗಳೇ ಕಳೆದರೂ ತಲೆಕೆಡಿಸಿಕೊಳ್ಳದ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ದಲಿತ ವಿರೋಧಿ ಧೋರಣೆ ಖಂಡಿಸಿ ಮೇ 4 ರಂದು ವಿಧಾನಸೌಧ ಚಲೋ ನಡೆಸಲಾಗುವುದು ಎಂದು ಸಮತಾ ಸೈನಿಕ ದಳದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ವೆಂಕಟರಮಣಪ್ಪ ತಿಳಿಸಿದರು.

ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ದಲಿತರ ಮೇಲೆ ದಬ್ಬಾಳಿ ಇನ್ನೂ ನಿಂತಿಲ್ಲ. ಮಂಚೇನಹಳ್ಳಿ ತಾಲೂಕಿನ ಬಂದರಹಳ್ಳಿ ಗ್ರಾಮದಲ್ಲಿ ಶೇ100 ರಷ್ಟು ಮಂದಿ ದಲಿತರಿರುವ ಕಾರಣಕ್ಕೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಗ್ರಾಮದ ಅಭಿವೃದ್ಧಿಯ ಕುರಿತು ತಲೆಕೆಡಿಸಿಕೊಳ್ಳದೇ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಗ್ರಾಮಕ್ಕೂ ಮೂಲಸೌಕರ್ಯಗಳನ್ನು ಜಿಲ್ಲಾಧಿಕಾರಿ, ಜಿ.ಪಂ. ಸಿಇಒ, ಗೌಡಗೆರೆ ಪಿಡಿಒ ಎಲ್ಲರಿಗೂ ಮನವಿ ಸಲ್ಲಿಸಿದ್ದರೂ ಯಾರೂ ತಲೆ ಕೆಡಿಸಿಕೊಂಡಿಲ್ಲವೆಂದು 2020ರಲ್ಲಿ ಹೈಕೋರ್ಟ್ ನಿಂದ ಆದೇಶ ತಂದರೂ ನಾಲ್ಕೂ ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಹಲವು ಬಾರಿ ಜಿಲ್ಲಾಧಿಕಾರಿಗಳು, ಸಿಇಒ ಅವರ ಗಮನಕ್ಕೆ ತರಲಾಗಿದೆ. ಶಾಸಕ ಪ್ರದೀಪ್ ಈಶ್ವರ್ ಅವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ಸಮತಾ ಸೈನಿಕ ದಳದಿಂದ ಜಿಲ್ಲಾಧಿಕಾರಿ ಮತ್ತು ಜಿ.ಪಂ ಸಿಇಒ ಅವರನ್ನು ಭೇಟಿಯಾದಾಗ 20 ದಿನದ ಕಾಲಾವಾಕಾಶ ಕೇಳಿದ್ದರು. ಆದರೆ 4 ತಿಂಗಳಾದರೂ ಕ್ರಮ ಕೈಗೊಂಡಿಲ್ಲ. ಮೇ 4 ರೊಳಗೆ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸದಿದ್ದರೆ ನಗರದ ಅಂಬೇಡ್ಕರ್‌ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಂದರಹಳ್ಳಿವರೆಗೆ ಜಾಥಾ ನಡೆಸಲಾಗುವುದು. ಅಲ್ಲಿಂದ ಕೋಳಿ, ಹಸು, ಎಮ್ಮೆ ಹೀಗೆ ಪ್ರಾಣಿಗಳು ಹಾಗೂ ಗ್ರಾಮಸ್ಥರೊಂದಿಗೆ ವಿಧಾನಸೌಧ ಚಲೋ ನಡೆಸಲಿದ್ದೇವೆ ಎಂದು ಹೇಳಿದರು.

ಬಂದರಹಳ್ಳಿ ನಿವೃತ್ತ ಸರ್ಕಾರಿ ಅಧಿಕಾರಿ ನಾರಾಯಣಪ್ಪ ಮಾತನಾಡಿ, ಗ್ರಾಮಕ್ಕೆ ಕಳೆದ ನಾಲ್ಕು ವರ್ಷಗಳವರೆಗೆ ರಸ್ತೆ ಇರಲಿಲ್ಲ. ಕಷ್ಟಪಟ್ಟು ಗ್ರಾಮಕ್ಕೆ ರಸ್ತೆ ಮಾಡಿಸಿದ್ದೇವೆ. ಆದರೆ ಇದರಿಂದ ಕೆಲವರು ನಮ್ಮ ಮೇಲೆಯೇ ನಾನಾ ಪ್ರಕರಣ ದಾಖಲಿಸಿ ನ್ಯಾಯಾಲಯ ಅಲೆಯುವಂತೆ ಮಾಡಿದ್ದಾರೆ. ಎಲ್ಲ ಅಧಿಕಾರಿಗಳಿಗೆ ದೂರು ಕೊಟ್ಟಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಿ.ಎಚ್.ನರಸಿಂಹಪ್ಪ, ನಾರಾಯಣಪ್ಪ, ಜಿ.ಈಶ್ವರಪ್ಪ, ಜಿ.ಅಶ್ವತ್ಥಪ್ಪ, ವೆಂಕಟರೋಣಪ್ಪ, ಹರಿಪ್ರಸಾದ್, ಪ್ರಕಾಶ್,
ಶ್ರೀನಿವಾಸ್, ಕೃಷ್ಣಮೂರ್ತಿ, ರಾಮಕೃಷ್ಣ, ಶಿವಕುಮಾರ್ ಇದ್ದರು.

ಸಮಾಧಿ ಕೆಡಿವಿದರೂ ಕ್ರಮವಿಲ್ಲ

ಏ.24ರಂದು ಇದೇ ಗ್ರಾಮದಲ್ಲಿ ಸವರ್ಣಿಯರು ರಾತ್ರೋರಾತ್ರಿ ದಲಿತರ ಸ್ಮಶಾನಗಳನ್ನು ಕಿತ್ತು ರಸ್ತೆಯನ್ನಾಗಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೆ ಪಿಡಿಒ ಕೊಡಬೇಕು ಎಂದರು. ಘಟನೆ ನಡೆದು 7 ದಿನ ಕಳೆದರೂ ಇದುವರೆಗೂ ಸಂಬಂಧಪಟ್ಟವರು ಕ್ರಮಕೈಗೊಳ್ಳದಿರುವುದು ನೋವಿನ ವಿಚಾರವಾಗಿದೆ ಎಂದು ಜಿ.ಸಿ.ವೆಂಕಟರಮಣಪ್ಪ ಬೇಸರ ವ್ಯಕ್ತಪಡಿಸಿದರು. ಸಾಲದೆಂಬಂತೆ ಘಟನಾ ಸ್ಥಳಕ್ಕೆ ತಹಸೀಲ್ದಾರ್ ಇತರೆ ಅಧಿಕಾರಿಗಳು ಕೇವಲ ಸ್ಥಳ ಪರಿಶೀಲನೆ ನಡೆಸಿ ಹೋಗಿದ್ದು ಅವರೂ ಸಹ ಸ್ಮಶಾನ ತೆರವುಗೊಳಿಸಿರುವುದನ್ನು ಖಾತ್ರಿ ಪಡೆಸಿದ್ದಾರೆ. ಆದರೆ ಪಿಡಿಒ ಸೇರಿ ಇಡೀ ಆಡಳಿತ ಯಂತ್ರಾಂಗ ದಲಿತವಿರೋಧಿಯಾಗಿ ವರ್ತಿಸುತ್ತಿರುವುದರಿಂದ ಈ ಕುರಿತು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು. *** ಪ್ರದೀಪ್ ಈಶ್ವರ್ ದಲಿತ ವಿರೋಧಿ ಚುನಾವಣೆಯ ಸಂದರ್ಭದಲ್ಲಿ ದಲಿತರ ಮನೆಗಳಿಗೆ ಭೇಟಿ ನೀಡಿ ಊಟ ಮಾಡುವುದು ನಂತರ ಅಂಬೇಡ್ಕರ್‌ರವರ ಭಾವಚಿತ್ರ ಹಿಡಿದು ಮತಯಾಚನೆ ಮಾಡುವುದನ್ನು ಹೊರತುಪಡಿಸಿದರೆ ಇಲ್ಲಿನ ಶಾಸಕ ಪ್ರದೀಪ್ ಈಶ್ವರ್‌ಗೆ ದಲಿತರ ಬಗ್ಗೆ ಯಾವುದೇ ಕಾಳಜಿ ಇಲ್ಲ. ದಲಿತ ವಿರೋಧಿಯಂತೆ ವರ್ತಿಸುತ್ತಿದ್ದಾರೆ ಎಂದು ಜಿ.ಸಿ.ವೆಂಕಟರಮಣಪ್ಪ ಕಿಡಿಕಾರಿದರು. ಬಂದರಹಳ್ಳಿಯಲ್ಲಿ ಸವರ್ಣಿಯರಿಂದ ಆಗುತ್ತಿರುವ ತೊಂದರೆ ಗ್ರಾಮಕ್ಕೆ ಮೂಲಸೌರ್ಕರ್ಯಗಳ ಕೊರತೆ ಸೇರಿ ಸಮಸ್ಯೆಯ ಬಗ್ಗೆ ಖುದ್ದು ಭೇಟಿ ಮಾಡಿ ಪರಿಹರಿಸುವಂತೆ ಕೋರಿದರೂ ಪರಿಹರಿಸದೇ ದಲಿತರನ್ನು ಕಡೆಗಣಿಸಿದ್ದಾರೆ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದ ಶಾಸಕನಾದೆ ಎಂದು ಹೇಳುವ ಶಾಸಕ ಪ್ರದೀಪ್‌ಈಶ್ವರ್ ಅಂಬೇಡ್ಕರ್‌ರ ಮಕ್ಕಳಿಗೆ ಅನ್ಯಾಯ ಆದಾಗ ಸ್ಪಂದಿಸದಿರುವುದು ದುರಂತವಾಗಿದೆ ಎಂದು ಬೇಸರವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT