ಬುಧವಾರ, ಸೆಪ್ಟೆಂಬರ್ 22, 2021
25 °C
ಅನಿವಾಸಿ ಭಾರತೀಯರ ಕರೆಗೆ ಸ್ಪಂದಿಸಿ ಸಹಾಯಹಸ್ತ ಚಾಚುತ್ತಿರುವ ಮುನ್ಸಿಫಲ್ ಬಡಾವಣೆಯ ನಿವಾಸಿ ಅಬ್ದುಲ್ ಜವಾದ್ ಪಾಷಾ

ಬಹರೇನ್‌ನಲ್ಲಿ ಸಂಕಷ್ಟಕ್ಕೀಡಾಗಿರುವ ಭಾರತೀಯರಿಗೆ ಚಿಕ್ಕಬಳ್ಳಾಪುರದ ವ್ಯಕ್ತಿಯ ಸಹಾಯ

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಕೊರೊನಾ ವೈರಸ್ ಭೀತಿಯ ಬೆನ್ನಲೇ ಜಾರಿಗೆ ಬಂದ ಲಾಕ್‌ಡೌನ್‌ನಿಂದ ಜಿಲ್ಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಸಹಾಯಹಸ್ತ ಚಾಚುವ ಮೂಲಕ ಸಾಕಷ್ಟು ಜನರು ಮಾನವೀಯತೆ ಮೆರೆದಿರುವಂತೆ, ವಿದೇಶದಲ್ಲಿ ಕೂಡ ಸಂಕಷ್ಟಕ್ಕೆ ಸಿಲುಕಿದ ಅನಿವಾಸಿ ಭಾರತೀಯರಿಗೆ ನಗರದ ನಿವಾಸಿಯೊಬ್ಬರು ಆಪತ್ಭಾಂದವನಂತೆ ಸಹಾಯಹಸ್ತ ಚಾಚುತ್ತಿರುವುದು ತಿಳಿದು ಜಿಲ್ಲೆಯ ಜನರು ಹೆಮ್ಮೆಪಡುತ್ತಿದ್ದಾರೆ.

ನಗರದ 18ನೇ ವಾರ್ಡ್‌ ಮುನ್ಸಿಫಲ್ ಬಡಾವಣೆ ನಿವಾಸಿ ಅಬ್ದುಲ್ ಜವಾದ್ ಪಾಷಾ ಅವರು ಪರ್ಷಿಯನ್ ಕೊಲ್ಲಿಯಲ್ಲಿರುವ ದ್ವೀಪ ರಾಷ್ಟ್ರ ಬಹರೇನ್‌ನಲ್ಲಿ ಕಳೆದ ಕೆಲ ತಿಂಗಳಿಂದ ಕೋವಿಡ್‌, ಲಾಕ್‌ಡೌನ್‌ನಿಂದ ತೊಂದರೆಗೆ ಸಿಲುಕಿದವರಿಗೆ ನೆರವು ನೀಡುತ್ತ ಮಾನವೀಯತೆ ಮೆರೆಯುತ್ತಿದ್ದಾರೆ.

ಮುನ್ಸಿಫಲ್ ಬಡಾವಣೆ ನಿವಾಸಿ ಕೆಎಸ್ಆರ್‌ಟಿಸಿಯ ನಿವೃತ್ತ ಚಾಲಕ ಅಬ್ದುಲ್‌ ಬಶೀರ್ ಮತ್ತು ಗೌಸ್‌ ಉನ್ನಿಸಾ ದಂಪತಿಯ ಎಂಟು ಮಕ್ಕಳ ಪೈಕಿ ಒಬ್ಬರಾದ ಅಬ್ದುಲ್ ಜವಾದ್ ಪಾಷಾ ಅವರು ಬಹರೇನ್‌ನಲ್ಲಿ ಪ್ರಸ್ತುತ ಮಸ್ಕತಿ ಫಾರ್ಮಸಿ ಎಂಬ ಕಂಪೆನಿಯಲ್ಲಿ ಫಾರ್ಮಾಸ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ.

ನಗರದ ಮುನ್ಸಿಫಲ್ ಕಾಲೇಜಿನಲ್ಲಿ ಫಾರ್ಮಸಿ ಕೋರ್ಸ್‌ ಓದಿರುವ ಅಬ್ದುಲ್ ಜವಾದ್ ಪಾಷಾ ಅವರು ಉದ್ಯೋಗದ ನಿಮಿತ್ತ ಕಳೆದ 11 ವರ್ಷಗಳಿಂದ ಬಹರೇನ್‌ನಲ್ಲಿ ನೆಲೆಸಿದ್ದಾರೆ. ಅಲ್ಲಿನ ಭಾರತದ ರಾಯಭಾರ ಕಚೇರಿಯ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಡಿಯನ್ ಕಮ್ಯುನಿಟಿ ರಿಲೀಫ್ ಫಂಡ್ (ಐಸಿಆರ್‌ಎಫ್‌) ಸದಸ್ಯರಾಗಿರುವ ಇವರು, ಇಂಡಿಯನ್ ಸೋಷಿಯಲ್ ಫೋರಂ (ಐಎಸ್‌ಎಫ್‌) ಅಧ್ಯಕ್ಷರಾಗಿ ಕೂಡ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಬಹರೇನ್‌ನಲ್ಲಿ ಕೋವಿಡ್‌, ಲಾಕ್‌ಡೌನ್‌ ಕಾರಣಕ್ಕೆ ಉದ್ಯೋಗ ಕಳೆದುಕೊಂಡು, ಸಂಬಳವೂ ಸಿಗದೆ, ಕೈಯಲ್ಲಿರುವ ಹಣವು ಖಾಲಿಯಾಗಿ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತ ಅತಂತ್ರ ಸ್ಥಿತಿಯಲ್ಲಿರುವ ಕರ್ನಾಟಕ, ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ ಸೇರಿದಂತೆ ವಿವಿಧ ದೇಶಗಳ ಸಾವಿರಾರು ಕುಟುಂಬಗಳಿಗೆ, ವಲಸೆ ಕಾರ್ಮಿಕರಿಗೆ ದೇಶ, ಭಾಷೆ, ಧರ್ಮ, ಜಾತಿ ನೋಡದೆ ನೆರವು ನೀಡುತ್ತಿರುವ ಐಸಿಆರ್‌ಎಫ್‌ ಸೇವಾ ಕಾರ್ಯದಲ್ಲಿ ಇವರ ಪಾತ್ರವೂ ಹಿರಿದಾಗಿದೆ.

ಮನಮಾ, ಸಲ್ಮಾಬಾದ್, ತುಬ್ಲಿ ಮುಂತಾದ ಪ್ರದೇಶಗಳಲ್ಲಿ ಸಂಕಷ್ಟದಲ್ಲಿರುವವರಿಗೆ ಆಹಾರ, ದಿನಸಿ ಕಿಟ್‌, ಮಾಸ್ಕ್, ಸಾಬೂನು ವಿತರಿಸುವ ಜತೆಗೆ ಕೋವಿಡ್‌ ತಡೆಗಟ್ಟುವ ಮುಂಜಾಗ್ರತಾ ಕ್ರಮಗಳ ಕುರಿತಾದ ಅರಿವು ಮೂಡಿಸುವ ಕಾರ್ಯದಲ್ಲಿ ಅಬ್ದುಲ್ ಜವಾದ್ ಪಾಷಾ ಅವರು ತೊಡಗಿಸಿಕೊಂಡಿದ್ದಾರೆ.

ಇಷ್ಟೇ ಅಲ್ಲದೆ, ಆಸ್ಪತ್ರೆಗಳು, ಕಾರಾಗೃಹಗಳು, ಕಾರ್ಮಿಕ ನ್ಯಾಯಾಲಯಗಳಿಗೆ ಭೇಟಿ ನೀಡಿ ಕಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚುವ ಜತೆಗೆ, ಕಾರ್ಮಿಕರಿಗೆ ಉಚಿತ ವೈದ್ಯಕೀಯ ಶಿಬಿರಗಳಲ್ಲಿ ಚಿಕಿತ್ಸೆಗೆ ನೆರವಾಗುವ ಮೂಲಕ ನೋವಿಗೆ ಮಿಡಿಯುವ ಕೆಲಸ ಮಾಡುತ್ತಿದ್ದಾರೆ.

ಊರಿಗೆ ವಾಪಾಸಾಗಲು ಪರದಾಡುವ ಕಾರ್ಮಿಕರಿಗೆ ನೆರವು ನೀಡಿ, ಅಗತ್ಯ ವ್ಯವಸ್ಥೆ ಕಲ್ಪಿಸುವುದು. ವಿವಿಧ ಕಾಯಿಲೆ, ಕೋವಿಡ್‌ನಿಂದ ಮೃತಪಟ್ಟ ವಾರಸುದಾರರಿಲ್ಲದವರ ಶವಗಳ ಅಂತ್ಯಕ್ರಿಯೆ ನೆರವೇರಿಸುವಂತಹ ನಿಸ್ವಾರ್ಥ ಸೇವೆಗಳ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಬಹರೇನ್ ಕನ್ನಡ ಸಂಘದ ಸದಸ್ಯರಲ್ಲಿ ಒಬ್ಬರಾಗಿರುವ ಅಬ್ದುಲ್ ಜವಾದ್ ಪಾಷಾ ಅವರು, ಕನ್ನಡಿಗರೆಲ್ಲ ಸೇರಿ ಕೈಗೆತ್ತಿಕೊಂಡ ಕನ್ನಡ ಭವನ ನಿರ್ಮಾಣ ಯೋಜನೆಗೆ ಸಹ ಆರ್ಥಿಕ ನೆರವು ನೀಡುವ ಮೂಲಕ ಮಾತೃಭಾಷೆಯ ಮೇಲಿನ ಪ್ರೀತಿ ಮೆರೆದಿದ್ದಾರೆ.

ಸಾವಿರಾರು ಕುಟುಂಬಗಳಿಗೆ ನೆರವು

ಅಬ್ದುಲ್ ಜವಾದ್ ಪಾಷಾ ಅವರು ಸಾಮುದಾಯಿಕ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸುವ ಜತೆಗೆ ವೈಯಕ್ತಿಕವಾಗಿ ಕೂಡ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈವರೆಗೆ ಸಾವಿರಾರು ಕುಟುಂಬಗಳಿಗೆ 1,000ಕ್ಕೂ ದಿನಸಿ ಕಿಟ್, 1,300 ಇಫ್ತಾರ್ ಕಿಟ್, 600 ಈದ್ ಕಿಟ್, 160 ಫಿತ್ರ್ ಕಿಟ್ ಜತೆಗೆ 60ಕ್ಕೂ ಜನರಿಗೆ ಅಗತ್ಯ ಔಷಧಿ, ಮಾತ್ರೆ ವಿತರಿಸುವ ಮೂಲಕ ತಮ್ಮದೇ ಆದ ನೆರವಿನ ಮೂಲಕ ಸಾರ್ಥಕತೆ ಕಂಡುಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು