ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಧಿಕಾರದ ಎಡವಟ್ಟು; ನಿವೇಶನದ ಮೇಲೆಯೇ ರಸ್ತೆ!

ಐಡಿಎಸ್‌ಎಂಟಿ ಬಡಾವಣೆ; ಪ್ರಭಾವಿಗಳ ಒತ್ತಡಕ್ಕೆ ಮಣಿದರೇ ಅಧಿಕಾರಿಗಳು?
ಡಿ.ಎಂ.ಕುರ್ಕೆ ಪ್ರಶಾಂತ್
Published 8 ಜನವರಿ 2024, 6:54 IST
Last Updated 8 ಜನವರಿ 2024, 6:54 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ವಾರ್ಡ್‌ ನಂ 6ರ ಐಡಿಎಸ್‌ಎಂಟಿ ಬಡಾವಣೆ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇರುತ್ತದೆ. ನಿವೇಶನಗಳ ಒತ್ತುವರಿ, ನಿವೇಶನಗಳು ನೋಂದಣಿ ಆಗಿದ್ದರೂ ಅಳತೆ ಕಡಿಮೆ ಇರುವುದು, ಖಾತೆಗಳು ಆಗದಿರುವುದು...ಹೀಗೆ ನಾನಾ ಕಾರಣದಿಂದ ಬಡಾವಣೆ ವಿಚಾರಗಳು ಆಗಾಗ್ಗೆ ವಿವಾದದ ರೂಪು ಪಡೆಯುತ್ತವೆ. 

ಇಂತಹದ್ದೇ ಎಡವಟ್ಟು ಈಗ ಮತ್ತೊಂದು ಬೆಳಕಿಗೆ ಬಂದಿದೆ. ಕೊನೆಗೂ ಎಚ್ಚೆತ್ತ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರ ನಕ್ಷೆ ಸರಿಪಡಿಸುವುದಾಗಿ ಹೇಳಿದೆ. ಆದರೆ ಈ ಎಡವಟ್ಟು ನಾನಾ ರೀತಿಯ ಅನುಮಾನ ಮತ್ತು ಚರ್ಚೆಗೆ ಕಾರಣವಾಗಿದೆ.

ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಪ್ರಭಾವಿಗಳ ಒತ್ತಡಕ್ಕೆ ಮಣಿದರೆ?, ಐಡಿಎಸ್‌ಎಂಟಿಯಂತಹ ಪ್ರತಿಷ್ಠಿತ ಮತ್ತು ಹಳೆ ಬಡಾವಣೆಯ ನಕ್ಷೆಗಳು ಪ್ರಾಧಿಕಾರದ ಬಳಿ ಇಲ್ಲವೆ? ಪ್ರಾಧಿಕಾರವು ಕಣ್ಣು ಮುಚ್ಚಿ ಅನುಮೋದನೆ ನೀಡುತ್ತದೆಯೇ?–ಹೀಗೆ ನಾನಾ ಪ್ರಶ್ನೆಗಳು ಮೂಡಿವೆ. 

ಏನಿದು ವಿವಾದ: ಐಡಿಎಸ್‌ಎಂಟಿ ಬಡಾವಣೆಯ ನಿವೇಶನದ ಸಂಖ್ಯೆ 313 ಮತ್ತು 318ಕ್ಕೆ ಹೊಂದಿಕೊಂಡಂತೆ ಸರ್ವೆ ನಂ 174/8ರಲ್ಲಿ 1.02 ಎಕರೆ ಜಮೀನು ಇದೆ. ಈ ಜಮೀನನ್ನು ಹ್ಯಾಪಿ ವರ್ಡ್ ಎಸ್ಟೇಟ್ ಮತ್ತು ಪ್ರೈವೇಟ್ ಲಿಮಿಟೆಡ್ ಸಂಸ್ಥೆಯವರು ಬಡಾವಣೆಯಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ. ಪ್ರಭಾವಿ ರಾಜಕೀಯ ವ್ಯಕ್ತಿಗಳ ಕುಟುಂಬದ ಸದಸ್ಯರು ಈ ಸಂಸ್ಥೆಯ ಪಾಲುದಾರರಾಗಿದ್ದಾರೆ ಎನ್ನಲಾಗುತ್ತಿದೆ. 

313 ಮತ್ತು 318 ಸಂಖ್ಯೆಯ ನಿವೇಶನಗಳನ್ನು ಈ ಸಂಸ್ಥೆಯವರು ಅಭಿವೃದ್ಧಿಪಡಿಸುತ್ತಿರುವ ಬಡಾವಣೆಗೆ ರಸ್ತೆ ಎಂಬುದಾಗಿ ನಕ್ಷೆಯಲ್ಲಿ ತೋರಿಸಲಾಗಿದೆ. ‘ಸ್ಥಳದಲ್ಲಿ ಅಭಿವೃದ್ಧಿಪಡಿಸಲು ಮಾತ್ರ ಅನುಮೋದನೆ ನೀಡಲಾಗಿದೆ’ ಎಂದು ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದದ ಆಯುಕ್ತರು ತಿಳಿಸಿದ್ದಾರೆ.  

ಮೂಲ ನಕ್ಷೆಯಲ್ಲಿ ನಿವೇಶನ ಸಂಖ್ಯೆ 318 ಮತ್ತು 313 ಅನ್ನು ರಸ್ತೆ ಎಂದು ತೋರಿಸಿರುವುದು ಅಕ್ರಮ. ರಾಜಕೀಯ ಪಟ್ಟಭದ್ರರನ್ನು ಖುಷಿಪಡಿಸಲು ಈ ಕೃತ್ಯ ಎಸಗಲಾಗಿದೆ. ಈ ಬಗ್ಗೆ ಚಿಕ್ಕಬಳ್ಳಾಪುರ ನಗರಸಭೆ ಪೌರಾಯುಕ್ತರು ಕೂಡಲೇ ಎಚ್ಚೆತ್ತು ಮರು ಸರ್ವೆ ನಕ್ಷೆಯಂತೆ ಐಡಿಎಸ್‌ಎಂಟಿ ಬಡಾವಣೆಯ ಗಡಿ ಗುರುತಿಸಬೇಕು ಎಂದು ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ, ನಗರಸಭೆ ಆಯುಕ್ತರಿಗೆ ನಗರಸಭೆ ಮಾಜಿ ಸದಸ್ಯ ಅಮೀರ್ ಮಹಮದ್ ಸಾಧಿಕ್ ಲಿಖಿತವಾಗಿ ಮನವಿ ಮಾಡಿದರು. ಅಲ್ಲದೆ ಐಡಿಎಸ್‌ಎಂಟಿ ಬಡಾವಣೆಯ ದೃಢೀಕೃತ ಮೂಲ ನಕ್ಷೆ, ನ್ಯಾಯಾಲಯದ ಆದೇಶಗಳು ಸೇರಿದಂತೆ ದಾಖಲೆಗಳ ಸಮೇತ ರಾಜ್ಯ ಲೋಕಾಯುಕ್ತರಿಗೆ ದೂರು ನೀಡಿದರು. 

ಯಾವಾಗ ವಿವಾದವು ಲೋಕಾಯುಕ್ತರ ಕಚೇರಿ ತಲುಪುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತರು. ‘ಸರ್ಕಾರದಿಂದ ಅನುಮೋದನೆಗೊಂಡ ಮಹಾಯೋಜನೆಯಲ್ಲಿ 9 ಮೀಟರ್ ಅಗಲಕ್ಕೆ ಅಳವಡಿಸಿರುವ ಪ್ರದೇಶವು ನಿವೇಶನವೇ ಅಥವಾ ರಸ್ತೆ ಪ್ರದೇಶವೇ ಎಂಬುದರ ಕುರಿತು ಸ್ಥಳ ಪರಿಶೀಲಿಸಿ ವರದಿ ನೀಡುವಂತೆ’ ಚಿಕ್ಕಬಳ್ಳಾಪುರ ನಗರಸಭೆ ಪೌರಾಯುಕ್ತರಿಗೆ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪತ್ರ ಬರೆದರು.

ಈ ಪತ್ರ ಆಧರಿಸಿ ನಗರಸಭೆ ಪೌರಾಯುಕ್ತರು ಸ್ಥಳ ಪರಿಶೀಲಿಸಿ ಪ್ರಾಧಿಕಾರದ ಆಯುಕ್ತರಿಗೆ ವರದಿ ನೀಡಿದ್ದಾರೆ. ಈ ವರದಿ ಪ್ರಕಾರ ನಿವೇಶನ ಸಂಖ್ಯೆ 313 ಮತ್ತು 318 ಐಡಿಎಸ್‌ಎಂಟಿ ಬಡಾವಣೆಯ ನಿವೇಶನಗಳೇ ಆಗಿವೆ. ಈ ನಿವೇಶನಗಳನ್ನು ಹೊರತುಪಡಿಸಿ ರಸ್ತೆ ಮಾರ್ಪಾಡು ಮಾಡುವ ಬಗ್ಗೆ ಕ್ರಮಕೈಗೊಳ್ಳುವಂತೆ ಪೌರಾಯುಕ್ತರು ಕೋರಿದ್ದಾರೆ. ಐಡಿಎಸ್‌ಎಂಟಿ ಬಡಾವಣೆಯ ನಕ್ಷೆಯನ್ನು ಸಹ ಲಗತ್ತಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. 

ಅಮೀರ್ ಮಹಮದ್ ಸಾಧಿಕ್, ದೂರು ನೀಡಿದ ಕಾರಣ ‘ನಕ್ಷೆ’ಯ ವಿನ್ಯಾಸ ಬದಲಾವಣೆ ಆಯಿತೇ, ಲೋಕಾಯುಕ್ತರ ಕಚೇರಿಗೆ ದೂರು ಕೊಂಡೊಯ್ಯದಿದ್ದರೆ ಬೆಲೆಬಾಳುವ ನಿವೇಶನಗಳು ಸ್ವಾರ್ಥಕ್ಕಾಗಿ ರಸ್ತೆ ಪಾಲಾಗುತ್ತಿದ್ದವೇ ಎನ್ನುವ ಚರ್ಚೆ ಜೋರಾಗಿದೆ.

ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ
ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ

- ದೂರು ಲೋಕಾಯುಕ್ತರ ಕಚೇರಿ ಮುಟ್ಟುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ನಿವೇಶನದ ಸಂಖ್ಯೆ 318 ಮತ್ತು 313 ರಸ್ತೆ ಎಂದು ನಮೂದು ಇವು ನಿವೇಶನ ಎಂದು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವರದಿ ನೀಡಿದ ಪೌರಾಯುಕ್ತರು

‘ರಾಜಕೀಯ ಪ್ರಭಾವಕ್ಕೆ ಒಳಗಾದ ಅಧಿಕಾರಿಗಳು’ ಐಡಿಎಸ್‌ಎಂಟಿ ಬಡಾವಣೆಯು ನಗರದಲ್ಲಿಯೇ ಪ್ರತಿಷ್ಠಿತ ಮತ್ತು ಹಳೆ ಬಡಾವಣೆಯಾಗಿದೆ. ನಿವೇಶನ ಸಂಖ್ಯೆ 318 ಮತ್ತು 313 ಈಗಾಗಲೇ ಹಂಚಿಕೆಯೂ ಆಗಿವೆ. ಆದರೆ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಅಧಿಕಾರಿಗಳು ಈ ನಿವೇಶನಗಳಲ್ಲಿ ರಸ್ತೆ ಎಂಬುದಾಗಿ ತೋರಿಸಿದ್ದಾರೆ ಎಂದು ನಗರಸಭೆ ಮಾಜಿ ಸದಸ್ಯ ಹಾಗೂ ದೂರುದಾರ ಅಮೀರ್ ಮಹಮದ್ ಸಾಧಿಕ್ ಆರೋಪಿಸುವರು.  ನಾವು ಲೋಕಾಯುಕ್ತಕ್ಕೆ ದೂರು ಸಲ್ಲಿಸದಿದ್ದರೆ ಈ ನಿವೇಶನಗಳ ಮೇಲೆಯೇ ರಸ್ತೆ ನಿರ್ಮಾಣವಾಗುತ್ತಿತ್ತು. ನಗರಾಭಿವೃದ್ಧಿ ಪ್ರಾಧಿಕಾರವು ಕಣ್ಣು ಮುಚ್ಚಿ ಮೂಲ ನಕ್ಷೆ ವಿನ್ಯಾಸಕ್ಕೆ ಅನುಮೋದನೆ ನೀಡಿದಂತೆ ಕಾಣುತ್ತದೆ. ದೂರು ನೀಡಿದ ನಂತರ ವಿನ್ಯಾಸ ಬದಲಾವಣೆ ಮಾಡಿದ್ದಾರೆ ಎಂದರು. ದೂರಿನ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮಜರುಗಿಸದೆ ನಿರ್ಲಕ್ಷ್ಯ ವಹಿಸಿದ್ದರು. ಈ ಕಾರಣದಿಂದ ಲೋಕಾಯುಕ್ತರ ಮೊರೆ ಹೋದೆವು ಎಂದು ಹೇಳಿದರು.

‘ಬದಲಾವಣೆ ಮಾಡುತ್ತೇವೆ’ ಮಾಸ್ಟರ್ ಪ್ಲಾನ್ ಪ್ರಕಾರ ರಸ್ತೆ ಎಂಬುದಾಗಿ ನಮೂದಾಗಿತ್ತು. ಆದರೆ ನಗರಸಭೆಯಿಂದ ಇಲ್ಲಿ ನಿವೇಶನಗಳು ಇವೆ ಎಂದು ವರದಿ ನೀಡಿದ್ದಾರೆ. ಆ ಪ್ರಕಾರ ನಕ್ಷೆಯಲ್ಲಿ ಬದಲಾವಣೆ ಮಾಡುತ್ತೇವೆ ಎಂದು ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ‍ಪ್ರಾಧಿಕಾರದ ಆಯುಕ್ತ ಬಿ.ಟಿ.ರಂಗಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT