ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: 57 ಶಾಲೆ ಮೇಲೆ ವಿದ್ಯುತ್ ತಂತಿಯ ತೂಗುಗತ್ತಿ

ತೆರವಿಗೆ ಮೂರು ತಿಂಗಳ ಗಡುವು ನೀಡಿದ ಹೈಕೋರ್ಟ್: ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಅಧಿಕ
Last Updated 21 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರಾಜ್ಯದ ಶಾಲಾ, ಕಾಲೇಜುಗಳ ಮೇಲೆ ಹಾದು ಹೋಗಿರುವ ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರಿಸುವಂತೆ ಮತ್ತು ಎ.ಬಿ ಕೇಬಲ್ ಅಳವಡಿಸಲು ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಹೈಕೋರ್ಟ್ ಮೂರು ತಿಂಗಳ ಗಡುವು ನೀಡಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೀಗೆ 57 ಶಾಲಾ, ಕಾಲೇಜುಗಳ ಮೇಲೆ ವಿದ್ಯತ್ ತಂತಿಗಳು ಹಾದು ಹೋಗಿವೆ. ಚಿಕ್ಕಬಳ್ಳಾಪುರ ತಾಲ್ಲೂಕಿನ 25, ಬಾಗೇಪಲ್ಲಿ ತಾಲ್ಲೂಕಿನ 4, ಗೌರಿಬಿದನೂರು ತಾಲ್ಲೂಕಿನ ಐದು, ಶಿಡ್ಲಘಟ್ಟ ತಾಲ್ಲೂಕಿನ 22 ಮತ್ತು ಚಿಂತಾಮಣಿ ತಾಲ್ಲೂಕಿನ ಒಂದು ಶಾಲೆಯ ಮೇಲೆ ವಿದ್ಯುತ್ ಹಾದು ಹೋಗಿದೆ. ಗುಡಿಬಂಡೆ ತಾಲ್ಲೂಕಿನ ಯಾವ ಶಾಲೆಯೂ ಈ ಪಟ್ಟಿಯಲ್ಲಿ ಇಲ್ಲ.

ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಮೇಲೆ ಹಾದು ಹೋಗಿರುವ ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರಿಸುವಂತೆ ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೂ ನಿರ್ದೇಶನ ನೀಡಿದೆ.66 ಕೆ.ವಿ ಹೈವೋಲ್ಟೇಜ್ ವಿದ್ಯುತ್ ಪ್ರಸರಣ ಮಾರ್ಗಗಳನ್ನು ಪರ್ಯಾಯವಾಗಿ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಸೂಚಿಸಲಾಗಿದೆ.

ಯಾವ ಶಾಲೆ: ಆಯಾ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಪಟ್ಟಿ ಸಲ್ಲಿಸಿದ್ದಾರೆ. ಆ ಪ್ರಕಾರ ಚಿಕ್ಕಬಳ್ಳಾಪುರ ತಾಲ್ಲೂಕಿನ ಬನ್ನಿಕುಪ್ಪೆ, ಹಿರೇನಾಗವಲ್ಲಿ, ಬೊಮ್ಮಗಾನಹಳ್ಳಿ, ಬುಶೆಟ್ಟಹಳ್ಳಿ, ಮನ್ನಾರಪುರ, ಕಾಕಲಚಿಂತೆ, ಕುಪ್ಪಹಳ್ಳಿ, ಕೊತ್ತನೂರು, ಕಣಜೇನಹಳ್ಳಿ, ಕುಡುವತಿ, ತಿರ್ನಹಳ್ಳಿ, ಗಾಂಧಿಪುರ, ಸುಲ್ತಾನಪೇಟೆ, ಆರ್.ಜಿ. ಹಳ್ಳಿ, ಗಿಡ್ನಹಳ್ಳಿ, ಕೊಂಡೇನಹಳ್ಳಿ, ಯಲಗನಹಳ್ಳಿ, ಕಾಚಕಡತ ಗ್ರಾಮಗಳ ಸರ್ಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳು ಮತ್ತು ಚಿಕ್ಕಬಳ್ಳಾಪುರ ನಗರದ ಪೂರ್ಣಪ್ರಜ್ಞಾ ಶಾಲೆ, ಬಿ.ಬಿ ರಸ್ತೆಯ ಸರ್ಕಾರಿ ಕರ್ನಾಟಕ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢಶಾಲೆ, ನ್ಯೂಹಾರಿಜನ್, ಎಸ್‌ವಿಎಂ ಶಾಲೆ, ಜೋಸೆಫ್ ಶಾಲೆ ಆವರಣದಲ್ಲಿರುವ ವಿದ್ಯುತ್ ಕಂಬಗಳು ಮತ್ತು ತಂತಿಗಳಿದ್ದು, ಇವುಗಳನ್ನು ತೆರವುಗೊಳಿಸಬೇಕು ಎಂದು ಸೂಚಿಸಲಾಗಿದೆ.

ಬಾಗೇಪಲ್ಲಿ ತಾಲ್ಲೂಕಿನ ಯಲ್ಲಂಪಲ್ಲಿ ಸರ್ಕಾರಿ ಪ್ರೌಢಶಾಲೆ, ಆಚೇಪಲ್ಲಿ, ಗುಮ್ಮಾಳ್ಳಪಲ್ಲಿ, ರಾಯದುರ್ಗಪಲ್ಲಿ ಹಿರಿಯ ಪ್ರಾಥಮಿಕ ಶಾಲೆ, ಗೌರಿಬಿದನೂರು ತಾಲ್ಲೂಕಿನ ಗೆದರೆ, ಕುಪ್ಪೇನಹಳ್ಳಿ, ಚಿಂತಡಪಿ, ಗುಡ್ಲನರಸೇನಹಳ್ಳಿ, ದೊಡ್ಡದಾಸರಲಹಳ್ಳಿ, ಚಿಂತಾಮಣಿ ತಾಲ್ಲೂಕಿನ ಬಚ್ಚಗಾನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೇಲೆ ಹಾದು ಹೋಗಿರುವ ವಿದ್ಯುತ್ ಮಾರ್ಗಗಳನ್ನು ತೆರವುಗೊಳಿಸಬೇಕಾಗಿದೆ.

ಶಿಡ್ಲಘಟ್ಟ ತಾಲ್ಲೂಕಿನ ತಿಪ್ಪೇನಹಳ್ಳಿ, ಹಿತ್ತಲಹಳ್ಳಿ, ಗಡಿಮಿಂಚೇನಹಳ್ಳಿ, ಸುಗುಟೂರು, ಮುತ್ತೂರು, ತಲದುಮ್ಮನಹಳ್ಳಿ, ಅಮ್ಮಗಾರನಹಳ್ಳಿ, ದಡಂಘಟ್ಟ, ಬೈರಸಂದ್ರ, ಇರಗಪ್ಪನಹಳ್ಳಿ, ಸಾದಲಿ, ನೇರಳೆಮರದಹಳ್ಳಿ, ಬಂದಾರ್ಲಹಳ್ಳಿ, ಎಸ್. ದೇವನಹಾನಹಳ್ಳಿ, ಪೂಸಗಾನದೊಡ್ಡಿ, ಜರಗನಹಳ್ಳಿ, ಆನೂರು ಹುಣಸೇನಹಳ್ಳಿ, ವೀರಾಪುರ, ಮಜುರಾ ಹೊಸೂರು, ದೊಡ್ಡತೇಕಹಳ್ಳಿ, ಸೋಮನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ಮೇಲೆ ವಿದ್ಯುತ್ ತಂತಿಗಳು ಹಾದು ಹೋಗಿವೆ. ಈ ಶಾಲೆಗಳ ಬಳಿ ಹಾದು ಹೋಗಿರುವ ವಿದ್ಯುತ್ ತಂತಿಗಳನ್ನು ತೆರವುಗೊಳಿಸಬೇಕಿದೆ.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯು ಈಗಾಗಲೇ ಈ ಪಟ್ಟಿಯನ್ನು ಬೆಸ್ಕಾಂಗೆ ನೀಡಿದ್ದು ತೆರವುಗೊಳಿಸುವಂತೆ ಮನವಿ ಮಾಡಿದೆ.

ಕೊಪ್ಪಳದ ಬನ್ನಿಕಟ್ಟೆ ಶಾಲೆಯಲ್ಲಿ ಧ್ವಜ ಸ್ತಂಭ ತೆರವುಗೊಳಿಸುವ ವೇಳೆ ವಿದ್ಯುತ್ ಪ್ರವಹಿಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದ. ಈ ವಿಚಾರವಾಗಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿತ್ತು. ವಿದ್ಯುತ್ ಮಾರ್ಗಗಳ ತೆರವಿಗೆ ಸೂಚಿಸಿತ್ತು.

ಪೋಷಕರ ಸಂತಸ: ಶಾಲಾ, ಕಾಲೇಜುಗಳ ಆವರಣದಲ್ಲಿ ವಿದ್ಯುತ್ ಪರಿವರ್ತಕ, ಹೈವೋಲ್ಟೇಜ್ ತಂತಿಗಳು, ಕಂಬಗಳನ್ನು ಅಳವಡಿಸಿರುವುದು ಸಹಜವಾಗಿ ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಹೈಕೋರ್ಟ್ ನಿರ್ದೇಶನ ಮತ್ತು ಗಡುವು ಪೋಷಕರಲ್ಲಿ ನಿಟ್ಟುಸಿರಿಗೆ ಕಾರಣವಾಗಿದೆ.

***

ಬೆಸ್ಕಾಂಗೆ ಮಾಹಿತಿ

ಈಗಾಗಲೇ ಯಾವ ಶಾಲೆಯ ಬಳಿ ಹೈವೋಲ್ಟೇಜ್ ತಂತಿಗಳು ಹಾದು ಹೋಗಿವೆ ಎನ್ನುವ ಬಗ್ಗೆ ಬೆಸ್ಕಾಂಗೆ ಶಾಲೆಗಳ ಪಟ್ಟಿ ನೀಡಲಾಗಿದೆ. ಅವರು ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಎಲ್ಲ ಕಡೆಯೂ ತೆರವಾಗುತ್ತವೆ. ಶಿಕ್ಷಕರು, ಪೋಷಕರಿಗೂ ಇದರಿಂದ ನೆಮ್ಮದಿ ದೊರೆಯುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ.ಎಂ. ಜಯರಾಮರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

**

ಕಾಲಮಿತಿಯಲ್ಲಿ ತೆರವಿಗೆ ಆಗ್ರಹ

ಹೈಕೋರ್ಟ್ ನೀಡಿರುವ ಮೂರು ತಿಂಗಳ ಕಾಲಮಿತಿಯಲ್ಲಿ ವಿದ್ಯುತ್ ಮಾರ್ಗಗಳನ್ನು ತೆರವುಗೊಳಿಸಬೇಕು. ನಿರ್ಲಕ್ಷ್ಯವಹಿಸಬಾರದು ಎಂದು ಪೋಷಕರು ಆಗ್ರಹಿಸಿದ್ದಾರೆ.

ಸರ್ಕಾರಿ ಕೆಲಸಗಳು ಎಂದರೆ ನಿಧಾನಗತಿ ಎನ್ನುವ ಅಭಿಪ್ರಾಯವಿದೆ. ಆದ್ದರಿಂದ ಅಧಿಕಾರಿಗಳು ಈ ವಿಚಾರವಾಗಿ ಕ್ರಮವಹಿಸಬೇಕು. ಪೋಷಕರ ಆತಂಕ ದೂರ ಮಾಡಬಹುದು. ಮಕ್ಕಳು ಸಹ ಶಾಲಾ ಆವರಣದಲ್ಲಿ ನಿಶ್ಚಿಂತೆಯಿಂದ ಆಟವಾಡಬಹುದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT