ಭಾನುವಾರ, ಜುಲೈ 25, 2021
22 °C
ಟೈರ್‌ ಕಳ್ಳತನ ಪ್ರಕರಣದಲ್ಲಿ ಕರ್ತವ್ಯಲೋಪ ಎಸ್‌ಐ, ಇಬ್ಬರು ಕಾನ್‌ಸ್ಟೆಬಲ್‌ಗಳ ವೇತನ ಬಡ್ತಿ ಮುಂದೂಡಿಕೆ

ವಾರಸುದಾರರಿಲ್ಲದ ಕಾರು ಬಳಕೆ: ಕಾನ್‌ಸ್ಟೆಬಲ್ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ–7ರಲ್ಲಿ ವಾರಸುದಾರರಿಲ್ಲದೆ ಅನುಮಾನಸ್ಪದ ರೀತಿಯಲ್ಲಿ ಪತ್ತೆಯಾಗಿದ್ದ ಕಾರನ್ನು ಅನೇಕ ದಿನಗಳ ಕಾಲ ಪೊಲೀಸ್ ವಸತಿ ಸಂಕೀರ್ಣದ ಬಳಿ ನಿಲ್ಲಿಸಿಕೊಂಡು ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಬಾಗೇಪಲ್ಲಿ ತಾಲ್ಲೂಕಿನ ಪಾತಪಾಳ್ಯ ಠಾಣೆಯ ಕಾನ್‌ಸ್ಟೆಬಲ್‌ ಟಿ.ಎ.ಹರೀಶ್‌ ಅವರನ್ನು ಬುಧವಾರ ಅಮಾನತು ಮಾಡಲಾಗಿದೆ.

ಪೊಲೀಸ್ ಇಲಾಖೆ ಸಿಬ್ಬಂದಿ ವಾರಸುದಾರರಿಲ್ಲದೆ ಪತ್ತೆಯಾದ ಕಾರನ್ನು ಬಳಕೆ ಮಾಡಿಕೊಂಡು ಪುನಃ ನಗರ ಹೊರವಲಯದ ಹೊನ್ನೇನಹಳ್ಳಿ ಬಳಿ ಸರ್ವಿಸ್‌ ರಸ್ತೆಯಲ್ಲಿ ಬಿಟ್ಟು ಹೋದ ಬಗ್ಗೆ ‘ಪ್ರಜಾವಾಣಿ’ ಬುಧವಾರ ‘ವಾರಸುದಾರರಿಲ್ಲದ ಕಾರಿಗೆ ಕಾನ್‌ಸ್ಟೆಬಲ್ ಕಳ್ಳಾಟ!’ ಶೀರ್ಷಿಕೆ ಅಡಿ ವಿಶೇಷ ವರದಿ ಪ್ರಕಟಿಸಿತ್ತು.

ವರದಿ ಪ್ರಕಟವಾದ ಬೆನ್ನಲ್ಲೇ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳು ಹೊನ್ನೇನಹಳ್ಳಿ ಬಳಿ ನಿಂತಿದ್ದ ಕಾರನ್ನು ಪುನಃ ವಶಕ್ಕೆ ಪಡೆದುಕೊಂಡು, ಪ್ರಕರಣದ ತನಿಖೆ ನಡೆಸಿದ್ದರು. ಸಿಬ್ಬಂದಿಯ ವಿಚಾರಣೆ ವೇಳೆ ಟಿ.ಎ.ಹರೀಶ್‌ ಅವರು ವಾರಸುದಾರರಿಲ್ಲದ ಕಾರನ್ನು ತೆಗೆದುಕೊಂಡು ಬಂದು ಕಾನೂನು ಕ್ರಮ ಜರುಗಿಸದೆ ಕರ್ತವ್ಯಲೋಪ ಎಸಗಿದ್ದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

‘ಈ ಹಿಂದೆ ಟಿ.ಎ.ಹರೀಶ್‌ ಅವರು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಕಾರನ್ನು ತಂದು ಪೊಲೀಸ್‌ ವಸತಿ ಸಂಕೀರ್ಣದ ಬಳಿ ಅನೇಕ ದಿನಗಳ ಕಾಲ ನಿಲ್ಲಿಸಿಕೊಂಡು, ಪುನಃ ಇತ್ತೀಚೆಗೆ ಹೊನ್ನೇನಹಳ್ಳಿ ಬಳಿ ವಾಪಾಸ್‌ ಬಿಟ್ಟು ಬಂದಿರುವುದು ವಿಚಾರಣೆಯಲ್ಲಿ ತಿಳಿದು ಬಂದಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದರು.

‘ಹರೀಶ್‌ ಅವರನ್ನು ಅಮಾನತು ಮಾತನಾಡಿ, ಪ್ರಾಥಮಿಕ ತನಿಖೆ ಕೈಗೊಂಡಿದ್ದೇವೆ. ಜತೆಗೆ, ಪತ್ತೆಯಾಗಿರುವ ಕೇರಳ ಮೂಲದ ಕಾರಿನ ಮಾಲೀಕರನ್ನು ಪತ್ತೆ ಮಾಡುವ ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳಿದರು.

ಈ ಹಿಂದೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಟಿ.ಎ.ಹರೀಶ್‌ ಅವರನ್ನು ಕಳೆದ ತಿಂಗಳಷ್ಟೇ ಬಾಗೇಪಲ್ಲಿ ತಾಲ್ಲೂಕಿನ ಪಾತಪಾಳ್ಯ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು.

ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿರುವ ಕೇರಳದ ನೋಂದಣಿ ಸಂಖ್ಯೆ (ಕೆಎಲ್ 11 ಇ 4818) ಹೊಂದಿರುವ ಮಾರುತಿ ಸುಜುಕಿ ಜೆನ್ ಕಾರು, ತ್ರಿಶೂರ್ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ಜಾನಿ ಸನ್‌ ಆಫ್‌ ಕೊಚ್ಚಪ್ಪು ಎಂಬುವರ ಹೆಸರಿನಲ್ಲಿ ಈ ಕಾರು ನೋಂದಣಿಯಾಗಿದೆ. ಯಾವ ಕಾರಣಕ್ಕೆ ಈ ಕಾರು ಹೆದ್ದಾರಿಯಲ್ಲಿ ಅನಾಥವಾಗಿ ಪತ್ತೆಯಾಗಿತ್ತು ಎನ್ನುವುದು ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.


'ಪ್ರಜಾವಾಣಿ'ಯಲ್ಲಿ ಪ್ರಕಟವಾಗಿದ್ದ ವರದಿ

ಟೈರ್‌ ಪ್ರಕರಣ: ಮೂವರು ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ

ಕಳೆದ ಮಾರ್ಚ್‌ ತಿಂಗಳಲ್ಲಿ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ನಡೆದಿದೆ ಎನ್ನಲಾದ ಟೈರ್‌ ಕಳ್ಳರ ವಿಚಾರದಲ್ಲಿ ಸಿಬ್ಬಂದಿ ಕರ್ತವ್ಯಲೋಪ ಎಸಗಿದ ಪ್ರಕರಣದಲ್ಲಿ ಆ ಠಾಣೆ ಎಸ್‌ಐ ಚೇತನ್ ಗೌಡ ಮತ್ತು ಕಾನ್‌ಸ್ಟೆಬಲ್‌ಗಳಾಗಿದ್ದ ರಮಣಾ ರೆಡ್ಡಿ, ಟಿ.ಎ.ಹರೀಶ್‌ ಅವರ ವಿರುದ್ಧ ಇತ್ತೀಚೆಗೆ ಶಿಸ್ತುಕ್ರಮ ಜರುಗಿಸಲಾಗಿದೆ.

‘ಟೈರ್‌ ಕಳ್ಳರ ವಿಚಾರದಲ್ಲಿ ಕರ್ತವ್ಯಲೋಪ ಎಸಗಿದ ಪ್ರಕರಣದಲ್ಲಿ ಗ್ರಾಮಾಂತರ ಠಾಣೆ ಎಸ್‌ಐ ಚೇತನ್‌ ಗೌಡ ಮತ್ತು ಕಾನ್‌ಸ್ಟೆಬಲ್‌ಗಳಾಗಿದ್ದ ರಮಣಾ ರೆಡ್ಡಿ, ಟಿ.ಎ.ಹರೀಶ್‌ ಅವರ ಆರು ತಿಂಗಳ ವೇತನ ಬಡ್ತಿಯನ್ನು ಮುಂದೂಡಲಾಗಿದೆ’ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅವರು ತಿಳಿಸಿದರು. ಈ ಪ್ರಕರಣವನ್ನು ‘ಪ್ರಜಾವಾಣಿ’ ಬೆಳಕಿಗೆ ತಂದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು