ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂತಾಮಣಿ: ಏರುಗತಿಯಲ್ಲಿ ಟೊಮೆಟೊ ಬೆಲೆ

ಎಲೆಮುದುಡು, ಸೊರಗು ರೋಗದಿಂದ ಬೆಳೆ ಹಾಳು
Published 19 ಜೂನ್ 2024, 6:32 IST
Last Updated 19 ಜೂನ್ 2024, 6:32 IST
ಅಕ್ಷರ ಗಾತ್ರ

ಚಿಂತಾಮಣಿ: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ ಒಂದು ವಾರದಿಂದ ಟೊಮೆಟೊ ಬೆಲೆ ಏರಿಕೆ ಕಾಣುತ್ತಿದೆ. ಮಂಗಳವಾರ ನಗರದ ಎಪಿಎಂಸಿ ಮಾರುಕಟ್ಟೆ ಯಲ್ಲಿ ನಡೆದ ಹರಾಜಿನಲ್ಲಿ 14 ಕೆ.ಜಿ ಬಾಕ್ಸ್ ₹ 400ರಿಂದ ₹ 900ರವರೆಗೆ ಮಾರಾಟವಾಗಿದೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಟೊಮೆಟೊಗೆ ₹ 60ರಿಂದ 65 ಬೆಲೆ ಇದೆ.

ಬೆಲೆ ಏರಿಕೆ ಆಗುತ್ತಿದ್ದರೂ ರೈತರ ಮುಖದಲ್ಲಿ ಮಂದಹಾಸ ಕಂಡುಬರುತ್ತಿಲ್ಲ. ಬೆಳೆ ಹಾಳಾಗಿರುವುದರಿಂದ ಲಾಭ ಮಾಡಿಕೊಳ್ಳಲು ರೈತರ ಬಳಿ ಫಸಲು ಇಲ್ಲ.

ಸಾಮಾನ್ಯವಾಗಿ ಮೇ ಮತ್ತು ಜೂನ್‌ ತಿಂಗಳಿನಲ್ಲಿ ಉಷ್ಣಾಂಶದ ಏರಿಕೆಯಿಂದ ಬೇರೆ ರಾಜ್ಯಗಳಲ್ಲಿ ಟೊಮೆಟೊ ಬೆಳೆಯುವುದಿಲ್ಲ. ಹೊರ ರಾಜ್ಯಗಳಿಂದ ಬೇಡಿಕೆ ಹೆಚ್ಚುತ್ತಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಟೊಮೆಟೊ ಬೆಳೆಗೆ ಎಲೆಮುದುಡು ಮತ್ತು ಸೊರಗು ರೋಗದಿಂದ ಬೆಳೆ ಹಾಳಾಗಿದೆ. ಶೇ 25ರಿಂದ 30 ರಷ್ಟು ಬೆಳೆ ಮಾತ್ರ ರೈತರು ಕೈಸೇರುತ್ತಿದೆ.

ಹೊರರಾಜ್ಯಗಳಲ್ಲಿ ಹೆಚ್ಚುತ್ತಿರುವ ಬೇಡಿಕೆ ಮತ್ತು ವೈರಸ್‌ನಿಂದ ಬೆಳೆ ನಷ್ಟವಾಗಿರುವುದು ಬೆಲೆ ಏರಿಕೆಗೆ ಕಾರಣ ಎಂದು ವ್ಯಾಪಾರಿ ಆನಂದ್ ತಿಳಿಸಿದರು.

ಒಂದು ವಾರದಿಂದ ದಿನ-ದಿನಕ್ಕೆ ಬಾಕ್ಸ್ ಮೇಲೆ ಸರಾಸರಿ ₹ 100 ಬೆಲೆ ಏರಿಕೆ ಆಗುತ್ತಿದೆ. ಮಂಗಳವಾರ 10-12 ಲಾರಿ ಲೋಡ್ ಟೊಮೆಟೊ ಆವಕವಾಗಿತ್ತು. ಎರಡು ವರ್ಷಗಳ ಹಿಂದೆ ಈ ಕಾಲದಲ್ಲಿ ದಿನಕ್ಕೆ 100 ಲೋಡ್ ಆವಕವಿತ್ತು. ಈಗ ಶೇ 10ರಿಂದ 15 ರಷ್ಟು ಮಾತ್ರ ಆವಕವಾಗುತ್ತಿದೆ.

ನಗರದ ಮಾರುಕಟ್ಟೆಯಿಂದ ಗುಜರಾತ್, ರಾಜಾಸ್ತಾನ, ಮದ್ಯಪ್ರದೇಶ, ಉತ್ತರಪ್ರದೇಶ, ದೆಹಲಿ, ಪಂಜಾಬ್, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಿಗೆ ಟೊಮೆಟೊ ರವಾನೆ ಆಗುತ್ತದೆ. ವೈರಸ್ ತಗುಲಿ ಇಳುವರಿ ಕುಂಠಿತವಾಗಿರುವ ಕಾರಣ ಬೇಡಿಕೆಗೆ ತಕ್ಕಂತೆ ಟೊಮೆಟೊ ಪೂರೈಕೆಗೆ ಸಾಧ್ಯವಾಗುತ್ತಿಲ್ಲ.

ವಾರದಿಂದ ವಾರಕ್ಕೆ ಬೆಲೆ ಏರಿಕೆಯಾಗುವ ಸಂಭವವಿದೆ. ಜುಲೈ 1 ರಿಂದ ಉತ್ತರ ಭಾರತದಿಂದ ಹೆಚ್ಚಿನ ಬೇಡಿಕೆ ಬರುತ್ತದೆ. ಹೀಗಾಗಿ ದಾಖಲೆ ಬೆಲೆ ಬರಬಹುದು ಎಂದು ವ್ಯಾಪಾರಿಗಳು ಅಭಿಪ್ರಾಯಪಡುತ್ತಾರೆ.

ಟೊಮೆಟೊ ಗುಣಮಟ್ಟವೂ ಇಲ್ಲ. ತೋಟಗಳಲ್ಲಿ ಕೀಳದೆ ಬಿಡುತ್ತಿದ್ದ ಹಾಗೂ ಹಣ್ಣಿನ ರಾಶಿಯಿಂದ ಆರಿಸಿ ರಸ್ತೆಗೆ ಎಸೆಯುತ್ತಿದ್ದ ಕಳಪೆ ಟೊಮೆಟೊಗೂ ಸಹ ಬೆಲೆ ಸಿಗುತ್ತಿದೆ. ತೋಟದಲ್ಲಿ ಸಿಗುವ ಪ್ರತಿ ಹಣ್ಣನ್ನು ಜೋಪಾನವಾಗಿ ಕೊಯ್ಲು ಮಾಡಲಾಗುತ್ತಿದೆ. ಬೆಲೆ ಏರಿಕೆ ಆದಂತೆ ಕಳ್ಳರ ಕಾಟವೂ ಅತಿಯಾಗಿದೆ. ತೋಟಗಳಲ್ಲಿ ಮತ್ತು ಮಾರುಕಟ್ಟೆಯಲ್ಲಿ ಟೊಮೆಟೊ ಕಳ್ಳತನವಾಗದಂತೆ ಕಾಪಾಡಿಕೊಳ್ಳುವುದೇ ಹರಸಾಹಸವಾಗಿದೆ.

ಕಳೆದ 2 ತಿಂಗಳುಗಳಿಂದ ಎಲೆಮುದುಡು ಮತ್ತು ಸೊರಗು ರೋಗಕ್ಕೆ ತುತ್ತಾಗಿ ಟೊಮೆಟೊ ಬೆಳೆಗಾರರು ನಷ್ಟಕ್ಕೆ ಒಳಗಾಗಿದ್ದಾರೆ. ಹವಾಮಾನ ಏರುಪೇರಿನಿಂದ ವೈರಸ್ ತಗುಲಿದೆ ಎನ್ನುವುದು ಕಂಪನಿಗಳ ಮತ್ತು ಅಧಿಕಾರಿಗಳು ಹೇಳುತ್ತಾರೆ. ಬಿತ್ತನೆ ಬೀಜದಿಂದ ರೋಗ ಹರಡಿರಬಹುದು ಎನ್ನುವುದು ರೈತರ ಅನುಮಾನ.

ಏಪ್ರಿಲ್‌ನಲ್ಲಿ ನಾಟಿ ಮಾಡಿದ ಬೆಳೆ ಶೇ 90 ರಷ್ಟು ನಾಶವಾಗಿದೆ. ಮೇ ನಲ್ಲಿ ನಾಟಿ ಮಾಡಿದ್ದು ಸ್ವಲ್ಪಮಟ್ಟಿಗೆ ಚೆನ್ನಾಗಿದೆ. ಅದೂ ಏನಾಗುತ್ತದೋ ನೋಡಬೇಕು. ರೋಗದಿಂದ ಇಳುವರಿಯೇ ಇಲ್ಲ. ಸಾವಿರ ಬಾಕ್ಸ್ ಬರುತ್ತಿದ್ದ ತೋಟದಲ್ಲಿ 100 ಬಾಕ್ಸ್ ಸಿಗುವುದೇ ಕಷ್ಟವಾಗಿದೆ. ಬೆಲೆ ಏರಿಕೆ ಆಗುತ್ತಿದ್ದರೂ ಬಂಡವಾಳ ಬರುವುದೇ ಕಷ್ಟವಾಗಿದೆ.  

ಕಳೆದ ವರ್ಷವೂ ರೋಗದಿಂದ ಬೆಳೆ ಹಾಳಾಗಿತ್ತು. ರಾಜ್ಯದಲ್ಲೇ ದೊಡ್ಡ ಟೊಮೆಟೊ ಮಾರುಕಟ್ಟೆ ಹೊಂದಿರುವ ಇಲ್ಲಿನ ಎಪಿಎಂಸಿ ಯಲ್ಲಿ ಯಾವ ಕಡೆಗೆ ದೃಷ್ಟಿ ಹಾಯಿಸಿದರೂ ಟೊಮೆಟೊ ರಾಶಿಗಳು ಕಾಣುತ್ತಿದ್ದವು. ಪ್ರತಿನಿತ್ಯ ಸುಮಾರು 60-80 ಲೋಡ್ ಪೂರೈಕೆ ಆಗುತ್ತಿತ್ತು. ಈಗ ಪೂರೈಕೆ ಕಡಿಮೆಯಾಗಿದೆ. ಬೆಲೆ ಏರಿಕೆಯ ಲಾಭ ಪಡೆಯಲು ಬೆಳೆಯೇ ಇಲ್ಲ ಎಂದು ರೈತರು ಕೈ-ಕೈ ಹಿಸುಕಿಕೊಳ್ಳುತ್ತಿದ್ದಾರೆ.

ಚಿಂತಾಮಣಿ ತಾಲ್ಲೂಕಿನ ತಿನಕಲ್ಲು ಗ್ರಾಮದ ರೈತ ಮುನೀಂದ್ರ ತೋಟದಲ್ಲಿ ಬೆಳೆ ಹಾಳಾಗಿರುವುದು
ಚಿಂತಾಮಣಿ ತಾಲ್ಲೂಕಿನ ತಿನಕಲ್ಲು ಗ್ರಾಮದ ರೈತ ಮುನೀಂದ್ರ ತೋಟದಲ್ಲಿ ಬೆಳೆ ಹಾಳಾಗಿರುವುದು

14 ಕೆ.ಜಿ ಬಾಕ್ಸ್‌ಗೆ ₹ 400ರಿಂದ ₹ 900ರವರೆಗೆ ಬೆಲೆ ಮಾರುಕಟ್ಟೆಗೆ ಹಣ್ಣು ಆವಕ ಕಡಿಮೆ ತೋಟಗಳಲ್ಲಿ ಎಲೆಮುದುಡು ರೋಗ; ಬೇಡಿಕೆ ಇದೆ, ಉತ್ಪನ್ನವಿಲ್ಲ

ಬೆಲೆ ಇದೆ ಬೆಳೆ ಇಲ್ಲ

ಎಲೆಮುದುಡು ಹಾಗೂ ಸೊರಗು ರೋಗದಿಂದ ಬೆಳೆ ಹಾಳಾಗಿದೆ. ಇಳುವರಿ ಕಡಿಮೆಯಾಗಿದೆ. ಇದರಿಂದ ಸಾಧಾರಣ ಬೆಲೆ ಸಿಗುತ್ತಿದೆ.  ಬೆಲೆ ಏರಿಕೆ ಲಾಭ ಪಡೆಯಲು ಟೊಮೆಟೊ ತೋಟಗಳೇ ಇಲ್ಲ. ರೈತರ ಹಣೆಬರಹವೇ ಹೀಗೆ ಬೆಳೆ ಇದ್ದರೆ ಬೆಲೆ ಇರುವುದಿಲ್ಲ ಬೆಲೆ ಇದ್ದರೆ ಬೆಳೆ ಇರುವುದಿಲ್ಲ.

-ಮುನೀಂದ್ರ ಟೊಮೆಟೊ ಬೆಳೆಗಾರ ತಿನಕಲ್ಲು ಚಿಂತಾಮಣಿ

ಕಳಪೆ ಬೀಜಗಳಿಂದ ರೋಗ

ಕಳೆದ ವರ್ಷವೂ ಇದೇ ರೋಗದಿಂದ ಟೊಮೆಟೊ ಬೆಳೆಗಾರರು ನಷ್ಟ ಅನುಭವಿಸಿದರು. ಕಳಪೆ ಬಿತ್ತನೆ ಬೀಜಗಳ ಪೂರೈಕೆಯಿಂದ ಹೀಗಾಗುತ್ತಿದೆ ಎಂಬುದು ರೈತರ ಬಲವಾದ ನಂಬಿಕೆ. ಬೆಳೆಗಾರರು ಸಂಘಟಿತರಾಗಿ ಹೋರಾಟಕ್ಕೆ ಸಿದ್ಧರಾಗುತ್ತಿದ್ದಾರೆ.

-ಶಿವಾನಂದ ಕಾರ್ಯದರ್ಶಿ ರೈತ ಸಂಘ ಚಿಂತಾಮಣಿ ತಾಲ್ಲೂಕು ಘಟಕ

ಮತ್ತಷ್ಟು ಹೆಚ್ಚಳ ಸಾಧ್ಯತೆ

ಕಳೆದ 10-15 ವರ್ಷಗಳಿಂದ ಭೂಮಿಗೆ ರಾಸಾಯನಿಕಗಳನ್ನು ಹೆಚ್ಚು ಬಳಕೆ ಮಾಡಿರುವುದರಿಂದ ಭೂಮಿ ಹಾಳಾಗಿದೆ. ಇನ್ನು ಮುಂದೆ ಟೊಮೆಟೊ ಬೆಳೆಯಲು ಈ ಭೂಮಿ ಯೋಗ್ಯವಲ್ಲ ಎನಿಸುತ್ತದೆ. ಉಷ್ಣಾಂಶವೂ ಹೆಚ್ಚಾದ ಕಾರಣ ಬೆಳೆ ನಾಶವಾಗಿ ಇಳುವರಿ ಇಲ್ಲ. ಮುಂದಿನ ದಿನಗಳಲ್ಲಿ ದಾಖಲೆ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ.

-ಆನಂದ್ ಟೊಮೆಟೊ ವ್ಯಾಪಾರಿ ಚಿಂತಾಮಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT