ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ | ತರಕಾರಿ ಮಾರುಕಟ್ಟೆ: ‘ಹಸ್ತ’ಕ್ಷೇಪವಿಲ್ಲದಿದ್ದರೆ ಮಳಿಗೆ ಹರಾಜು!

ಚಿಕ್ಕಬಳ್ಳಾಪುರ ನಗರಸಭೆಯಿಂದ ಭಾನುವಾರ ಆಟೊ ಮೂಲಕ ಪ್ರಚಾರ
Published 17 ಜೂನ್ 2024, 7:55 IST
Last Updated 17 ಜೂನ್ 2024, 7:55 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದ ಬಜಾರ್ ರಸ್ತೆಯ ತರಕಾರಿ ಮಾರುಕಟ್ಟೆಯಲ್ಲಿ ನಗರಸಭೆಗೆ ಸೇರಿದ 99 ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ ನಗರದಲ್ಲಿ ತೀವ್ರ ಹಗ್ಗಜಗ್ಗಾಟಕ್ಕೆ ಕಾರಣವಾಗಿತ್ತು. ಈಗ ನಗರಸಭೆಯು ಒಂದು ಹೆಜ್ಜೆ ಮುಂದಡಿ ಇಟ್ಟು ದಿಟ್ಟ ಕ್ರಮಕ್ಕೆ ಮುಂದಾಗಿದೆ. 

ಮಳಿಗೆ ಹರಾಜು ನಡೆಯುತ್ತದೆಯೇ ಇಲ್ಲವೇ ಎನ್ನುವ ಜಿಜ್ಞಾಸೆಗಳ ನಡುವೆಯೇ ‘ಮಳಿಗೆಗಳ ಹರಾಜು ನಡೆಸಲಾಗುತ್ತದೆ. ಆಸಕ್ತರು ಭಾಗವಹಿಸಬಹುದು’ ಎಂದು ಭಾನುವಾರ ಮಾರುಕಟ್ಟೆಯ ಆವರಣ ಹಾಗೂ ನಗರದ ವಿವಿಧ ಭಾಗಗಳಲ್ಲಿ ಆಟೊ ಮೂಲಕ ಪ್ರಚಾರ ಸಹ ನಡೆಸಲಾಗಿದೆ. 

ಈ ‍ಪ್ರಚಾರವು ಮಳಿಗೆಗಳ ಬಾಡಿಗೆದಾರರ ಕಣ್ಣು ಕೆಂಪಾಗುವಂತೆ ಮಾಡಿದ್ದರೆ, ಈಗಲಾದರೂ ನಗರಸಭೆಯು ಕ್ರಮವಹಿಸಲು ಮುಂದಾಯಿತು ಎಂದು ನಾಗರಿಕರು ನುಡಿಯುತ್ತಿದ್ದಾರೆ. 

ಸರ್ಕಾರ ನಿಯಮಗಳ ಪ್ರಕಾರ 12 ವರ್ಷಕ್ಕೆ ಒಮ್ಮೆ ಮಳಿಗೆಗಳ ಹರಾಜು ಹಾಕಬೇಕಾಗಿತ್ತು. ಆದರೆ ಇಲ್ಲಿಯವರೆಗೆ ಆಗಿಲ್ಲ. 1993ರಲ್ಲಿ ಮಳಿಗೆಗಳಿಗೆ ಬಾಡಿಗೆಗೆ ಬಂದಿರುವವರು ಇಂದಿಗೂ ಮುಂದುವರಿದ್ದಾರೆ. ಕೆಲವರು ಉಪ ಬಾಡಿಗೆ ನೀಡಿದ್ದಾರೆ. ಈಗ ಬಾಡಿಗೆಯಲ್ಲಿರುವವರೂ ಹರಾಜಿನಲ್ಲಿ ಪಾಲ್ಗೊಳ್ಳಲಿ. ಬಿಡ್‌ನಲ್ಲಿ ಭಾಗವಹಿಸಿ ಮಳಿಗೆ ಪಡೆಯಲಿ ಎನ್ನುತ್ತವೆ ನಗರಸಭೆ ಮೂಲಗಳು.

ಮಳಿಗೆಗಳ ಹರಾಜು ಸಂಬಂಧ ಕಳೆದ ವರ್ಷದ ಡಿಸೆಂಬರ್‌ನಲ್ಲಿಯೇ ನಗರಸಭೆಯು ಬಾಡಿಗೆದಾರರಿಗೆ ಅಂತಿನ ನೋಟಿಸ್‌ಗಳನ್ನು ಜಾರಿಗೊಳಿಸಿತ್ತು. ಡಿ.31ರ ಗಡುವು ನೀಡಿತ್ತು. ನಗರಸಭೆ ಆಡಳಿತಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮತ್ತು ಶಾಸಕ ಪ್ರದೀಪ್ ಈಶ್ವರ್ ಮಾರುಕಟ್ಟೆಗೆ ಭೇಟಿ ನೀಡಿದ್ದರು. ಆ ನಂತರ ಯಾವುದೇ ಪ್ರಕ್ರಿಯೆಗಳು ಮುಂದುವರಿಯಲಿಲ್ಲ. ರಾಜಕೀಯ ಹಸ್ತಕ್ಷೇ‍ಪಗಳ ಕಾರಣ ಹರಾಜು ಪ್ರಕ್ರಿಯೆ ನನೆಗುದಿಗೆ ಬಿದ್ದಿತು ಎನ್ನುವ ಮಾತುಗಳಿದ್ದವು.  

ನಗರಸಭೆಯ ಈ ಮಳಿಗೆ ಹರಾಜಿಗೆ ಸಂಬಂಧಿಸಿದಂತೆ 2021ನೇ ಸಾಲಿನಲ್ಲಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಠರಾವು ಮಾಡಲಾಗಿದೆ. ಹೀಗಿದ್ದರೂ ಹರಾಜು ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು. 

ಬಾಡಿಗೆ ಹೆಚ್ಚಿಸಿದರೆ ನೀಡಲು ಸಿದ್ದ. ಆದರೆ ಮರು ಹರಾಜು ಬೇಡ ಎಂದು ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಬಾಡಿಗೆದಾರರು ಮನವಿ ಮಾಡಿದ್ದರು. ಲೋಕಸಭೆ ಚುನಾವಣೆಯ ಕಾರಣದಿಂದಲೂ ಹರಾಜು ಪ್ರಕ್ರಿಯೆಗಳಿಗೆ ಹಿನ್ನಡೆ ಆಯಿತು.  ರಾಜಕೀಯ ಹಸ್ತಕ್ಷೇಪದ ಕಾರಣದಿಂದ ಹರಾಜು ಪ್ರಕ್ರಿಯೆಗಳು ತಡವಾಗುತ್ತಿದೆ ಎನ್ನುತ್ತವೆ ಮೂಲಗಳು. 

ಈಗಲೂ ರಾಜಕೀಯ ಹಸ್ತಕ್ಷೇಪದಿಂದ ಹರಾಜು ಪ್ರಕ್ರಿಯೆ ಸ್ಥಗಿತವಾಗುತ್ತದೆಯೇ? ನನೆಗುದಿಗೆ ಬೀಳುತ್ತದೆಯೇ ಎನ್ನುವ ಚರ್ಚೆ ಮಾರುಕಟ್ಟೆಯಲ್ಲಿ ಹಾಗೂ ನಾಗರಿಕರಲ್ಲಿ ಇದೆ. 

ಪರಿಶಿಷ್ಟರಿಗೆ ಅನ್ಯಾಯ: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ವಾಣಿಜ್ಯ ಮಳಿಗೆಗಳ ವಿಲೇವಾರಿ ಸಮಯದಲ್ಲಿ ಶೇ 18ರಷ್ಟು ಮಳಿಗೆಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಹರಾಜು ಮೂಲಕ ವಿಲೇವಾರಿ ಮಾಡಲು ಸರ್ಕಾರದ ಆದೇಶವಿದೆ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪಾರದರ್ಶಕತೆ ಅಧಿನಿಯಮದ ಪ್ರಕಾರ ಶೇ 18ರಷ್ಟು ಮಳಿಗೆಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ವಿತರಿಸಬೇಕು. 

ಆದರೆ ಚಿಕ್ಕಬಳ್ಳಾಪುರದ ಸಂತೆ ಮಾರುಕಟ್ಟೆಯಲ್ಲಿರುವ 99 ಮಳಿಗೆಗಳ ಹರಾಜಿನ ವಿಚಾರವಾಗಿ ಈ ನಿಯಮಗಳು ಜಾರಿಯಾಗಿಲ್ಲ. ಸಂತೆ ಮಾರುಕಟ್ಟೆಯಲ್ಲಿರುವ ಮಳಿಗೆಗಳಲ್ಲಿ ಎಷ್ಟು ಮಂದಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಬಾಡಿಗೆದಾರರು ಇದ್ದಾರೆ, ನಿಯಮಗಳು ಎಷ್ಟರ ಮಟ್ಟಿಗೆ ಜಾರಿಯಾಗಿವೆ ಎಂದರೆ ನಿರಾಸೆಯ ಉತ್ತರ ದೊರೆಯುತ್ತದೆ.

ಈ ಮಳಿಗೆ ಹರಾಜು ವೇಳೆ ಶೇ 18ರ ನಿಯಮ ಪಾಲಿಸಬೇಕು ಎಂದು ಜನವರಿಯಲ್ಲಿ ಜಿಲ್ಲಾಧಿಕಾರಿ ಅವರಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ನಗರಸಭೆ ಸದಸ್ಯರು ಮನವಿ ಸಹ ಮಾಡಿದ್ದಾರೆ.

ಉಪಬಾಡಿಗೆ: ಸಂತೆ ಮಾರುಕಟ್ಟೆಯಲ್ಲಿನ ಅಂಗಡಿ ಮಳಿಗೆಗಳನ್ನು ಬಾಡಿಗೆ ಪಡೆದಿರುವವರಲ್ಲಿ ಬಹಳಷ್ಟು ಮಂದಿ ಉಪಬಾಡಿಗೆಗೂ ನೀಡಿದ್ದಾರೆ. ಮೂಲ ಬಾಡಿಗೆ ಮತ್ತು ಉಪಬಾಡಿಗೆಗೂ ಹೆಚ್ಚಿನ ವ್ಯತ್ಯಾಸವಿದೆ. ನಗರಸಭೆಗೆ ₹ 2 ಸಾವಿರ ಬಾಡಿಗೆ ಪಾವತಿಸಿದರೆ ಅದೇ ಮಳಿಗೆಯನ್ನು ಆರೇಳು ಸಾವಿರಕ್ಕೆ ಉಪಬಾಡಿಗೆ ನೀಡಿದ್ದಾರೆ.

ನಿಯಮಗಳ ಪ್ರಕಾರ 12 ವರ್ಷಗಳಿಗೆ ಮರು ಹರಾಜು ಆಗಬೇಕು. ಈ ತಿಂಗಳಲ್ಲಿ ಮಳಿಗೆಗಳ ಹರಾಜು ಮಾಡಬೇಕು ಎಂದುಕೊಂಡಿದ್ದೇವೆ.
ಮಂಜುನಾಥ್ ನಗರಸಭೆ ಪೌರಾಯುಕ್ತರು ಚಿಕ್ಕಬಳ್ಳಾಪುರ
ಬಿಸಿತುಪ್ಪವಾದ ಆಯುಕ್ತರ ಕ್ರಮ; ವರ್ಗಾವಣೆಗೂ ಲಾಬಿ
ಮರು ಹರಾಜು ಪ್ರಕ್ರಿಯೆಗಳು ನಡೆಯದೆ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಶೇ 18ರಷ್ಟು ಮಳಿಗೆಗಳನ್ನು ಮೀಸಲಿಡದೆ ಸರ್ಕಾರದ ನಿಯಮಗಳನ್ನೇ ನಗರಸಭೆ ಮುರಿದಿದೆ.  ಆದರೆ ಮಂಜುನಾಥ್ ಅವರ ನಗರಸಭೆ ಪೌರಾಯುಕ್ತರಾಗಿ ಬಂದ ನಂತರ ಮರು ಹರಾಜಿಗೆ ಚಾಲನೆ ನೀಡಿದರು. ಅವರ ಕಾನೂನು ಕ್ರಮಗಳು ಮಾರುಕಟ್ಟೆಯ ವ್ಯಾಪಾರಿಗಳಿಗೆ ಬಿಸಿತುಪ್ಪವಾಗಿವೆ. ಅವರ ವರ್ಗಾವಣೆಗೂ ಚಿತಾವಣೆ ಸಹ ನಡೆದಿತ್ತು. ಕೆಲವರು ಅವರ ವರ್ಗಾವಣೆಗೆ ಹಣ ಸಹ ಸಂಗ್ರಹಿಸಿದ್ದರು ಎನ್ನುವ ಮಾತುಗಳಿವೆ. ಈ ನಡುವೆಯೇ ನಗರಸಭೆ ಹರಾಜಿಗೆ ದಿಟ್ಟ ನಿರ್ಧಾರ ಕೈಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT