ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ | ‘ಕೈ’ ಹಿಡಿದ ಎಂ.ಸಿ.ಸುಧಾಕರ್: ವಿರೋಧದ ನಡುವೆಯೂ ಕಾಂಗ್ರೆಸ್‌ ಸೇರ್ಪಡೆ

ಮಾಜಿ ಸಂಸದ ಕೆ.ಎಚ್.ಮುನಿಯಪ್ಪ
Last Updated 30 ಜೂನ್ 2022, 5:48 IST
ಅಕ್ಷರ ಗಾತ್ರ

ಚಿಂತಾಮಣಿ: ಚಿಂತಾಮಣಿ ಮಾಜಿ ಶಾಸಕ ಡಾ.ಎಂ.ಸಿ,ಸುಧಾಕರ್ ಹಾಗೂ ಮುಳಬಾಗಿಲು ಮಾಜಿ ಶಾಸಕಕೊತ್ತೂರು ಮಂಜುನಾಥ್ ಬುಧವಾರ ನವದೆಹಲಿಯಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಹಲವು ದಿನಗಳಿಂದ ಸುಧಾಕರ್ ಕಾಂಗ್ರೆಸ್ ಸೇರುವರು ಎನ್ನುವ ಅಂತೆ ಕಂತೆಗಳ ಚರ್ಚೆಗಳಿಗೆ ತೆರೆ ಬಿದ್ದಿದೆ. ಕೋಲಾರ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ, ಈ ಇಬ್ಬರು ಮಾಜಿ ಶಾಸಕರು ಕಾಂಗ್ರೆಸ್ ಸೇರಲು ಅಡ್ಡವಾಗಿದ್ದರು. ಅವರ ವಿರೋಧದ ನಡುವೆಯೂ ‘ಕೈ’ ಹಿಡಿದ್ದಾರೆ. ಅತ್ತ ಎಂ.ಸಿ. ಸುಧಾಕರ್ ಕಾಂಗ್ರೆಸ್ ಸೇರುತ್ತಿದ್ದಂತೆ ಚಿಂತಾಮಣಿ ರಾಜಕೀಯದಲ್ಲಿ ನಾನಾ ರೀತಿಯ ಚರ್ಚೆಗಳು ಗರಿಗೆದರಿವೆ. ಸುಧಾಕರ್ ಕಾಂಗ್ರೆಸ್‌ನಿಂದ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ.

2013 ಮತ್ತು 2018ರ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸುಧಾಕರ್ ಸ್ಪರ್ಧಿಸಿದ್ದರು. ಅಲ್ಪ ಮತಗಳ ಅಂತರದಿಂದ ಸೋಲುಂಡಿದ್ದರು. ಅವರು ಕಾಂಗ್ರೆಸ್ ತೊರೆಯಲು ಕೆ.ಎಚ್.ಮುನಿಯಪ್ಪ ಅವರ ಮೇಲಿನ ದ್ವೇಷವೇ ಪ್ರಮುಖ ಕಾರಣವಾಗಿತ್ತು.ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಕೆ.ಎಚ್.ಮುನಿಯಪ್ಪ ವಿರುದ್ಧ ಕೆಲಸ ಮಾಡಿದರು. ಮುನಿಯಪ್ಪ ಸೋತರು.

ಲೋಕಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿಬಿಜೆಪಿ ಗೆಲುವಿನ ನಂತರ ಸುಧಾಕರ್ ಸಹ ಬಿಜೆಪಿ ಸೇರುತ್ತಾರೆ ಎನ್ನುವ ಉಹಾಪೋಹಗಳು ಇದ್ದವು.ಲೋಕಸಭಾ ಚುನಾವಣೆಗೆ ಮುನ್ನವೇ ಬಿಜೆಪಿಗೆ ಸೇರಿಸಿಕೊಂಡು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಲು ಬಿ.ಎಸ್. ಯಡಿಯೂರಪ್ಪ ಸಹ ಪ್ರಯತ್ನಿಸಿದ್ದರು. ಆದರೆ ಸುಧಾಕರ್ ಕಮಲ ಪಾಳಯಕ್ಕೆ ಹೋಗಲಿಲ್ಲ.

ಕಾಂಗ್ರೆಸ್ ಪಕ್ಷದ ಕುರಿತು ಅವರಿಗೆ ಯಾವುದೇ ಅಸಮಾಧಾನ ಇರಲಿಲ್ಲ ಎನ್ನುವುದು ಅವರ ಮಾತುಗಳಿಂದಲೇ ವ್ಯಕ್ತವಾಗುತ್ತಿತ್ತು. ಅವರ ಬೆಂಬಲಿಗರು ಸಹ ಕಾಂಗ್ರೆಸ್ ಸೇರುವಂತೆ ಒತ್ತಡ ಹೇರಿದ್ದರು. ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಅಧ್ಯಕ್ಷರಾದ ನಂತರ ಕಾಂಗ್ರೆಸ್ ಸೇರ್ಪಡೆಯಾಗುವ ವಿಷಯಕ್ಕೆ ರೆಕ್ಕೆಪುಕ್ಕಗಳು ಹುಟ್ಟಿಕೊಂಡವು. ಸುಧಾಕರ್ ಜತೆ ಮಾತುಕತೆ ನಡೆಸಿದ್ದ ಶಿವಕುಮಾರ್ ಕಾಂಗ್ರೆಸ್‌ಗೆ ಮರಳುವಂತೆ ಆಹ್ವಾನಿಸಿದ್ದರು.

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಚುನಾವಣೆ ನಡೆದ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ಧರಾಮಯ್ಯ ಸುಧಾಕರ್ ಅಭಿಪ್ರಾಯ ಪಡೆದೇ ಎಂ.ಎಲ್.ಅನಿಲ್ ಕುಮಾರ್ ಗೆ ಟಿಕೆಟ್ ನೀಡಿದ್ದರು. ಅನಿಲ್ ಕುಮಾರ್‌ಗೆ ಟಿಕೆಟ್ ನೀಡಲು ಕೆ.ಎಚ್.ಮುನಿಯಪ್ಪ ವಿರೋಧ ವ್ಯಕ್ತಪಡಿಸಿದ್ದರು.

ಶಾಸಕರಾದ ರಮೇಶಕುಮಾರ್, ಕೃಷ್ಣಬೈರೇಗೌಡ, ಶಿವಶಂಕರರೆಡ್ಡಿ, ಎಸ್.ಎನ್.ಸುಬ್ಬಾರೆಡ್ಡಿ, ಕೆ.ವೈ.ನಂಜೇಗೌಡ ಮತ್ತಿತರ ಹಾಲಿ ಮತ್ತು ಮಾಜಿ ಶಾಸಕರು ಸಹ ಕಾಂಗ್ರೆಸ್ ಸೇರುವಂತೆ ಡಾ.ಎಂ.ಸಿ.ಸುಧಾಕರ್ ಮತ್ತು ಕೊತ್ತೂರು ಮಂಜುನಾಥ್ ಮೇಲೆ ಒತ್ತಡ ಹೇರಿದ್ದರು.

ಸುಧಾಕರ್ ಇಲ್ಲದ ಕಾರಣಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಚಿಂತಾಮಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡಿತ್ತು. ನಾವಿಕನಿಲ್ಲದ ಹಡಗಿನಂತೆ ಪಕ್ಷ ಅನಾಥವಾಗಿತ್ತು. ಬೆಂಗಳೂರಿನ ರಿಯಲ್ ಎಸ್ಟೇಟ್ ಕುಳಗಳು ಚಿಂತಾಮಣಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು. ಆದರೆ ಕಾಂಗ್ರೆಸ್ ಮಾತ್ರ ಸುಧಾಕರ್ ಅವರತ್ತಲೇ ದೃಷ್ಟಿ ನೆಟ್ಟಿತ್ತು.

ಮುಂದುವರಿಯಲಿದೆಯೇ ಬಣಗಳ ಗುಂಪುಗಾರಿಕೆ ?
‘ಲೋಕಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳಬೇಕು. ಸುಧಾಕರ್ ಮತ್ತು ಕೊತ್ತೂರು ಮಂಜುನಾಥ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎನ್ನುತ್ತಿದ್ದ ಕೆ.ಎಚ್.ಮುನಿಯಪ್ಪ ಹಾಗೂ ಅವರ ಬೆಂಬಲಿಗರ ನಡೆ ಈಗ ಕುತೂಹಲಕ್ಕೆ ಕಾರಣವಾಗಿದೆ.ಸುಧಾಕರ್ ಮತ್ತು ಕೆ.ಎಚ್.ಮುನಿಯಪ್ಪ ವೈಷಮ್ಯ ಮರೆತು ಒಂದಾಗುವವರೇ? ಇಲ್ಲ ಗುಂಪುಗಾರಿಕೆ ಮುಂದುವರಿಯುವುದೇ ಎನ್ನುವ ಕುತೂಹಲ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಇದೆ.

ಚಿಂತಾಮಣಿಯಲ್ಲಿಕೆ.ಎಚ್.ಮುನಿಯಪ್ಪ ಬೆಂಬಲಿಗರು ಎಂದಿಗೂ ಸುಧಾಕರ್ ವಿರುದ್ಧವಾಗಿಯೇ ಇದ್ದಾರೆ ಎನ್ನುತ್ತಾರೆ ಸುಧಾಕರ್ ಬೆಂಬಲಿಗರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT