ಚಿಂತಾಮಣಿ: ಚಿಂತಾಮಣಿ-ಹೊಸಕೋಟೆ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ಹೆಚ್ಚಿರುವುದರಿಂದ ಸಾಧ್ಯವಾದಷ್ಟು ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ರಸ್ತೆ ಸುಧಾರಣೆಗಾಗಿ ಹಲವು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ತಳಗವಾರದ ಬಳಿ ಕೆಆರ್‌ಡಿಸಿಎಲ್ ವತಿಯಿಂದ ನಡೆಯುತ್ತಿರುವ ರಸ್ತೆ ಡಿವೈಡರ್ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿದರು.
ಕೈವಾರ ಕ್ರಾಸ್‌ನಲ್ಲಿ ನಾಲ್ಕು ರಸ್ತೆ ಕೂಡುವಿಕೆ ಮತ್ತು ಸಂಚಾರ ದಟ್ಟಣೆ ಅಧಿಕವಾಗಿರುವುದರಿಂದ ಜೋಡಿ ರಸ್ತೆ ಮಾಡಲಾಗುವುದು ಎಂದರು.
ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಕಾಮಗಾರಿಯಲ್ಲಿ ಉತ್ತಮ ಗುಣಮಟ್ಟ ಕಾಯ್ದುಕೊಳ್ಳಬೇಕು. ಕೈಗಾರಿಕಾ ಪ್ರಾಂಗಣಕ್ಕೆ ಸಂಪರ್ಕ ಕಲ್ಪಿಸುವುದರಿಂದ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿದ್ದು ಅಪಘಾತಗಳಾಗುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದ ರಸ್ತೆಗೆ ಡಿವೈಡರ್ ಅಳವಡಿಸಲಾಗುತ್ತಿದೆ ಎಂದರು.
ಬೀಚಗೊಂಡನಹಳ್ಳಿ ಬಳಿ ಇರುವ ಟೋಲ್ ಪ್ಲಾಜಾವನ್ನು ನವೀಕರಣಗೊಳಿಸಲಾಗುತ್ತಿದೆ. ತೀರ ಕಿರಿದಾಗಿದ್ದ ಟೋಲ್ ಪ್ಲಾಜಾವನ್ನು ಕೋಲಾರದ ಶಾಸಕರು, ಜಿಲ್ಲಾಧಿಕಾರಿ ನೆರವಿನಿಂದ ಅಗಲೀಕರಣಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಹೊಸಕೋಟೆ-ಚಿಂತಾಮಣಿ ರಸ್ತೆಯನ್ನು ನಾಲ್ಕುಪಥದ ರಸ್ತೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಕೇಂದ್ರ ಹೆದ್ದಾರಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಹೀಗೆ ಹಂತ ಹಂತವಾಗಿ ಹೆದ್ದಾರಿಯ ಅಭಿವೃದ್ಧಿಗೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ನುಡಿದರು.