ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಾವತಿ ಒಡಲು ತುಂಬಿದ ತ್ಯಾಜ್ಯ

ನದಿ ಸ್ವಚ್ಛತೆಗೆ ಪರಿಸರವಾದಿಗಳ ಒತ್ತಾಯ
Last Updated 28 ಮಾರ್ಚ್ 2021, 5:16 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಪಟ್ಟಣದ ಚಿತ್ರಾವತಿ ನದಿ ಕಲುಷಿತಗೊಂಡಿದ್ದು, ತ್ಯಾಜ್ಯ ಸುರಿಯುವ ತಾಣವಾಗಿ ಮಾರ್ಪಟ್ಟಿದೆ. ಆದರೆ, ನದಿಯ ಸ್ವಚ್ಛತೆಗೆ ಸ್ಥಳೀಯ ಆಡಳಿತ ಹಾಗೂ ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ ಎಂಬುದು ಜನರ ದೂರು.

ತಾಲ್ಲೂಕಿನ ಪಶ್ಚಿಮ ಭಾಗದಲ್ಲಿ ಹರಿದು ಆಂಧ್ರಪ್ರದೇಶದ ಬುಕ್ಕಪಟ್ನಂ ಕೆರೆಗೆ ಸೇರುವ ಚಿತ್ರಾವತಿ ಸಣ್ಣ ನದಿಯಾಗಿದೆ. ಹಿಂದೆ ಸದಾಕಾಲ ಹರಿಯುತ್ತಿದ್ದ ಈ ನದಿ ಇದೀಗ ಪಟ್ಟಣದ ತ್ಯಾಜ್ಯ ವಿಲೇವಾರಿ ಮಾಡುವ ತಾಣವಾಗಿ ಮಾರ್ಪಟ್ಟಿರುವುದು ಪರಿಸರವಾದಿಗಳಲ್ಲಿ ಆತಂಕ ಮೂಡಿಸಿದೆ. ಚಿತ್ರಾವತಿಯ ಉದ್ದಗಲಕ್ಕೂ ಮರಳು ಸಮತಟ್ಟಾಗಿತ್ತು. ನದಿಯ ಇಕ್ಕೆಲಗಳಲ್ಲಿ ರೈತರು ನೀರು ಬಳಕೆ ಮಾಡಿಕೊಂಡು ಮಾವು, ನೇರಳೆ, ತೆಂಗು ಬೆಳೆಯುತ್ತಿದ್ದರು.

1959ರ ಡಿ. 20ರಂದು ಅಂದಿನ ಲೋಕೋಪಯೋಗಿ ಸಚಿವರಾಗಿದ್ದ ಎಚ್.ಎಂ. ಚಿನ್ನಬಸಪ್ಪ ಅವರು ಚಿತ್ರಾವತಿ ಮೇಲುಸೇತುವೆಗೆ ಶಂಕುಸ್ಥಾಪನೆ ಮಾಡಿದ್ದಾರೆ. 24 ಅಡಿ ಅಗಲ, 130 ಅಡಿ ಉದ್ದ ಇರುವ ಈ ಸೇತುವೆ 1962ರಲ್ಲಿ ಲೋಕಾರ್ಪಣೆಗೊಂಡಿದೆ. ಇಲ್ಲಿ ಮಹಿಳೆಯರು ಬಟ್ಟೆ ಒಗೆಯುತ್ತಿದ್ದರು. ಬೆಳಿಗ್ಗಿನಿಂದ ಸಂಜೆವರೆಗೂ ಮೀನುಗಾರರು ಮೀನು ಹಿಡಿಯುತ್ತಿದ್ದರು. ದನ, ಕರುಗಳಿಗೆ ಸ್ನಾನ ಮಾಡಿಸಲು ರೈತರು ಬರುತ್ತಿದ್ದರು. ಈಗ ಅದೆಲ್ಲಾ ನೆನಪು ಮಾತ್ರ.

ನದಿ ತುಂಬಿ ಹರಿಯುವ ಸಂದರ್ಭದಲ್ಲಿ ನೀರು ವೃಥಾ ವ್ಯರ್ಥವಾಗದಂತೆ ರಾಜಕಾಲುವೆಗಳನ್ನು ನಿರ್ಮಿಸಿದ್ದಾರೆ. ಈ ಕಾಲುವೆ ನೀರನ್ನು ತಾಲ್ಲೂಕಿನ ಹೊಸಹುಡ್ಯ, ಗೌನಪಲ್ಲಿ, ಯಗವಬಂಡ್ಲಕೆರೆ ಸೇರಿದಂತೆ ವಿವಿಧ ಗ್ರಾಮದ ರೈತರು ಬಳಸಿಕೊಂಡು ಬೆಳೆ ಬೆಳೆಯುತ್ತಿದ್ದರು.

ನೀರು, ಮರಳು ವ್ಯರ್ಥವಾಗುವುದನ್ನು ತಡೆಯಲು ನದಿಪಾತ್ರದಲ್ಲಿ ಸಣ್ಣ ಅಣೆಗಳನ್ನು ಅಲ್ಲಿಲ್ಲಿ ನಿರ್ಮಾಣ ಮಾಡಿ ನೀರು ಸಂಗ್ರಹಿಸುತ್ತಿದ್ದರು. ಅಂತಹ ನೀರಿನ ಕಣಜವೊಂದು 1883ರಲ್ಲಿ ಜಡಲಭೈರವೇಶ್ವರ ದೇವಾಲಯದ ಮುಂಭಾಗದ ಬಲಭಾಗದಲ್ಲಿ ಅಂದಿನ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಯಾಗಿದ್ದ ಕ್ಯಾಫ್ಟ್‌ನ್ ಚಿಮ್ ಕೆನ್‌ಸಿಂಗ್ ಟನ್ ನಿರ್ಮಿಸಿದ್ದಾರೆ. ಈಗ ಇದು ಅವಸಾನದ ಅಂಚಿನಲ್ಲಿದೆ.

ನದಿ ತೀರದಲ್ಲಿ ಕಳೆ ಗಿಡಗಳು ಬೆಳೆದಿವೆ. ಕೆಲವರು ನದಿಯ ಉದ್ದಕ್ಕೂ ಒತ್ತುವರಿ ಮಾಡಿದ್ದಾರೆ. ಪಟ್ಟಣದ ಚರಂಡಿ ನೀರು, ಮಾಂಸ ತ್ಯಾಜ್ಯವನ್ನು ನದಿಗೆ ಎಸೆಯುತ್ತಿದ್ದಾರೆ. ಹೋಟೆಲ್, ಅಂಗಡಿಗಳ ಪ್ಲಾಸ್ಟಿಕ್, ಕಸ-ಕಡ್ಡಿವನ್ನೂ ಎಸೆಯಲಾಗುತ್ತಿದೆ. ನೀರು ಕಲುಷಿತಗೊಂಡಿದ್ದು ದುರ್ವಾಸನೆ ಬೀರುತ್ತಿದೆ.

ನದಿಯ ಸುತ್ತಮುತ್ತಲೂ ತಡೆಗೋಡೆಗಳು, ಮುಳ್ಳಿನತಂತಿಗಳು ಸಹ ಹಾಕಿಲ್ಲ. ಕನಿಷ್ಠ ಚಿತ್ರಾವತಿ ಒಡಲಿಗೆ ಕಸ ಹಾಕಿದರೆ ದಂಡ ಹಾಕುವ ಕೆಲಸವನ್ನೂ ಮಾಡುತ್ತಿಲ್ಲ. ಇದರಿಂದ ನದಿಯ ಸೊಬಗು ಸೊರಗಿದೆ ಎಂಬುದು ಪರಿಸರವಾದಿಗಳ ಆರೋಪ.

‘ಚಿತ್ರಾವತಿ ನದಿಯ ಸೊಬಗು ಇಡೀ ಪಟ್ಟಣದ ಮೆರುಗು ಹೆಚ್ಚಿಸಿತ್ತು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯತನದಿಂದ ನದಿಯ ಸ್ವಚ್ಛತೆ ಮಾಡಿಲ್ಲ. ಒತ್ತುವರಿಯಾದ ಜಾಗವನ್ನು ತೆರವುಗೊಳಿಸಿಲ್ಲ’ ಎನ್ನುತ್ತಾರೆ ಪಟ್ಟಣದ ನಿವಾಸಿ ಟಿ. ರಘುನಾಥರೆಡ್ಡಿ.

‘ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಸ್ವಚ್ಛತೆ ಮಾಡಿ ಒತ್ತುವರಿ ತೆರವುಗೊಳಿಸಬೇಕು. ತ್ಯಾಜ್ಯ ಸುರಿಯದಂತೆ ನಿಗಾವಹಿಸಬೇಕು. ಚಿತ್ರಾವತಿಯ ಸೊಬಗು ಉಳಿಸಲು ಜನಜಾಗೃತಿ ಮೂಡಿಸಬೇಕು’ ಎಂಬುದು ನಿವಾಸಿ ರಮೇಶ್ ರೆಡ್ಡಿ ಅವರ
ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT