ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ ಸಮರ್ಪಕ ವಿಲೇವಾರಿಗೆ ಬದ್ಧ

ಪುಟ್ಟತಿಮ್ಮನಹಳ್ಳಿಯಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ, ನಗರಸಭೆ ಅಧ್ಯಕ್ಷ
Last Updated 3 ನವೆಂಬರ್ 2020, 14:36 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ತ್ಯಾಜ್ಯ ನಿರ್ವಹಣೆಯಲ್ಲಿ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸಲು ಜಿಲ್ಲಾಡಳಿತ ಸಜ್ಜಾಗಿದೆ’ ಎಂದು ಜಿಲ್ಲಾಧಿಕಾರಿ ಆರ್.ಲತಾ ಹೇಳಿದರು.

ತಾಲ್ಲೂಕಿನ ಪುಟ್ಟತಿಮ್ಮನಹಳ್ಳಿಯಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಮಂಗಳವಾರ ಭೇಟಿ ನೀಡಿದ ಅವರು, ತ್ಯಾಜ್ಯ ನಿರ್ವಹಣೆ, ಎರೆಹುಳು ಗೊಬ್ಬರ ಘಟಕ, ನಾಟಿ ಹಸು, ಸಾವಯವ ಗೊಬ್ಬರದಿಂದ ಬೆಳೆದ ಸೊಪ್ಪು, ಮಿಶ್ರ ಬೆಳೆ, ರಾಗಿ ವೀಕ್ಷಣೆ ಮಾಡಿ ಮಾತನಾಡಿದರು.

‘ನಗರ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸ ಪರಿಣಾಮಕಾರಿಯಾಗಿ ವಿಲೇವಾರಿ ಮಾಡುವ ಹೊಣೆ ಸ್ಥಳೀಯ ನಗರಸಭೆಯದಾಗಿರುತ್ತದೆ. ಈ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ನಗರಸಭೆ ಒಂದು ಹೆಜ್ಜೆ ಮುಂದಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಚಿಕ್ಕಬಳ್ಳಾಪುರದ ನಾಗರಿಕರು ಮನೆಯಲ್ಲೇ ತ್ಯಾಜ್ಯ ವಿಂಗಡಿಸಿ ಕಸದ ಗಾಡಿಗೆ ನೀಡುತ್ತಿದ್ದಾರೆ. ಇದರಿಂದ ತ್ಯಾಜ್ಯ ಮರುಬಳಕೆಗೆ ಸಹಕಾರಿಯಾಗಿದೆ’ ಎಂದರು.

‘ಜಿಲ್ಲೆಯಲ್ಲಿ 15 ಎಕರೆ ಜಾಗವನ್ನು ಘನ ತ್ಯಾಜ್ಯ ನಿರ್ವಹಣೆ ಘಟಕಕ್ಕೆ ಮೀಸಲಿರಿಸಲಾಗಿದೆ. ಇದರಿಂದ ಉತ್ತಮ ರೀತಿಯಲ್ಲಿ ಕಸ ವಿಂಗಡಣೆ ಮಾಡಬಹುದಾಗಿದೆ. ಈಗಾಗಲೇ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ, ಹಸಿ ಕಸದಿಂದ ಗೊಬ್ಬರವನ್ನು ತಯಾರಿಸಲಾಗುತ್ತಿದೆ. ಸಾವಯವ ಗೊಬ್ಬರದ ಮೂಲಕ ಮಿಶ್ರ ಬೆಳೆ ಬೆಳೆಯಲಾಗುತ್ತಿದೆ’ ಎಂದು ತಿಳಿಸಿದರು.

‘ಸಾವಯವ ಗೊಬ್ಬರದಲ್ಲಿ ಬೆಳೆದ ಬೆಳೆಗಳನ್ನು ನಗರದ ಪೌರಕಾರ್ಮಿಕರಿಗೆ ವಿತರಿಸಲಾಗುವುದು. ತ್ಯಾಜ್ಯ ಎಂದಿಗೂ ತ್ಯಾಜ್ಯವಲ್ಲ ಅದೊಂದು ಸಂಪನ್ಮೂಲ ಎಂದು ತೋರಿಸುವ ಉದ್ದೇಶದಿಂದ ನಗರಸಭೆಯಿಂದ ಈ ಕಾರ್ಯ ಕೈಗೊಂಡಿದೆ. ತ್ಯಾಜ್ಯ ವಿಂಗಡಣೆಯಲ್ಲಿ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ’ ಎಂದು ಹೇಳಿದರು.

‘ಸುಮಾರು 15 ವರ್ಷಗಳಿಂದಪುಟ್ಟತಿಮ್ಮನಹಳ್ಳಿ ಘಟಕದಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಈ ಹಿಂದೆ ಸಂಗ್ರಹವಾದ ಕಸವನ್ನು ವಿಂಗಡನೆ ಮಾಡಿಲ್ಲ. ಆದರೆ ಕಸ ಕತ್ತರಿಸುವ ಮತ್ತು ಜರಡಿ ಹಿಡಿಯುವ ಯಂತ್ರಗಳ ಮೂಲಕ ಪ್ಲಾಸ್ಟಿಕ್ ಮತ್ತು ಗೊಬ್ಬರ ಕಸವನ್ನು ವಿಂಗಡಣೆ ಮಾಡಲಾಗುತ್ತದೆ. ಈ ಮೂಲಕ ಯಾವುದೇ ಕಸವನ್ನು ವ್ಯರ್ಥವಾಗದಂತೆ ಮರು ಬಳಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.

ನಗರಸಭೆ ಅಧ್ಯಕ್ಷ ಆನಂದ್ ರೆಡ್ಡಿ ಬಾಬು ಮಾತನಾಡಿ, ‘ನಗರದ ಹಸಿ ಕಸವನ್ನು ಎರೆಹುಳುವಿನಿಂದ ಗೊಬ್ಬರವನ್ನಾಗಿ ತಯಾರಿಸಿ ಮಿಶ್ರ ಬೆಳೆ ಬೆಳೆಯಲು ಜಿಲ್ಲಾಡಳಿತ ಮತ್ತು ನಗರಸಭೆ ವತಿಯಿಂದ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಎರೆಹುಳು ಗೊಬ್ಬರವನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ನಗರಸಭೆ ಆಯುಕ್ತ ಲೋಹಿತ್ ಮಾತನಾಡಿ, ‘ಘಟಕದಲ್ಲಿ ಸಂಸ್ಕರಿಸಿದ ಹಸಿ ಮತ್ತು ಒಣ ಕಸವನ್ನು ತೊಟ್ಟಿಯಲ್ಲಿ ಹಾಕಿ ನೀರು ಮತ್ತು ಸಗಣಿ ಹಾಕಿ ಕೊಳೆಯಲು ಬಿಡಲಾಗುತ್ತಿದೆ. ನಂತರ ಈ ತ್ಯಾಜ್ಯ ಕಸ ಗೊಬ್ಬರಕ್ಕೆ ಎರೆಹುಳುಗಳನ್ನು ಬಿಟ್ಟು ಗೊಬ್ಬರ ತಯಾರಿಸಲಾಗುತ್ತಿದೆ. ಈಗಾಗಲೇ ಮೊದಲ ಹಂತದ ಗೊಬ್ಬರ ಉತ್ಪಾದನೆಯಾಗಿದೆ. ಇದರಿಂದ ಮಿಶ್ರ ಬೆಳೆಯನ್ನು ಬೆಳೆಯಲಾಗಿದೆ. ಅಷ್ಟೇ ಅಲ್ಲದೆ ಇಲ್ಲಿ ನಾಟಿ ಹಸು, ಮೇಕೆಯನ್ನು ಸಾಕಾಣಿಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT