ಶನಿವಾರ, ಜುಲೈ 24, 2021
26 °C
ಪರಸ್ಪರ ಭ್ರಷ್ಟಾಚಾರ, ಪಕ್ಷದ್ರೋಹದ ಆರೋಪ

ಸಿಪಿಎಂನಲ್ಲಿ ತಾರಕಕ್ಕೇರಿದ ಗುಂಪುಗಾರಿಕೆ: ಬೀದಿಗೆ ಬಂದ ಕಮ್ಯೂನಿಸ್ಟರ ಕಲಹ

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಎಡಪಂಥಿಯ ಚಿಂತನೆಗಳಿಗೆ ಇಂದಿಗೂ ಗಟ್ಟಿ ನೆಲೆ ಒದಗಿಸಿರುವ ಗಡಿಭಾಗದ ಜಿಲ್ಲೆಯಲ್ಲಿ ಬಹು ಹಿಂದಿನಿಂದಲೂ ತನ್ನ ಸೈದ್ಧಾಂತಿಕ ಹೋರಾಟದ ಮೂಲಕ ಅಸ್ತಿತ್ವ ಉಳಿಸಿಕೊಂಡು ಬಂದಿರುವ ಪಕ್ಷ ಸಿಪಿಎಂ. ಇದೀಗ ಅದರೊಳಗೂ ಗುಂಪುಗಾರಿಕೆ ತಾರಕಕ್ಕೆ ಏರಿ, ಮುಖಂಡರ ನಡುವಿನ ಕಲಹ ಬೀದಿಗೆ ಬಂದು ಉಳಿದ ರಾಜಕೀಯ ಪಕ್ಷಗಳಿಗೆ ಅಚ್ಚರಿ ಮೂಡಿಸಿದೆ.

ಭ್ರಷ್ಟಾಚಾರ, ಶೋಷಣೆ ಮುಕ್ತ ಸಮಾಜ, ರಾಜಕೀಯದ ಬಗ್ಗೆ ಪ್ರತಿಪಾದಿಸುತ್ತಲೇ, ಅದಕ್ಕಾಗಿ ವಲಸಿಗ ಸಿರಿವಂತರ ಜತೆಗೆ ರಾಜಕೀಯ ಹೋರಾಟ ಮಾಡುತ್ತಲೇ ಬಂದಿದ್ದ ಕಟು ಬದ್ಧತೆಯ ಪಕ್ಷದಲ್ಲೂ ಇದೀಗ ಇತರೆ ಪಕ್ಷಗಳಂತೆ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ವ್ಯಭಿಚಾರದ ಆರೋಪಗಳು ಬಹಿರಂಗವಾಗಿ ಕೇಳಿಬರಲು ಆರಂಭಿಸಿವೆ. ಇದು ನಿಷ್ಠಾವಂತರ ಕಾರ್ಯಕರ್ತರಲ್ಲಿ ಕಳವಳ ಮೂಡಿಸಿದೆ.

ಸುಮಾರು ಐದು ವರ್ಷಗಳಿಂದ ಸಿಪಿಎಂ ಒಳಗೆ ಗುಂಪುಗಾರಿಕೆ ಪುಟಕ್ಕೆ ಇಟ್ಟಿದ್ದು, ಅದೀಗ ಪಕ್ಷವನ್ನೇ ಇಬ್ಬಾಗ ಮಾಡುವ ಮಟ್ಟಿಗೆ ತಲುಪಿದೆ. ಅದಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗೆ ಶಿಸ್ತಿನ ಪಕ್ಷದೊಳಗೂ ಉಚ್ಚಾಟನೆ, ರಾಜೀನಾಮೆ ಪರ್ವ ಆರಂಭಗೊಂಡಿದ್ದು, ಇದು ಕೆಂಪಂಗಿಯ ‘ಸಂಗಾತಿ’ಗಳ ನಡುವೆ ಕಂದಕ ಹೆಚ್ಚಿಸುತ್ತಿದೆ ಎನ್ನಲಾಗಿದೆ.

ವಿಧಾನಸಭೆ ಚುನಾವಣೆಗಳಲ್ಲಿ ಈ ಭಾಗದಲ್ಲಿ ಮೊದಲ ಬಾರಿಗೆ ಸಿಪಿಎಂ ಖಾತೆ ತೆರೆದ ಶ್ರೇಯಸ್ಸು ಕಮ್ಯೂನಿಸ್ಟ್ ಮುಖಂಡರಾದ ಎ.ವಿ.ಅಪ್ಪಾಸ್ವಾಮಿ ರೆಡ್ಡಿ ಅವರಿಗೆ ಸಲ್ಲುತ್ತದೆ. ಅವರ ತರುವಾಯ ಈ ಭಾಗದಲ್ಲಿ ದೊಡ್ಡ ನಾಯಕರಾಗಿ ಹೊರಹೊಮ್ಮಿದವರು ಚಿಂತಾಮಣಿ ತಾಲ್ಲೂಕಿನ ಬೈರೇಬಂಡದ ಜಿ.ವಿ.ಶ್ರೀರಾಮರೆಡ್ಡಿ.

ಶ್ರೀರಾಮರೆಡ್ಡಿ ಅವರನ್ನು ಸಿಪಿಎಂ ಕೇಂದ್ರ ಸಮಿತಿ 1982ರಲ್ಲಿ ಬಾಗೇಪಲ್ಲಿಯಲ್ಲಿ ಪೂರ್ಣಾವಧಿ ಕಾರ್ಯಕರ್ತರನ್ನಾಗಿ ನೇಮಕ ಮಾಡಿತ್ತು. ಅಪ್ಪಾಸ್ವಾಮಿ ರೆಡ್ಡಿ ಅವರ ಅನಾರೋಗ್ಯದ ನಿಮಿತ್ತ 1985ರಲ್ಲಿ ನಡೆದ ಚುನಾವಣೆಯಲ್ಲಿ ಸಿಪಿಎಂ ಅಭ್ಯರ್ಥಿಯಾದ ಶ್ರೀರಾಮರೆಡ್ಡಿ ಕಳೆದ ವಿಧಾನಸಭೆ ಚುನಾವಣೆ ವರೆಗೂ ಇಲ್ಲಿ ಕಮ್ಯುನಿಸ್ಟರ ಕಾಯಂ ‘ಹುರಿಯಾಳು’ ಆಗಿದ್ದರು.

ಈವರೆಗೆ ಏಳು ಚುನಾವಣೆಗಳಲ್ಲಿ ಸ್ಪರ್ಧಿಸಿರುವ ಅವರು ಐದು ಚುನಾವಣೆಗಳಲ್ಲಿ ಸೋತು, ಎರಡು ಬಾರಿ (1994, 2004) ದುಡಿಯುವ ವರ್ಗವನ್ನು ಪ್ರತಿನಿಧಿಸಿ ವಿಧಾನಸೌಧ ಪ್ರವೇಶಿಸಿದ್ದಾರೆ. ಅವರೇ ಘೋಷಿಸಿಕೊಂಡಂತೆ 2018ರ ವಿಧಾನಸಭೆ ಚುನಾವಣೆ ಅವರ ಪಾಲಿಗೆ ಕೊನೆದಾಗಿತ್ತು. ಆದರೆ, ‘ಇನ್ನೊಮ್ಮೆ ಚುನಾವಣೆಗೆ ಸ್ಪರ್ಧಿಸಬೇಕೆಂಬ ಅವರೊಳಗಿನ ಸ್ವಾರ್ಥ ಇಷ್ಟೆಲ್ಲ ಬೀದಿರಂಪಕ್ಕೆ ಕಾರಣವಾಗುತ್ತಿದೆ’ ಎನ್ನುತ್ತಾರೆ ಅವರನ್ನು ಟೀಕಿಸುತ್ತಿರುವ ಸಿಪಿಎಂ ಮುಖಂಡರು.

ಒಂದು ಕಾಲದಲ್ಲಿ ಈ ಭಾಗದಲ್ಲಿ ಮಿತಿಮೀರಿದ ಜಮೀನ್ದಾರರ ‘ದಬ್ಬಾಳಿಕೆ’ಗೆ ಸಿಡಿದೆದ್ದ ಕೆಳವರ್ಗದ ಜನರು ನೆರೆಯ ಆಂಧ್ರದ ರೈತಪರ ಮತ್ತು ನಕ್ಸಲ್ ಹೋರಾಟಗಾರ ಕೊಂಡಪಲ್ಲಿ ಸೀತಾರಾಮಯ್ಯ ಅವರು ಪರಿಚಯಿಸಿದ ಕಮ್ಯೂನಿಸ್ಟ್ ಚಳವಳಿಯ ಬಲದಿಂದ ಶೋಷಣೆಯನ್ನು ಹಿಮ್ಮೆಟ್ಟಿಸಿದರು.

50ರ ದಶಕದ ಕೊನೆಯಲ್ಲಿ ಇಲ್ಲಿ ಕಾವು ಪಡೆದ ಕಮ್ಯೂನಿಸ್ಟ್ ಚಳವಳಿ ಈವರೆಗೂ ಇಲ್ಲಿ ಬೂದಿ ಮುಚ್ಚಿದ ಕೆಂಡಂತೆ ಕಾವು ಉಳಿಸಿಕೊಂಡು ಬಂದಿತ್ತು. ಅದೀಗ ತನ್ನೊಳಗಿನ ಅಂತಃಕಲಹದಿಂದಾಗಿ ತಣ್ಣಗಾಗುತ್ತ ಹೊರಟಿರುವುದು ಇತರ ರಾಜಕೀಯ ಪಕ್ಷಗಳಲ್ಲಿ ಸಂತಸ ಮೂಡಿಸಿದರೆ, ಜೀವಕ್ಕಿಂತಲೂ ಹೆಚ್ಚಾಗಿ ಪಕ್ಷದೆಡೆ ಸಹಾನುಭೂತಿ ಹೊಂದಿದವರಲ್ಲಿ ತೀವ್ರ ನಿರಾಶೆ ಮೂಡಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು