ಗುರುವಾರ , ಜನವರಿ 20, 2022
15 °C
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ

ಕಾಂಗ್ರೆಸ್ ಬೆಂಬಲಿತ ಮತದಾರರು ಜಾಗೃತರಾಗಿರಿ- ಶಾಸಕ ಕೆ.ಆರ್.ರಮೇಶ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ವಿಧಾನ ಪರಿಷತ್ ಚುನಾವಣೆ ಡಿ.4ರ ನಂತರ ಕಾವೇರುತ್ತದೆ. ಅಂತಹ ಸಮಯದಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಬೆಂಬಲಿತ ಮತದಾರರು ಜಾಗೃತರಾಗಿರಬೇಕು. ಆಸೆ, ಆಮಿಷಗಳಿಗೆ, ಬೆದರಿಕೆಗಳಿಗೆ ಬಗ್ಗಬಾರದು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು. 

ನಗರದಲ್ಲಿ ಮಂಗಳವಾರ ಕಾಂಗ್ರೆಸ್‌ನಿಂದ ನಡೆದ ವಿಧಾನ ಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ನಾಲ್ಕೈದು ದಿನಗಳಲ್ಲಿ ‌ಚುನಾವಣೆ ಬಿಸಿ ಏರಲಿದೆ. ಮುಖಂಡರು ಹಾಗೂ ಕಾರ್ಯಕರ್ತರು ಶ್ರದ್ಧೆಯಿಂದ ಮತದಾರರನ್ನು ಸಂಪರ್ಕದಲ್ಲಿ ಇಟ್ಟುಕೊಳ್ಳಬೇಕು. ಚಿಕ್ಕಬಳ್ಳಾಪುರವೇ ಎರಡೂ ಜಿಲ್ಲೆ ಅಲ್ಲ ಎಂದರು.

ಚುನಾವಣೆ ಪೂರ್ವದಲ್ಲಿನ ನಡವಳಿಕೆಗಳು ನಂತರ ಬದಲಾವಣೆ ಆಗುತ್ತವೆ. ಇದರಿಂದ ಜನರಿಗೆ ಬೇಸರ ಆಗುತ್ತದೆ. ಅಭಿವೃದ್ಧಿಯೊಂದೇ ಸಾಲದು. ಜನರನ್ನು ಪ್ರೀತಿ ವಾತ್ಸಲ್ಯದಿಂದ ನೋಡಬೇಕು. ಜನರ ನಡುವೆ ಶಾಸಕ ಉದ್ಭವ ಆಗಬೇಕು. ಮೇಲಿನಿಂದ ಉದುರಬಾರದು. ಜನರ ನಡುವೆ ಉದ್ಭವವಾಗುವ ಶಾಸಕರನ್ನು ಜನರೇ ರಕ್ಷಿಸುತ್ತಾರೆ ಎಂದು ಹೇಳಿದರು.

ಈಗ ಚುನಾವಣೆ ಪ್ರಚಾರದ ದೃಷ್ಟಿಯಿಂದ ನಾವೆಲ್ಲರೂ ಇಲ್ಲಿ ಸೇರಿದ್ದೇವೆ. ಇದು ಇಲ್ಲಿಗೆ ನಿಲ್ಲುವುದಿಲ್ಲ. ಪಕ್ಷ ಸಂಘಟನೆ ಮುಂದುವರಿಯುತ್ತದೆ ಎಂದರು.

ಈಗ ಕಾಂಗ್ರೆಸ್‌ನವರು ಅತ್ಯಂತ ಕಷ್ಟದ ದಿನಗಳನ್ನು ಎದುರಿಸುತ್ತಿದ್ದೇವೆ. ಆದರೆ ಇದೇ ಜನರು ಕಾಂಗ್ರೆಸ್‌ಗೆ ಬಹುಮತ ಕೊಟ್ಟಿದ್ದರು.  ಈಗ ದೂರ ಸರಿಸಿದ್ದಾರೆ. ಮತ್ತೆ ನಾವು ಮೈಮರೆಯಬಾರದು. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಒಳ್ಳೆಯದಾಗುತ್ತದೆ ಎಂದು ಹೇಳಿದರು.

ಇಲ್ಲಿಯೇ ಹುಟ್ಟಿ, ಬೆಳೆದು, ಪೈಲ್ವಾನರಾದವರ ಕಾಲುಗಳು ಈಗ ತಾಯಿಯ ಎದೆಯ ಮೇಲಿದೆ ಎಂದು ಸಚಿವ ಡಾ.ಸುಧಾಕರ್ ಹೆಸರು ಹೇಳದೆ ಟೀಕಿಸಿದರು. 

ಪ್ರತಿ ಮನುಷ್ಯ ವಾಪಸ್ ಮಣ್ಣಿಗೆ ಹೋಗಬೇಕು. ಆಕಾಶದಲ್ಲಿ ದಹನ ಮಾಡುವುಕ್ಕೆ ಆಗುವುದಿಲ್ಲ. ಸತ್ತ ಸಂದರ್ಭದಲ್ಲಿ ಥೂ ಇದ್ಯಾಕಪ್ಪ ತಂದುಹಾಕಿದೆ ಎಂದು ಭೂಮಿ ತಾಯಿ ಹೇಳಬಾರದು. ಯೋಗ್ಯವಾಗಿ ಬದುಕಿದರೆ ಭೂ ತಾಯಿ ಬಾ ಕಂದ ಎಂದು ಅಪ್ಪಿಕೊಳ್ಳುತ್ತಾಳೆ ಎಂದು ಹೇಳಿದರು.

ರಾಜಕಾರಣ ಎಂದರೆ ಜೂಜು ಅಲ್ಲ. ರಾಜಕಾರಣ ಎಂದರೆ ಬದುಕಿಗೆ ಪರ್ಯಾಯ ಮಾರ್ಗವೂ ಅಲ್ಲ. ದೇಶದ ಜನರ ನಂಬಿಕೆಯ ಉಗ್ರಾಣ ಎಂದರು. 

ಮಾಜಿ ಸಂಸದ ಎಂ.ವೀರಪ್ಪ ಮೊಯಿಲಿ ಮಾತನಾಡಿ, ನಮ್ಮ ಪಕ್ಷದ ಅಭ್ಯರ್ಥಿ ಅನಿಲ್ ಕುಮಾರ್ ನಿಷ್ಠಾವಂತ ಕಾರ್ಯಕರ್ತರು. ಆಸೆ ಆಮಿಷಗಳಿಗೆ ಎದುರಾಗಿ ಕಾಂಗ್ರೆಸ್‌ನಲ್ಲಿ ಬಂಡೆಯ ರೀತಿಯಲ್ಲಿ ನಿಂತವರು. ಎಲ್ಲರ ಜತೆ ಸಮಾಲೋಚಿಸಿದ ನಂತರವೇ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ ಎಂದು ಹೇಳಿದರು.   

ಮುಳಬಾಗಿಲಿನಲ್ಲಿ ಮಾಜಿ ಶಾಸಕ ಕೊತ್ತೂರು ಮಂಜುನಾಥ್, ಚಿಂತಾಮಣಿಯಲ್ಲಿ ಡಾ.ಎಂ.ಸಿ.ಸುಧಾಕರ್, ಕೋಲಾರದಲ್ಲಿ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ನಮ್ಮ ಬೆಂಬಲಕ್ಕೆ ಇದ್ದಾರೆ. ಇದು ನಮಗೆ ಮತ್ತಷ್ಟು ಹುರು‍ಪು ತಂದಿದೆ ಎಂದು ಹೇಳಿದರು.

ಚುನಾವಣೆ ಸಮಯದಲ್ಲಿ ಗಿಡುಗಗಳು ಹಾರಾಡುತ್ತಿರುತ್ತವೆ. ಆ ಗಿಡುಗಗಳಿಗೆ ಬಲಿ ಆಗಬಾರದು. ಬಿಜೆಪಿಗೆ ಇತಿಹಾಸವೂ ಇಲ್ಲ. ಭವಿಷ್ಯವೂ ಇಲ್ಲ. ಅವರದ್ದು ಅಧಿಕಾರದ ರಾಜಕಾರಣ ಎಂದು ಟೀಕಿಸಿದರು.

ಶಾಸಕ ಎನ್.ಎಚ್.ಶಿವಶಂಕರರೆಡ್ಡಿ, ಅಭ್ಯರ್ಥಿ ಅನಿಲ್ ಕುಮಾರ್ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ನಜೀರ್ ಅಹಮ್ಮದ್, ಮಾಜಿ ಶಾಸಕ ಸಂಪಂಗಿ, ಎಸ್.ಎಂ.ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ಕೆಪಿಸಿಸಿ ಸದಸ್ಯ ವಿನಯ್ ಶ್ಯಾಮ್, ಮುನೇಗೌಡ, ಮುಖಂಡರಾದ  ಆಂಜನಪ್ಪ, ಪ್ರಕಾಶ್ ಇತರರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು