ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ದಲಿತ ವಿರೋಧಿ ಕಾಂಗ್ರೆಸ್ ಆಗಿದೆ: ಆರೋಪ

ನಾಳೆ ಬೆಂಗಳೂರಿನಲ್ಲಿ ದಸಂಸ ಪದಾಧಿಕಾರಿಗಳ ಅಧಿವೇಶನ
Published 6 ನವೆಂಬರ್ 2023, 13:42 IST
Last Updated 6 ನವೆಂಬರ್ 2023, 13:42 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಲಿತರಿಗೆ ಅನುಕೂಲ ಆಗುತ್ತದೆ ಎನ್ನುವ ಮಾತು ಇತ್ತು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ದಲಿತ ವಿರೋಧಿ ಆಗಿದೆ’ ಎಂದು ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಚಾಲಕ ಬಿ.ಎನ್.ಗಂಗಾಧರಪ್ಪ ಆರೋಪಿಸಿದರು. 

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಮರ್ಯಾದಾಗೇಡು ಹತ್ಯೆಗಳು ನಡೆಯುತ್ತಿವೆ. ದಲಿತ ಸಮುದಾಯದ ಡಾ.ಜಿ.ಪರಮೇಶ್ವರ ಗೃಹ ಸಚಿವರಾಗಿದ್ದರೂ ದಲಿತರ ಮೇಲೆ ಹಲ್ಲೆಗಳು ನಿರಂತರವಾಗಿವೆ ಎಂದು ದೂರಿದರು. 

ಕಾಂಗ್ರೆಸ್ ದಲಿತರ ಪರವಾಗಿ ಇಲ್ಲ‌. ದಲಿತರ ಕಲ್ಯಾಣಕ್ಕೆ ಮೀಸಲಾಗಿದ್ದ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಹಣವನ್ನು ಗ್ಯಾರಂಟಿಗಳಿಗಾಗಿ ಬಳಕೆ ಮಾಡಿದ್ದಾರೆ. ಇದರಿಂದ ದಲಿತರ ಕಾಲೊನಿಗಳು ಅಭಿವೃದ್ಧಿ ಆಗುತ್ತಿಲ್ಲ. ಸಮಾಜ ಕಲ್ಯಾಣ ಸಚಿವರು ಸಹ ದಲಿತರಾಗಿದ್ದರೂ ಅಸಹಾಯಕರಾಗಿ ಇದ್ದಾರೆ ಎಂದು ಹೇಳಿದರು.

ಈ ಎಲ್ಲ ವಿಚಾರಗಳ ಚರ್ಚೆ ಹಿನ್ನೆಲೆಯಲ್ಲಿ ನ.8ರಂದು ಬೆಂಗಳೂರಿನ ಕಬ್ಬನ್ ಪಾರ್ಕ್‌ನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಟ್ಟಡದಲ್ಲಿ ರಾಜ್ಯದ ಮಟ್ಟದ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ಅಧಿವೇಶನ ನಡೆಯಲಿದೆ ಎಂದು ತಿಳಿಸಿದರು.

ಸದಾಶಿವ ಆಯೋಗದ ವರದಿ ಇಂದಿಗೂ ಜಾರಿಯಾಗಿಲ್ಲ. ಈ ವರದಿ ಜಾರಿಗೆ ಆಗ್ರಹಿಸಲಾಗುವುದು. ಕಾಂತರಾಜ್ ಸಮಿತಿ ನೀಡಿರುವ ಜಾತಿ ಗಣತಿಯ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ದೇವನೂರ ಮಹಾದೇವ, ಸಿದ್ದಲಿಂಗಯ್ಯ ಮತ್ತಿತರ ಮುಖಂಡರು ದಸಂಸ ಹೋರಾಟಗಳನ್ನು ದೊಡ್ಡ ಮಟ್ಟದಲ್ಲಿ ಕಟ್ಟಿದರು. ಆ ಹೋರಾಟದ ಕಿಚ್ಚು ಎಲ್ಲಿ ಹೋಯಿತು ಎನ್ನುವ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲಾಗುವುದು. ಜಿಲ್ಲಾ, ತಾಲ್ಲೂಕು ಮಟ್ಟದ ಪದಾಧಿಕಾರಿಗಳು ಅಧಿವೇಶನದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು. 

ಮುಖಂಡರಾದ ರತ್ನಮ್ಮ ಮಾತನಾಡಿ, ಮಹಿಳೆಯರ ಮೇಲೆ ಹಲ್ಲೆಗಳು ಹೆಚ್ಚಿವೆ. ಕೊಲೆಗಳು ನಡೆಯುತ್ತಿವೆ. ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ, ಶೋಷಣೆ ತಡೆಗೆ ದಲಿತ ಮಹಿಳಾ ಒಕ್ಕೂಟ ಕೆಲಸ ಮಾಡುತ್ತಿದೆ. ಅಧಿವೇಶನದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿ ಆಗಬೇಕು ಎಂದು ಕೋರಿದರು.

 ದಸಂಸ ಪದಾಧಿಕಾರಿಗಳಾದ ಶ್ರೀನಿವಾಸ, ರಾಜಣ್ಣ, ಮುನಿರಾಜು ಮರಸನಹಳ್ಳಿ ಇತರರು ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT