ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭರ್ತಿಯಾಗದ ನಾಮನಿರ್ದೇಶನ ಸ್ಥಾನಗಳು; ‘ಕೈ’ ಮುಖಂಡರಿಗಿಲ್ಲ ಅಧಿಕಾರದ ಭಾಗ್ಯ

ಬೆಂಬಲಿಗರಿಗೆ ಸ್ಥಾನ ಕೊಡಿಸಿದ ಡಾ.ಎಂ.ಸಿ.ಸುಧಾಕರ್
Published 24 ಆಗಸ್ಟ್ 2024, 7:04 IST
Last Updated 24 ಆಗಸ್ಟ್ 2024, 7:04 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂಕಾಲು ವರ್ಷಗಳಾಗಿವೆ. ಸರ್ಕಾರದಲ್ಲಿ ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿನ  ನಾಮನಿರ್ದೇಶನ ಅಧಿಕಾರದ ಹುದ್ದೆಗಳಿಗೆ ನೇಮಕ ಆಗಬಹುದು ಎನ್ನುವ ನಿರೀಕ್ಷೆ ಹೊಂದಿದ್ದ ಜಿಲ್ಲೆಯ ಕಾಂಗ್ರೆಸ್ ಮುಖಂಡರಿಗೆ ಇನ್ನೂ ಅಧಿಕಾರದ ಭಾಗ್ಯ ದೊರೆತಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮಾತ್ರ ತಮ್ಮ ಬೆಂಬಲಿಗರಿಗೆ ಸ್ವಕ್ಷೇತ್ರ ಚಿಂತಾಮಣಿಯಲ್ಲಿ ನಾಮನಿರ್ದೇಶನಗಳ ಮೂಲಕ ಹುದ್ದೆಗಳನ್ನು ಕೊಡಿಸಿದ್ದಾರೆ. ಅದನ್ನು ಹೊರತುಪಡಿಸಿ ಉಳಿದ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ನಾಮನಿರ್ದೇಶನ ಸ್ಥಾನಗಳ ಭರ್ತಿಗೆ ಮನಸ್ಸು ಮಾಡಿಲ್ಲ.

ಚಿಂತಾಮಣಿ ನಗರಸಭೆಗೆ ಐದು ಮಂದಿಯನ್ನು ನಾಮನಿರ್ದೇಶನ ಸದಸ್ಯರನ್ನಾಗಿ ನೇಮಿಸಲಾಗಿದೆ. ನಗರಸಭೆಯ ಆಶ್ರಯ ಸಮಿತಿಗೆ ನಾಲ್ಕು ಜನರನ್ನು ಅಧಿಕಾರೇತರ ನಾಮನಿರ್ದೇಶನ ಸದಸ್ಯರನ್ನಾಗಿ ಮತ್ತು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ 8 ಮಂದಿಯನ್ನು ಅಧಿಕಾರೇತರ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿ ಸರ್ಕಾರ ಆದೇಶಿಸಿದೆ. ಚಿಂತಾಮಣಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ನಗರಸಭೆ ಮಾಜಿ ಸದಸ್ಯ ಶ್ರೀನಾಥರೆಡ್ಡಿ ನೇಮಕವಾಗಿದ್ದಾರೆ.

ಹೀಗೆ ಸಚಿವರು ತಮ್ಮ ರಾಜಕೀಯ ಏಳಿಕೆಯಲ್ಲಿ ದುಡಿದ ಕಾರ್ಯಕರ್ತರು, ಮುಖಂಡರಿಗೆ ತಾಲ್ಲೂಕು ವ್ಯಾಪ್ತಿಯಲ್ಲಿ ನಾಮನಿರ್ದೇಶನದ ಹುದ್ದೆಗಳನ್ನು ಕೊಡಿಸಿದ್ದಾರೆ. 

ಚಿಂತಾಮಣಿ ಹೊರತುಪಡಿಸಿ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕೇಶವರೆಡ್ಡಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಕೇಶವರೆಡ್ಡಿ ಅವರಿಗೆ ರಾಜ್ಯ ಮಟ್ಟದಲ್ಲಿ ನಿಗಮ ಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನ ನೀಡಲಾಗುತ್ತದೆ ಎನ್ನುವ ಮಾತುಗಳು ಇದ್ದವು. ಆದರೆ ಅಂತಿಮವಾಗಿ ಪಕ್ಷದ ಜಿಲ್ಲಾ ನಾಯಕರು ಮತ್ತು ರಾಜ್ಯ ನಾಯಕರು ಚರ್ಚಿಸಿ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಅಧ್ಯಕ್ಷ ಸ್ಥಾನ ನೀಡಿದರು. 

ಹೊಸ ಸರ್ಕಾರಗಳು ಅಸ್ತಿತ್ವಕ್ಕೆ ಬಂದಾಗ ಶಾಸಕರು ತಮ್ಮ ಬೆಂಬಲಿಗರಿಗೆ ಅಧಿಕಾರ ಕೊಡಿಸುವುದು ಸಾಮಾನ್ಯ. ತಮ್ಮ ನಿಷ್ಠರಿಗೆ ಉತ್ತಮ ಹುದ್ದೆಗಳನ್ನು ಕೊಡಿಸುವರು. ರಾಜ್ಯ ಮಟ್ಟದ ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ, ನಿರ್ದೇಶಕ ಸ್ಥಾನಗಳು, ಜಿಲ್ಲಾ ಮಟ್ಟದ ಬೋರ್ಡ್‌ಗಳಲ್ಲಿ ಅವಕಾಶ, ತಾಲ್ಲೂಕು ಮಟ್ಟದ ನಗರಸಭೆ, ಪುರಸಭೆ, ಆಶ್ರಯ ಸಮಿತಿ, ಬಗರ್‌ಹುಕುಂ ಸಮಿತಿಗಳಿಗೆ ನೇಮಕ, ಹಾಲು ಒಕ್ಕೂಟಗಳು, ಸಹಕಾರ ಕ್ಷೇತ್ರದ ನಾಮನಿರ್ದೇಶನ ಹೀಗೆ ವಿವಿಧ ಸಮಿತಿಗಳಲ್ಲಿ ನಾಮನಿರ್ದೇಶನ ಸದಸ್ಯರನ್ನಾಗಿ ಬೆಂಬಲಿಗರನ್ನು ನೇಮಿಸುವರು. 

ಈ ನೇಮಕದ ಹಿಂದೆ ಜಾತಿ, ಪಕ್ಷ ನಿಷ್ಠೆ, ಶಾಸಕರಿಗೆ ನಿಷ್ಠೆ ಪ್ರಮುಖವಾಗಿ ಕೆಲಸ ಮಾಡುತ್ತವೆ. ಆಯಾ ಶಾಸಕರು ತಮ್ಮ ಬೆಂಬಲಿಗರಿಗೆ ಅಧಿಕಾರಗಳನ್ನು ದೊರಕಿಸಿಕೊಡುವ ಮೂಲಕ ತಮ್ಮ ಹಿಡಿತವನ್ನು ಹೆಚ್ಚಿಸಿಕೊಳ್ಳುವರು. ಪಕ್ಷಕ್ಕೆ ನಿಷ್ಠೆಯಿಂದ ದುಡಿದ ಮುಖಂಡರನ್ನೂ ಗುರುತಿಸಿ ನಾಮನಿರ್ದೇಶನ ಸ್ಥಾನಗಳಿಗೆ ನೇಮಿಸುವರು. ಇದು ಪಕ್ಷ ಸಂಘಟನೆಗೂ ಅನುಕೂಲ. 

ಆದರೆ ಜಿಲ್ಲೆಯಲ್ಲಿ ಚಿಂತಾಮಣಿ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದ ತಾಲ್ಲೂಕುಗಳಲ್ಲಿ ‘ಕೈ’ ನಾಯಕರಿಗೆ ಅಧಿಕಾರ ಭಾಗ್ಯ ದೊರೆತಿಲ್ಲ. 

ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿಸಿರುವ ಪಕ್ಷೇತರ ಶಾಸಕ ಕೆ.ಎಚ್‌.ಪುಟ್ಟಸ್ವಾಮಿಗೌಡ ಮತ್ತು ಮಾಜಿ ಸಚಿವ ಎನ್‌.ಎಚ್‌.ಶಿವಶಂಕರ ರೆಡ್ಡಿ ಇಬ್ಬರ ಸಮ್ಮುಖದಲ್ಲಿಯೇ ಅಧಿಕಾರ ಹಂಚಿಕೆ ಸೂತ್ರ ನಡೆಯಬೇಕಾಗಿದೆ. ಇದೇ ಈ ಕ್ಷೇತ್ರದಲ್ಲಿ ಇನ್ನೂ ನೇಮಕ ನನೆಗುದಿಗೆ ಬೀಳಲು ಪ್ರಮುಖ ಕಾರಣ.

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಇಲ್ಲಿ ಮಾಜಿ ಸಚಿವ ವಿ.ಮುನಿಯಪ್ಪ, ಮುಖಂಡರಾದ ರಾಜೀವ್ ಗೌಡ, ಪುಟ್ಟು ಆಂಜನಪ್ಪ ಅವರೊಂದಿಗೆ ಚರ್ಚಿಸಿದ ನಂತರವೇ ನೇಮಕಗಳಿಗೆ ಪಕ್ಷವು ಮುಂದಡಿ ಇಡಬೇಕು. ಶಿಡ್ಲಘಟ್ಟ ಕಾಂಗ್ರೆಸ್‌ನಲ್ಲಿ ಬಣಗಳ ಪರ್ವ ಜೋರಾಗಿರುವ ಕಾರಣ ಇಲ್ಲಿ ಪಕ್ಷ ನಿಷ್ಠೆ, ಪ್ರಭಾವಗಳನ್ನು ಮಾನದಂಡವಾಗಿಸಿ ಆಯ್ಕೆಗಳು ನಡೆಯಬೇಕಾಗಿದೆ. 

ಬಾಗೇಪಲ್ಲಿ ಕ್ಷೇತ್ರದಲ್ಲಿ ಶಾಸಕ ಸುಬ್ಬಾರೆಡ್ಡಿ ಅವರ ನಿರ್ಧಾರವೇ ಅಂತಿಮ. ಸುಬ್ಬಾರೆಡ್ಡಿ ಅವರ ಹಸಿರು ನಿಶಾನೆ ತೋರುವವರು ನೇಮಕವಾಗುವರು. ಆದರೆ ಈ ಕ್ಷೇತ್ರದಲ್ಲಿಯೂ ನಾಮನಿರ್ದೇಶನ ಸ್ಥಾನಗಳು ಭರ್ತಿಯಾಗಿಲ್ಲ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಹಾಗೂ ಅವರ ವಿರುದ್ಧ ಇರುವ ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ಪಡೆದೇ ಮುಂದುವರಿಯುವ ಸಾಧ್ಯತೆ ಇದೆ. ಚಿಕ್ಕಬಳ್ಳಾಪುರದ ನಾಮನಿರ್ದೇಶನ ಸ್ಥಾನಗಳಿಗೆ ನೇಮಕವು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಕಣ್ಣಳತೆಯಲ್ಲಿಯೇ ನಡೆಯುವ ಸಾಧ್ಯತೆ ಇದೆ. 

ರಾಜ್ಯದ ಬೇರೆ ಬೇರೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಾಮನಿರ್ದೇಶನ ಸದಸ್ಯರನ್ನು ಈಗಾಗಲೇ ನೇಮಕ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿಯೂ ನೇಮಕಗಳು ಬೇಗ ನಡೆಯಬೇಕು. ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ಕ್ಷೇತ್ರದ ನಾಮನಿರ್ದೇಶನದ ವಿಚಾರಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಪ್ರಮುಖವಾಗಿ ಗಮನವಹಿಸುವ ಸಾಧ್ಯತೆ ಇದೆ ಎಂದು ಜಿಲ್ಲೆಯ ಕಾಂಗ್ರೆಸ್ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಚರ್ಚೆಯಾಗಿದೆ; ಶೀಘ್ರ ನೇಮಕ’
ನಮ್ಮ ಪಕ್ಷದ ಶಾಸಕರು ಮತ್ತು ಶಾಸಕರು ಇಲ್ಲದ ಕಡೆ ಸ್ಥಳೀಯ ಮುಖಂಡರು ನಾಮನಿರ್ದೇಶನ ಸ್ಥಾನಗಳಿಗೆ ನೇಮಕ ಮಾಡುವ ಬಗ್ಗೆ ಶಿಫಾರಸು ಮಾಡಬೇಕಾಗುತ್ತದೆ. ಈಗಾಗಲೇ ಈ ಬಗ್ಗೆ ಚರ್ಚೆಗಳು ನಡೆದಿವೆ. ಮುಂದಿನ ಒಂದು ವಾರದಿಂದ ಹತ್ತು ದಿನಗಳ ಒಳಗೆ ನಾಮನಿರ್ದೇಶನ ಸ್ಥಾನಗಳಿಗೆ ನೇಮಕ ಆಗಲಿದೆ ಎಂದು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕೇಶವರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ನಾಮನಿರ್ದೇಶನಗಳ ಬಗ್ಗೆ ಸಚಿವರು ಮುಖಂಡರು ಮತ್ತು ಶಾಸಕರು ಈಗಾಗಲೇ ಚರ್ಚೆಗಳನ್ನು ನಡೆಸಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT