ಗೌರಿಬಿದನೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವುದನ್ನು ಖಂಡಿಸಿ ನಗರದಲ್ಲಿ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ನಗರದ ಶನಿಮಹಾತ್ಮ ದೇವಸ್ಥಾನದಿಂದ ಅಂಬೇಡ್ಕರ್ ವೃತ್ತದವರೆಗೆ ಶಾಸಕರು ಹಾಗೂ ಅವರ ಬೆಂಬಲಿಗರು ರಾಜ್ಯಪಾಲರ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಮಾತನಾಡಿ, ‘ಪ್ರಾಮಾಣಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತೇಜೋವಧೆ ಮಾಡಲು ಕೇಂದ್ರ ಸರ್ಕಾರ ಕುಮ್ಮಕ್ಕು ನೀಡುತ್ತಿದೆ. ರಾಜಕೀಯ ಪಿತೂರಿ ನಡೆಸುತ್ತಿರುವ ರಾಜ್ಯಪಾಲರನ್ನು ಈ ಕೂಡಲೇ ರಾಷ್ಟ್ರಪತಿ ಅವರು ವಾಪಸ್ ಕರೆಸಿಕೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಸಿದ್ದರಾಮಯ್ಯ ಅವರು ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ಒಂದೇ ಒಂದು ಭ್ರಷ್ಟಾಚಾರದ ಕಪ್ಪು ಚುಕ್ಕೆ ಇಲ್ಲದಂತೆ ನಡೆದುಕೊಂಡಿದ್ದಾರೆ. ಶಾಸಕರಾಗಿ, ಮಂತ್ರಿಗಳಾಗಿ, ಉಪಮುಖ್ಯಮಂತ್ರಿಗಳಾಗಿ, ವಿರೋಧ ಪಕ್ಷದ ನಾಯಕರಾಗಿ, ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಅವರು ಮನಸ್ಸು ಮಾಡಿದ್ದರೆ ಸಾವಿರಾರು ಎಕರೆ ಜಮೀನು, ಸಾವಿರಾರು ಕೋಟಿ ಹಣ ಮಾಡಬಹುದಿತ್ತು’ ಎಂದರು.
‘ಆದರೆ ಸಿದ್ದರಾಮಯ್ಯ ಅವರು ಎಂದೂ ಕೂಡ ಕೈ ಬಾಯಿ ಕೆಡಿಸಿಕೊಂಡಿಲ್ಲ. ಸರಳ ಸಜ್ಜನರು, ಪ್ರಾಮಾಣಿಕ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅವರಿಗೆ ಇರುವ ಜನ ಬೆಂಬಲ ಮತ್ತು ಜನಪ್ರಿಯತೆ ನೋಡಿ ಸಹಿಸಿಕೊಳ್ಳಲಾಗದೆ ರಾಜಕೀಯವಾಗಿ ಮುಗಿಸಬೇಕು ಎಂದು ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಷಡ್ಯಂತ್ರ ನಡೆಸಿದ್ದಾರೆ’ ಎಂದು ಆರೋಪಿಸಿದರು.
‘ರಾಜ್ಯಪಾಲರ ಮೂಲಕ ಸಿದ್ದರಾಮಯ್ಯನವರ ತೇಜೋವಧೆಗೆ ಮುಂದಾಗಿದ್ದಾರೆ. ರಾಜ್ಯಪಾಲರು ತಮ್ಮ ಸ್ಥಾನದ ಘನತೆ ಹಾಗೂ ಗೌರವವನ್ನು ಮರೆತು ಕೇಂದ್ರ ಸರ್ಕಾರದ ಕೈಗೊಂಬೆಯ ರೀತಿ ವರ್ತಿಸುತ್ತಿದ್ದಾರೆ. ಇಂತಹ ರಾಜ್ಯಪಾಲರು ನಮ್ಮ ರಾಜ್ಯಕ್ಕೆ ಬೇಕಿಲ್ಲ. ಈ ಕೂಡಲೇ ರಾಷ್ಟ್ರಪತಿ ಅವರು ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕು’ ಎಂದು ಒತ್ತಾಯಿಸಿದರು.
ಮುಖಂಡ ಆರ್.ಅಶೋಕ್ ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಎಂ.ನರಸಿಂಹಮೂರ್ತಿ, ಕೋಚಿಮುಲ್ ನಿರ್ದೇಶಕ ಜೆ.ಕಾಂತರಾಜು, ವಕೀಲ ರಂಗರಾಜು ಮಾತನಾಡಿದರು.
ಮುಖಂಡ ಬೊಮ್ಮಣ್ಣ, ಗೋಪಿ, ಬಾಲಕೃಷ್ಣ, ಆರ್.ಆರ್.ರೆಡ್ಡಿ, ನಾಗೇಂದ್ರ, ನಾಗಾರ್ಜುನ, ಲಕ್ಷ್ಮಿನಾರಾಯಣಪ್ಪ, ಫರೀದ್, ಚನ್ನಪ್ಪ, ಗಂಗಾಧರಪ್ಪ, ನಂಜುಂಡಪ್ಪ, ಚಂದ್ರಣ್ಣ, ವೇಣುಗೋಪಾಲರೆಡ್ಡಿ, ಶ್ರೀನಾಥ್, ಸಲೀಂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.