ಶುಕ್ರವಾರ, ಆಗಸ್ಟ್ 6, 2021
27 °C
ಕೋವಿಡ್‌ ವಾರ್ಡ್‌ನಲ್ಲಿ ಸೋಂಕಿತರ ಚಿಕಿತ್ಸೆಗೆ ಮುಂಚೂಣಿಯಲ್ಲಿ ಟೊಂಕ ಕಟ್ಟಿ ಶ್ರಮಿಸಿದ ವೈದ್ಯ ಡಾ.ಪ್ರಕಾಶ್‌

ಸೇವೆಗೆ ಅವಕಾಶ ಕಲ್ಪಿಸಿದ ಕೊರೊನಾ

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ವೈದ್ಯರೂ ಮನುಷ್ಯರೇ ಕಣ್ರಿ. ನಮಗೂ ಎಲ್ಲರಂತೆ ಸಮಸ್ಯೆಗಳು, ಕಾಯಿಲೆಗಳು, ಭಯ, ಆತಂಕ ಎಲ್ಲವೂ ಇವೆ. ಹಾಗೆಂದು ನಾವು ಕೈಚೆಲ್ಲಿದರಾದೀತೆ? ಜೀವ ಉಳಿಸುವುದೇ ನಮ್ಮ ವೃತ್ತಿ. ಅದಕ್ಕೆ ನ್ಯಾಯ ಸಲ್ಲಿಸಿದ ತೃಪ್ತಿ ನಮ್ಮಲ್ಲಿದೆ. ಕೊರೊನಾ ವೈರಾಣು ಸೋಂಕು ನಮಗೆ ಕಷ್ಟಕ್ಕಿಂತಲೂ ಕಷ್ಟದಲ್ಲಿರುವವರ ಸೇವೆಗೆ ಒಂದು ಉತ್ತಮ ಅವಕಾಶ ಕಲ್ಪಿಸಿತು’

ಜಿಲ್ಲಾ ಆಸ್ಪತ್ರೆಯ ಕೋವಿಡ್‌ ವಾರ್ಡ್‌ಗೆ ಭೇಟಿ ನೀಡಿ, ಅದೇ ತಾನೆ ವೈಯಕ್ತಿಕ ಸುರಕ್ಷಾ ಉಡುಗೆ (ಪಿಪಿಇ) ಕಳಚಿಟ್ಟು ಹೊರ ಬಂದು, ಬಟ್ಟೆಯಲ್ಲೇ ಸ್ನಾನ ಮಾಡಿದ ಸ್ಥಿತಿಯಲ್ಲಿ ಭೇಟಿಯಾದ ಜಿಲ್ಲಾ ಆಸ್ಪತ್ರೆಯ ವೈದ್ಯ ಡಾ.ಪ್ರಕಾಶ್ ಅವರು ಹೇಳಿದ ಮೊಟ್ಟಮೊದಲ ಮಾತಿದು.

ಜಿಲ್ಲೆಯಲ್ಲಿ ಈವರೆಗೆ 152 ಜನರಲ್ಲಿ ಕೋವಿಡ್‌ ಕಾಣಿಸಿಕೊಂಡು, ಮೂರು ಜನರು ಮೃತಪಟ್ಟಾಗ ಸಹಜವಾಗಿಯೇ ಜನಜೀವನ ತಲ್ಲಣಿಸಿತ್ತು. ಆದರೆ, ಇವತ್ತು ವೈದ್ಯಕೀಯ ಸಿಬ್ಬಂದಿಯ ಹಗಲಿರುಳ ಸೇವೆಯಿಂದ ಶೇ 90ರಷ್ಟು ಸೋಂಕಿತರು ಸಂಪೂರ್ಣ ಗುಣಮುಖರಾಗಿ ಮನೆ ಸೇರಿದ್ದಾರೆ. ಸಾರ್ವಜನಿಕರು, ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್‌ನಂತಹ ಸಾಂಕ್ರಾಮಿಕ ಕಾಯಿಲೆ ಶತಮಾನದ ಬಳಿಕ ವೈದ್ಯಕೀಯ ಲೋಕಕ್ಕೆ ದೊಡ್ಡ ಸವಾಲು ಒಡ್ಡಿದ ಜೈವಿಕ ವಿಪತ್ತು. ಈ ಸವಾಲನ್ನು ಯಶಸ್ವಿಯಾಗಿ ಎದುರಿಸಿದವರ ಅನುಭವನ್ನು ಸಮಾಜದ ಎದುರು ತೆರೆದಿಡುವ ನಿಟ್ಟಿನಲ್ಲಿ ಡಾ.ಪ್ರಕಾಶ್‌ ಅವರನ್ನು ಮಾತನಾಡಿಸಿದಾಗ ಅವರು ಹೇಳಿದ್ದಿಷ್ಟು...

ನಿಮಗೆ ಗೊತ್ತಾ? ನನಗೆ ರಕ್ತದೊತ್ತಡ, ಮಧುಮೇಹ ಸಮಸ್ಯೆಗಳಿವೆ. ಅಷ್ಟೇ ಅಲ್ಲ ಒಂದು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಕೂಡ ಒಳಗಾಗಿರುವೆ. ವಯಸು ಎಷ್ಟು ಹೇಳಿ? 58 ವರ್ಷ, ನಿವೃತ್ತಿಗೆ ಇನ್ನೆರಡೇ ವರ್ಷ ಬಾಕಿ. ಇವು ಯಾವವೂ ನನಗೆ ಸೇವೆಯಿಂದ ತಪ್ಪಿಸಿಕೊಳ್ಳಲು ನೆವವಾಗಲಿಲ್ಲ. ಅದಕ್ಕೆ ನನ್ನ ಮನಸಾಕ್ಷಿಯೂ ಒಪ್ಪಲಿಲ್ಲ.

ನಮ್ಮ ಸಹದ್ಯೋಗಿಗಳಲ್ಲಿನ ಆತಂಕ ನಿವಾರಿಸಿ, ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ನಾವು ಮೊದಲು ಕೋವಿಡ್‌ ವಾರ್ಡ್‌ಗೆ ಮುನ್ನುಗ್ಗಿ ಕೆಲಸ ಮಾಡಿದೆವು. ಬಳಿಕವೇ ಉಳಿದವರು ಅಂಜುತ್ತ ಒಳಗೆ ಅಡಿ ಇಟ್ಟರು. ನಮ್ಮಂತಹವರು ಕೋವಿಡ್‌ ಸೋಂಕಿತರ ಚಿಕಿತ್ಸೆಗೆ ಹೋಗುವುದು ಅಪಾಯಕಾರಿ ಸಂಗತಿ. ಆದರೆ,  ಸಹದ್ಯೋಗಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುವುದು ಅವಶ್ಯವಾಗಿತ್ತು.

ನನ್ನ ಆರೋಗ್ಯದ ಸಮಸ್ಯೆಗಳು ಗೊತ್ತಿದ್ದ ಕಾರಣಕ್ಕೆ ಮನೆಯವರು ಸೋಂಕಿತರ ಚಿಕಿತ್ಸೆಗೆ ಹೋಗಡಬೇಡಿ ಎಂದು ಬೇಡಿಕೊಂಡರು. ಮಗಳು ‘ಹೊರಗೆ ಹೋಗಬೇಡಿ ಪಪ್ಪಾ’ ಎಂದು ಗೋಗರೆದಳು. ಆದರೆ ನನ್ನನ್ನು ಅರ್ಥಮಾಡಿಕೊಂಡಿದ್ದ ಮಗ ಮಾತ್ರ ‘ಇದು ಒಳ್ಳೆಯ ಕಾರ್ಯ ಮಾಡಲಿ ಬಿಡಿ’ ಎಂದಾಗ ಮನಸು ನಿರಾಳವಾಯಿತು.

ನಾನು ಕಳೆದ 30 ವರ್ಷಗಳಿಂದ ಧ್ಯಾನ ಮಾಡುತ್ತಿರುವೆ. ಕೊರೊನಾ ಕೂಡ ನಮಗೆ ಜನರಿಗೆ ಸೇವೆ ಸಲ್ಲಿಸಲು ಸಿಕ್ಕಿರುವ ಒಂದು ಅವಕಾಶ ಎಂಬುದು ನನಗೆ ಜ್ಞಾನೋದಯವಾದದ್ದು ಆ ಧ್ಯಾನದಲ್ಲಿಯೇ. ಹೀಗಾಗಿ, ಮನಸ್ಸು ಗಟ್ಟಿ ಮಾಡಿ ಕೆಲಸಕ್ಕೆ ಅಣಿಯಾದೆ.

ಮಾರ್ಚ್‌ ಮೂರನೇ ವಾರದಿಂದ ನಾವು ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವವರು ಈಗಲೂ ನೀಡುತ್ತಿದ್ದೇವೆ. ಆರಂಭದಲ್ಲಿ ಮೊದಲು ಒಂದು ವಾರ ಮನೆಯಿಂದ ದೂರ ಉಳಿದಿದ್ದೆ. ಬಳಿಕ ಮನೆಗೆ ಹೋದರೂ ಪ್ರತ್ಯೇಕ ಕೊಠಡಿಯಲ್ಲಿ ಇರುತ್ತಿದ್ದೆ. ಕೊನೆಗೆ ಕೊನೆಗೆ ಮನೆಯವರೊಂದಿಗೆ ಬೆರೆತೆ. ಈಗ ಚಿಕಿತ್ಸೆ ನೀಡಿ ನೀಡಿ ನನ್ನಲ್ಲೂ ಮತ್ತು ನನ್ನ ಮೂಲಕ ಕುಟುಂಬಕ್ಕೂ ರೋಗ ನಿರೋಧಕ ಶಕ್ತಿ ಹೆಚ್ಚಿದೆ ಎಂದು ಎನಿಸುತ್ತಿದೆ.

ನಿತ್ಯ ಸುಮಾರು ಎರಡು ಗಂಟೆ ಕೋವಿಡ್‌ ವಾರ್ಡ್‌ಗೆ ಭೇಟಿ ನೀಡಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದೆ. ಪಿಪಿಇ ಕಿಟ್‌ ಧರಿಸಿದಾಗ ಸಹಜ ಉಸಿರಾಟಕ್ಕೆ ಕಷ್ಟವಾಗುತ್ತಿತ್ತು. ಬಗ್ಗಿ ನಿಂತರೆ ತಲೆಯಿಂದ ನಲ್ಲಿಯಂತೆ ನೀರು ಧಾರೆಯಾಗಿ ಸುರಿಯುತ್ತಿತ್ತು. ಕೋವಿಡ್‌ ವಾರ್ಡ್‌ನಿಂದ ಹೊರಗೆ ಬಂದು ಪಿಪಿಇ ಕಿಟ್‌ ತೆಗೆದರೆ ಬಟ್ಟೆಯೆಲ್ಲ ನೆನೆದು ಹೋಗಿರುತ್ತಿತ್ತು. ನನ್ನಂತೆ ಸಾಕಷ್ಟು ವೈದ್ಯರು, ನರ್ಸ್‌ಗಳು, ಡಿ ಗ್ರೂಪ್‌ ನೌಕರರು ಸೋಂಕಿತರ ಉಪಚಾರಕ್ಕೆ ಶ್ರಮಿಸಿದ್ದಾರೆ. ಎಲ್ಲರ ಸಹಕಾರದಿಂದಲೇ ನಮಗೆ ಉತ್ತಮ ಫಲಿತಾಂಶ ದೊರೆತಿದೆ.

ಪ್ರಕೃತಿಯಲ್ಲಿ ಸಮತೋಲನ ಕಾಪಾಡಿಕೊಳ್ಳುವ ಪ್ರಕ್ರಿಯೆ ಸ್ವಯಂಚಾಲಿತವಾಗಿ ಆಗಾಗ ಕಾಣಿಸಿಕೊಳ್ಳುತ್ತದೆ. ಅದಕ್ಕೆ ಈ ಹಿಂದೆ ಕಾಣಿಸಿಕೊಂಡ ಪ್ಲೇಗ್‌, ಸಿಡುಬು ಕಾಯಿಲೆಗಳೇ ಉದಾಹರಣೆ. ಇದೀಗ ಕೊರೊನಾ ಪ್ರತಿಯೊಬ್ಬರಿಗೂ ತುಂಬಾ ಪಾಠ ಕಲಿಸಿದೆ. ಕುಟುಂಬ ಪ್ರೀತಿ, ಸಂಘಟಿತ ಹೋರಾಟ, ಪರಿಸರ ಕಾಳಜಿ ಸೇರಿದಂತೆ ಹಲವು ಆಯಾಮಗಳಲ್ಲಿ ಅನುಭವ ನೀಡಿದೆ. ಅದನ್ನು ನಾವು ಮರೆಯಬಾರದಷ್ಟೇ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.