ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ತಿಪ್ಪೆ ಸೇರುತ್ತಿದೆ ದ್ರಾಕ್ಷಿ, ₹200 ಕೋಟಿ ಹಾನಿ

ಕೊರೊನಾ ವೈರಸ್‌ ಸೃಷ್ಟಿಸಿದ ಬಿಕ್ಕಟ್ಟು
Last Updated 29 ಮಾರ್ಚ್ 2020, 19:41 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ವಿಶ್ವದಾದ್ಯಂತ ತಲ್ಲಣ ಮೂಡಿಸಿದ ಕೊರೊನಾ ವೈರಸ್‌ ಸೋಂಕು ದೇಶದಲ್ಲಿ ಸೃಷ್ಟಿಸಿದ ಬಿಕ್ಕಟ್ಟು ಸದ್ಯ ಜಿಲ್ಲೆಯ ದ್ರಾಕ್ಷಿ ಬೆಳೆಗಾರರ ನಿದ್ದೆಗೆಡಿಸಿದ್ದು, ಖರೀದಿದಾರರಿಲ್ಲದೆ ರೈತರು ದ್ರಾಕ್ಷಿಯನ್ನು ತಿಪ್ಪೆಗೆ ಸುರಿಯಲು ಮುಂದಾಗುತ್ತಿದ್ದಾರೆ.

ಜಿಲ್ಲೆಯಲ್ಲಿ ಸುಮಾರು 6,000 ಎಕರೆಯಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ಆ ಪೈಕಿ ಸದ್ಯ ಸುಮಾರು 2,500 ಎಕರೆಯಲ್ಲಿ ಅಂದಾಜು 38 ಸಾವಿರ ಟನ್ ದ್ರಾಕ್ಷಿ ಕಟಾವಿಗೆ ಬಂದಿದೆ. ಒಂದೊಮ್ಮೆ, ರೈತರು ಬೆಳೆದ ದ್ರಾಕ್ಷಿ ಸಕಾಲಕ್ಕೆ ಗ್ರಾಹಕರಿಗೆ ತಲುಪದಿದ್ದರೆ ಸುಮಾರು ₹200 ಕೋಟಿ ಹಾನಿಯಾಗಲಿದೆ ಅಂದಾಜಿಸಲಾಗುತ್ತಿದೆ.

ಜಿಲ್ಲೆಯಲ್ಲಿ ದ್ವೈವಾರ್ಷಿಕ ಬೆಳೆಯಾದ ಬೆಂಗಳೂರು ಬ್ಲೂ (ಕಪ್ಪು ದ್ರಾಕ್ಷಿ) ಮತ್ತು ದಿಲ್‌ಕುಷ್‌, ಶರತ್, ಕೃಷ್ಣಾ ತಳಿಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಇಲ್ಲಿನ ದ್ರಾಕ್ಷಿ ಕೇರಳ, ಬಾಂಗ್ಲಾದೇಶ, ಉತ್ತರ ಪ್ರದೇಶ, ಒಡಿಶಾ ಸೇರಿದಂತೆ ವಿವಿಧ ರಾಜ್ಯಗಳ ಮಾರುಕಟ್ಟೆಗೆ ರವಾನೆಯಾಗುತ್ತದೆ.

ಸದ್ಯ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದ ಖರೀದಿದಾರರಿಲ್ಲದೆ, ಸರಕು ಸಾಗಣೆ ವ್ಯವಸ್ಥೆ ಅಸ್ತವ್ಯಸ್ಥಗೊಂಡ ಪರಿಣಾಮ ಕೊಯ್ಲಿಗೆ ಬಂದ ದ್ರಾಕ್ಷಿ ತೋಟದಲ್ಲಿ ಕೊಳೆಯಲು ಆರಂಭಿಸಿದೆ. ಇತ್ತೀಚೆಗಷ್ಟೇ ಆಲಿಕಲ್ಲಿನ ಮಳೆಯಿಂದ ಕಂಗೆಟ್ಟಿದ್ದ ದ್ರಾಕ್ಷಿ ಬೆಳೆಗಾರರಿಗೆ ಇದೀಗ ಕೊರೊನಾ ಭಯ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ.

ಜಿಲ್ಲೆಯ ನೂರಾರು ತೋಟಗಳಲ್ಲಿರುವ ದ್ರಾಕ್ಷಿ ಫಸಲಿನ ಕಟಾವು ಅವಧಿ ಆರಂಭಗೊಂಡಿದ್ದು, ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಕಳವಳ ಪಡುವ ಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರದ ನೆರವಿಗಾಗಿ ರೈತರು ಮೊರೆ ಇಡುತ್ತಿದ್ದಾರೆ.

‘ಸುಮಾರು ₹4 ಲಕ್ಷ ಖರ್ಚು ಮಾಡಿ ಒಂದೂವರೆ ಎಕರೆ ದ್ರಾಕ್ಷಿ ಬೆಳೆದಿರುವೆ. ಲಾಕ್‌ಡೌನ್‌ ಘೋಷಣೆಗೆ ಮೊದಲು ಖರೀದಿಗಾರರು 10 ಟನ್ ಹಣ್ಣು ಕಟಾವು ಮಾಡಿಕೊಂಡು ಹೋಗಿದ್ದರು. ಇತ್ತೀಚೆಗೆ ಯಾವ ವರ್ತಕರೂ ಖರೀದಿಗೆ ಬರುತ್ತಿಲ್ಲ. ಹೀಗಾಗಿ, ತೋಟದಲ್ಲಿ ಕೊಳೆಯಲು ಆರಂಭಿಸಿದ 15 ಟನ್ ದ್ರಾಕ್ಷಿ ನಾವೇ ಕಟಾವು ಮಾಡಿ ತಿಪ್ಪೆಗೆ ಸುರಿದೆವು’ ಎಂದು ಚಿಕ್ಕಬಳ್ಳಾಪುರ ತಾಲ್ಲೂಕಿನ ರೇಣುಮಾಕಲಹಳ್ಳಿ ರೈತ ಮುನಿಶಾಮಪ್ಪ ತಿಳಿಸಿದರು.

‘ಸುಮಾರು ₹15 ಲಕ್ಷ ವೆಚ್ಚ ಮಾಡಿ ಹೊಸದಾಗಿ ಎರಡೂವರೆ ಎಕರೆ ದ್ರಾಕ್ಷಿ ತೋಟ ಮಾಡಿರುವೆ. 15 ದಿನಗಳ ಹಿಂದೆ ಅರ್ಧದಷ್ಟು ಕಟಾವು ಆಗಿದೆ. ಇನ್ನೂ ತೋಟದಲ್ಲಿ 30 ಟನ್ ದ್ರಾಕ್ಷಿ ಇದೆ. ಕೇಳುವವರೇ ಇಲ್ಲ. ಇಂತಹ ಸ್ಥಿತಿಯಲ್ಲಿ ಸರ್ಕಾರ ರೈತರಿಗೆ ಸೌಜನ್ಯಕ್ಕೂ ಧೈರ್ಯ ತುಂಬುವ ಕೆಲಸ ಮಾಡಲಿಲ್ಲ. ಶೀಘ್ರದಲ್ಲೇ ಉಳಿದ ಫಸಲು ತಿಪ್ಪೆಗೆ ಸುರಿಯುತ್ತೇನೆ’ ಎಂದು ಮುತ್ತಗದಹಳ್ಳಿಯ ರೈತ ಬೈರಾರೆಡ್ಡಿ ಬೇಸರ ವ್ಯಕ್ತಪಡಿಸಿದರು.

**
ಈ ವಿಚಾರವಾಗಿ ಪ್ರಧಾನ ಕಚೇರಿಗೆ ಪತ್ರ ಬರೆದಿರುವೆ. ಸೋಮವಾರದ ಹೊತ್ತಿಗೆ ದ್ರಾಕ್ಷಿ ಸಾಗಾಟಕ್ಕೆ ಅವಕಾಶ ಸಿಗುವ ನಿರೀಕ್ಷೆ ಇದೆ.
-ಕುಮಾರಸ್ವಾಮಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT