ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಅಜ್ಜಿ ಮನೆಯಲ್ಲಿ ಅಕ್ಕ, ಸಂಬಂಧಿ ಬಳಿ ತಂಗಿ

ಒಡಹುಟ್ಟಿದವರನ್ನು ದೂರಮಾಡಿದ ಮಹಾಮಾರಿ
Last Updated 16 ಏಪ್ರಿಲ್ 2022, 21:35 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ನಾನೇ ದೊಡ್ಡ ಮಗಳು. ನನಗೆ ಇಬ್ಬರು ತಂಗಿಯರು. ನಾನು ಚಿಕ್ಕಂದಿನಿಂದಲೂ ಅಜ್ಜಿ ಮನೆ (ತಾಯಿಯ ತವರು)ಯಲ್ಲಿ ಬೆಳೆದೆ. ನನ್ನ ತಂಗಿಯರು ಅಪ್ಪ, ಅಮ್ಮನ ಜತೆ ಇದ್ದರು. ಅಪ್ಪ, ಅಮ್ಮ ಇಲ್ಲದ ಕೊರಗು ಅವರನ್ನು ಹೆಚ್ಚು ಬಾಧಿಸುತ್ತಿದೆ’ ಎನ್ನುತ್ತ ಮಾತಿಗಿಳಿದ ಮಂಗಳಾ, ಮಾತು ಮುಗಿಯುವ ಮುನ್ನವೇ ಭಾವುಕರಾದರು.

ಚಿಂತಾಮಣಿ ತಾಲ್ಲೂಕಿನ ಪೆರಮಾಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೆಂಕಟಾಪುರ ಗ್ರಾಮದ ಮಂಗಳಾ ಈಗ ಶಿಡ್ಲಘಟ್ಟ ತಾಲ್ಲೂಕಿನ ಪಿಲ್ಲಗುಂಡ್ಲಹಳ್ಳಿಯಲ್ಲಿರುವ ಅಜ್ಜಿ ಮನೆಯಲ್ಲಿದ್ದಾರೆ. ಮಂಗಳಾಗೆ ಲಲಿತಾ ಮತ್ತು ಭಾಗ್ಯಲಕ್ಷ್ಮಿ ಎಂಬ ಇಬ್ಬರು ತಂಗಿಯರಿದ್ದಾರೆ. ಕೋವಿಡ್‌ ಮೂವರು ಸಹೋದರಿಯರ ತಂದೆ ಶ್ರೀರಾಮಪ್ಪ ಹಾಗೂ ತಾಯಿ ವಿಜಯಮ್ಮ ಅವರನ್ನು ಬಲಿ ಪಡೆದಿದೆ. ಕೇವಲ ಎರಡು ವಾರದ ಅಂತರದಲ್ಲಿ ತಂದೆ, ತಾಯಿಯ ಅಗಲಿಕೆಯನ್ನು ಈ ಹೆಣ್ಣುಮಕ್ಕಳು ಅನುಭವಿಸಬೇಕಾಯಿತು.

ಈಗ ಮಂಗಳಾ ಮತ್ತು ಲಲಿತಾ ಪಿಲ್ಲಗುಂಡ್ಲಹಳ್ಳಿಯ ಅಜ್ಜಿ ಮನೆಯಲ್ಲಿದ್ದರೆ, ಮತ್ತೊಬ್ಬ ಸಹೋದರಿ ಭಾಗ್ಯಲಕ್ಷ್ಮಿ ವೆಂಕಟಾಪುರದಲ್ಲಿದ್ದಾಳೆ. ಪೋಷಕರನ್ನು ಕಳೆದುಕೊಂಡ ನೋವು ಒಂದೆಡೆಯಾದರೆ, ನೋವು ಹಂಚಿಕೊಳ್ಳಬೇಕಾಗಿದ್ದ ಒಡಹುಟ್ಟಿದ ಸಹೋದರಿಯರು ದೂರವಾದ ನೋವು ಈ ಹೆಣ್ಣು ಮಕ್ಕಳಿಗಿದೆ.

ಮುಖ್ಯಮಂತ್ರಿ ಬಾಲಸೇವಾ ಯೋಜನೆಯಡಿ ಈ ಮೂರು ಮಂದಿ ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು ಆರ್ಥಿಕ ನೆರವು ದೊರೆಯುತ್ತಿದೆ. ಈ ಹಣ ಸದ್ಯ ಅವರ ಶೈಕ್ಷಣಿಕ ವೆಚ್ಚಗಳಿಗೆ ಸಾಕಾಗುತ್ತಿದೆ.

‘ನಮ್ಮದು ಸ್ಥಿತಿವಂತರ ಕುಟುಂಬವಲ್ಲ. ಅಂದಿನ ದುಡಿಮೆಯೇ ಜೀವನಕ್ಕೆ ಆಧಾರ. ಅಪ್ಪ, ಅಮ್ಮ ಇದ್ದಾಗ ತುಂಬಾ ಚೆನ್ನಾಗಿ ಇದ್ದೆವು. ಈಗ ಅಜ್ಜಿ ಮನೆಯಲ್ಲಿ ಇದ್ದೇವೆ. ಅವರೂ ಸ್ಥಿತಿವಂತರೇನೂ ಅಲ್ಲ. ನಮ್ಮ ಮಾವ ಆಟೊ ಓಡಿಸಿ ತಂದ ದುಡಿಮೆಯಲ್ಲಿಯೇ ಬದುಕು ನಡೆಯಬೇಕು. ನಾನು ಈಗ ಪಿಯುಸಿ ಓದುತ್ತಿದ್ದೇನೆ. ಲಲಿತಾ ಈಗ 9ನೇ ತರಗತಿ. ಜಯಲಕ್ಷ್ಮಿ 10ನೇ ತರಗತಿ. ನಾನೂ ಓದದಿದ್ದರೂ ಪರವಾಗಿಲ್ಲ, ನನ್ನ ತಂಗಿಯರನ್ನು ಓದಿಸಬೇಕು. ಅದೇ ನನ್ನ ಗುರಿ’ ಎನ್ನುತ್ತಾರೆ ಮಂಗಳಾ.

‘ರಜೆ ಇದ್ದಾಗ ಭಾಗ್ಯಲಕ್ಷ್ಮಿ ಪಿಲ್ಲಗುಂಡ್ಲಹಳ್ಳಿಗೆ ಬರುತ್ತಾಳೆ. ನನ್ನ ತಂಗಿಯರು ಇನ್ನೂ ಚಿಕ್ಕವರು. ಅಪ್ಪ, ಅಮ್ಮ ಇಲ್ಲ ಎನ್ನುವ ನೋವು ಅವರನ್ನು ಹೆಚ್ಚು ಕಾಡುತ್ತಿದೆ. ಆದರೆ, ಅದನ್ನು ನನ್ನ ಬಳಿಯೂ ಹೆಚ್ಚು ಹೇಳಿಕೊಳ್ಳುವುದಿಲ್ಲ. ಅಪ್ಪ, ಅಮ್ಮ ಇದ್ದಿದ್ದರೆ ಎಲ್ಲ ಭಾವನೆಗಳನ್ನು ಅವರ ಜತೆ ಹಂಚಿಕೊಳ್ಳಬಹುದಿತ್ತು’ ಎಂದು ಕಣ್ಣಂಚಿನಲ್ಲಿ ಜಿನುಗಿದ ಹನಿಗಳನ್ನು ಒರೆಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT