ಗುರುವಾರ , ಏಪ್ರಿಲ್ 9, 2020
19 °C
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಕೋವಿಡ್‌–19 ಸೋಂಕಿನ ಬಗ್ಗೆ ಅರಿವು ಮೂಡಿಸಲು ನಗರದಲ್ಲಿ ಜಾಥಾ

ಕೋವಿಡ್‌: ಆತಂಕ ಬೇಡ, ಜಾಗೃತಿ ಇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಜಿಲ್ಲೆಯಲ್ಲಿ ಈವರೆಗೆ ಯಾವುದೇ ಸಂಶಯಾಸ್ಪದ ಕೋವಿಡ್‌–19 ಸೋಂಕು ಪ್ರಕರಣ ಪತ್ತೆಯಾಗಿಲ್ಲ. ಆದ್ದರಿಂದ, ಸಾರ್ವಜನಿಕರು ಯಾವುದೇ ರೀತಿಯ ಭಯ ಬೀಳುವ ಅಗತ್ಯವಿಲ್ಲ. ಸೋಂಕು ತಗುಲಿರುವವರು ಕಂಡುಬಂದರೆ ಸೂಕ್ತ ಚಿಕಿತ್ಸೆ ನೀಡಲು ಇಲಾಖೆ ಸಜ್ಜಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಎಂ.ಯೋಗೇಶ್‌ಗೌಡ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಗುರುವಾರ ನಗರದಲ್ಲಿ ಕೋವಿಡ್‌–19 ಸೋಂಕಿನ ಬಗ್ಗೆ ಅರಿವು ಮೂಡಿಸಲು ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಪ್ರತಿ ತಾಲ್ಲೂಕು ಹಂತದಲ್ಲಿಯೂ ಕೂಡ ಸೂಕ್ತ ಚಿಕಿತ್ಸೆ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಜನಸಮಾನ್ಯರು ಯಾವುದೇ ಆತಂಕಕ್ಕೆ ಒಳಗಾಗಬಾರದು. ಒಂದೊಮ್ಮೆ ನೆರೆಹೊರೆಯಲ್ಲಿ ಕೋವಿಡ್‌–19 ಸೋಂಕಿನ ಲಕ್ಷಣ ಉಳ್ಳವರು ಕಂಡುಬಂದರೆ ಜನರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಸೋಂಕಿನ ಲಕ್ಷಣ ಹೊಂದಿರುವವರು ತಡಮಾಡದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು’ ಎಂದು ಹೇಳಿದರು.

‘ಕೋವಿಡ್‌–19 ವೈರಸ್ ಪ್ರಾಣಿಗಳಲ್ಲಿ ಮತ್ತು ಮನುಷ್ಯರಲ್ಲಿ ಮುಖ್ಯವಾಗಿ ಶ್ವಾಸಕೋಶ ಮತ್ತು ಉಸಿರಾಟಕ್ಕೆ ತೊಂದರೆ ಉಂಟು ಮಾಡುತ್ತದೆ. ಸೋಂಕು ಪೀಡಿತರ ಸಂಪರ್ಕದಿಂದ ದೂರವಿರಬೇಕು. ಶಂಕಿತ ರೋಗಿಯು ಮನೆಯಲ್ಲಿಯೇ ಪ್ರತ್ಯೇಕವಾಗಿರುವುದು ಮತ್ತು ಮೂರು ಪದರದ ಮುಖಗವಸು ಬಳಸಬೇಕು. ಸಾರ್ವಜನಿಕ ಸ್ಥಗಳಲ್ಲಿ ಸಂಚರಿಸುವುದಾಗಲಿ, ಸಾರಿಗೆ ವಾಹನಗಳಲ್ಲಿ ಪ್ರಯಾಣಿಸುವುದಾಗಲಿ ಮಾಡಬಾರದು’ ಎಂದರು.

‘ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕೆಮ್ಮು ಮತ್ತು ಸೀನುವಾಗ ಮಾಸ್ಕ್ ಅಥವಾ ಕರವಸ್ತ್ರ ಉಪಯೋಗಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು. ಉಸಿರಾಟದ ತೊಂದರೆಯಾದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯಬೇಕು. ಮಾಂಸ, ಮೊಟ್ಟೆ ಇತ್ಯಾದಿಗಳನ್ನು ಚೆನ್ನಾಗಿ ಬೇಯಿಸಿ ಸೇವನೆ ಮಾಡಬೇಕು. ಅಸುರಕ್ಷಿತವಲ್ಲದ ಕಾಡುಪ್ರಾಣಿ ಅಥವಾ ಸಾಕುಪ್ರಾಣಿಗಳನ್ನು ಮುಟ್ಟಬಾರದು. ಸೋಂಕಿತ ದೇಶಗಳಿಗೆ ಮತ್ತು ತುರ್ತು ಅಗತ್ಯವಿಲ್ಲದ ಪ್ರಯಾಣವನ್ನು ರದ್ದುಗೊಳಿಸಬೇಕು’ ಎಂದು ಹೇಳಿದರು.

‘ಸಾರ್ವಜನಿಕರಿಗೆ ಸೋಂಕಿನ ಲಕ್ಷಣಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ವೈದ್ಯಾಧಿಕಾರಿಗಳಿಗೆ ಜಿಲ್ಲಾ ಮಟ್ಟದಲ್ಲಿ ಅರಿವು ಮೂಡಿಸಲಾಗಿದೆ. ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ರೋಗ ಲಕ್ಷಣಗಳ ಬಗ್ಗೆ ಎಚ್ಚರಿಕೆಯಿಂದ ಇದ್ದು, ಯಾವುದೇ ಸಂಶಯಾಸ್ಪದ ಪ್ರಕರಣ ಕಂಡುಬಂದಲ್ಲಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಮಟ್ಟದ ಆಸ್ಪತ್ರೆಗೆ ಕಳುಹಿಸಿಕೊಡಲು ಸೂಚಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಬಾಬುರೆಡ್ಡಿ, ಜಿಲ್ಲಾ ಆಸ್ಪತ್ರೆ ನಿವಾಸಿ ವೈದ್ಯಾಧಿಕಾರಿ ಡಾ.ರಮೇಶ್, ವೈದ್ಯರಾದ ಡಾ.ಮಂಜುಳಾ, ಡಾ.ಪ್ರಕಾಶ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು