ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಭೀತಿ, ಕುಕ್ಕುಟೋದ್ಯಮದ ಫಜೀತಿ

ಚಿಕನ್, ಮೊಟ್ಟೆ ಮಾರಾಟದಲ್ಲಿ ಗಣನೀಯ ಕುಸಿತ, ಅರಿವು ಮೂಡಿಸಿದರೂ ವದಂತಿಗೆ ಬೆಚ್ಚಿ ಖರೀದಿಗೆ ಹಿಂದೇಟು ಹಾಕುತ್ತಿರುವ ಗ್ರಾಹಕರು
Last Updated 9 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮಾಂಸಾಹಾರ ಸೇವನೆಯಿಂದಲೂ ಮಾರಣಾಂತಿಕ ಕೋವಿಡ್ 19 ಸೋಂಕು ಹರಡಬಹುದು ಎನ್ನುವ ವದಂತಿ ಎಲ್ಲೆಡೆಯಂತೆ ಜಿಲ್ಲೆಯ ಕುಕ್ಕುಟ ಉದ್ಯಮದ ಮೇಲೆ ಕರಾಳ ಛಾಯೆ ಉಂಟು ಮಾಡಿದ್ದು, ಕೋಳಿ ಮಾಂಸ ಹಾಗೂ ಮೊಟ್ಟೆ ವಹಿವಾಟು ಕುಸಿದಿದೆ.

ಜಿಲ್ಲೆಯ ರೈತರು ಹೈನುಗಾರಿಕೆ ಹಾಗೂ ರೇಷ್ಮೆ ಕೃಷಿ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತರಾಗಿದ್ದಾರೆ. ಕೃಷಿಗೆ ಪರ್ಯಾಯವಾಗಿ ಕುಕ್ಕುಟ ಉದ್ಯಮವು ರೈತರ ಜೀವನಕ್ಕೆ ಆಧಾರವಾಗಿದೆ. ಆದರೆ ಕೋವಿಡ್ ಸುದ್ದಿ ಕಾಳ್ಗಿಚ್ಚಿನಂತೆ ಹರಡಿದ್ದೇ, ಮೊಟ್ಟೆ ಹಾಗೂ ಮಾಂಸ ಪ್ರಿಯರು ಚಿಕನ್‌ ಮತ್ತು ಮೊಟ್ಟೆ ಖರೀದಿಗೆ ಹಿಂದೇಟು ಹಾಕುತ್ತಿದ್ದು, ಇದರ ಪರಿಣಾಮ ಕುಕ್ಕುಟೋದ್ಯಮ ತತ್ತರಿಸಿದೆ.

ಎರಡು ವಾರಗಳ ಹಿಂದೆ ಒಂದು ಕೆ.ಜಿ.ಗೆ ₹170ರ ಆಸುಪಾಸಿನಲ್ಲಿದ್ದ ಚಿಕನ್ ಬೆಲೆ ಸದ್ಯ ₹70ಕ್ಕೆ ಕುಸಿತ ಕಂಡಿದೆ. ಆದರೂ, ಗ್ರಾಹಕರು ಖರೀದಿಗೆ ಮುಂದಾಗುತ್ತಿಲ್ಲ ಎನ್ನಲಾಗಿದೆ.

ಜಿಲ್ಲೆಯಲ್ಲಿ 355 ನೋಂದಾಯಿತ ಕೋಳಿ ಫಾರಂಗಳಿದ್ದು, ಬ್ರಾಯ್ಲರ್‌ (ಮಾಂಸದ ಉದ್ದೇಶದ್ದು) ಮತ್ತು ಲೇಯರ್‌ (ಮೊಟ್ಟೆಯ ಉದ್ದೇಶದ್ದು) ಕೋಳಿಗಳನ್ನು ಪ್ರಮುಖವಾಗಿ ಸಾಕಲಾಗುತ್ತಿದೆ. ಜಿಲ್ಲೆಯ ಫಾರಂಗಳಲ್ಲಿ ವಾರ್ಷಿಕ ಸುಮಾರು 38 ಲಕ್ಷ ಬ್ರಾಯ್ಲರ್‌ ಕೋಳಿ ಬೆಳೆಯಲಾಗುತ್ತದೆ. ಸುಮಾರು 9 ಲಕ್ಷ ಮೊಟ್ಟೆ ಉತ್ಪಾದನೆಯಾಗುತ್ತವೆ. ಜತೆಗೆ ಕೆಲವೆಡೆ ಅಲ್ಪ ಪ್ರಮಾಣದಲ್ಲಿ ನಾಟಿ ಕೋಳಿ, ಗಿರಿರಾಜ ಕೋಳಿಗಳನ್ನು ಸಾಕಲಾಗುತ್ತಿದೆ.

ಜಿಲ್ಲೆಯಲ್ಲಿ ಲಕ್ಷಗಟ್ಟಲೇ ಮರಿಗಳನ್ನು ಬೆಳೆಸುವ ವಾಣಿಜ್ಯ ಉದ್ದೇಶದ 26 ದೊಡ್ಡ ಫಾರಂಗಳಿವೆ. ಉಳಿದಂತೆ ಬಹುಪಾಲು ಐದ್ಹತ್ತು ಸಾವಿರ ಮರಿಗಳನ್ನು ಸಾಕುವ ಫಾರಂಗಳಿವೆ. ಜಿಲ್ಲೆಗೆ ಬೆಂಗಳೂರು, ನೆರೆಯ ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ಕಡೆಗಳಿಂದ ಮರಿಗಳು ಮತ್ತು ಮೊಟ್ಟೆ ಆಮದು ಮಾಡಿಕೊಳ್ಳಲಾಗುತ್ತದೆ ಎನ್ನುತ್ತಾರೆ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು. ಸದ್ಯ, ಫಾರಂಗಳಲ್ಲಿ ಕೋಳಿ ಬೆಳೆಯುವುದು ನಿಲ್ಲಿಸುತ್ತಿದ್ದು, ಮರಿಗಳ ಉತ್ಪಾದನೆಯನ್ನು ಸಹ ಕನಿಷ್ಠ ಮಟ್ಟಕ್ಕೆ ಇಳಿಸಲಾಗಿದೆ ಎನ್ನುತ್ತಾರೆ ಡೀಲರ್‌ಗಳು.

ಕೋವಿಡ್‌ಗೂ ಕೋಳಿಗೂ ಯಾವುದೇ ಸಂಬಂಧವಿಲ್ಲ ಎಂದು ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು, ವರ್ತಕರು, ಕೋಳಿ ಸಾಕಣೆದಾರರ ಸಂಘಗಳು ಎಷ್ಟೇ ಅರಿವು ಮೂಡಿಸಿದರೂ ಗ್ರಾಹಕರ ಒಳಗಿನ ಭೀತಿ ಮಾತ್ರ ಹೋಗಿಲ್ಲ. ಪರಿಣಾಮ, ಕಳೆದ 15 ದಿನಗಳಲ್ಲಿ ಜಿಲ್ಲೆಯಲ್ಲಿ ಚಿಕನ್‌ ಮಾರಾಟ ಗಣನೀಯವಾಗಿ ಕುಸಿತ ಕಂಡಿದೆ ಎನ್ನುತ್ತಾರೆ ಜಿಲ್ಲೆಯ ಪ್ರಮುಖ ಡೀಲರ್‌ಗಳು. ಚಿಲ್ಲರೆ ಮಾರಾಟ ಮಳಿಗೆಗಳೂ ಇದೀಗ ಚಿಕನ್‌ ಕೊಳ್ಳುವವರಿಲ್ಲದೆ ಭಣಗುಡುವ ದೃಶ್ಯಗಳು ಗೋಚರಿಸುತ್ತಿವೆ.

‘ಕೋವಿಡ್‌ ಸೋಂಕಿನ ಸುದ್ದಿ ತಿಳಿದ ನಂತರ ಗ್ರಾಹಕರು ಕೋಳಿ ಮಾಂಸ ಖರೀದಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ. ವ್ಯಾಪಾರ ತುಂಬಾ ಕುಸಿದು ಹೋಗಿದೆ. ಸಾಮಾನ್ಯ ದಿನಗಳಲ್ಲಿ ನಿತ್ಯ ಸುಮಾರು 700ಕೆ.ಜಿ ವರೆಗೆ ಚಿಕನ್ ಮಾರುತ್ತಿದ್ದೆ. ಸದ್ಯ ದಿನಕ್ಕೆ 200 ಕೆ.ಜಿ. ಮಾರುವುದು ಕಷ್ಟವಾಗುತ್ತಿದೆ. ಸೋಂಕಿಗೂ ಕೋಳಿಗೂ ಸಂಬಂಧವಿಲ್ಲ ಎಂದು ತಿಳಿ ಹೇಳಿದರೂ ಗ್ರಾಹಕರು ಮಾಂಸ ಖರೀದಿಗೆ ಆಸಕ್ತಿ ತೋರುತ್ತಿಲ್ಲ. ಇನ್ನೂ ಭಯದಲ್ಲೇ ಇದ್ದಾರೆ. ಹೀಗಾಗಿ ಬೇಡಿಕೆ ಕುಸಿದಿದೆ’ ಎಂದು ಚಿಕ್ಕಬಳ್ಳಾಪುರದ ಸಾಧುಮಠ ವೃತ್ತದ ಬಿಎಂಕೆ ಚಿಕನ್ ಸೆಂಟರ್‌ ಮಾಲೀಕ ಮೆಹಬೂಬ್‌ ಹೇಳಿದರು.

‘ವಾರದ ಹಿಂದೆ ದಿನಕ್ಕೆ ಆರೇಳು ಸಾವಿರ ಕೋಳಿ ಮೊಟ್ಟೆ ಮಾರುತ್ತಿದೆ. ಚೀನಾ ರೋಗ ನಮ್ಮಲ್ಲೂ ಹಬ್ಬುತ್ತಿದೆ ಎಂಬ ಭೀತಿ ಹೆಚ್ಚಿದ ಮೇಲೆ ಈಗ ದಿನಕ್ಕೆ ಮೂರು ಸಾವಿರ ಮಾರಿದರೆ ಹೆಚ್ಚು ಎನಿಸುವಂತಾಗಿದೆ. ವಹಿವಾಟು ಅರ್ಧದಷ್ಟು ಕುಸಿದಿದೆ. ಅಧಿಕಾರಿಗಳು ಜನರಲ್ಲಿರುವ ತಪ್ಪು ಕಲ್ಪನೆ ಮತ್ತು ಭಯ ಹೋಗಲಾಡಿಸುವ ಕೆಲಸ ಮಾಡಬೇಕಿದೆ’ ಎಂದು ಚಿಂತಾಮಣಿಯ ಮೊಟ್ಟೆ ವ್ಯಾಪಾರಿ ಜಾವಿದ್ ತಿಳಿಸಿದರು.

ಜಿಲ್ಲೆಯಲ್ಲಿ ಗ್ರಾಹಕರು ಕೋಳಿ ಮಾಂಸ ಮತ್ತು ಮೊಟ್ಟೆ ಖರೀದಿಸಲು ಭಯಪಡುತ್ತಿದ್ದಾರೆ. ಹೀಗಾಗಿ ವಹಿವಾಟು ಕುಸಿದಿದೆ. ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಜನರಲ್ಲಿ ಅರಿವು ಮೂಡಿಸಿದರೆ ಅನುಕೂಲವಾಗುತ್ತದೆ ಎಂದು ಕೋಳಿ ಫಾರಂ ಹಾಗೂ ಅಂಗಡಿಗಳ ಮಾಲೀಕರು ಮನವಿ ಮಾಡುತ್ತಿದ್ದಾರೆ.

ಈ ಬಗ್ಗೆ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ನಾಗರಾಜ್ ಅವರನ್ನು ಪ್ರಶ್ನಿಸಿದರೆ, ‘ನಾವು ಸಹ ಈ ಬಗ್ಗೆ ಸಾಕಷ್ಟು ಅರಿವು ಮೂಡಿಸುವ ಕೆಲಸ ಮಾಡಿದ್ದೇವೆ. ಕೋಳಿ ಮಾಂಸ ಅಥವಾ ಮೊಟ್ಟೆ ಸೇವನೆಯಿಂದ ಮನುಷ್ಯರಿಗೆ ಯಾವುದೇ ಸೋಂಕು ತಗುಲುವುದಿಲ್ಲ. ಅಲ್ಲದೇ, ಕೋಳಿ ಮಾಂಸ ಅಥವಾ ಮೊಟ್ಟೆಯನ್ನು ಬೇಯಿಸಿ ಸೇವಿಸಲು ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT