ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜನೆಗಳ ಬಗ್ಗೆ ಅರಿವು ಮೂಡಿಸಿ: ಸಂಸದ ಬಿ.ಎನ್.ಬಚ್ಚೇಗೌಡ

ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಸಂಸದ ಬಿ.ಎನ್.ಬಚ್ಚೇಗೌಡ ಸಲಹೆ
Last Updated 20 ಜನವರಿ 2020, 16:40 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಅಭಿವೃದ್ಧಿ ವಿಚಾರದಲ್ಲಿ ಜಿಲ್ಲೆಯ ಸ್ಥಾನ ರಾಜ್ಯಮಟ್ಟದಲ್ಲಿ ಮೇಲೆ ಏರಬೇಕು. ಯೋಜನೆಗಳನ್ನು ಅನುಷ್ಠಾನಗೊಳಿಸುವ ಅಧಿಕಾರಿಗಳಿಂದ ಮಾತ್ರ ಆ ಕೆಲಸ ಸಾಧ್ಯ ವಿನಾ ಬರೀ ಸಹಿ ಹಾಕುವ ನಮ್ಮಿಂದಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಮೂಲಕ ಯಶಸ್ವಿಗೊಳಿಸಬೇಕು’ ಎಂದು ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಸಂಸದರು ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಪ್ರಗತಿಯ ಮಾಹಿತಿ ಪಡೆಯುತ್ತ ಮಾತನಾಡಿದರು.

‘ಕೇಂದ್ರ ಸರ್ಕಾರದಿಂದ ರಾಜ್ಯದಲ್ಲಿ 22 ಯೋಜನೆಗಳು ಅನುಷ್ಠಾನಗೊಳ್ಳುತ್ತವೆ. ಈ ಪೈಕಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಪ್ರಮುಖವಾದದ್ದು. ನರೇಗಾ ಅನುಷ್ಠಾನದಲ್ಲಿ ಜಿಲ್ಲೆ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಯೋಜನೆ ಅಡಿ ಜಿಲ್ಲೆಗೆ ₹30 ಕೋಟಿ ಬಾಕಿ ಅನುದಾನ ಬಿಡುಗಡೆಯಾಗಬೇಕಿದೆ. ಮುಂದಿನ ದಿನಗಳಲ್ಲಿ ಅನುದಾನ ಬಿಡುಗಡೆಗೆ ಒತ್ತಡ ಹಾಕುತ್ತೇನೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ‘ಜಿಲ್ಲೆಯಲ್ಲಿ ನರೇಗಾ ಪ್ರಗತಿ ನಿರೀಕ್ಷೆಗೂ ಮೀರಿ ನಡೆಯುತ್ತಿದೆ. ಮಾರ್ಚ್‌ ಒಳಗೆ ಜಿಲ್ಲೆಯಲ್ಲಿ ಶೇ100ಕ್ಕೂ ಅಧಿಕ ಪ್ರಗತಿ ಕಾರ್ಯಗಳು ನಡೆಯಲಿವೆ. ಅದಕ್ಕಾಗಿಯೇ ಯೋಜನೆಯೊಂದನ್ನು ಕೈಗೆತ್ತಿಕೊಂಡಿದ್ದೇವೆ. ಅದರಲ್ಲಿ ಜಲಮೂಲಗಳ ಪುನಶ್ಚೇತನ, ಶಾಲೆಗಳಲ್ಲಿ ಕಾಂಪೌಂಡ್ ನಿರ್ಮಾಣ, ಸರ್ಕಾರಿ ಕೊಳವೆ ಬಾವಿಗಳಿಗೆ ನೀರು ಮರುಪೂರಣ ವ್ಯವಸ್ಥೆ, ಗ್ರಾಮ ಪಂಚಾಯಿತಿ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹಿಸುವ ವ್ಯವಸ್ಥೆ ಅಳವಡಿಸಲು ಆದ್ಯತೆ ನೀಡಲಾಗಿದೆ’ ಎಂದರು.

ವಸತಿ ಯೋಜನೆಗಳ ಕುರಿತು ಮಾಹಿತಿ ಪಡೆದ ಬಚ್ಚೇಗೌಡ, ‘ಪ್ರಸ್ತುತ ಸರ್ಕಾರ ಮಟ್ಟದಲ್ಲಿ ಸಮಸ್ಯೆ ಇರುವುದರಿಂದ ಬಸವ ಮತ್ತು ಅಂಬೇಡ್ಕರ್ ವಸತಿ ಯೋಜನೆಗಳಿಗೆ ಅನುದಾನ ಬರುತ್ತಿಲ್ಲ. ಬರೀ ಪ್ರಧಾನಮಂತ್ರಿ ಆವಾಸ್‌ ಯೋಜನೆ ಅಡಿ ಮಾತ್ರ ಹಣ ಬರುತ್ತಿದೆ. ಅದರ ಮೂಲಕ ಸೂರು ಇಲ್ಲದವರಿಗೆ ಸೂರು ಒದಗಿಸುವ ಕೆಲಸವಾಗಬೇಕು. ಜಮೀನು ಲಭ್ಯ ಇದ್ದ ಕಡೆಗಳಲ್ಲಿ ಆದಷ್ಟು ಬೇಗ ನಿವೇಶನ ಒದಗಿಸಿ, ಜಾಗ ಇಲ್ಲದಿದ್ದರೆ ಖಾಸಗಿ ಜಮೀನು ಖರೀದಿಸಲು ಕ್ರಮಕೈಗೊಳ್ಳಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಂಸದರು ‘ರಾಷ್ಟ್ರೀಯ ನಗರ ಮತ್ತು ಗ್ರಾಮೀಣ ಜೀವನೋಪಾಯ ಯೋಜನೆ’ಗಳ (ಎನ್‌ಆರ್‌ಎಲ್‌ಎಂ) ಪ್ರಗತಿ ಕುರಿತಂತೆ ಜಿಲ್ಲಾ ಸಮಾಲೋಚಕ ರಾಮಸ್ವಾಮಿ ಅವರಿಂದ ಮಾಹಿತಿ ಪಡೆಯುತ್ತಿದ್ದ ವೇಳೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ. ಚಿಕ್ಕನರಸಿಂಹಯ್ಯ ಅವರು ಈ ಕುರಿತು ಅಧಿಕಾರಿಗಳು ನಮ್ಮ ಗಮನಕ್ಕೆ ತರುತ್ತಿಲ್ಲ. ಮಾಹಿತಿ ಕೊರತೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಎಂ.ಯೋಗೇಶ್‌ಗೌಡ ಮಾತನಾಡಿ, ‘ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆ ಅಡಿ ಆರೋಗ್ಯ ಕಾರ್ಡ್‌ ವಿತರಣೆಯಲ್ಲಿ ಜಿಲ್ಲೆ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದೆ. ಈವರೆಗೆ ಜಿಲ್ಲೆಯಲ್ಲಿ ಈ ಯೋಜನೆ ಅಡಿ ರೋಗಿಗಳು ₹22 ಕೋಟಿ ವೆಚ್ಚದ ಚಿಕಿತ್ಸೆ ಪಡೆದುಕೊಂಡಿದ್ದಾರೆ’ ಎಂದರು. ಈ ವೇಳೆ ಅಧ್ಯಕ್ಷರು, ‘ಈ ಯೋಜನೆ ಬಗ್ಗೆ ಆಶಾ ಕಾರ್ಯಕರ್ತೆಯರ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಅರಿವು ಮೂಡಿಸುವ ಕೆಲಸ ಮಾಡಿ’ ಎಂದು ಸಲಹೆ ನೀಡಿದರು.

ಡಿಎಚ್‌ಒ ಅವರಿಂದ ಡಯಾಲಿಸಿಸ್ ಕೇಂದ್ರಗಳ ಮಾಹಿತಿ ಪಡೆದ ಬಚ್ಚೇಗೌಡರು, ‘ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಬೇಕಿದ್ದರೆ ಮಾಹಿತಿ ಕೊಡಿ’ ಎಂದರು. ಅದಕ್ಕೆ ಡಿಎಚ್‌ಒ, ‘ಈಗಾಗಲೇ ಸೋಮೇನಹಳ್ಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಕೇಳಿ ಪ್ರಸ್ತಾವ ಕಳುಹಿಸಲಾಗಿದೆ. ಅದನ್ನು ತಮಗೂ ಕಳುಹಿಸಿ ಕೊಡುತ್ತೇವೆ’ ಎಂದರು.

ಈ ವೇಳೆ ದಿಶಾ ಸಮಿತಿ ಸದಸ್ಯರೊಬ್ಬರು ಗ್ರಾಮೀಣ ಭಾಗದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿ ಸಾಕಷ್ಟು ಅನಾಹುತಗಳು ಸಂಭವಿಸುತ್ತಿವೆ. ಈ ಬಗ್ಗೆ ಡಿಎಚ್‌ಒ ಅವರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು. ಅದಕ್ಕೆ ಸಂಸದರು, ‘ನಕಲಿ ವೈದ್ಯರ ಮಾಹಿತಿ ಕೊಡಿ ಕ್ರಮ ಜರುಗಿಸೋಣ’ ಎಂದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಮಾತನಾಡಿ, ‘ಪ್ರಸ್ತುತ ಜಿಲ್ಲೆಯಲ್ಲಿ 72 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಆ ಪೈಕಿ 17 ಹಳಿಗಳಿಗೆ ಟ್ಯಾಂಕರ್, 55 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಈ ವೇಳೆ ಬಚ್ಚೇಗೌಡ, ‘ಮುಂದಿನ ಆರು ತಿಂಗಳಲ್ಲಿ ನೀರಿನ ಕೊರತೆ ಆಗದಂತೆ ಪರಿಸ್ಥಿತಿ ನಿಭಾಯಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಫ್ಲೋರೈಡ್ ಮುಕ್ತ ಶುದ್ಧ ನೀರು ಸಿಗಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸರಿಯಾಗಿ ನಿರ್ವಹಿಸುವ ಕೆಲಸವಾಗಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಚಿಕ್ಕನರಸಿಂಹಯ್ಯ ಅವರು, ‘ಅಕ್ಷರ ದಾಸೋಹಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯವರು ಕಳಪೆ ಅಕ್ಕಿ, ಬೇಳೆ ಪೂರೈಕೆ ಮಾಡುತ್ತಿದ್ದಾರೆ ಎಂದು ಶಿಕ್ಷಕರಿಂದ ದೂರು ಬರುತ್ತಿವೆ. ಮಕ್ಕಳು ಸತ್ತರೆ ಯಾರ ಹೊಣೆ? ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಈ ಬಗ್ಗೆ ನಿಗಾ ಇಟ್ಟು ನನಗೆ ವರದಿ ಕೊಡಿ. ಶಾಲೆಗಳಿಗೆ ಗುಣಮಟ್ಟದ ಅಕ್ಕಿ, ಬೇಳೆ ಪೂರೈಕೆಯಾಗಬೇಕು’ ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT