ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಂಡೇಬಾವಿ ಬಳಿ ರೈಲಿಗೆ ಸಿಲುಕಿ ಛಿದ್ರಗೊಂಡಿದ್ದ ಮೃತರ ಗುರುತು‌ ಪತ್ತೆ

Last Updated 12 ಜನವರಿ 2023, 10:49 IST
ಅಕ್ಷರ ಗಾತ್ರ

ಗೌರಿಬಿದನೂರು: ತಾಲ್ಲೂಕಿನ ‌ತೊಂಡೇಬಾವಿ ರೈಲ್ವೆ ನಿಲ್ದಾಣದ ಸಮೀಪ ಇತ್ತೀಚೆಗೆ ಚಲಿಸುವ ರೈಲಿಗೆ ಸಿಲುಕಿ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮೂವರು ಮೃತದೇಹಗಳ ಗುರುತು ಬುಧವಾರ ದೃಢಪಟ್ಟಿದೆ.

ಮೃತರನ್ನು ತೊಂಡೇಬಾವಿ ರೈಲ್ವೆ ನಿಲ್ದಾಣದ ಸಮೀಪವಿರುವ ಮೈಲಾರಪ್ಪ, ಆತನ‌ ಪತ್ನಿ ಪುಷ್ಪಲತಾ ಹಾಗೂ ಅವರ ಹಿರಿಯ ಮಗಳು ಮಮತಾ
ಎಂಬುದನ್ನು ಮೃತರ ಕಿರಿಯ ಮಗಳು ದಾಕ್ಷಾಯಿಣಿ ದೃಢಪಡಿಸಿದ್ದಾರೆ. ಮೇಲ್ನೋಟಕ್ಕೆ ಈ‌ ಮೂವರದ್ದು ಆತ್ಮಹತ್ಯೆ ಇರಬಹುದು ಎನ್ನಲಾಗಿದೆ. ಆದರೆ, ಕೆಲವರು ನೀಡಿದ ಮಾನಸಿಕ ಕಿರುಕುಳದಿಂದ ನೊಂದು ಆತ್ಮಹತ್ಯೆಗೆ ಶರಣಾಗಿರಬಹುದು ಎನ್ನಲಾಗಿದೆ.

ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದ ಮೃತರ ಕಿರಿಯ ಮಗಳು ದಾಕ್ಷಾಯಿಣಿ, ಎರಡು ದಿನಗಳಿಂದ ತನ್ನ ತಂದೆ ಮತ್ತು ತಾಯಿಗೆ ಕರೆ ಮಾಡುತ್ತಿದ್ದಳು. ಆದರೆ, ಅವರು ಕರೆ ಸ್ವೀಕರಿಸಿರಲಿಲ್ಲ. ಹೀಗಾಗಿ ಮನೆಗೆ ಬಂದು, ನೋಡಿದಾಗ ತಂದೆ, ತಾಯಿ ಮತ್ತು ಅಕ್ಕ ಮನೆಯಲ್ಲಿ ಇಲ್ಲದಿರುವುದು ಗೊತ್ತಾಗಿದೆ. ಬಳಿಕ ಪೊಲೀಸರು ಮೃತದೇಹಗಳನ್ನು ತೋರಿಸಿದಾಗ, ಮೃತರು ತನ್ನ ತಂದೆ, ತಾಯಿ ಮತ್ತು ಅಕ್ಕ ಎಂದು ಗುರುತಿಸಿದ್ದಾಳೆ ಎಂದು
ತಿಳಿದುಬಂದಿದೆ.

ಸೋಮವಾರ ಬೆಳಿಗ್ಗೆ ರೈಲಿನ ಚಕ್ರಕ್ಕೆ ಸಿಲುಕಿ ಒಬ್ಬ ಪುರುಷ ಹಾಗೂ ಇಬ್ಬರು ಮಹಿಳೆಯರ ಮೃತ ದೇಹಗಳು ಮುಖ ಚರ್ಯೆ ಗುರುತು ಸಿಗದ ಸ್ಥಿತಿಯಲ್ಲಿ ಹಳಿಗಳ ಮೇಲೆ ಪತ್ತೆಯಾಗಿದ್ದವು. ಈ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ್ದ ಯಶವಂತಪುರ ಠಾಣೆಯ ಪಿಎಸ್ಐ ಶಿವಕುಮಾರ್ ಪರಿಶೀಲನೆ ನಡೆಸಿದ್ದರು. ಆದರೆ, ಮೃತದೇಹಗಳ ಗುರುತು ದೃಢಪಟ್ಟಿರಲಿಲ್ಲ. ಮೃತರ ಪೈಕಿ ಒಬ್ಬರ ಅಂಗಿಯ ಮೇಲೆ ವಿನಾಯಕ್ ಟೈಲರ್, ಗೌರಿಬಿದನೂರು ಎಂಬ
ಸ್ಟಿಕ್ಕರ್ ಕಂಡುಬಂದಿತ್ತು. ಇದನ್ನೇ ಆಧಾರವಾಗಿಟ್ಟುಕೊಂಡು, ರೈಲ್ವೆ ಪೊಲೀಸರು, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಮೃತರ ಕುರಿತು ಕೆಲವು ಮಹತ್ವದ ಮಾಹಿತಿ ಲಭ್ಯವಾಗಿವೆ. ಮೃತರ ಮನೆಯಲ್ಲಿ ಪತ್ತೆಯಾದ ಕೆಲವು ವಸ್ತುಗಳನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜತಗೆ ದಾಕ್ಷಿಯಿಣಿಯನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ ಎಂದು ಮಂಚೇನಹಳ್ಳಿ ಪಿಎಸ್ಐ ಹರೀಶ್ ತಿಳಿಸಿದರು.

ನಾಲ್ಕು ಪುಟದ ಡೆತ್ ನೋಟ್...

ಬೆಂಗಳೂರಿನಲ್ಲಿದ್ದ ಸಂತ್ರಸ್ತರ ಚಿಕ್ಕ ಮಗಳು ದಾಕ್ಷಾಯಿಣಿ, ತನ್ನ ಪೋಷಕರು ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ತೊಂಡೇಬಾವಿ ರೈಲ್ವೆ ನಿಲ್ದಾಣದ ಬಳಿಯಿರುವ ತಮ್ಮ ಮನೆಗೆ ಬಂದಿದ್ದರು. ಆಗ ಅಕ್ಕಪಕ್ಕದ ಮನೆಯವರು ಮೂರು ದಿನಗಳಿಂದ ಮನೆ ಬೀಗ ಹಾಕಿರುವ ಕುರಿತು ಮಾಹಿತಿ ನೀಡಿದ್ದಾರೆ.

ಬಳಿಕ ಪೊಲೀಸರೊಂದಿಗೆ ಮನೆ ಬಾಗಿಲು ತೆರೆದು ನೋಡಿದಾಗ, ಪೋಷಕರು ಮತ್ತು ಅಕ್ಕ ಮಮತಾ ಸಾವಿಗೂ ಮುನ್ನ ಬರೆದಿದ್ದಾರೆ ಎನ್ನಲಾದ ನಾಲ್ಕು ಪುಟದ ಡೆತ್ ನೋಟ್‌ ಪತ್ತೆಯಾಗಿದೆ. ಮರಣ ಪತ್ರದಲ್ಲಿ ತಮಗೆ ಮಾನಸಿಕ ಕಿರುಕುಳ ನೀಡಿದವರ ಹೆಸರನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ರೈಲ್ವೆ ಪೊಲೀಸರು, ದಾಕ್ಷಾಯಿಣಿಯನ್ನು ಕರೆದೊಯ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT