ಗುರುವಾರ , ಜನವರಿ 28, 2021
28 °C
ರಾಗಿ ಸ್ವಚ್ಛಗೊಳಿಸುವ ಯಂತ್ರಗಳಿಗೆ ರೈತರಿಂದ ಮುಂಗಡ ಬುಕ್ಕಿಂಗ್

ಶುದ್ಧೀಕರಣ ಯಂತ್ರಗಳಿಗೆ ಬೇಡಿಕೆ

ಡಿ.ಜಿ.ಮಲ್ಲಿಕಾರ್ಜುನ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕಾರ್ಮಿಕರ ಕೊರತೆ ಬಹಳಷ್ಟಿದೆ. ಸಕಾಲದಲ್ಲಿ ಕೊಯ್ಲು, ಒಕ್ಕಣೆ ಮಾಡಲು ಕಷ್ಟವಾಗುವಂಥ ಪರಿಸ್ಥಿತಿ ಇದೆ. ಈ ಕಾರಣದಿಂದ ರೈತರು ತಾಂತ್ರಿಕತೆಯ, ಯಂತ್ರಗಳ ಮೊರೆಹೋಗುತ್ತಿದ್ದಾರೆ. ಈಗೀಗ ತಾಲ್ಲೂಕಿಗೆ ಕೊಯ್ಲು ಮಾಡುವ ಯಂತ್ರಗಳು ಹಾಗೂ ಒಕ್ಕಣೆಯ ನಂತರ ಧಾನ್ಯ ಶುದ್ಧೀಕರಣ ಯಂತ್ರಗಳೂ ಆಗಮಿಸಿವೆ.

ತಾಲ್ಲೂಕಿನಲ್ಲಿ ರಾಗಿ ಶುದ್ಧೀಕರಣ ಯಂತ್ರಗಳಿಗೆ ಬೇಡಿಕೆ ಹೆಚ್ಚಿದ್ದು, ರೈತರು ಯಂತ್ರಗಳು ಕೆಲಸ ಮಾಡುತ್ತಿರುವಲ್ಲಿಗೆ ಬಂದು ಮುಂಗಡವಾಗಿ ಬುಕ್ಕಿಂಗ್ ಮಾಡುತ್ತಿದ್ದಾರೆ. ಒಬ್ಬೊಬ್ಬ ರೈತರೂ ಐದಾರು ದಿನಗಳು ಕಾಯುವ ರೀತಿಯಲ್ಲಿ ಈ ಯಂತ್ರಗಳಿಗೆ ಬೇಡಿಕೆ ಕುದುರಿದೆ.

ಕೃಷಿ ಯಂತ್ರೋಪಕರಣಗಳ ವಿನ್ಯಾಸ ಮಾಡುವ ತಜ್ಞರು ರೈತರ ಅವಶ್ಯಕತೆಗಳನ್ನು ಮನಗಂಡು ಅವರ ಅನುಕೂಲವಾಗುವ ರೀತಿಯಲ್ಲಿ ಸಾಕಷ್ಟು ಕೃಷಿ ಯಂತ್ರಗಳನ್ನು ಅಭಿವೃದ್ಧಿಗೊಳಿಸಿದ್ದಾರೆ. ಅವುಗಳಲ್ಲಿ ರಾಗಿ ಶುದ್ಧೀಕರಣ ಯಂತ್ರವೂ ಸೇರಿದೆ.

ಸಾಮಾನ್ಯವಾಗಿ ಒಕ್ಕಣೆ ಮಾಡಿದ ನಂತರ ಧಾನ್ಯಗಳನ್ನು ಶುದ್ಧೀಕರಿಸಲು ತೂರಲಾಗುತ್ತದೆ. ಇದು ಒಕ್ಕಣೆ ಮಾಡಿದ ತಕ್ಷಣ ಆಗಬೇಕಾದ ಕೆಲಸ. ಸಕಾಲದಲ್ಲಿ ಇದು ಆಗದಿದ್ದರೆ ರೈತರು ಉಳಿದ ಕೃಷಿ ಕೆಲಸ ಕಾರ್ಯಗಳತ್ತ ಗಮನ ನೀಡಲು ಆಗುವುದಿಲ್ಲ. ಹಾಗಾಗಿ ಇದೀಗ ಎಲ್ಲರೂ ಈ ಕೃಷಿ ಯಂತ್ರಗಳ ಮೊರೆಹೋಗುತ್ತಿದ್ದಾರೆ.

‘ನಾವು ಅಣ್ಣತಮ್ಮಂದಿರು ಈ ರೀತಿಯ ನಾಲ್ಕು ಯಂತ್ರ ಇಟ್ಟುಕೊಂಡಿದ್ದೇವೆ. 2015ರಿಂದ ಇದನ್ನೇ ನಾವು ಜೀವನೋಪಾಯ ಮಾಡಿಕೊಂಡಿದ್ದೇವೆ. ಕಟಾವಾಗಿ ಒಣಗಿಸಿದ ರಾಗಿಯನ್ನು ಯಂತ್ರದಲ್ಲಿ ತೆನೆ ಸಮೇತ ಹಾಕಿ ಶುದ್ಧೀಕರಿಸುತ್ತೇವೆ. ಈ ಯಂತ್ರದಲ್ಲಿ ಕಸ ಕಡ್ಡಿ, ಕಲ್ಲು, ಮಣ್ಣನ್ನು ಸುಲಭವಾಗಿ ಬೇರ್ಪಡಿಸಬಹುದು. ಅತ್ಯಂತ ಕಡಿಮೆ ಸಮಯದಲ್ಲಿ ಗುಣಮಟ್ಟದ ರಾಗಿ ರೈತರಿಗೆ ಲಭಿಸುತ್ತದೆ. ತೆನೆಯಾದರೆ ಒಂದು ಪಲ್ಲಕ್ಕೆ ₹100, ಕಸಕಡ್ಡಿ ಇರುವ ರಾಗಿಯಾದರೆ ಒಂದು ಪಲ್ಲಕ್ಕೆ ₹80 ಪಡೆಯುತ್ತೇವೆ’ ಎಂದು ಯಂತ್ರದ ಮಾಲೀಕರಾದ ಅಂಕತಟ್ಟಿ ಮುನಿರಾಜು ಮತ್ತು ಶ್ರೀನಿವಾಸ್ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.